ADVERTISEMENT

ಬಿಎಫ್‌ಸಿಗೆ ಗೆಲುವಿನ ಕಾತರ

ಎಎಫ್‌ಸಿ ಕಪ್‌: ಇಂದು ದಾರುಲ್‌ ವಿರುದ್ಧ ಸೆಮಿಫೈನಲ್‌

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಎಎಫ್‌ಸಿ ಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಆಟಗಾರರು ಮಂಗಳವಾರ ದೈಹಿಕ ಕಸರತ್ತು ನಡೆಸಿದ ಕ್ಷಣ
ಎಎಫ್‌ಸಿ ಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಆಟಗಾರರು ಮಂಗಳವಾರ ದೈಹಿಕ ಕಸರತ್ತು ನಡೆಸಿದ ಕ್ಷಣ   

ಜೊಹಾರ್‌ ಬಹ್ರು: ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿ ವಿಶ್ವಾಸದ ಉತ್ತುಂಗದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಈಗ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಬುಧವಾರ ನಡೆಯುವ ನಾಲ್ಕರ ಘಟ್ಟದ ಮೊದಲ ಹಂತದ ಹೋರಾಟದಲ್ಲಿ ಬೆಂಗಳೂರಿನ ತಂಡ  ಹಾಲಿ ಚಾಂಪಿಯನ್‌ ಜೊಹರ್‌ ದಾರುಲ್‌ ತಾಜಿಮ್‌ ತಂಡದ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದೆ. ಉಭಯ ತಂಡಗಳ ಹಣಾಹಣಿಗೆ ಲಾರ್ಕಿನ್‌ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಐ ಲೀಗ್‌ ಚಾಂಪಿಯನ್‌ ಬಿಎಫ್‌ಸಿಗೆ ಪಂದ್ಯಕ್ಕೂ ಮುನ್ನವೇ ಅಲ್ಪ ಹಿನ್ನಡೆ ಎದು ರಾಗಿದೆ. ಈ ತಂಡದ ಪ್ರಮುಖ ಆಟಗಾರರಾದ ಉದಾಂತ್‌ ಸಿಂಗ್‌, ಲಾಲ್‌ಚುನ್ಮಾವಿಯಾ ಮತ್ತು ಕೀಗನ್‌ ಪೆರೇರಾ ಗಾಯಗೊಂಡಿದ್ದು ದಾರುಲ್‌ ವಿರುದ್ಧ ಆಡುತ್ತಿಲ್ಲ. ಹೀಗಾಗಿ ಇತರ ಆಟಗಾರರ ಮೇಲೆ ಜವಾಬ್ದಾರಿ ಹೆಚ್ಚಿದೆ.

‘ಎದುರಾಳಿಗಳ ಶಕ್ತಿ ಏನು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಅವರನ್ನು ಹಣಿಯಲು ಈಗಾಗಲೇ ಸೂಕ್ತ ಯೋಜನೆ ರೂಪಿಸಿದ್ದೇವೆ. ತಂಡದ ಎಲ್ಲಾ ಆಟಗಾರರು ಶ್ರೇಷ್ಠ ಆಟ ಆಡುವ ಭರವಸೆ ಇದೆ’ ಎಂದು ಬಿಎಫ್‌ಸಿ ಕೋಚ್ ಅಲ್ಬರ್ಟ್‌ ರೋಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಫ್‌ಸಿ ಕ್ಲಬ್‌ ಆರಂಭವಾದ ಬಳಿಕ ಅನೇಕ ಮಹತ್ವದ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿದೆ. ಐ ಲೀಗ್ ಟೂರ್ನಿಯಲ್ಲಿ ಎರಡು ಸಲ ಫೆಡರೇಷನ್‌ ಕಪ್‌ನಲ್ಲಿಯೂ ಎರಡು ಬಾರಿ ಚಾಂಪಿಯನ್‌ ಎನಿಸಿಕೊಂಡಿದೆ. ಎಎಫ್‌ಸಿ ಕಪ್‌ ಟೂರ್ನಿಯಲ್ಲಿ ಹೋದ ವರ್ಷ 16ರ ಘಟ್ಟದಲ್ಲಿ ಸುನಿಲ್‌ ಚೆಟ್ರಿ ನಾಯಕತ್ವದ ತಂಡ ನಿರಾಸೆ ಕಂಡಿತ್ತು.

ದಾರುಲ್‌ ತಂಡ ಈ ಬಾರಿಯ ಟೂರ್ನಿಯ ಲೀಗ್‌ ಹಂತದಲ್ಲಿ ಒಂದೂ ಪಂದ್ಯ ಸೋತಿಲ್ಲ. ಜೊತೆಗೆ ಈ ತಂಡ  ಮಲೇಷ್ಯಾ ಸೂಪರ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಹೀಗಾಗಿ ಬಿಎಫ್‌ಸಿಗೆ  ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಅರ್ಜೆಂಟೀನಾದ ಸ್ಟ್ರೈಕರ್‌ ಮಾರ್ಟಿನ್‌ ಲುಸೆರೊ ಮತ್ತು ಪೆರೇರಾ ದಿಯಾಜ್‌ ಅವರು ಪ್ರವಾಸಿ ಬಳಗದ ಬಲ ಎನಿಸಿದ್ದಾರೆ.

ಪಂದ್ಯದ ಆರಂಭ: ಸಂಜೆ 6.15ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT