ADVERTISEMENT

ಭಾರತ ತಂಡದ ಅಪೂರ್ವ ಸಾಧನೆ

ಸೋಲಿನಲ್ಲೂ ಮಿಂಚಿದ ಸೈನಾ ನೆಹ್ವಾಲ್‌, ಒಲಿದ ಕಂಚು; ಸೆಮಿಫೈನಲ್‌ನಲ್ಲಿ ನಿರಾಸೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಇಂಚೆನ್‌ (ಪಿಟಿಐ): ಪ್ರಬಲ ಹೋರಾಟ ತೋರಿಯೂ ಸೋಲು ಕಂಡ ಭಾರತ ಮಹಿಳಾ ಬ್ಯಾಡ್ಮಿಂಟನ್‌ ತಂಡ ಏಷ್ಯನ್‌ ಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿತು.

ಭಾನುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ 1–3ರಲ್ಲಿ ಆತಿಥೇಯ ದಕ್ಷಿಣ ಕೊರಿಯ ಎದುರು ನಿರಾಸೆ ಅನುಭವಿಸಿತು. ಏಷ್ಯನ್‌ ಕೂಟದಲ್ಲಿ ಮಹಿಳಾ ತಂಡಕ್ಕೆ ಒಲಿದ ಚೊಚ್ಚಲ ಪದಕವಿದು. ಆದ್ದರಿಂದ ಮಹತ್ವದ ಘಟ್ಟದಲ್ಲಿ ಭಾರತ ಸೋಲು ಕಂಡರೂ, ಪದಕ ಗೆದ್ದ ಖುಷಿಯನ್ನು ತನ್ನದಾಗಿಸಿಕೊಂಡಿತು.
1986ರಲ್ಲಿ ಸೋಲ್‌ನಲ್ಲಿ ನಡೆದ ಏಷ್ಯನ್‌ ಕೂಟದಲ್ಲಿ ಭಾರತ ಕೊನೆಯ ಸಲ ಬ್ಯಾಡ್ಮಿಂಟನ್‌ನಲ್ಲಿ ಪದಕ ಜಯಿಸಿತ್ತು.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್‌ ಮೊದಲ ಸಿಂಗಲ್ಸ್‌ನಲ್ಲಿ ಪ್ರಬಲ ಪ್ರತಿರೋಧ ಎದುರಾದರೂ ದಿಟ್ಟ ಹೋರಾಟ ತೋರಿ ಗೆಲುವು ತಂದುಕೊಟ್ಟರು. ಹೈದರಾಬಾದ್‌ ಆಟಗಾರ್ತಿ 21–12, 10–21, 21–9ರಲ್ಲಿ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಸುಂಗ್‌ ಜಿಹಾಯಿನ್‌ ಎದುರು ಗೆಲುವು ಸಾಧಿಸಿದರು. ಈ ಪಂದ್ಯ 56 ನಿಮಿಷ ನಡೆಯಿತು. ಆದರೆ, ನಂತರ ಮೂರೂ ಪಂದ್ಯಗಳಲ್ಲಿ ಭಾರತದ ಸ್ಪರ್ಧಿಗಳು ಸೋಲು ಕಂಡ ಕಾರಣ ಕಂಚಿಗೆ ತೃಪ್ತಿ ಪಡಬೇಕಾಯಿತು.

ಸೈನಾ ಮೊದಲ ಗೇಮ್‌ನಲ್ಲಿ ಉತ್ತಮ ಪ್ರಾಬಲ್ಯ ಮೆರೆದರು. ಆರಂಭದಲ್ಲಿ ಮೇಲಿಂದ ಮೇಲೆ ಹತ್ತು ಪಾಯಿಂಟ್ಸ್ ಕಲೆ ಹಾಕಿ ಎದುರಾಳಿ ಆಟಗಾರ್ತಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದರಿಂದ ಮೊದಲ ಗೇಮ್‌ನಲ್ಲಿ ಸೈನಾಗೆ ಗೆಲುವು ಸಾಧ್ಯವಾಯಿತು. ಎರಡನೇ ಗೇಮ್‌ನಲ್ಲಿ ಸೈನಾ 9–17ರಲ್ಲಿ ಹಿನ್ನಡೆ ಹೊಂದಿದ್ದರು. ಆರಂಭದಲ್ಲಿ ಅನಗತ್ಯ ತಪ್ಪುಗಳನ್ನು ಮಾಡಿದ್ದು ಇದಕ್ಕೆ ಕಾರಣವಾಯಿತು. ನಂತರ ಲಯ ಕಂಡುಕೊಂಡು ಎದುರಾಳಿಗೆ ತಿರುಗೇಟು ನೀಡಿ ಪಂದ್ಯ ಗೆದ್ದುಕೊಂಡರು.

ಆದರೂ, ಮುಂದಿನ ಪಂದ್ಯಗಳಲ್ಲಿ ಭಾರತ ಸೋಲು ಕಂಡ ಕಾರಣ ಸೈನಾ ಗೆಲುವು ಹೊಳಪು ಕಳೆದುಕೊಂಡಿತು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಪಿ.ವಿ. ಸಿಂಧು 79 ನಿಮಿಷ ನಡೆದ ಪ್ರಬಲ ಹೋರಾಟ ತೋರಿ ಸೋಲು ಕಂಡರು. ವಿಶ್ವ ಕ್ರಮಾಂಕದಲ್ಲಿ ಬಾಯೆ ಯೆಂಜು 21–14, 18–21, 21–13ರಲ್ಲಿ ಸಿಂಧು ಎದುರು ಗೆಲುವು ಸಾಧಿಸಿ 1–1ರಲ್ಲಿ ಸಮಬಲ ಸಾಧಿಸಿದರು.

