ADVERTISEMENT

ಮುಖ್ಯ ಸುತ್ತಿಗೆ ಸಾಕೇತ್‌

ಅಮೆರಿಕ ಓಪನ್‌ ಅರ್ಹತಾ ಟೂರ್ನಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:49 IST
Last Updated 27 ಆಗಸ್ಟ್ 2016, 19:49 IST
ಅಮೆರಿಕ ಓಪನ್‌ ಟೂರ್ನಿಯ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ ಸಾಕೇತ್‌ ಮೈನೇನಿ
ಅಮೆರಿಕ ಓಪನ್‌ ಟೂರ್ನಿಯ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ ಸಾಕೇತ್‌ ಮೈನೇನಿ   

ನ್ಯೂಯಾರ್ಕ್‌ (ಪಿಟಿಐ): ಮುಂಬರುವ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯುವ  ಮಹಾದಾಸೆ ಹೊತ್ತಿದ್ದ ಭಾರತದ ಭರವಸೆಯ ಆಟಗಾರ ಸಾಕೇತ್‌ ಮೈನೇನಿ   ಶನಿವಾರ ಅದನ್ನು ಸಾಕಾರಗೊಳಿಸಿಕೊಂಡರು.

ಅರ್ಹತಾ ಸುತ್ತಿನ ಮೂರೂ ಪಂದ್ಯಗಳಲ್ಲೂ ಶ್ರೇಷ್ಠ ಆಟ ಆಡಿದ ಸಾಕೇತ್‌ ಅವರು ಮೊದಲ ಬಾರಿಗೆ ಟೂರ್ನಿಯ ಮುಖ್ಯ ಸುತ್ತಿನಲ್ಲಿ ಆಡಲು ಅರ್ಹತೆ ಗಳಿಸಿದ್ದಾರೆ.
ಶನಿವಾರ ನಡೆದ ಅರ್ಹತಾ ಸುತ್ತಿನ ಮೂರನೇ ಪಂದ್ಯದಲ್ಲಿ ಭಾರತದ ಆಟಗಾರ 6–3, 6–0ರ ನೇರ ಸೆಟ್‌ಗಳಿಂದ ಸರ್ಬಿಯಾದ ಪೆಡ್ಜಾ ಕ್ರಿಸ್ಟಿನ್‌ ಅವರನ್ನು ಪರಾಭವಗೊಳಿಸಿದರು.

ಹಿಂದಿನ ಗೆಲುವುಗಳ ಬಲ ದೊಂದಿಗೆ ಕಣಕ್ಕಿಳಿದಿದ್ದ ಸಾಕೇತ್‌ ಮೊದಲ ಸೆಟ್‌ನಲ್ಲಿ ಅಮೋಘ ಆಟ ಆಡಿ ದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 143ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಸರ್ವ್‌ ಹಾಗೂ ಚೆಂಡನ್ನು ಹಿಂತಿರುಗಿಸುವಲ್ಲಿ ಚುರುಕುತನ ತೋರಿದರು.

ಇನ್ನೊಂದೆಡೆ ಕ್ರಿಸ್ಟಿನ್‌ ಕೂಡ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಗೇಮ್‌ ಗೆದ್ದರು. ಆರನೇ ಗೇಮ್‌ವರೆಗೂ ಇಬ್ಬರೂ ತಮ್ಮ ಸರ್ವ್‌ ಉಳಿಸಿಕೊಂಡರು.   ಆ ನಂತರ ಸಾಕೇತ್‌  ಅಬ್ಬರಿಸಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ  ಸರ್ಬಿ ಯಾದ ಆಟಗಾರನ ಮೇಲೆ ಅಧಿಪತ್ಯ ಸಾಧಿಸಿದ ಸಾಕೇತ್‌ ಎದುರಾಳಿಗೆ ಒಂದೂ ಗೇಮ್‌ ಬಿಟ್ಟುಕೊಡದೆ  ನಿರಾಯಾಸವಾಗಿ ಪಂದ್ಯ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.