ADVERTISEMENT

ಭಾರತಕ್ಕೆ ಜಯದ ವಿಶ್ವಾಸ

ಕಾಂಬೋಡಿಯಾ ಎದುರು ಸೌಹಾರ್ದ ಫುಟ್‌ಬಾಲ್ ಪಂದ್ಯ ಇಂದು

ಪಿಟಿಐ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಅಭ್ಯಾಸ ನಿರತ ಭಾರತ ಫುಟ್‌ಬಾಲ್ ತಂಡ
ಅಭ್ಯಾಸ ನಿರತ ಭಾರತ ಫುಟ್‌ಬಾಲ್ ತಂಡ   

ನಾಂಪೆನ್‌, ಕಾಂಬೋಡಿಯಾ : ಎಎಫ್‌ಸಿ ಏಷ್ಯನ್‌ ಕಪ್‌ ಅರ್ಹತಾ ಟೂರ್ನಿಯ ಸಿದ್ಧತೆಗಾಗಿ ಬುಧವಾರ ಭಾರತ ಪುರುಷರ ಫುಟ್‌ಬಾಲ್ ತಂಡ ಕಾಂಬೋಡಿಯಾ ತಂಡದೊಂದಿಗೆ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯ ಆಡಲಿದೆ.

ಈ ಹಿಂದೆ 2016ರ ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ 4–1 ಗೋಲುಗಳಲ್ಲಿ ಪ್ರುಟೊ ರಿಕಾ ತಂಡವನ್ನು ಮಣಿಸಿತ್ತು. 2006ರಲ್ಲಿ ಪಾಕಿಸ್ತಾನದ ಎದುರು 1–0 ಗೋಲಿನ ಅಂತರದಲ್ಲಿ ಗೆಲುವು ಒಲಿಸಿಕೊಂಡಿತ್ತು.

ಭಾರತ ತಂಡದಲ್ಲಿ ಹೆಚ್ಚು ಯುವ ಆಟಗಾರರು ಇರುವುದರಿಂದ ಕಾಂಬೋಡಿಯಾ ವಿರುದ್ಧದ ಪಂದ್ಯ ನೂತನ ಸವಾಲುಗಳನ್ನು ಒಡ್ಡುವ ಸಾಧ್ಯತೆ ಇದೆ. ಜೆರಿ ಲಾರ್ಲಿಂಜುವೆಲಾ, ಮಿಲನ್ ಸಿಂಗ್, ನಿಶು ಕುಮಾರ್ ಮತ್ತು ಡೇನಿಯಲ್ ಲಾಲ್‌ಪೂನಿಯ ತಂಡದಲ್ಲಿ ಭರವಸೆಯ ಆಟಗಾರರು ಎನಿಸಿದ್ದಾರೆ.

ADVERTISEMENT

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಬಳಿಕ ಅರ್ನಬ್ ಮೊಂಡಲ್ ಮತ್ತು ಸಂದೇಶ್‌ ಜಿಂಗಾಸ್ ತಮ್ಮ ಕಳಪೆ ಫಾರ್ಮ್‌ನಿಂದ ಹಿಂದಿನ ಕೆಲವು ಪಂದ್ಯಗಳಲ್ಲಿ ಉತ್ತಮವಾಗಿ ಆಡಿಲ್ಲ. ಆದರೆ ಈ ಪಂದ್ಯ ಅವರ ಭವಿಷ್ಯವನ್ನು ನಿರ್ಧರಿಸಲಿದೆ. ಗಾಯದ ಸಮಸ್ಯೆಯಿಂದ ಹೊರ ಐಬಂದಿರುವ ರಾಬಿನ್ ಸಿಂಗ್‌ ಕೂಡ ತಂಡದ ಬಲ ಹೆಚ್ಚಿಸಲಿದ್ದಾರೆ.

2007ರಲ್ಲಿ ನವದೆಹಲಿಯಲ್ಲಿ ನಡೆದ ನೆಹರೂ ಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ಕಾಂಬೋಡಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 6–0 ಗೋಲುಗಳಲ್ಲಿ ಗೆಲುವು ದಾಖಲಿಸಿತ್ತು.  ಭಾರತ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ 132ನೇ ಸ್ಥಾನ ದಲ್ಲಿದ್ದರೆ, ಕಾಂಬೋಡಿಯಾ 173ನೇ ಸ್ಥಾನ ಪಡೆದಿದೆ.  ಜನವರಿಯಲ್ಲಿ ಕಾಂಬೋಡಿಯಾ ತಂಡ ಸೌದಿ ಅರೇ ಬಿಯಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ 2–7 ಗೋಲುಗಳಲ್ಲಿ ಸೋಲು ಕಂಡಿದೆ.

‘ನಮ್ಮ ತಂಡದ ಆಟಗಾರರು ಹುಲ್ಲಿನ ಅಂಕಣದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಆಡುತ್ತಾರೆ. ಆದರೆ ಇಲ್ಲಿ ನಾವು ಕೃತಕವಾಗಿ ನಿರ್ಮಿಸಿದ ಟರ್ಫ್‌ನಲ್ಲಿ ಆಡಬೇಕಿದೆ. ಏನೇ ಇದ್ದರೂ ಈ ಪಂದ್ಯ ಗೆಲ್ಲುವುದು ನಮ್ಮ ಮುಖ್ಯ ಗುರಿ. ಎಎಫ್‌ಸಿ ಕಪ್‌ನಲ್ಲಿ ಮ್ಯಾನ್ಮಾರ್ ತಂಡವನ್ನು ಎದುರಿಸಬೇಕಿದೆ. ಇಲ್ಲಿಂದ ಲೇ ನಮ್ಮ ಗೆಲುವಿನ ಓಟ ಆರಂಭಿ ಸಬೇಕು’ ಎಂದು ಕೋಚ್ ಸ್ಟೀಫನ್ ಕಾನ್ಸ್‌ಟೆಂಟೈನ್ ಹೇಳಿದ್ದಾರೆ.

ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಂಡವನ್ನು ಮುನ್ನಡೆಸಲಿದ್ದಾರೆ. ಪೆಟ್ರೊ ರಿಕಾ ವಿರುದ್ಧದ ಸೌಹಾರ್ಧ ಪಂದ್ಯದಲ್ಲೂ ಇವರೇ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.