ADVERTISEMENT

ಮಿಂಚಿದ ಪೋಸ್ಟಿಗಾ; ಗೆದ್ದ ಅಟ್ಲೆಟಿಕೊ

ಐಎಸ್ಎಲ್: ಉದ್ಘಾಟನೆ ಸಮಾರಂಭದಲ್ಲಿ ತಾರೆಗಳ ದಂಡು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST
ಚೆನ್ನೈನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್‌ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಮತ್ತು ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದ ಕ್ಷಣ  ಪಿಟಿಐ ಚಿತ್ರ
ಚೆನ್ನೈನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್‌ ಸೂಪರ್ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಮತ್ತು ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದ ಕ್ಷಣ ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ಜವಾಹರಲಾಲ್ ನೆಹರು ಮೈದಾನದಲ್ಲಿ ಶನಿವಾರ ರಾತ್ರಿ   ಜಗಮಗಿಸುವ ಉದ್ಘಾಟನಾ ಸಮಾರಂಭದ ನಂತರ ಮಿಂಚಿದ್ದು ಹೆಲ್ಡರ್ ಪೋಸ್ಟಿಗಾ!

ಇಲ್ಲಿ ಆರಂಭವಾದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಪೋಸ್ಟಿಗಾ ಹೊಡೆದ ಎರಡು ಗೋಲುಗಳಿಂದಾಗಿ ಹಾಲಿ ಚಾಂಪಿಯನ್ ಅಟ್ಲೆಟಿಕೊಡಿ ಕೋಲ್ಕತ್ತ 3–2ರಿಂದ ಚೆನ್ನೈಯನ್ ಫುಟ್‌ಬಾಲ್ ಕ್ಲಬ್ ವಿರುದ್ಧ ಗೆದ್ದಿತು. 

ತುರುಸಿನ ಸ್ಪರ್ಧೆ ಏರ್ಪಟ್ಟಿದ್ದ ಮೊದಲರ್ಧದದಲ್ಲಿ ಎರಡೂ ತಂಡಗಳು 1–1ರ ಸಮಬಲ ಸಾಧಿಸಿದ್ದವು.  ಪಂದ್ಯದ 13ನೇ ನಿಮಿಷದಲ್ಲಿ ಪೋಸ್ಟಿಗಾ ಮೊದಲ ಗೋಲು ಹೊಡೆದರು.

ಫಾರ್ವರ್ಡ್ ಆಟಗಾರ ಬೋರ್ಜಾ ಡೀಪ್‌ನಿಂದ  ಕಿಕ್ ಮಾಡಿದ ಚೆಂಡು, ಸ್ವಲ್ಪ ಕ್ರಾಸ್‌ನಲ್ಲಿ ಸಾಗಿತು. ಅದನ್ನು ಹಿಡಿಯುವಲ್ಲಿ ಚೆನ್ನೈಯಿನ್ ಕೀಪರ್ ಎಡೆಲ್ ಅಪೌಲೊ ಸಫಲರಾಗಲಿಲ್ಲ. ಅವರ ಈ ತಪ್ಪು ನಡೆಯನ್ನು ಸಮರ್ಥವಾಗಿ ಬಳಸಿಕೊಂಡ ಪೋಸ್ಟಿಗಾ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.  ಓಪನ್ ಗೋಲ್ ದಾಖಲಾಯಿತು.

31ನೇ ನಿಮಿಷದಲ್ಲಿ ಚೆನ್ನೈ ತಂಡವು ತಿರುಗೇಟು ನೀಡಿತು.  ಕೋಲ್ಕತ್ತ ಗೋಲ್‌ಕೀಪರ್ ಕಣ್ತಪ್ಪಿಸಿದ ಚೆನ್ನೈನ ಸ್ಟ್ರೈಕರ್ ಜೇಜೆ ಚೆಂಡನ್ನು ಗೋಲುಪೆಟ್ಟಿ ಗೆಗೆ ಸೇರಿಸಿದರು.  ಇದರೊಂದಿಗೆ ಸ್ಕೋರು ಸಮಬಲವಾಯಿತು.

ದ್ವಿತೀಯಾರ್ಧದಲ್ಲಿ ಮತ್ತೊಮ್ಮೆ ಪೋರ್ಚುಗಲ್ ಆಟಗಾರ ಕೋಲ್ಕತ್ತದ ನೆರವಿಗೆ ಬಂದರು. ಚೆನ್ನೈ ತಂಡದ ತೀವ್ರ ಪೈಪೋಟಿಯ ನಡುವೆಯೂ 70ನೇ ನಿಮಿಷದಲ್ಲಿ ಅಡ್ಡ ಬಂದ ಲಾಲಮಗೈಸಂಗಾ ಸೆನಾ ರಾಲ್ಟೆಯಿಂದ ಚೆಂಡನ್ನು ಗೋಲಿನತ್ತ ಡ್ರಿಬಲ್ ಮಾಡಿದ ಪೋಸ್ಟಿಗಾ, ಚಾಕಚಕ್ಯತೆಯಿಂದ ಗೋಲ್ ಹೊಡೆದರು. ಕೋಲ್ಕತ್ತ ಅಭಿಮಾನಿಗಳು ಕುಣಿದಾಡಿ ಸಂಭ್ರಮಿಸಿದರು.