ಆತಿಥೇಯ ಪ್ರೇಕ್ಷಕರ ಪೂರ್ಣಬೆಂಬಲದೊಂದಿಗೆ ಆಡಿದ ಕೊರಿಯ ಸ್ಪರ್ಧಿಗಳು ಉಳಿದ ಎರಡೂ ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ತೋರಿದರು. ಡಬಲ್ಸ್‌ ವಿಭಾಗದಲ್ಲಿ ಎನ್‌. ಸಿಕಿ ರೆಡ್ಡಿ ಮತ್ತು ಪ್ರದ್ನ್ಯಾ ಗದ್ರೆ ಅವರಿಗೂ ನಿರಾಸೆ ತಪ್ಪಲಿಲ್ಲ. ಈ ಜೋಡಿ 16–21, 17–21ರಲ್ಲಿ ಕಿಮ್‌ ಸೋಯೆಂಗ್‌ ಮತ್ತು ಚಾಂಗ್ ಯೇನಾ ಎದುರು ನಿರಾಸೆ ಅನುಭವಿಸಿತು. ಇನ್ನೊಂದು ಸಿಂಗಲ್ಸ್‌ನಲ್ಲಿ ಪಿ.ಸಿ. ತುಳಸಿ 12–21, 18–21ರಲ್ಲಿ ಕಿಮ್‌ ಹೊಯೊಮಿನ್‌ ಎದುರು ಸೋಲು ಕಂಡರು. ಇದರೊಂದಿಗೆ ಫೈನಲ್‌ ಪ್ರವೇಶಿಸುವ ಕನಸು ಕಂಡಿದ್ದ ಭಾರತದ ಆಸೆ ಅಸ್ತಮಿಸಿತು.

‘ಹಿಂದಿನ ಪಂದ್ಯದಲ್ಲಿ ಥಾಯ್ಲೆಂಡ್‌ ಎದುರು ಆಡುವಾಗ ಕಠಿಣ ಪೈಪೋಟಿ ಎದುರಾಗಿತ್ತು. ಇಲ್ಲಿ ಪ್ರತಿ ಹೆಜ್ಜೆಯೂ ಸವಾಲಿನಿಂದ ಕೂಡಿತ್ತು. ನಮ್ಮ ಶಕ್ತಿಗೂ ಮೀರಿ ಹೋರಾಟ ತೋರಿದ್ದರಿಂದ ಸೆಮಿಫೈನಲ್‌ವರೆಗೆ ಪ್ರವೇಶಿಸಲು ಸಾಧ್ಯವಾಯಿತು’ ಎಂದು ಸೈನಾ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಏಷ್ಯನ್‌ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಬೇಕೆನ್ನುವ ಗುರಿ ಹೊಂದಿರುವ ಸೈನಾ ರಾಷ್ಟ್ರೀಯ ತಂಡದ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ತೊರೆದು ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆದಿದ್ದರು.

‘ಇದೊಂದು ಅಮೋಘ ಪಂದ್ಯವಾಗಿತ್ತು. ತುಂಬಾ ಕಠಿಣ ಸವಾಲಿನಿಂದ ಕೂಡಿತ್ತು. ಯೆಂಜು ಎದುರು ಹಿಂದೆಯೂ ಆಡಿದ್ದೇನೆ. ಕೊರಿಯದ ಆಟಗಾರ್ತಿಯ ಎದುರು ಪ್ರಬಲ ಪೈಪೋಟಿ ಎದುರಾಗಲಿದೆ ಎಂಬುದು ನಿರೀಕ್ಷಿತವೇ ಆಗಿತ್ತು’ ಎಂದು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಸಲ ಕಂಚು ಗೆದ್ದಿರುವ ಸಿಂಧು ನುಡಿದರು.

‘ಸೈನಾ ಗೆಲುವು ಪಡೆಯುತ್ತಾಳೆ ಎನ್ನುವುದು ಮೊದಲೇ ಗೊತ್ತಿತ್ತು. ಆದರೆ, ಡಬಲ್ಸ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ್ದರೆ ಫೈನಲ್‌ ಪ್ರವೇಶಿಸಲು ಸಾಧ್ಯವಾಗುತ್ತಿತ್ತು. ಆದರೂ, ಕಂಚು ಗೆದ್ದಿರುವುದು ಸಣ್ಣ ಸಾಧನೆಯೇನಲ್ಲ’ ಎಂದು ಕೋಚ್‌ ಗೋಪಿಚಂದ್‌ ಹೇಳಿದರು.

ಏಷ್ಯನ್‌ ಕೂಟದಲ್ಲಿ ಭಾರತಕ್ಕೆ ಒಲಿದ ಒಟ್ಟಾರೆ ಎಂಟನೇ ಕಂಚಿನ ಪದಕ ಇದು. 1974 (ಟೆಹರಾನ್) ಒಂದು, 1982 (ನವದೆಹಲಿ) ಐದು ಮತ್ತು 1986ರಲ್ಲಿ (ಸೋಲ್‌) ಒಂದು ಪದಕ ಲಭಿಸಿತ್ತು. ಈ ಕೂಟದಲ್ಲಿ ಭಾರತ ಒಮ್ಮೆಯೂ ಚಿನ್ನ ಗೆದ್ದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.