ADVERTISEMENT

ಭಾರತ ತಂಡಕ್ಕೆ–ಫಿಜಿ ಸವಾಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

ಬೆಂಗಳೂರು: ಫಿಬಾ ಮಹಿಳಾ ಏಷ್ಯಾಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತ ತಂಡದವರು ಈ ನಿಟ್ಟಿನಲ್ಲಿ ಮತ್ತೊಂದು ಸವಾಲಿಗೆ ಸಿದ್ಧರಾಗಿದ್ದಾರೆ.

ಗುರುವಾರ ನಡೆಯುವ ‘ಬಿ’ ಡಿವಿಷನ್‌ನ ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ಭಾರತದ ವನಿತೆಯರು ಫಿಜಿ ತಂಡದ ವಿರುದ್ಧ ಸೆಣಸಲಿದ್ದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಲೀಗ್‌ ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಅನಿತಾ ಪಾಲ್‌ ದೊರೈ ಸಾರಥ್ಯದ ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರುತ್ತಿದೆ.

ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ನಾಯಕಿ ಅನಿತಾ ಮತ್ತು ಮುಂಚೂಣಿ ವಿಭಾಗದ ಆಟಗಾರ್ತಿ ಗ್ರಿಮಾ ಮರ್ಲಿನ್‌ ವರ್ಗೀಸ್‌ ಅವರು ಫಿಜಿ ವಿರುದ್ಧವೂ ಮಿಂಚುವ ವಿಶ್ವಾಸ ಹೊಂದಿದ್ದಾರೆ. ಪೂನಂ ಚತುರ್ವೇಧಿ ಮತ್ತು ಪಾಯಿಂಟ್‌ ಗಾರ್ಡ್‌ ಬರ್ಖಾ ಸೊಂಕಾರ ಅವರ ಮೇಲೂ ಭರವಸೆ ಇಡಬಹುದಾಗಿದೆ.

ADVERTISEMENT

ಶಿರೀನ್‌ ವಿಜಯ ಲಿಮಯೆ, ಕವಿತಾ ಅಕುಲಾ ಮತ್ತು ಜೀನಾ ಅವರೂ ಫಿಜಿ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗುವ ಸಾಮರ್ಥ್ಯ ಹೊಂದಿದ್ದಾರೆ.
ಫಿಜಿ ತಂಡ ಕೂಡ ಭಾರತವನ್ನು ಅದರದ್ದೇ ನೆಲದಲ್ಲಿ ಮಣಿಸುವ ವಿಶ್ವಾಸ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.