ADVERTISEMENT

ಸಾನಿಯಾ–ಮೋನಿಕಾಗೆ ಪ್ರಶಸ್ತಿ

ಕನೆಕ್ಟಿಕಟ್‌ ಓಪನ್‌ ಟೆನಿಸ್‌ ಟೂರ್ನಿ

ಪಿಟಿಐ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಕನೆಕ್ಟಿಕಟ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ರೊಮೆನಿಯಾದ ಮೊನಿಕಾ ನಿಕುಲೆಸ್ಕು ಮತ್ತು ಸಾನಿಯಾ ಮಿರ್ಜಾ ಜೋಡಿ  ಎಎಫ್‌ಪಿ ಚಿತ್ರ
ಕನೆಕ್ಟಿಕಟ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ರೊಮೆನಿಯಾದ ಮೊನಿಕಾ ನಿಕುಲೆಸ್ಕು ಮತ್ತು ಸಾನಿಯಾ ಮಿರ್ಜಾ ಜೋಡಿ ಎಎಫ್‌ಪಿ ಚಿತ್ರ   

ನ್ಯೂ ಹೆವನ್‌, ಅಮೆರಿಕ : ಅಮೋಘ ಆಟ ಆಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ರುಮೇನಿಯಾದ ಮೋನಿಕಾ ನಿಕುಲೆಸ್ಕು ಅವರು ಇಲ್ಲಿ ನಡೆದ ಕನೆಕ್ಟಿಕಟ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಸಾನಿಯಾ ಮತ್ತು ಮೋನಿಕಾ      7–5, 6–4ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಕ್ಯಾಥರಿನಾ ಬೊಂಡಾರೆಂಕೊ ಮತ್ತು ತೈವಾನ್‌ನ ಚುವಾಂಗ್‌ ಚಿಯಾ ಜುಂಗ್‌ ಅವರನ್ನು ಪರಾಭವಗೊಳಿಸಿದರು. 
ಸಾನಿಯಾ ಮತ್ತು ಮೋನಿಕಾ ಜೊತೆಯಾಗಿ ಆಡಿದ ಮೊದಲ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದಿರುವುದು ವಿಶೇಷ. ಭಾರತದ ಆಟಗಾರ್ತಿ ಈ ಮೊದಲು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೊತೆಯಾಗಿ ಆಡುತ್ತಿದ್ದರು. ಆದರೆ ಇತ್ತೀಚೆಗೆ ಇವರು ಡಬಲ್ಸ್‌ ವಿಭಾಗದಲ್ಲಿ ಜೊತೆಯಾಗಿ ಮುಂದುವರಿಯದಿರಲು ನಿರ್ಧರಿಸಿದ್ದರು.

ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ದಿಟ್ಟ ಆಟ ಆಡಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸಾನಿಯಾ ಮತ್ತು ಮೋನಿಕಾ ಮೊದಲ ಸೆಟ್‌ನಲ್ಲಿ ಹೊಂದಾಣಿಕೆಯ ಆಟ ಆಡಿದರು.  ಜುಂಗ್‌ ಮತ್ತು ಕ್ಯಾಥ ರಿನಾ ಕೂಡ ಛಲದ ಆಟ ಆಡಿ ದರು. ಒಂದು ಹಂತದಲ್ಲಿ ಉಭಯ ಜೋಡಿ ಯೂ 5–5 ರಲ್ಲಿ ಸಮಬಲ ಹೊಂದಿತ್ತು.
ಆದರೆ 11ನೇ ಗೇಮ್‌ನಲ್ಲಿ ಸಾನಿಯಾ ಮತ್ತು ಮೋನಿಕಾ ಅಂಗಳದಲ್ಲಿ ಮಿಂಚು ಹರಿಸಿದರು. ಚುರುಕಾದ ಡ್ರಾಪ್‌ಗಳು ಹಾಗೂ ಶರವೇಗದ ಸರ್ವ್‌ಗಳಿಂದ ಎದುರಾಳಿಗಳನ್ನು ಕಂಗೆಡಿಸಿದ ಭಾರತ– ರುಮೇನಿಯಾ ಜೋಡಿ  ನಿರಾಯಾಸವಾಗಿ ಗೇಮ್‌ ಗೆದ್ದು ಮುನ್ನಡೆ ಕಂಡುಕೊಂಡಿತು.
ನಿರ್ಣಾಯಕ ಎನಿಸಿದ್ದ  12ನೇ ಗೇಮ್‌ನಲ್ಲೂ ಸಾನಿಯಾ ಮತ್ತು ಮೋನಿಕಾ ಅವರ ಆಟ ರಂಗೇರಿತು.  ಭಾರತ ಮತ್ತು ರುಮೇನಿಯಾದ ಆಟಗಾರ್ತಿಯರು ಬಾರಿಸುತ್ತಿದ್ದ ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳನ್ನು ಹಿಂತಿರುಗಿಸಲು ವಿಫಲರಾದ ಉಕ್ರೇನ್‌ ಮತ್ತು ತೈವಾನ್‌ನ ಆಟಗಾರ್ತಿಯರು ಗೇಮ್‌ ಕೈಚೆಲ್ಲಿ ಸೆಟ್‌ ಕಳೆದುಕೊಂಡರು.

