ADVERTISEMENT

ಸಹನೆಯ ಪಾಠ ಕಲಿಸಿದ ಆಟ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಸಹನೆಯ ಪಾಠ ಕಲಿಸಿದ ಆಟ
ಸಹನೆಯ ಪಾಠ ಕಲಿಸಿದ ಆಟ   

ಧರ್ಮಶಾಲಾ (ಪಿಟಿಐ): ‘ನಾನು ಹದಿಮೂರನೇ ವಯಸ್ಸಿನಿಂದಲೇ ದೀರ್ಘ ಮಾದರಿ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದು ಸಹನೆಯ ಗುಣ ಬೆಳೆಯಲು ಕಾರಣವಾಯಿತು’–ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಟೆಸ್ಟ್‌ನಲ್ಲಿ   ದ್ವಿಶತಕ ದಾಖಲಿಸಿ ಪಂದ್ಯಶ್ರೇಷ್ಠರಾಗಿದ್ದ   ಭಾರತದ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅವರ ಮಾತುಗಳಿವು.

ರಾಂಚಿಯ ಅಂಗಳದಲ್ಲಿ ಬರೋಬ್ಬರಿ 525 ಎಸೆತಗಳನ್ನು ಎದುರಿಸಿ ದ್ವಿಶತಕ ಬಾರಿಸಿದ್ದರು. ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ತಾಳ್ಮೆಯ ಗುಟ್ಟು ಬಿಚ್ಚಿಟ್ಟರು.

‘ಎಂಟನೆ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದೆ. 13ನೇ ವಯಸ್ಸಿಗೆ ಜೂನಿಯರ್ ವಿಭಾಗದ ದೀರ್ಘ ಮಾದರಿ ಪಂದ್ಯಗಳನ್ನು ಆಡಲು ಆರಂಭಿಸಿದೆ. ಅಲ್ಲಿಂದ ಇಲ್ಲಿಯವರೆಗೂ ತಾಳ್ಮೆಯ ಗುಣವನ್ನು ವೃದ್ಧಿಸುವ ಮತ್ತು ಕಾಪಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ. ಅದೊಂದು ನಿರಂತರ ಪ್ರಕ್ರಿಯೆಯಾಗಿದೆ’ ಎಂದು ಸೌರಾಷ್ಟ್ರದ ಬ್ಯಾಟ್ಸ್‌ಮನ್ ಪೂಜಾರ ಹೇಳಿದರು.

ADVERTISEMENT

‘ನನ್ನ ನಿದ್ದೆ, ವಿಶ್ರಾಂತಿ ಮತ್ತು ಆಹಾರದ ಬಗ್ಗೆ ಅಪಾರ ಖಾಳಜಿ ವಹಿಸುತ್ತದೆ. ಸರಿಯಾದ ವೇಳೆಗೆ ಉತ್ತಮವಾದ ನಿದ್ದೆಯಿಂದಾಗಿ ದೈಹಿಕ ಮತ್ತು ಮಾನಸಿಕ ದೃಢತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಪಂದ್ಯ ಮುಗಿದ ನಂತರವೂ ಒಂದು ಶಿಸ್ತಿನ ವೇಳಾಪಟ್ಟಿಯನ್ನು ರೂಢಿಸಿಕೊಂಡಿ
ದ್ದೇನೆ’ ಎಂದರು.

‘ಆಡುವಾಗ ದಣಿವಾಗಿದ್ದರೂ ಗೆಲುವಿನ ಗುರಿಯ ಮೇಲೆ ಚಿತ್ತ ನೆಟ್ಟಾಗ ಆಟ ಮುಂದುವರಿಸಲು ಸಾಧ್ಯವಾಗುತ್ತದೆ.   ಸ್ವಯಂಪ್ರೇರಣೆ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ’ ಎಂದರು. ಬುಧವಾರ ಬಿಸಿಸಿಐ ಪ್ರಕಟಿಸಿದ ಕೇಂದ್ರಿಯ ಗುತ್ತಿಗೆ ಪಟ್ಟಿಯಲ್ಲಿ ಅಗ್ರ ಏಳು ಆಟಗಾರರಲ್ಲಿ ಪೂಜಾರ ಕೂಡ ಸ್ಥಾನ ಪಡೆದಿದ್ದಾರೆ. ‘ಎ’ದರ್ಜೆಯ ಪಟ್ಟಿಗೆ ಅವರು ಬಡ್ತಿ ಪಡೆದಿದ್ದಾರೆ.

‘ಮನ್ನಣೆ ದೊರಕಿರುವುದು ಸಂತಸ ಮತ್ತು ಹೆಮ್ಮೆಯ ವಿಷಯ. ಆದರೆ, ಸದ್ಯ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮಹತ್ವದ ಘಟ್ಟದಲ್ಲಿದ್ದೇವೆ. ಈ ಸಂದರ್ಭದಲ್ಲಿ ಗುತ್ತಿಗೆ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಕೊನೆಯ ಪಂದ್ಯದ ಮೇಲೆ ನಮ್ಮ ಗಮನ ಕೇಂದ್ರೀಕೃತಗೊಂಡಿದೆೆ’ ಎಂದರು.
‘ಧರ್ಮಶಾಲಾದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇಲ್ಲಿಯ ಕ್ರೀಡಾಂಗಣದಲ್ಲಿ ಈ ಮೊದಲು ದೇಶಿ ಪಂದ್ಯಗಳಲ್ಲಿ ಆಡಿದ್ದೇನೆ.  ಇಲ್ಲಿಯ ಹೊಸ ಪಿಚ್ ಸ್ಪರ್ಧಾತ್ಮಕವಾಗಿರುವಂತೆ ಕಾಣುತ್ತಿದೆ.  ಆದರೆ ಪಂದ್ಯದ ಅಗತ್ಯಕ್ಕೆ ತಕ್ಕಂತೆ ಆಡುವುದಷ್ಟರ ಮೇಲೆ ನಮ್ಮ ಗಮನ ಕೇಂದ್ರಿತವಾಗಿದೆ. ಅಂಗಳದ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ’  ಎಂದರು.

