ADVERTISEMENT

ಹಿಮದಂಗಳದಲ್ಲಿ ಗರಿಗೆದರಿದ ಯುಗಾದಿ ಸಂಭ್ರಮ: ಭಾರತದ ಮಿಲಿಯನ್ ಡಾಲರ್ ವಿಜಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2017, 15:20 IST
Last Updated 29 ಮಾರ್ಚ್ 2017, 15:20 IST
ಹಿಮದಂಗಳದಲ್ಲಿ ಗರಿಗೆದರಿದ ಯುಗಾದಿ ಸಂಭ್ರಮ: ಭಾರತದ ಮಿಲಿಯನ್ ಡಾಲರ್ ವಿಜಯ
ಹಿಮದಂಗಳದಲ್ಲಿ ಗರಿಗೆದರಿದ ಯುಗಾದಿ ಸಂಭ್ರಮ: ಭಾರತದ ಮಿಲಿಯನ್ ಡಾಲರ್ ವಿಜಯ   

ಧರ್ಮಶಾಲಾ: ಹಿಮದ ರಾಶಿ ಚೆಲ್ಲಿದ ಪರ್ವತ ಶ್ರೇಣಿಗಳ ನಡುವೆ ಇರುವ ಹಸಿರು ಅಂಗಳದಲ್ಲಿ ಭಾರತ ಕ್ರಿಕೆಟ್‌ ತಂಡವು  ಮಂಗಳವಾರ ‘ಮಿಲಿಯನ್ ಡಾಲರ್‌’ ವಿಜಯ ದಾಖಲಿಸಿತು. ಅದರೊಂದಿಗೆ ಯುಗಾದಿ ಸಂಭ್ರಮವನ್ನು ಇಮ್ಮಡಿಸಿತು.

ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್‌ಗಳಿಂದ  ಮಣಿಸಿ ‘ಬಾರ್ಡರ್‌–ಗಾವಸ್ಕರ್ ಟ್ರೋಫಿ’ಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಸರಣಿ ಯಲ್ಲಿ 2–1ರಿಂದ ಜಯಿಸಿತು. ಭಾರತಕ್ಕೆ ಇದು ಸತತ ಏಳನೇ ಸರಣಿ ಗೆಲುವು. 2015ರಲ್ಲಿ ಶ್ರೀಲಂಕಾ ತಂಡವನ್ನು ಅದರ ತವರಿನಲ್ಲಿಯೇ ಮಣಿಸಿದ ನಂತರ ವಿಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಈಗ ಆಸ್ಟ್ರೇಲಿಯಾ ವಿರುದ್ಧ ಗೆದ್ದಿತು. ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿಯವರಗೆ ತವರಿನಲ್ಲಿ ನಡೆದ ನಾಲ್ಕು ಸರಣಿಗಳನ್ನೂ ಗೆದ್ದು ಬೀಗಿದೆ. 

ಅಲ್ಲದೇ 2016ರ  ಅಕ್ಟೋಬರ್‌ ನಿಂದ 2017ರ ಏಪ್ರಿಲ್  1ರವರೆಗೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದ ತಂಡವು ಅಂದಾಜು ₹ 7 ಕೋಟಿ ಪುರಸ್ಕಾರವನ್ನೂ (ಒಂದು ಮಿಲಿಯನ್ ಡಾಲರ್) ಜೇಬಿಗಿಳಿಸಿಕೊಂಡಿತು. 

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 32 ರನ್‌ಗಳ   ಮುನ್ನಡೆ ಪಡೆದಿದ್ದ ಆತಿಥೇಯರ ಬಳಗವು ಎರಡನೇ ಇನಿಂಗ್ಸ್‌ನಲ್ಲಿ ಸ್ಟೀವನ್  ಸ್ಮಿತ್ ಪಡೆಯನ್ನು 137 ರನ್‌ಗಳಿಗೆ ಕಟ್ಟಿಹಾಕಿತ್ತು. 

ನಂತರ 105 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಭಾರತವು 23.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 106 ರನ್ ಗಳಿಸಿ ತು. ಪಂದ್ಯದ ನಾಲ್ಕನೆ ದಿನವಾದ ಮಂಗಳವಾರ ಊಟದ ವಿರಾಮಕ್ಕೂ ಮುನ್ನವೇ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ (ಅಜೇಯ 51; 110ನಿ, 76ಎ, 9ಬೌಂ) ಮತ್ತು ನಾಯಕ ಅಜಿಂಕ್ಯ ರಹಾನೆ  (ಔಟಾಗದೆ 38; 43ನಿ, 27ಎ, 4ಬೌಂ, 2ಸಿ) ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

ರಾಹುಲ್ ಆರನೇ ಅರ್ಧಶತಕ
ಕೊನೆಯ ಪಂದ್ಯದಲ್ಲಿ ವಿಜಯದ ರನ್ ಗಳಿಸಿದ ರಾಹುಲ್ ಸರಣಿಯ ಆರನೇ ಅರ್ಧಶತಕವನ್ನೂ ಪೂರೈಸಿಕೊಂಡರು.

ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಒಂದು, ಬೆಂಗಳೂರಿನ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ, ರಾಂಚಿಯಲ್ಲಿ  ಒಂದು ಮತ್ತು  ಧರ್ಮಶಾಲಾದಲ್ಲಿ ಎರಡು ಅರ್ಧಶತಕಗಳನ್ನು ದಾಖಲಿಸಿದರು. ಸರಣಿಯಲ್ಲಿ ಒಟ್ಟು ಎಂಟು ಇನಿಂಗ್ಸ್‌ಗಳಿಂದ 393 ರನ್‌ ಪೇರಿಸಿದರು.

ಸೋಮವಾರ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ರಾಹುಲ್ ಮತ್ತು 6 ರನ್‌ ಗಳಿಸಿದ್ದ  ಮುರಳಿ ವಿಜಯ್ ಬ್ಯಾಟಿಂಗ್ ಮುಂದುವರಿಸಿದರು. ಬೆಳಿಗ್ಗೆಯ ತಂಪು ವಾತಾವರಣದಲ್ಲಿ ಹೆಚ್ಚು ಅವಸರದ ಆಟವಾಡದೆ ತಾಳ್ಮೆಯಿಂದ ಬೌಲರ್‌ ಗಳನ್ನು ಎದುರಿಸಿದರು.  ವೇಗಿ ಪ್ಯಾಟ್ ಕಮಿನ್ಸ್‌ ಎಸೆತಗಳನ್ನು ಎದುರಿಸುವಲ್ಲಿ ಆರಂಭದಿಂದಲೂ ತಡಬಡಾಯಿಸುತ್ತಿದ್ದ ವಿಜಯ್ 14ನೇ ಓವರ್‌ನಲ್ಲಿ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಚೇತೇಶ್ವರ್ ಪೂಜಾರ ಕೂಡ ಅದೇ ಓವರ್‌ನಲ್ಲಿ ರನ್‌ಔಟ್ ಆಗಿ ಮರಳಿದರು.

ಇನ್ನೊಂದೆಡೆ ವಿಶ್ವಾಸಭರಿತ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್ ಜೊತೆಗೂಡಿದ  ಮುಂಬೈಕರ್ ಯಾವುದೇ ಬೌಲರ್‌ಗೂ ಅಂಜಲಿಲ್ಲ. 20ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್‌ ಅವರ ಎರಡು ಎಸೆತಗಳಲ್ಲಿ ಸತತವಾಗಿ ಸಿಕ್ಸರ್ ಬಾರಿಸಿದರು. ಬಲಭುಜದ ಗಾಯದಿಂದಾಗಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಬದಲಿಗೆ ಈ ಪಂದ್ಯದಲ್ಲಿ ಅಜಿಂಕ್ಯ   ನಾಯಕತ್ವ ವಹಿಸಿದ್ದರು. ರನ್‌ ಗಳಿಕೆಯನ್ನು ವೇಗಗೊಳಿಸಿದ್ದು ಅಲ್ಲದೇ ರಾಹುಲ್ ಅವರು ಅರ್ಧಶತಕ ಗಳಿಸಲು ಉತ್ತಮ ಜೊತೆ ಕೂಡ ನೀಡಿದರು.

ಇದರಿಂದಾಗಿ 24ನೇ ಓವರ್‌ನ ಮೊದಲ ಎಸೆತದಲ್ಲಿ ಎರಡು ರನ್ಹೊ ಡೆದ ರಾಹುಲ್  50ರ ಗಡಿ ದಾಟಿದ್ದೂ ಅಲ್ಲದೇ ತಂಡವನ್ನೂ ವಿಜಯದ ಗೆರೆ ಮುಟ್ಟಿಸಿದರು. ಗಾಳಿಯಲ್ಲಿ ಬ್ಯಾಟ್‌ ಬೀಸಿ ಕುಣಿದಾಡಿ ಸಂಭ್ರಮಿಸಿದರು. ಇತ್ತ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಭಾವುಕರಾಗಿ ಚಪ್ಪಾಳೆ ತಟ್ಟುತ್ತ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

***

ಸರಣಿ ಗೆದ್ದ ಈಗಿನ ಸಾಧನೆಯಿಂದ ಹೆಚ್ಚು ಬೀಗುವುದಿಲ್ಲ. ವಿದೇಶಿ ನೆಲದಲ್ಲಿಯೂ ಸರಣಿ ಗೆದ್ದಾಗ ಇದಕ್ಕಿಂತ ಹೆಚ್ಚು ಸಂಭ್ರಮಿಸುತ್ತೇವೆ.
-ವಿರಾಟ್‌ ಕೊಹ್ಲಿ, ಭಾರತ ತಂಡದ ನಾಯಕ

**

ವಿಭಿನ್ನ ಪರಿಸ್ಥಿತಿಗಳನ್ನು ನಿಭಾಯಿಸುವ ರೀತಿಗಳನ್ನು ಈ ಸರಣಿಯಿಂದ ಕಲಿತಿದ್ದೇನೆ.  ಈ ಅನುಭವವು ಭವಿಷ್ಯದ ಆಟಕ್ಕೆ ನೆರವಾಗಲಿದೆ.
-ಸ್ಟೀವನ್ ಸ್ಮಿತ್, ಆಸ್ಟ್ರೇಲಿಯಾ ತಂಡದ ನಾಯಕ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.