ADVERTISEMENT

ವಿವಾದಗಳ ಪೊರೆ ಕಳಚುವತ್ತ ವಿರಾಟ್ ಚಿತ್ತ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ವಿವಾದಗಳ ಪೊರೆ ಕಳಚುವತ್ತ ವಿರಾಟ್ ಚಿತ್ತ
ವಿವಾದಗಳ ಪೊರೆ ಕಳಚುವತ್ತ ವಿರಾಟ್ ಚಿತ್ತ   

ಪೋರ್ಟ್ ಆಫ್ ಸ್ಪೇನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮನ್ನು ಸುತ್ತಿಕೊಂಡಿರುವ ವಿವಾದಗಳನ್ನು ಬದಿಗೊತ್ತಿ ವೆಸ್ಟ್ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ  ಛಲದಲ್ಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ  ತಂಡದ ಎದುರಿನ ಸೋಲು ಮತ್ತು ನಾಯಕ ಹಾಗೂ ಮುಖ್ಯ ಕೋಚ್ ನಡುವಣ ವಿವಾದಗಳಿಂದಾಗಿ ಕೊಹ್ಲಿ ಪಡೆಯು ಒತ್ತಡದಲ್ಲಿದೆ.  ಅದರ ನಡುವೆಯೇ ಶುಕ್ರವಾರ ಕ್ವೀನ್ಸ್‌ ಪಾರ್ಕ್‌ ಓವೆಲ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಜಯದ ಆರಂಭ ಮಾಡಲು  ಕೊಹ್ಲಿ ಬಳಗವು ಸಿದ್ಧವಾಗಿದೆ.  ಈ ಕ್ರೀಡಾಂಗಣದಲ್ಲಿ ಭಾರತ ತಂಡವು 2013ರಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿತ್ತು.  ಹೋದ ವರ್ಷ ಟೆಸ್ಟ್ ಸರಣಿ ಆಡಲು ಇಲ್ಲಿಗೆ ಬಂದಾಗ ಅನಿಲ್ ಕುಂಬ್ಳೆ ಅವರು ತಂಡದ ಮುಖ್ಯ ಕೋಚ್ ಆಗಿ ಕಾರ್ಯಾರಂಭ ಮಾಡಿದ್ದರು.  ಈ ಬಾರಿ ಸರಣಿಗೂ ಮುನ್ನ ನಾಯಕ ಕೊಹ್ಲಿ ಅವರ ‘ಭಿನ್ನಾಭಿಪ್ರಾಯ’ದ ಕಾರಣದಿಂದಾಗಿ ಕುಂಬ್ಳೆ ರಾಜೀನಾಮೆ ನೀಡಿದ್ದರು.

ಅದರಿಂದಾಗಿ ಹಿರಿಯ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಅಸಮಾಧಾನಕ್ಕೆ ಕೊಹ್ಲಿ ಗುರಿಯಾಗಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಜಯ ಸಾಧಿಸಿ ಟೀಕಾಕಾರಿಗೆ ಉತ್ತರ ಕೊಡುವ ಸವಾಲು ವಿರಾಟ್ ಮುಂದೆ ಇದೆ. ಮುಖ್ಯ ಕೋಚ್ ಇಲ್ಲದ ತಂಡದಲ್ಲಿ  ಯೋಜನೆ ರೂಪಿಸುವ ಮತ್ತು ಜಾರಿಗೊಳಿಸುವ ಸಂಪೂರ್ಣ ಹೊಣೆ ನಾಯಕನ ಮೇಲೆ ಇದೆ.  ಅದರಿಂದಾಗಿ ಕೊಹ್ಲಿ ತಮ್ಮ ಚಾಣಾಕ್ಷತೆ ಮತ್ತು ವೈಯಕ್ತಿಕ ಸಾಮರ್ಥ್ಯ ನಿರೂಪಿಸಲು ಈ ಸರಣಿಯು ಪರೀಕ್ಷಾ ಕಣವಾಗಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಿ ಗುಂಪಿನ ಸುತ್ತಿನಲ್ಲಿ ಶ್ರೀಲಂಕಾ ಎದುರು ಮಾತ್ರ ಸೋತಿತ್ತು. ಉಳಿದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಚೆನ್ನಾಗಿ ಆಡಿತ್ತು.

ADVERTISEMENT

ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ ಚೆನ್ನಾಗಿ ಆಡಿದ್ದರು. ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರಸಿಂಗ್ ದೋನಿ, ಕೇದಾರ್ ಜಾಧವ್ ಮಿಂಚಿದ್ದರು. ಸೆಮಿಫೈನಲ್‌ನಲ್ಲಿಯೂ ಅಬ್ಬರದ ಆಟವಾಡಿದ್ದರು.  ರೋಹಿತ್ ಮತ್ತು ಶಿಖರ್ ಟೂರ್ನಿಯಲ್ಲಿ ತಲಾ ಒಂದು ಶತಕ ದಾಖಲಿಸಿದ್ದರು. ಆದರೆ ಫೈನಲ್‌ನಲ್ಲಿ ಇವರೆಲ್ಲರೂ ವಿಫಲರಾಗಿದ್ದರು.  ಬರೋಡಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮಾತ್ರ ಮಿಂಚಿದ್ದರು.

