ADVERTISEMENT

ವಿಶ್ವಕಪ್‌ ಫುಟ್‌ಬಾಲ್‌ ಕೂಟಕ್ಕೆ ಚಾಲನೆ; ಅಮೆರಿಕ ತಂಡಕ್ಕೆ ಶರಣಾದ ಭಾರತ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:45 IST
Last Updated 6 ಅಕ್ಟೋಬರ್ 2017, 19:45 IST
ಶುಕ್ರವಾರ ರಾತ್ರಿ ನಡೆದ ಭಾರತ ಮತ್ತು ಅಮೆರಿಕ ನಡುವಿನ ಪಂದ್ಯಕ್ಕೂ ಮುನ್ನ ಫಿಫಾ ಕಾರ್ಯದರ್ಶಿ ಫತ್ಮಾ ಸಮಾರಾ, ಎಎಫ್‌ಸಿ ಅಧ್ಯಕ್ಷ ಶೇಖ್‌ ಸಲ್ಮಾನ್‌, ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ರಾಜ್ಯ ವರ್ಧನ್ ಸಿಂಗ್ ರಾಥೋಡ್‌ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಭಾರತ ತಂಡದ ಆಟಗಾರರು ಇದ್ದಾರೆ ಎಎಫ್‌ಪಿ/ಪಿಟಿಐ ಚಿತ್ರ
ಶುಕ್ರವಾರ ರಾತ್ರಿ ನಡೆದ ಭಾರತ ಮತ್ತು ಅಮೆರಿಕ ನಡುವಿನ ಪಂದ್ಯಕ್ಕೂ ಮುನ್ನ ಫಿಫಾ ಕಾರ್ಯದರ್ಶಿ ಫತ್ಮಾ ಸಮಾರಾ, ಎಎಫ್‌ಸಿ ಅಧ್ಯಕ್ಷ ಶೇಖ್‌ ಸಲ್ಮಾನ್‌, ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ರಾಜ್ಯ ವರ್ಧನ್ ಸಿಂಗ್ ರಾಥೋಡ್‌ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಭಾರತ ತಂಡದ ಆಟಗಾರರು ಇದ್ದಾರೆ ಎಎಫ್‌ಪಿ/ಪಿಟಿಐ ಚಿತ್ರ   

ನವದೆಹಲಿ: ಫಿಫಾ 17 ವರ್ಷದೊಳಗಿ ನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಗೆಲುವಿನ ಮುನ್ನುಡಿ ಬರೆಯುವ ಭಾರತದ ಕನಸು ಕೈಗೂಡಲಿಲ್ಲ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 0–3 ಗೋಲುಗಳಿಂದ ಅಮೆರಿಕಕ್ಕೆ ಶರಣಾಯಿತು.

ವಿಶ್ವಕಪ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ಅಮರ್‌ಜೀತ್‌ ಕಿಯಾಮ್‌ ಬಳಗ ಮೊದಲರ್ಧದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ತವರಿನ ಅಭಿಮಾನಿಗಳ ಮನ ಗೆದ್ದಿತ್ತು. ಮೊದಲ 29 ನಿಮಿಷಗಳ ಕಾಲ ರಕ್ಷಣಾ ವಿಭಾಗದಲ್ಲಿ ಮಿಂಚಿದ್ದರಿಂದ ಎದುರಾಳಿಗಳು ಗೋಲು ಗಳಿಸಲು ಪರದಾಡಿದರು.

ADVERTISEMENT

30ನೇ ನಿಮಿಷದಲ್ಲಿ ಅಮೆರಿಕಕ್ಕೆ ಯಶಸ್ಸು ಲಭಿಸಿತು. ಚೆಂಡನ್ನು ಸೊಗ ಸಾದ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಭಾರತದ ಆವರಣ ಪ್ರವೇಶಿಸಿದ ಸರ್ಜೆಂಟ್‌ ಅದನ್ನು ಗುರಿ ಮುಟ್ಟಿಸಿದರು.

ಆ ನಂತರದ 15 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಹೀಗಾಗಿ ಪ್ರವಾಸಿ ಪಡೆ 1–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು.

(ನವದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕೊಲಂಬಿಯಾ (ಹಳದಿ ಪೋಷಾಕು) ಎದುರಿನ ಪಂದ್ಯದಲ್ಲಿ ಘಾನಾ ತಂಡದ ಆಟಗಾರ ಚೆಂಡನ್ನು ಒದ್ದ ರೀತಿ)

ದ್ವಿತೀಯಾರ್ಧದಲ್ಲಿ ಅಮೆರಿಕದ ಆಟಗಾರರು ಪ್ರಾಬಲ್ಯ ಮೆರೆದರು. ಡರ್ಕಿನ್‌ ಮತ್ತು ಕಾರ್ಲ್ಟನ್‌ ಕ್ರಮವಾಗಿ 51 ಮತ್ತು 84ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಸಂಭ್ರಮಕ್ಕೆ ಕಾರಣರಾದರು.

ಚಾಲನೆ ನೀಡಿದ ಮೋದಿ: ವಿಶ್ವಕಪ್‌ ಕೂಟಕ್ಕೆ ಶುಕ್ರವಾರ ಅಧಿಕೃತ ಚಾಲನೆ ಸಿಕ್ಕಿತು. ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ  ಭಾರತ ಮತ್ತು ಅಮೆರಿಕ ಆಟಗಾರರಿಗೆ ಹಸ್ತಲಾಘವ ನೀಡಿ ಅಭಿನಂದಿಸಿದರು.

ಬಳಿಕ ಫುಟ್‌ಬಾಲ್‌ ದಿಗ್ಗಜರಾದ ಪಿ.ಕೆ. ಬ್ಯಾನರ್ಜಿ, ಸೈಯದ್‌ ನಯೀಮುದ್ದೀನ್‌, ಐ.ಎಂ.ವಿಜಯನ್‌, ಭೈಚುಂಗ್‌ ಭುಟಿಯಾ, ಸುನಿಲ್‌ ಚೆಟ್ರಿ ಮತ್ತು ಬೆಂಬೆಮ್‌ ದೇವಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿ ಜೂಲನ್‌ ಗೋಸ್ವಾಮಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಫಿಫಾ ಮಹಾ ಕಾರ್ಯದರ್ಶಿ ಫತ್ಮಾ ಸಾಂಬ ದಿಯೌಫ್‌ ಸಮೌರಾ, ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ನ ಅಧ್ಯಕ್ಷ ಶೇಖ್‌ ಸಲ್ಮಾನ್‌ ಇಬ್ರಾಹಿಂ ಅಲ್‌ ಖಲೀಫ್‌ ಮತ್ತು ಎಐಎಫ್‌ಎಫ್‌ ಮುಖ್ಯಸ್ಥ ಪ್ರಫುಲ್‌ ಪಟೇಲ್‌ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

**

ಘಾನಾ ತಂಡಕ್ಕೆ ಜಯ

ನವದೆಹಲಿ: ಎರಡು ಬಾರಿಯ ಚಾಂಪಿ ಯನ್‌ ಘಾನಾ ತಂಡದವರು ಫಿಫಾ  17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಘಾನಾ 1–0 ಗೋಲಿನಿಂದ ಕೊಲಂಬಿಯಾ ತಂಡವನ್ನು ಪರಾಭವಗೊಳಿಸಿತು.

ಉಭಯ ತಂಡಗಳು ಆರಂಭ ದಿಂದಲೇ ತುರುಸಿನ ಪೈಪೋಟಿ ನಡೆಸಿ ದವು. ಹೀಗಾಗಿ ಮೊದಲ 38 ನಿಮಿಷಗಳ ಆಟ ಗೋಲು ರಹಿತವಾಗಿತ್ತು. 39ನೇ ನಿಮಿಷದಲ್ಲಿ ಘಾನಾ ತಂಡ ಖಾತೆ ತೆರೆಯಿತು. ಈ ತಂಡದ ಸಾದಿಕ್‌ ಇಬ್ರಾಹಿಂ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಕ್ಕೆ ಕಾರಣರಾದರು.

ಮುಂಬೈನ ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್‌ ಮತ್ತು ಟರ್ಕಿ ನಡುವಣ ‘ಬಿ’ ಗುಂಪಿನ ಪಂದ್ಯ 1–1ಗೋಲುಗಳಿಂದ ಸಮಬಲ ವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.