ADVERTISEMENT

ಮೊದಲ ದಿನ ಮಳೆಯ ಆಟ

ಟೆಸ್ಟ್‌ ಕ್ರಿಕೆಟ್: ಆತಿಥೇಯ ಲಂಕಾ ತಂಡಕ್ಕೆ ಆರಂಭಿಕ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಕೊಲಂಬೊ: ಶುಕ್ರವಾರದ ಮುಂಜಾನೆ ಆತಿಥೇಯ ಶ್ರೀಲಂಕಾದ ಪಾಲಿಗೆ ಶುಭವಾಗಿತ್ತು.  ಭಾರತದ ಇಬ್ಬರು ಬ್ಯಾಟ್ಸ್‌ಮನ್‌ಗಳ  ವಿಕೆಟ್‌ಗಳನ್ನು ಗಳಿಸಿದ ಲಂಕಾ ತಂಡದ ಸಡಗರದ ಮೇಲೆ ಮಳೆರಾಯ ನೀರು ಸುರಿದ.

ಎಸ್‌ಎಸ್‌ಸಿ ಕ್ರೀಡಾಂಗಣದಲ್ಲಿ ಆರಂಭವಾದ ಮೂರನೇ ಟೆಸ್ಟ್‌ನ ಮೊದಲ ದಿನದ ಬಹುತೇಕ ಅವಧಿಯು ಮಳೆಗೆ ಆಹುತಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 15 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿದೆ.

ಟಾಸ್ ಗೆದ್ದು  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಮ್ಮ ನಾಯಕ ಏಂಜೆಲೊ ಮ್ಯಾಥ್ಯೂಸ್ ನಿರ್ಧಾರವನ್ನು ಲಂಕಾದ ಬೌಲರ್‌ಗಳು ಸಮರ್ಥಿಸಿಕೊಳ್ಳುವಂತೆ ಆಡಿದರು.

ಧಮ್ಮಿಕಾ ಪ್ರಸಾದ್ ಮೊದಲ ಓವರ್‌ನಲ್ಲಿಯೇ ಕೆ.ಎಲ್. ರಾಹುಲ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಮಧ್ಯಮವೇಗಿ ಪ್ರಸಾದ್ ಎಸೆತವನ್ನು ಅಂದಾಜಿಸುವಲ್ಲಿ ಎಡವಟ್ಟು ಮಾಡಿಕೊಂಡ ರಾಹುಲ್ ದಂಡ ತೆತ್ತರು.  ಚೆಂಡು ಆಫ್‌ಸ್ಟಂಪ್‌ನಿಂದ  ಹೊರ ಹೋಗುತ್ತಿದೆ ಎಂದು ಭಾವಿಸಿದ ರಾಹುಲ್ ಆಡುವ ಪ್ರಯತ್ನ ಮಾಡಲಿಲ್ಲ.

ಆದರೆ, ಕೆಳಹಂತದಲ್ಲಿ ಚುರುಕಾದ ತಿರುವು ಪಡೆದ ಚೆಂಡು ಬೇಲ್ಸ್‌ ಹಾರಿಸಿದಾಗ ರಾಹುಲ್ ಆಘಾತಗೊಂಡರು. ಕಳೆದ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ ರಾಹುಲ್ ಶತಕ ದಾಖಲಿಸಿದ್ದರು. ಅದೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಅಜಿಂಕ್ಯ ರಹಾನೆ ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಬಲಗೈ ವೇಗಿ ನುವಾನ್ ಪ್ರದೀಪ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಗಾಯಗೊಂಡಿರುವ ಮುರಳಿ ವಿಜಯ್ ಬದಲಿಗೆ ಸ್ಥಾನ ಪಡೆದಿರುವ ಚೇತೇಶ್ವರ ಪೂಜಾರ (ಔಟಾಗದೆ 19; 42ಎ, 2ಬೌಂ)ಮಾತ್ರ ಇನ್ನೊಂದೆಡೆ ದೃಢವಿಶ್ವಾಸದಿಂದ ಇನಿಂಗ್ಸ್‌ ಕಟ್ಟುವತ್ತ ಗಮನ ಹರಿಸಿದರು. ಅವರ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ (ಔಟಾಗದೆ 14; 34ಎ, 2ಬೌಂ) ಹೆಚ್ಚಿನ ಕುಸಿತ ತಡೆದರು.

ತಂಡದ ಮೊತ್ತವು 50 ರನ್‌ ಮುಟ್ಟಿದ್ದಾಗ ಮಳೆ ಆರಂಭ ವಾಯಿತು. ಎಡೆಬಿಡದ ಸುರಿದ ಮಳೆ ಯಿಂದಾಗಿ ಮೈದಾನ ಹಸಿಯಾಗಿತ್ತು. ಚಹಾ ವಿರಾಮದವರೆಗೂ ಪಿಚ್ ಮತ್ತು ಮೈದಾನದ ಪರಿಸ್ಥಿತಿಯನ್ನು ಪರೀಕ್ಷಿಸಿದ ಅಂಪೈರ್‌ಗಳು ಮಧ್ಯಾಹ್ನ 3.45ಕ್ಕೆ ದಿನದಾಟ ಸ್ಥಗಿತಗೊಳಿಸಲು ಸೂಚಿಸಿದರು.  ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿವೆ.

ಸ್ಕೋರ್‌ಕಾರ್ಡ್‌
ಭಾರತ ಪ್ರಥಮ ಇನಿಂಗ್ಸ್‌ 2ಕ್ಕೆ50 (15 ಓವರ್‌)

ಕೆ.ಎಲ್. ರಾಹುಲ್ ಬಿ ಧಮ್ಮಿಕಾ ಪ್ರಸಾದ್  02
ಚೇತೇಶ್ವರ ಪೂಜಾರ ಔಟಾಗದೆ  19
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ನುವಾನ ಪ್ರದೀಪ್  08
ವಿರಾಟ್ ಕೊಹ್ಲಿ ಔಟಾಗದೆ  14
ಇತರೆ: ವೈಡ್ 1, ನೋಬಾಲ್ 1, ಪೆನಾಲ್ಟಿ 5)  07
ವಿಕೆಟ್‌ ಪತನ: 1–2 (ರಾಹುಲ್ 0.2), 2–14 (ರಹಾನೆ 3.4)
ಬೌಲಿಂಗ್‌: ಧಮ್ಮಿಕಾ ಪ್ರಸಾದ್ 4–0–16–1 (ನೋಬಾಲ್ 1), ನುವಾನ ಪ್ರದೀಪ್ 6–0–16–1 (ವೈಡ್ 1), ಏಂಜೆಲೊ ಮ್ಯಾಥ್ಯೂಸ್ 4–2–7–0, ರಂಗನಾ ಹೆರಾತ್ 1–0–6–0

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.