ಅವರು ಮಿಂಚಿನ ಅರ್ಧಶತಕ ಗಳಿಸಿದ್ದರು. ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ವೈಫಲ್ಯ ಕಂಡಿದ್ದರು.  ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು.   ಅದರಿಂದಾಗಿ ಕೆಲವು ಪಂದ್ಯಗಳಲ್ಲಿ  ಜಡೇಜ ಅವರಿಗೆ ವಿಶ್ರಾಂತಿ ನೀಡಿ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಅಲ್ಲದೇ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡ ತಂಡದಲ್ಲಿದ್ದಾರೆ. ಅವರಿಗೂ ಅವಕಾಶ ಲಭಿಸುವ ಸಾಧ್ಯತೆ ಇದೆ.

ಹೋಲ್ಡರ್‌ ಬಳಗಕ್ಕೆ ಸವಾಲು: ಜೇಸನ್ ಹೋಲ್ಡರ್ ನಾಯಕತ್ವದ  ವಿಂಡೀಸ್ ಬಳಗವು   5–0 ಅಂತರದಿಂದ ಸರಣಿ ಗೆದ್ದು ವಿರಾಟ್ ಬಳಗದ ಗಾಯದ ಮೇಲೆ ಬರೆ ಎಳೆಯುವ ಉತ್ಸಾಹದಲ್ಲಿದೆ.  ವಿಂಡೀಸ್ ತಂಡವು ಕ್ರಿಕೆಟ್ ಲೋಕದ ಉದಯೋನ್ಮುಖ ತಂಡ  ಆಫ್ಘಾನಿಸ್ತಾನದ ಎದುರು ಈಚೆಗೆ 1–1ರಿಂದ ಸರಣಿ ಸಮ ಮಾಡಿಕೊಂಡಿತ್ತು. 58 ಪಂದ್ಯಗಳನ್ನು ಆಡಿರುವ ಅನುಭವಿ ಹೋಲ್ಡರ್ ಅವರು  184 ಪಂದ್ಯಗಳನ್ನು ಆಡಿರುವ ಕೊಹ್ಲಿ ಅವರ ನಾಯಕತ್ವದ ಸವಾಲು ಎದುರಿಸಿ ನಿಲ್ಲಬೇಕಿದೆ.

ತಂಡಗಳು ಇಂತಿವೆ:  ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಯುವ
ರಾಜ್ ಸಿಂಗ್, ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಉಮೇಶ್ ಯಾದವ್.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಜೋನಾಥನ್ ಕಾರ್ಟರ್, ಮಿಗೆಲ್ ಕಮಿನ್ಸ್, ಅಲ್ಜಾರಿ ಜೋಸೆಫ್, ಜೇಸನ್ ಮೊಹಮ್ಮದ್, ಕೀರನ್ ಪೊವೆಲ್, ಕೆಸ್ರಿಕ್ ವಿಲಿಯಮ್ಸ್, ದೇವೇಂದ್ರ ಬಿಷೂ, ರಾಸ್ಟನ್ ಚೇಸ್, ಶೃ ಹೋಪ್ (ವಿಕೆಟ್‌ಕೀಪರ್), ಎವಿನ್ ಲೂಯಿಸ್, ಆ್ಯಷ್ಲೆ ನರ್ಸ್, ರೋಮನ್ ಪೊವೆಲ್,

ಆತಿಥೇಯರಿಗೆ ಮಹತ್ವದ ಸರಣಿ: ವೆಸ್ಟ್ ಇಂಡೀಸ್ ತಂಡಕ್ಕೆ ಈ ಸರಣಿಯು ಮಹತ್ವದ್ದಾಗಿದೆ. ಐಸಿಸಿ ರ್‌್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಕೆರಿಬಿಯನ್ ನಾಡಿನ ತಂಡವು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಗಿಟ್ಟಿಸಿರಲಿಲ್ಲ. 2019ರ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯಲು ವಿಂಡೀಸ್ ತಂಡ ಅಗ್ರ ಎಂಟರಲ್ಲಿ ಸ್ಥಾನ ಪಡೆಯಬೇಕು. ಆದ್ದರಿಂದ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ ರ್‌್ಯಾಂಕಿಂಗ್ ಪಟ್ಟಿಯಲ್ಲಿ ಮೇಲೆರುವ ಅವಕಾಶ ತಂಡಕ್ಕೆ ಇದೆ.

ಸ್ಪಿನ್ನರ್ ಸ್ನೇಹಿ ಪಿಚ್
ಕ್ವೀನ್ಸ್‌ ಪಾರ್ಕ್ ಓವೆಲ್ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಇದೆ. ಈ ಪಿಚ್‌ನಲ್ಲಿ ಚೆಂಡು ನಿಧಾನಗತಿಯಲ್ಲಿ ಪುಟಿದೇಳುತ್ತದೆ. ಆದ್ದರಿಂದ ಬ್ಯಾಟ್ಸ್‌ಮನ್‌ಗಳು ತಾಳ್ಮೆಯಿಂದ ಆಡಬೇಕಾಗುತ್ತದೆ. ಹೋದ ವರ್ಷ ಇಲ್ಲಿ ಮೂರು ಟ್ವೆಂಟಿ–20 ಪಂದ್ಯಗಳು ಆಯೋಜನೆಯಾಗಿದ್ದವು.

ಐಸಿಸಿ ರ‍್ಯಾಂಕಿಂಗ್‌
ಭಾರತ – 03
ವೆಸ್ಟ್ ಇಂಡೀಸ್ – 09

ಬಲಾಬಲ
ಪಂದ್ಯಗಳು: 116
ಭಾರತದ ಜಯ: 53
ವಿಂಡೀಸ್ ಜಯ: 60
ಟೈ: 01
ಫಲಿತಾಂಶವಿಲ್ಲ: 02

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.