ADVERTISEMENT

ಸೂರಜ್‌ ಪ್ರಬೋಧ್‌ಗೆ ಕೈಕೊಟ್ಟ ಅದೃಷ್ಟ

ಐಟಿಎಫ್‌ ಮೈಸೂರು ಓಪನ್‌: ರಾಮಕುಮಾರ್‌ಗೆ ಜಯ

ಕೆ.ಓಂಕಾರ ಮೂರ್ತಿ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಮೈಸೂರು: ಹೋದ ವಾರವಷ್ಟೇ ಫ್ರೆಂಚ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಆಡಿ ಬಂದಿರುವ ರಾಮಕುಮಾರ್‌ ರಾಮ ನಾಥನ್‌ಗೆ ಬುಧವಾರ ಮೈಸೂರಿನಲ್ಲಿ ಗೆಲುವಿನ ಹಾದಿ ಸುಗಮವಾಗಿರಲಿಲ್ಲ. ದೆಹಲಿಯ ಸಿದ್ಧಾರ್ಥ ರಾವತ್‌ ಎದುರು ಗೆಲ್ಲುವ ಮುನ್ನ ಸಾಕಷ್ಟು ಬೆವರು ಹರಿಸಬೇಕಾಯಿತು. ಮೊದಲ ಸೆಟ್‌ನ ಸೋಲಿನ ಆಘಾತದಿಂದ ಹೊರಬರುವಲ್ಲಿ ಯಶಸ್ವಿಯಾದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ನಡೆಯುತ್ತಿ ರುವ ಐಟಿಎಫ್‌ ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ರಾಮನಾಥನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

₨ 6 ಲಕ್ಷ ಬಹುಮಾನ ಮೊತ್ತದ ಟೂರ್ನಿಯ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 4–6, 6–4, 6–2ರಲ್ಲಿ ದೆಹಲಿಯ ಸಿದ್ಧಾರ್ಥ ರಾವತ್‌ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ರಾವತ್‌ ಸೊಗಸಾದ ರಿಟರ್ನ್‌ಗಳ ಮೂಲಕ ರಾಮನಾಥನ್‌ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ, ಐದನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಸೆಟ್‌ ಜಯಿಸಿದರು.

ಎರಡನೇ ಸೆಟ್‌ ಭಾರಿ ಪೈಪೋಟಿಗೆ ಕಾರಣವಾಯಿತು. ಕ್ರಾಸ್‌ಕೋರ್ಟ್‌ ಹೊಡೆತಕ್ಕೆ ಮೊರೆ ಹೋದ ಅಗ್ರ ಶ್ರೇಯಾಂಕದ ಆಟಗಾರ ರಾಮನಾಥನ್‌ ಮೇಲುಗೈ ಸಾಧಿಸಿದರು. 5–4ರಲ್ಲಿ ಮುಂದಿದ್ದ ಅವರು 10ನೇ ಗೇಮ್‌ನಲ್ಲಿ ರಾವತ್‌ ಅವರ ಸರ್ವ್‌ ಬ್ರೇಕ್‌ ಮಾಡು ವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪಂದ್ಯ ಸಮಬಲವಾಯಿತು.

ಅಷ್ಟರಲ್ಲಿ ದಣಿದಿದ್ದ ರಾವತ್‌, ನಿರ್ಣಾಯಕ ಸೆಟ್‌ನಲ್ಲಿ ಎಡವಿದರು. ಈ ಅವಕಾಶ ಸದುಪಯೋಗಪಡಿಸಿಕೊಂಡ ರಾಮನಾಥನ್‌ ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದರು. ಅಷ್ಟೇ ಅಲ್ಲ; ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಒಲಿದ ಅದೃಷ್ಟ: ಒಲಿಂಪಿಯನ್‌ ವಿಷ್ಣುವರ್ಧನ್‌ ಅವರಿಗೆ ಮೊದಲ ಸೆಟ್‌ನಲ್ಲಿ ಆಘಾತ ನೀಡಿ ಅಚ್ಚರಿ ಮೂಡಿಸಿದ್ದ ಮೈಸೂರಿನ ಸೂರಜ್‌ ಪ್ರಬೋಧ್‌ಗೆ ಎರಡನೇ ಸೆಟ್‌ನಲ್ಲಿ ಅದೃಷ್ಟ ಕೈಕೊಟ್ಟಿತು.

ಎರಡನೇ ಸುತ್ತಿನ ಪಂದ್ಯದ ಮೊದಲ ಸೆಟ್‌ನಲ್ಲಿ ಸೂರಜ್‌ 7–6ರಲ್ಲಿ ಗೆಲುವು ಸಾಧಿಸಿದ್ದರು. ಈ ಸೆಟ್‌ ಟೈಬ್ರೇಕರ್‌ ಹಂತ ತಲುಪಿತ್ತು.ಎರಡನೇ ಸೆಟ್‌ನಲ್ಲಿ 4–3ರಲ್ಲಿ ಮುಂದಿದ್ದರು. ಆಗ ಮಳೆ ಸುರಿಯಿತು.

90 ನಿಮಿಷಗಳ ಬಳಿಕ ಆಟ ಮುಂದುವರಿದಾಗ ವಿಷ್ಣುವರ್ಧನ್‌ 7–5ರಲ್ಲಿ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಸೂರಜ್‌ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾಗಿ ಕುಸಿದರು. ಆಟ ಮುಂದುವರಿಸಲು ಸಾಧ್ಯವಾಗದ ಕಾರಣ ವಿಷ್ಣುವರ್ಧನ್‌ಗೆ ಅವಕಾಶ ಒಲಿಯಿತು.

ಐಟಿಎಪ್‌ ಮಂಡ್ಯ ಓಪನ್‌ ಚಾಂಪಿಯನ್‌ ಕರುಣೋದಯ್‌ ಸಿಂಗ್‌ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಅವರು 6–1,          6–3ರಲ್ಲಿ ಅನ್ವಿತ್‌ ಬೇಂದ್ರೆ ಎದುರು ಗೆದ್ದರು.

ಎರಡನೇ ಸುತ್ತಿನ ಸಿಂಗಲ್ಸ್‌ ಪಂದ್ಯಗಳಲ್ಲಿ ಮೋಹಿತ್‌ ಮಯೂರ್‌ 6–7, 6–4, 6–1ರಲ್ಲಿ ಜಪಾನ್‌ನ ಶೊತಾರೊ ಗೋತಾ ಎದುರೂ, ವಿನಾಯಕ ಶರ್ಮ 6–0, 6–1ರಲ್ಲಿ ರಿಷಬ್‌ ಅಗರವಾಲ್‌ ವಿರುದ್ಧವೂ, ರಂಜಿತ್‌ ಮುರುಗೇಶನ್‌ 6–3, 6–2ರಲ್ಲಿ ಪ್ರಜ್ವಲ್‌ ದೇವ್‌ ಮೇಲೂ ಹಾಗೂ ಶಶಿ ಕುಮಾರ್‌ ಮುಕುಂದ್‌ 6–2, 7–5ರಲ್ಲಿ ರಶೀನ್‌ ಸ್ಯಾಮುಯೆಲ್‌ ಎದುರೂ ಗೆದ್ದು ಎಂಟರ ಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT