ADVERTISEMENT

ಬ್ಲಿಜಾರ್ಡ್‌್ ಅಬ್ಬರ; ಹೋಬರ್ಟ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಹೈದರಾಬಾದ್‌ (ಪಿಟಿಐ): ಕಠಿಣ ಗುರಿ ಇದ್ದರೂ ದಿಟ್ಟ ಹೋರಾಟ ತೋರಿದ ಆ್ಯಡೆನ್‌ ಬ್ಲಿಜಾರ್ಡ್‌ (ಔಟಾಗದೆ 78) ಮತ್ತು ಬೆನ್‌ ಡಂಕ್‌  (54)  ಆಕರ್ಷಕ ಆಟದ ನೆರವಿನಿಂದ ಆಸ್ಟ್ರೇಲಿಯದ ಹೋಬರ್ಟ್‌ ಹರಿಕೇನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ  ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾದ ಕೇಪ್‌ ಕೋಬ್ರಾಸ್‌ ಎದುರು  ಆರು ವಿಕೆಟ್‌ಗಳ ಗೆಲುವು ಪಡೆಯಿತು.

ಉಪ್ಪಳದಲ್ಲಿರುವ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ  ಕ್ರೀಡಾಂಗಣದಲ್ಲಿ  ಭಾನುವಾರ ನಡೆದ ಪಂದ್ಯದಲ್ಲಿ  ಟಾಸ್‌ ಗೆದ್ದ ಕೋಬ್ರಾಸ್‌ಗೆ  ಪಂದ್ಯ ಗೆಲ್ಲುವುದು ಮಾತ್ರ ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್‌ ಮಾಡಿದ ಒಂಟಾಂಗ್‌ ನೇತೃತ್ವದ ತಂಡ  ನಿಗದಿತ ಓವರ್‌ಗಳಲ್ಲಿ  6 ವಿಕೆಟ್‌ಗೆ 184ರನ್‌ ಕಲೆ ಹಾಕಿತು.
ಈ ಮೊತ್ತ ಹೋಬರ್ಟ್‌ಗೆ ಸವಾಲು ಎನ್ನಿಸಲಿಲ್ಲ. ಈ ತಂಡ ಒಂದು ಓವರ್‌ ಬಾಕಿ ಇರುವಂತೆಯೇ  ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು

ಆಘಾತ:  ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರ ಕೈಗೊಂಡ ಕೋ ಬ್ರಾಸ್‌ ನಾಯಕ ಒಂಟಾಂಗ್‌ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ತಂಡದ ಮೊತ್ತ  12 ಆಗಿದ್ದಾಗ ಆರಂಭಿಕ ಆಟಗಾರ ಹಾಶಿಮ್‌ ಆಮ್ಲಾ (8) ಹಿಲ್ಫೆನಾಸ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.  ಆ ಬಳಿಕ ರಿಚರ್ಡ್‌ ಲೆವಿ (42;30ಎ, 6ಬೌಂ, 1ಸಿ) ಅಬ್ಬರಿಸಿದರೆ,  ಅಂತಿಮ ಓವರ್‌ಗಳಲ್ಲಿ ವರ್ನಾನ್‌ ಫಿಲ್ಯಾಂಡರ್‌ ಕೇವಲ 14 ಎಸೆತಗಳಲ್ಲಿ  ಐದು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 32ರನ್‌ ಗಳಿಸಿ ಅಜೇಯರಾಗುಳಿದರು.
ಹೋಬರ್ಟ್‌್ ತಂಡದ ಡಂಕ್‌ ಮತ್ತು ಬ್ಲಿಜಾರ್ಡ್‌  ಸೊಗಸಾದ ಪ್ರದರ್ಶನ ನೀಡಿದರು. 35 ಎಸೆತ ಎದುರಿಸಿದ ಡಂಕ್‌ 10 ಬೌಂಡರಿ ಬಾರಿಸಿದರೆ, ಬ್ಲಿಜಾರ್ಡ್‌ 48 ಎಸೆತಗಳಲ್ಲಿ  4 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿದರು.

ಸಂಕ್ಷಿಪ್ತ ಸ್ಕೋರು: ಕೇಪ್‌ ಕೋಬ್ರಾಸ್‌: 20 ಓವರ್‌ಗಳಲ್ಲಿ  6 ವಿಕೆಟ್‌ಗೆ 184 (ರಿಚರ್ಡ್‌ ಲೆವಿ 42, ವರ್ನಾನ್‌ ಫಿಲ್ಯಾಂಡರ್‌ ಔಟಾಗದೆ 32,  ರಾಬಿನ್‌ ಪೀಟರ್‌ಸನ್‌ ಔಟಾಗದೆ 25, ಡೇನ್‌ ವಿಲಾಸ್‌  25; ಬೆನ್‌ ಲೌಗ್ಲಿನ್‌ 31ಕ್ಕೆ2, ಬೆನ್‌ ಹಿಲ್ಫೆನಾಸ್‌ 49ಕ್ಕೆ2):  ಹೋಬರ್ಟ್‌ ಹರಿಕೇನ್ಸ್: 19 ಓವರ್‌ಗಳಲ್ಲಿ  4 ವಿಕೆಟ್‌ಗೆ 186 ( ಬೆನ್‌ ಡಂಕ್‌ 54,  ಆ್ಯಡನ್‌ ಬ್ಲಿಜಾರ್ಡ್‌  ಔಟಾಗದೆ 78, ಜೊನಾಥನ್‌ ವೆಲ್ಸ್‌ ಔಟಾಗದೆ 17; ಸಿಬ್ರಾಂಡ್‌ ಇಂಗೆಲ್‌ಬ್ರೆಟ್ಚ್‌ 20ಕ್ಕೆ3, ಚಾರ್ಲ್‌ ಲ್ಯಾಂಗ್‌ವೆಲ್ಟ್‌ 43ಕ್ಕೆ1). ಫಲಿತಾಂಶ: ಹೋಬರ್ಟ್‌ ಹರಿಕೇನ್ಸ್‌ಗೆ  ಆರು ವಿಕೆಟ್‌ ಜಯ ಹಾಗೂ ನಾಲ್ಕು ಪಾಂಯಿಟ್‌. ಪಂದ್ಯ ಶ್ರೇಷ್ಠ: ಆ್ಯಡನ್‌ ಬ್ಲಿಜಾರ್ಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.