ADVERTISEMENT

ಶಿಫಾರಸು ಇಲ್ಲದಿದ್ದರೂ ಅರ್ಜುನ

ಅರ್ಹ ಕ್ರೀಡಾಪಟು ವಂಚಿತನಾಗುವುದನ್ನು ನಿಲ್ಲಿಸಲು ಚಿಂತನೆ

ಪಿಟಿಐ
Published 21 ಆಗಸ್ಟ್ 2017, 19:20 IST
Last Updated 21 ಆಗಸ್ಟ್ 2017, 19:20 IST

ನವದೆಹಲಿ: ಅರ್ಜುನ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಕ್ರೀಡಾ ಇಲಾಖೆ ಚಿಂತನೆ ನಡೆಸಿದೆ. ಅರ್ಹರು ಪ್ರಶಸ್ತಿಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಆಯ್ಕೆ ಸಮಿತಿ ಶಿಫಾರಸು ಮಾಡದೇ ಇದ್ದ ಕ್ರೀಡಾಪಟುಗಳನ್ನು ಇಲಾಖೆ ನೇರವಾಗಿ ಪ್ರಶಸ್ತಿಗೆ ಪರಿಗಣಿಸಲಿದೆ.

ಕ್ರೀಡಾ ಸಚಿವ ವಿಜಯ್‌ ಗೋಯಲ್ ಅವರು ಈ ಕುರಿತು ಸಂಬಂಧಪಟ್ಟವರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಆಯ್ಕೆ ಸಮಿತಿಯಲ್ಲಿ ಹಿರಿಯ ಮೇಧಾವಿಗಳು ಇದ್ದಾರೆ. ಅವರ ಗೌರವಕ್ಕೆ ಧಕ್ಕೆ ತರಲು ಇಲಾಖೆ ಬಯಸುವುದಿಲ್ಲ. ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ಬದ್ಧವಾಗಿದ್ದು ಅದರ ಜೊತೆಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಬಯಸಿದೆ. ಅರ್ಜಿ ಸಲ್ಲಿಸದವರಿಗೆ ಮತ್ತು ಶಿಫಾರಸು ಮಾಡದವರಿಗೆ ಅವರ ಸಾಮರ್ಥ್ಯದ ಆಧಾರದಲ್ಲಿ ಗೌರವ ಸಲ್ಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

ADVERTISEMENT

‘ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರನ್ನು ನಿರಂತರವಾಗಿ ಕಡೆಗಣಿಸಲಾಗಿದೆ. ಇಂಥ ಲೋಪವನ್ನು ಸರಿಪಡಿಸುವುದಕ್ಕಾಗಿ ಹೊಸ ಪದ್ಧತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆಯೇ’ ಎಂದು ಕೇಳಿದಾಗ ‘ವೈಯಕ್ತಿಕವಾಗಿ ಯಾರನ್ನಾದರೂ ಮೆಚ್ಚಿಸುವ ಉದ್ದೇಶವಿಲ್ಲ. ಹಳೆಯ ಪದ್ಧತಿಗೆ ಬದಲಾವಣೆ ತರುವುದಕ್ಕೆ ಮಾತ್ರ ಇಲಾಖೆ ಗಮನ ನೀಡಲಿದೆ’ ಎಂದು ಅಧಿಕಾರಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿರುವ ರೋಹನ್ ಬೋಪಣ್ಣ ಅವರನ್ನು ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೆ ಈ ಪತ್ರ ಅಂತಿಮ ದಿನವಾದ ಏಪ್ರಿಲ್‌ 28ರ ನಂತರ ಆಯ್ಕೆ ಸಮಿತಿಯ ಬಳಿ ತಲುಪಿತ್ತು.

ಹೀಗಾಗಿ ಅವರನ್ನು ಸಮಿತಿಯವರು ಪ್ರಶಸ್ತಿಗೆ ಪರಿಣಗಣಿಸಲಿಲ್ಲ. ಅವರ ಬದಲಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಸಾಕೇತ್ ಮೈನೇನಿ ಅವರನ್ನು ಪಟ್ಟಿಯಲ್ಲಿ ಸೇರಿಸಿತ್ತು.

ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೂ ಹೀಗೆಯೇ ಆಗಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ
ಆಟಗಾರ್ತಿ ಎಂಬ ದಾಖಲೆ  ಹೊಂದಿರುವ ಮಿಥಾಲಿ ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಬೇಕು ಎಂಬ ದನಿ ಕೇಳಿಬಂದಿತ್ತು. ಆದರೆ ಅವರನ್ನು ಬಿಸಿಸಿಐ ಅಥವಾ ಇತರ ಯಾವುದೇ ಕ್ರಿಕೆಟ್‌ ಸಂಸ್ಥೆ ಶಿಫಾರಸು ಮಾಡದೇ ಇದ್ದುದರಿಂದ ಈ ಪ್ರಶಸ್ತಿ ಅವರ ಕೈತಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.