ಆರಂಭಿಕ ನಿರಾಸೆಯಿಂದ ಜುಂಗ್‌ ಮತ್ತು ಕ್ಯಾಥರಿನಾ ಎದೆಗುಂದಲಿಲ್ಲ. ಗುಣಮಟ್ಟದ ಆಟಕ್ಕೆ ಒತ್ತು ನೀಡಿದ ಈ ಜೋಡಿ ಎರಡನೇ ಸೆಟ್‌ನಲ್ಲಿ ಸಾನಿಯಾ ಮತ್ತು ಮೋನಿಕಗೆ ತೀವ್ರ ಪೈಪೋಟಿ ಒಡ್ಡಿತು. ಹೀಗಾಗಿ ಆಟ ಇನ್ನಷ್ಟು ರೋಚಕತೆ ಪಡೆದುಕೊಂಡಿತು. ಒಮ್ಮೆ ಸಾನಿಯಾ ಜೋಡಿ ಸರ್ವ್‌ ಉಳಿಸಿಕೊಂಡರೆ, ಮತ್ತೊಮ್ಮೆ ಎದುರಾಳಿಗಳು ಸರ್ವ್‌ ಕಾಪಾಡಿಕೊಂಡರು. ಎಂಟನೇ ಗೇಮ್‌ ವರೆಗೂ ಸಮಬಲದ ಪೈಪೋಟಿ ಮುಂದುವರಿದಿತ್ತು.

ಆದರೆ ನಂತರ ಸಾನಿಯಾ ಮತ್ತು ಮೋನಿಕಾ ಆಟ ಕಳೆಗಟ್ಟಿತು. ಮನಮೋಹಕ ಸರ್ವ್‌ ಮತ್ತು ಚೆಂಡನ್ನು ಹಿಂತಿರುಗಿಸುವಲ್ಲಿ ಚಾಕಚಕ್ಯತೆ ತೋರಿದ ಭಾರತ ಮತ್ತು ರುಮೇನಿಯಾದ ಜೋಡಿ ನಂತರದ ಎರಡೂ ಗೇಮ್‌ಗಳಲ್ಲಿ ಪಾರಮ್ಯ ಸಾಧಿಸಿದರು. ಸೋಮವಾರದಿಂದ ಆರಂಭ ವಾಗುವ ಅಮೆರಿಕ ಓಪನ್‌ ಟೂರ್ನಿಯ ಡಬಲ್ಸ್‌ನಲ್ಲಿ ಸಾನಿಯಾ ಮತ್ತು ಜೆಕ್‌ ಗಣರಾಜ್ಯದ ಬಾರ್ಬರ ಸ್ಟ್ರೈಕೋವಾ  ಜೊತೆಯಾಗಿ ಆಡಲಿದ್ದಾರೆ. ಈ ವಿಷಯವನ್ನು ಸಾನಿಯಾ ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.