ADVERTISEMENT

ಸುದಿರ್ಮನ್‌ ಕಪ್‌: ದಕ್ಷಿಣ ಕೊರಿಯಾಗೆ ಕಿರೀಟ

ಹತ್ತು ಬಾರಿಯ ಚಾಂಪಿಯನ್ ಚೀನಾಗೆ ಆಘಾತ

ಏಜೆನ್ಸೀಸ್
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಪ್ರಶಸ್ತಿ ಗೆದ್ದ ನಂತರ ದಕ್ಷಿಣ ಕೊರಿಯಾ ತಂಡದ ಆಟಗಾರರ ಸಂಭ್ರಮ   – ಎಎಫ್‌ಪಿ ಚಿತ್ರ
ಪ್ರಶಸ್ತಿ ಗೆದ್ದ ನಂತರ ದಕ್ಷಿಣ ಕೊರಿಯಾ ತಂಡದ ಆಟಗಾರರ ಸಂಭ್ರಮ – ಎಎಫ್‌ಪಿ ಚಿತ್ರ   

ಗೋಲ್ಡ್‌ಕೋಸ್ಟ್‌, ಆಸ್ಟ್ರೇಲಿಯಾ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಅಪೂರ್ವ ಆಟ ಆಡಿದ ಚೊಯಿ ಸೊ ಗ್ಯೂ ಮತ್ತು ಚಾಯೆ ಯೊ ಜಂಗ್‌ ಅವರು  ದಕ್ಷಿಣ ಕೊರಿಯಾ ತಂಡಕ್ಕೆ ಭಾನುವಾರ ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ­ಯಲ್ಲಿ 14 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದುಕೊಟ್ಟರು.

ಫೈನಲ್‌ ಹಣಾಹಣಿಯಲ್ಲಿ ಕೊರಿಯಾ ತಂಡ 3–2ರಲ್ಲಿ ಹತ್ತು ಬಾರಿಯ ಚಾಂಪಿ ಯನ್‌ ಚೀನಾ ತಂಡಕ್ಕೆ ಆಘಾತ ನೀಡಿತು.

ದಕ್ಷಿಣ ಕೊರಿಯಾ ತಂಡ ಟೂರ್ನಿ ಯಲ್ಲಿ ಗೆದ್ದ ನಾಲ್ಕನೇ ಪ್ರಶಸ್ತಿ ಇದಾಗಿದೆ. 1991,1993 ಮತ್ತು 2003ರಲ್ಲಿ  ತಂಡ ಚಾಂಪಿಯನ್‌ ಆಗಿತ್ತು.
ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಫು ಹೈಫೆಂಗ್‌ ಮತ್ತು ಜಾಂಗ್‌ ನಾನ್‌ ಅವರು ಚೀನಾಕ್ಕೆ ಗೆಲುವಿನ ಆರಂಭ ನೀಡಿದರು.

ಪುರುಷರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಹೈಫೆಂಗ್‌ ಮತ್ತು ಜಾಂಗ್‌ 21–14, 21–15ರ ನೇರ ಗೇಮ್‌­ಗಳಿಂದ ಚೊಯ್‌ ಮತ್ತು ಸಿಯೊ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿರುವ ಸಂಗ್‌ ಜಿ ಹ್ಯೂನ್‌ 21–12, 21–16ರಲ್ಲಿ ಚೀನಾದ ಹಿ ಬಿಂಗ್‌­ಜಿಯಾವೊ ಅವರನ್ನು ಮಣಿಸಿ 1–1ರ ಸಮಬಲಕ್ಕೆ ಕಾರಣರಾದರು.

‍ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದ ಚೆನ್‌ ಲಾಂಗ್‌ 21–10, 21–10ರಲ್ಲಿ ಜೆಯೊನ್‌ ಹೆಯೊಕ್‌ ಜಿನ್‌ ಅವರನ್ನು ಸೋಲಿಸಿದ್ದರಿಂದ ಚೀನಾ ತಂಡ 2–1ರ ಮುನ್ನಡೆ ಗಳಿಸಿತು.

ನಿರ್ಣಾಯಕ ಎನಿಸಿದ್ದ ಮಹಿಳೆಯರ ಡಬಲ್ಸ್‌ನಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕೊರಿಯಾದ ಚಾಂಗ್‌ ಯಿ ನಾ ಮತ್ತು ಲೀ ಸೊ ಹೀ ಅವರು ಮಿಂಚಿದರು.

ಕೊರಿಯಾದ ಜೋಡಿ 21–19, 21–13ರಲ್ಲಿ ಚೆನ್‌ ಕ್ವಿಂಗ್‌ಚೆನ್‌ ಮತ್ತು ಜಿಯಾ ಯಿಫಾನ್‌ ಅವರನ್ನು ಸೋಲಿ­ಸಿತು. ಹೀಗಾಗಿ ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯ ಮಹತ್ವ ಪಡೆದುಕೊಂಡಿತ್ತು.

ಈ ಹೋರಾಟದಲ್ಲಿ ಕೊರಿಯಾದ ಸವಾಲು ಎತ್ತಿ ಹಿಡಿದಿದ್ದ ಚೊಯಿ ಸೊ ಗ್ಯೂ ಮತ್ತು ಚಾಯೆ ಯೊ ಜಂಗ್‌ ಅವರು  21–17, 21–13ರಲ್ಲಿ ಲು ಕಾಯ್ ಮತ್ತು ಹುವಾಂಗ್‌ ಯಾಕಿವೊಂಗ್‌ ಅವರನ್ನು ಸೋಲಿಸುತ್ತಿದ್ದಂತೆ ಅಂಗಳ­ದಲ್ಲಿ ಭಾವುಕ ವಾತಾವರಣ ನಿರ್ಮಾಣ­ವಾಯಿತು.

ದಕ್ಷಿಣ ಕೊರಿಯಾ ತಂಡದವರು ಚೊಯಿ ಮತ್ತು ಜಂಗ್‌ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT