ADVERTISEMENT

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ತಿರುವನಂತಪುರ (ಪಿಟಿಐ): ದೇಶದ ಯುವ ಹಾಗೂ ಅನುಭವಿ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ತೋರಿಸಲು ವೇದಿಕೆ ಎನಿಸಿರುವ 35ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಶನಿವಾರ ಇಲ್ಲಿ ಚಾಲನೆ ಲಭಿಸಲಿದೆ.

ಈ ಕ್ರೀಡಾಕೂಟ ಮೂರು ವರ್ಷಗಳ ಹಿಂದೆ ನಡೆಯಬೇಕಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಹಲವು ಸಲ ಮುಂದೂಡಲಾಗಿತ್ತು.
ಕೇರಳದ ಏಳು ಜಿಲ್ಲೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ದೇಶದ ಕೆಲ ಪ್ರಮುಖ ಸ್ಪರ್ಧಿಗಳು ಹಿಂದೆ ಸರಿದಿರುವ ಕಾರಣ ಕೂಟ ತನ್ನ ಹೊಳಪನ್ನು ಅಲ್ಪ ಕಳೆದುಕೊಂಡಿದೆ. ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ಬಾಕ್ಸರ್‌ ವಿಜೇಂದರ್‌ ಸಿಂಗ್‌ ಮತ್ತು ಕುಸ್ತಿಪಟುಗಳಾದ ಸುಶೀಲ್‌ ಕುಮಾರ್‌ ಹಾಗೂ ಯೋಗೇಶ್ವರ್‌ ದತ್‌ ಅವರು ಪಾಲ್ಗೊಳ್ಳುತ್ತಿಲ್ಲ.

ಆದರೆ ಶೂಟಿಂಗ್‌ ರೇಂಜ್‌ನಲ್ಲಿ ಪ್ರಮುಖರು ‘ಗುರಿ’ ಹಿಡಿಯಲು ಸಜ್ಜಾಗಿದ್ದಾರೆ. ಒಲಿಂಪಿಕ್‌ ಪದಕ ವಿಜೇತರಾದ ಗಗನ್ ನಾರಂಗ್‌ ಮತ್ತು ವಿಜಯ್‌ ಕುಮಾರ್‌ ಕ್ರಮವಾಗಿ ಆಂಧ್ರ ಪ್ರದೇಶ ಮತ್ತು ಸರ್ವಿಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.

ಇಲ್ಲಿನ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ 5 ಸಾವಿರಕ್ಕೂ ಅಧಿಕ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಕ್ರೀಡಾಕೂಟದ ರಾಯಭಾರಿಯಾಗಿ ರುವ ಸಚಿನ್‌ ತೆಂಡೂಲ್ಕರ್‌ ಸಮಾರಂಭದಲ್ಲಿ  ಭಾಗವಹಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.