ಸರಿಯಾಗಿ ಆರು ನಿಮಿಷಗಳ ನಂತರ ಸಿಕ್ಕ ಅವಕಾಶವನ್ನು ವಾಲ್ಡೊ ಬಳಸಿಕೊಂಡರು. ಲೆಫ್ಟ್‌ನಿಂದ ಲಾರಾ ಮಾಡಿದ ಕಿಕ್‌ಗೆ ಚೆಂಡು ಗಾಳಿಯಲ್ಲಿ ಹಾರಿತು. ಅದನ್ನು ‘ಹೆಡ್ಡಿಂಗ್’ ಮೂಲಕ ವಾಲ್ಡೊ ಅಟ್ಲೆಟಿಕೊ ತಂಡದ ಗೋಲು ಸಂಖ್ಯೆಯನ್ನು ಮೂರಕ್ಕೇ ಏರಿಸಿದರು.

ಆತಿಥೇಯ ತಂಡವು ತನ್ನ ಛಲ ಬಿಡಲಿಲ್ಲ. ಪದೇ ಪದೇ ಗೋಲುಪೆಟ್ಟಿಗೆಯತ್ತ ನುಗ್ಗುವತ್ತಲೇ ಗಮನ ನೆಟ್ಟಿತ್ತು. ಆದರೆ, ಕೋಲ್ಕತ್ತದ ರಕ್ಷಣಾ ವಿಭಾಗ ತೀವ್ರ ಪ್ರತಿರೋಧ ಒಡ್ಡಿತ್ತು. ಆದರೂ  ಪಂದ್ಯ ಮುಗಿಯಲು ಒಂದು ನಿಮಿಷ ಬಾಕಿಯಿದ್ದಾಗ ಚೆನ್ನೈ ಯಿನ್ ತಂಡದಲ್ಲಿರುವ ಬ್ರೆಜಿಲ್ ಮೂಲದ ಆಟಗಾರ ಎಲಾನೊ ಗೋಲು ಗಳಿಸಿದರು. ಅದರಿಂದ ಗೋಲಿನ ಅಂತರ ತಗ್ಗಿಸಲು ಮಾತ್ರ ಸಾಧ್ಯವಾಯಿತು.

ರಾಷ್ಟ್ರಗೀತೆ ಹಾಡಿದ ರೆಹಮಾನ್ : ಜವಾಹರಲಾಲ್ ನೆಹರು ಕ್ರೀಡಾಂಗಣ ದಲ್ಲಿ ಶನಿವಾರ ಸಂಜೆ ಸಿನಿಮಾ ಸಂಗೀತದ ದಿಗ್ಗಜ ಎ.ಆರ್. ರೆಹಮಾನ್ ಅವರಿಂದ ರಾಷ್ಟ್ರಗೀತೆ ಅನುರಣಿಸಿತು.  ಅದರೊಂದಿಗೆ ಐಎಸ್‌ಎಲ್ ಟೂರ್ನಿಯ ಉದ್ಘಾಟನೆ ಕಾರ್ಯಕ್ರಮದ ಮೆರಗು ಇಮ್ಮಡಿಸಿತು.

ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ‘ಡೋಲಾ ರೇ ಡೋಲಾ ರೆ..’, ‘ಧೂಮ್ ಮಚಾಲೆ ಧೂಮ್..’ ಹಾಡುಗಳಿಗೆ ಮಾಡಿದ ನೃತ್ಯ ನೋಡುಗರ ಮನಸೂರೆಗೊಂಡಿತು.

ವೇದಿಕೆಯ ಮುಂಭಾಗದ ಗಣ್ಯರ ಸಾಲಿನಲ್ಲಿ ಭಾರತೀಯ ಚಿತ್ರರಂಗದ ತಾರೆಗಳಾದ ಅಮಿತಾಬ್ ಬಚ್ಚನ್, ರಜನೀಕಾಂತ್, ಅಭಿಷೇಕ್ ಬಚ್ಚನ್, ಕ್ರಿಕೆಟ್ ತಾರೆ, ಕೇರಳ ಬ್ಲಾಸ್ಟರ್ಸ್ ತಂಡದ ಸಹಮಾಲೀಕ ಸಚಿನ್ ತೆಂಡೂಲ್ಕರ್, ಉದ್ಯಮಿಗಳಾದ ಮುಖೇಶ್ ಮತ್ತು ನೀತಾ ಅಂಬಾನಿ ಮತ್ತಿತರ ಗಣ್ಯರು ಹಾಜರಿದ್ದರು.

ಇಂದಿನ ಪಂದ್ಯ
ಡೆಲ್ಲಿ ಡೈನಾಮೊಸ್‌ ಎಫ್‌ಸಿ–ಗೋವಾ ಎಫ್‌ಸಿ . ಸ್ಥಳ: ಗೋವಾ
ಆರಂಭ: ರಾತ್ರಿ 7
ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.