ADVERTISEMENT

ಸೈನಾ, ಶ್ರೀಕಾಂತ್‌ಶುಭಾರಂಭ

ಬ್ಯಾಡ್ಮಿಂಟನ್‌: ಸಿಂಧುಗೆ ಆರಂಭದಲ್ಲೇ ಆಘಾತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಜಕಾರ್ತ, ಇಂಡೊನೇಷ್ಯಾ (ಪಿಟಿಐ): ನಾಲ್ಕನೇ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಭಾರತದ ಸೈನಾ ನೆಹ್ವಾಲ್‌ ಇಲ್ಲಿ ಆರಂಭವಾದ ಇಂಡೊನೇಷ್ಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ ಯ ಮಹಿಳೆಯರ ವಿಭಾಗದ ಸಿಂಗಲ್ಸ್‌ ನಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ ಪಿ.ವಿ. ಸಿಂಧು ಆರಂಭಿಕ ಸುತ್ತಿನಲ್ಲೇ ಸೋತಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಹೋರಾಟದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸೈನಾ 21–16, 21–18ರಲ್ಲಿ ಥಾಯ್ಲೆಂಡ್‌ನ ನಿಚಾವೊನ್‌ ಜಿಂದಾಪೊನ್‌ ಎದುರು ಗೆಲುವಿನ ನಗೆ ಚೆಲ್ಲಿದರು.

2009, 2010 ಮತ್ತು 2012ರಲ್ಲಿ ಚಾಂಪಿಯನ್‌ ಆಗಿರುವ ಎರಡನೇ ಶ್ರೇಯಾಂಕಿತೆ ಸೈನಾ ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಪಡೆದರು. ವೇಗದ ಸರ್ವ್‌ ಹಾಗೂ ಆಕರ್ಷಕ ರಿಟರ್ನ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು ಬೇಗನೆ ಎದುರಾಳಿಯ ಮೇಲೆ ಒತ್ತಡ ಹೇರಿದರು.

ಆದರೆ ಥಾಯ್ಲೆಂಡ್‌ನ ಆಟಗಾರ್ತಿ ಪರಿಣಾಮಕಾರಿ ಆಡಿ ಸೈನಾ ಲೆಕ್ಕಾಚಾರ ವನ್ನು ತಲೆಕೆಳಗಾಗಿಸಿದರು. ಹೀಗಾಗಿ ಕೆಲ ಕಾಲ ರೋಚಕ ಹೋರಾಟ ಕಂಡು ಬಂತು. 

ಎದುರಾಳಿಯನ್ನು ಮಣಿಸುವುದು ಸುಲಭವಲ್ಲ ಎಂಬುದನ್ನು ಮನಗಂಡ ಸೈನಾ ಎರಡನೇ ಗೇಮ್‌ನಲ್ಲಿ ಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿದರು. ಅಂಗಳದಲ್ಲಿ ಚುರುಕಾಗಿ ಓಡಾಡುವುದರ ಜತೆಗೆ ಸೊಬಗಿನ ಸರ್ವ್‌ ಸಿಡಿಸಿದರು.

ಸಿಂಧು ಮೊದಲ ಸುತ್ತಿನಲ್ಲಿ 21–16, 15–21, 14–21ರಲ್ಲಿ ಚೀನಾ ತೈಪೆಯ  ಯಾ ಚಿಂಗ್‌ ಹ್ಸು ಎದುರು ಸೋತರು.

ಎರಡನೇ ಸುತ್ತಿಗೆ ಕಶ್ಯಪ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಪರುಪಳ್ಳಿ ಕಶ್ಯಪ್‌  ಆರಂಭಿಕ ಸುತ್ತಿನಲ್ಲಿ 21–17, 21–7ರಲ್ಲಿ  ಥಾಯ್ಲೆಂಡ್‌ನ ತನೊಂಗ್‌ಸಕ್‌ ಸಯೆನ್ಸೊಮ್‌ಬೂನ್ಸುಕ್‌ ಎದುರು ಜಯಭೇರಿ ಮೊಳಗಿಸಿದರು.

ಶ್ರೀಕಾಂತ್‌ಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದ ಮತ್ತೊಂದು ಪಂದ್ಯದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆ.ಶ್ರೀಕಾಂತ್‌ 11–21, 21–14, 24–22 ರಲ್ಲಿ ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಟಿಯನ್‌ ವಿಟ್ಟಿಂಗುಸ್‌ ಅವರನ್ನು ಮಣಿಸಿದರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ 21–17, 19–21, 21–11ರಲ್ಲಿ ಚೀನಾ ತೈಪೆಯ ಯಾ ಚಿಂಗ್‌ ಹ್ಸು ಮತ್ತು ಯು ಪೊ ಪೈ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು. ಈ ಹೋರಾಟ 35 ನಿಮಿಷ ನಡೆಯಿತು.

ಪುರುಷರ ಡಬಲ್ಸ್‌ನ ಮೊದಲ ಸುತ್ತಿ ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ ಮತ್ತು ಅಕ್ಷಯ್‌ ದೇವಾಳ್ಕರ್‌ 21–17, 22–10ರಲ್ಲಿ ಕೆನಡಾದ ಆ್ಯಡ್ರಿಯನ್‌ ಲಿಯು ಮತ್ತು ಡೆರಿಕ್‌ ಎದುರು  ಗೆದ್ದರು.

ಮಿಶ್ರಡಬಲ್ಸ್‌ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ.ಸುಮಿತ್‌ 13–21, 11–21ರಲ್ಲಿ ಚೀನಾ ತೈಪೆಯ ಲೀ ಶೆಂಗ್‌ ಮು ಮತ್ತು ತ್ಸಾಯ್‌ ಚಿಯಾ ಹ್ಸಿನ್‌ ಎದುರು ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.