ಸರಣಿಯ ಮೊದಲ ಪಂದ್ಯ ನಡೆದಿದ್ದ ಪುಣೆಯಲ್ಲಿ ಪಿಚ್‌ ವಿವಾದದ ರೂಪ ಪಡೆದಿತ್ತು. ಅಲ್ಲಿ ಭಾರತ ತಂಡವು 333 ರನ್‌ಗಳಿಂದ ಸೋಲನುಭವಿಸಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನಲ್ಲಿ  ಭಾರತ ತಂಡವು 75 ರನ್‌ಗಳಿಂದ ಜಯಿಸಿತ್ತು.  ರಾಂಚಿಯಲ್ಲಿ ಬ್ಯಾಟ್ಸ್‌ಮನ್‌ಸ್ನೇಹಿ ಪಿಚ್‌ನಲ್ಲಿ ನಡೆದಿದ್ದ ಪಂದ್ಯವು ಡ್ರಾ ಆಗಿತ್ತು. ಆದ್ದರಿಂದ ಸರಣಿ ಗೆಲ್ಲಲು ಉಭಯ ತಂಡಗಳಿಗೂ ಧರ್ಮಶಾಲಾ ಪಂದ್ಯವು ಮಹತ್ವದ್ದಾಗಿದೆ. ಮಾ. 25 ರಿಂದ ನಡೆಯುವ ಪಂದ್ಯದಲ್ಲಿ ತುರುಸಿನ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿ ವಿರಾಟ್‘ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ನಾವು ಸದಾ ಇದ್ದೇವೆ. ಅವರು ಈ ಆಟದ ಶ್ರೇಷ್ಠ ರಾಯಾಭಾರಿ ಯಾಗಿದ್ದಾರೆ’ ಎಂದು  ಹೇಳಿದರು. ಕೊಹ್ಲಿ ಅವರನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಡೋನಾಲ್ಡ್ ಟ್ರಂಪ್ ಎಂದು ವ್ಯಂಗ್ಯ ಮಾಡಿರುವ ಕುರಿತು ಅವರು ಪ್ರತಿಕ್ರಿಯಿಸಿದರು.

‘ಸರಣಿಯಲ್ಲಿ ಹಲವು ಉತ್ತಮ ಸಾಧನೆಗಳು ಮೂಡಿ ಬಂದಿವೆ. ಆದರೆ ಕೆಲವು ವಿವಾದಾತ್ಮಕ ಹೇಳಿಕೆಗಳು ಹೆಚ್ಚು ಸುದ್ದಿ ಮಾಡಿದ್ದು ಸಾಧನೆಗಳನ್ನು ಮಸುಕಾಗಿಸಿದವು’ ಎಂದು ಚೇತೇಶ್ವರ್ ಪೂಜಾರ ಬೇಸರ ವ್ಯಕ್ತಪಡಿಸಿದರು.

‘ಈ ಪಿಚ್‌ನಲ್ಲಿ ಫಲಿತಾಂಶ ಖಚಿತ’
ಧರ್ಮಶಾಲಾ (ಪಿಟಿಐ): ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಚ್‌ಪಿಸಿಎ) ಕ್ರೀಡಾಂಗಣದ ಪಿಚ್‌ನಲ್ಲಿ ಚೆಂಡು ಬೌನ್ಸ್‌ ಆಗಲಿದೆ. ತನ್ನ ನೈಜ ಗುಣವನ್ನು ಉಳಿಸಿಕೊಳ್ಳಲಿದೆ. ಅಲ್ಲದೇ ಪಂದ್ಯ ಫಲಿತಾಂಶ ಹೊರಹೊಮ್ಮುವುದು ಖಚಿತ ಎಂದು ಪಿಚ್ ಕ್ಯುರೇಟರ್ ಸುಇಲ್ ಚವ್ಹಾಣ್ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿಯ ಪಿಚ್‌ ಮಧ್ಯಮವೇಗಿಗಳಿಗೆ ನೆರವು ನೀಡುತ್ತದೇ ಆದರೆ, ಪುಲ್ ಮತ್ತು ಕಟ್ ಶಾಟ್‌ಗಳನ್ನು  ಚೆನ್ನಾಗಿ ಆಡುವ ಬ್ಯಾಟ್ಸ್‌ಮನ್‌ಗಳು ಇಲ್ಲಿ ಯಶಸ್ವಿಯಾಗುತ್ತಾರೆ. ವರ್ಷಗಳ ಹಿಂದೆ ರೋಹಿತ್ ಶರ್ಮಾ ಅವರು ಇಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯದಲ್ಲಿ ಶತಕ ಹೊಡೆದಿದ್ದರು’ ಎಂದರು. ಇಲ್ಲಿ ಮಾ. 25ರಿಂದ ನಾಲ್ಕನೇ ಟೆಸ್ಟ್ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.