ADVERTISEMENT

ಬೆಂಗಳೂರಿನಲ್ಲಿ ಡೇವಿಸ್‌ ಕಪ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:09 IST
Last Updated 16 ಫೆಬ್ರುವರಿ 2017, 19:09 IST
ಬೆಂಗಳೂರು: ಡೇವಿಸ್ ಕಪ್‌ ಟೆನಿಸ್‌ ಟೂರ್ನಿಯ ಏಷ್ಯಾ/ಒಸೀನಿಯಾ ಗುಂಪಿನ ಎರಡನೇ ಸುತ್ತಿನ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.
 
ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್‌ (ಕೆಎಸ್‌ಎಲ್‌ಟಿಎ) ಸಂಸ್ಥೆಯ ಕೋರ್ಟ್‌ನಲ್ಲಿ ಏಪ್ರಿಲ್‌ 7ರಿಂದ 9ರ ವರೆಗೆ ಪಂದ್ಯ ನಡೆಯಲಿದ್ದು ಭಾರತ ಮತ್ತು ಉಜ್‌ಬೆಕಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ.
 
ಇದೇ ತಿಂಗಳು ಪುಣೆಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು ಗೆಲುವು ಸಾಧಿಸಿತ್ತು. 
 
ಎರಡು ವರ್ಷಗಳ ಬಳಿಕ ಮತ್ತೊಂದು ಮಹತ್ವದ ಟೆನಿಸ್‌ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಉದ್ಯಾನನಗರಿಗೆ ಲಭಿಸಿದೆ. ಇದಕ್ಕೆ ಅಖಿಲ ಭಾರತ ಟೆನಿಸ್‌ ಸಂಸ್ಥೆ ಒಪ್ಪಿಗೆ ನೀಡಿದೆ ಎಂದು ಕೆಎಸ್‌ಎಲ್‌ಟಿಎ ತಿಳಿಸಿದೆ.
 
2014ರಲ್ಲಿ ಕೊನೆಯ ಬಾರಿಗೆ ನಡೆದಿದ್ದ  ಡೇವಿಸ್‌ ಕಪ್‌ನ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಮತ್ತು ಸರ್ಬಿಯಾ ಮುಖಾಮುಖಿಯಾಗಿದ್ದವು. 
 
‘ಬೆಂಗಳೂರಿನ ವಾತಾವರಣ ನಮ್ಮ ತಂಡದ ಆಟಗಾರರಿಗೆ ಯಾವಾಗಲೂ ಅನುಕೂಲ ವಾಗಿರುತ್ತದೆ. ಪಂದ್ಯ ಆಯೋಜನೆಗೆ ಕೆಎಸ್‌ಎಲ್‌ಟಿಎ ಉತ್ತಮ ವ್ಯವಸ್ಥೆ ಮಾಡುತ್ತದೆ ಎನ್ನುವ ಭರವಸೆ ಹೊಂದಿದ್ದೇನೆ. ಉಜ್‌ಬೆಕಿಸ್ತಾನದ ಎದುರು ಇಲ್ಲಿ ಭಾರತ ಉತ್ತಮ ಸಾಮರ್ಥ್ಯ ನೀಡಲಿದೆ. ಮೂರನೇ ಸುತ್ತು ಪ್ರವೇಶಿಸಲಿದೆ’ ಎಂದು ಡೇವಿಸ್‌ ಕಪ್ ತಂಡದ ‘ಆಟವಾಡದ ನಾಯಕ’ ಹಾಗೂ ಹಿರಿಯ ಆಟಗಾರ ಮಹೇಶ್ ಭೂಪತಿ ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.