ADVERTISEMENT

ಸ್ಪಿನ್, ರನ್‌ಔಟ್‌ ಬಲೆಗೆ ಬಿದ್ದ ಆತಿಥೇಯರು

ಎರಡನೇ ಟೆಸ್ಟ್ ಪಂದ್ಯ: ರವಿಚಂದ್ರನ್‌ ಅಶ್ವಿನ್‌ಗೆ ಮೂರು ವಿಕೆಟ್‌; ಮರ್ಕರಮ್, ಆಮ್ಲಾ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಹಾಶೀಮ್‌ ಆಮ್ಲಾ ಔಟಾದಾಗ ಭಾರತ ತಂಡದ ಆಟಗಾರರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ
ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಹಾಶೀಮ್‌ ಆಮ್ಲಾ ಔಟಾದಾಗ ಭಾರತ ತಂಡದ ಆಟಗಾರರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ಸೆಂಚೂರಿಯನ್‌, ದಕ್ಷಿಣ ಆಫ್ರಿಕಾ: ಬ್ಯಾಟಿಂಗ್‌ಗೆ ಅನುಕೂಲಕರ ಪಿಚ್‌ನಲ್ಲಿ ನಿರಾಯಾಸವಾಗಿ ರನ್‌ ಕಲೆ ಹಾಕುವ ಆತಿಥೇಯರ ಆಸೆಗೆ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಣ್ಣೀರು ಹಾಕಿದರು.

ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಶನಿವಾರ ಆರಂಭಗೊಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ದಕ್ಷಿಣ ಆಫ್ರಿಕಾ ತಂಡದ ಮೂರು ವಿಕೆಟ್‌ಗಳನ್ನು ಕಬಳಿಸಿ ಅಶ್ವಿನ್ ಮಿಂಚಿದರೆ ಇಬ್ಬರನ್ನು ರನ್ ಔಟ್ ಮಾಡಿ ಪಾಂಡ್ಯ ಬೆಳಗಿದರು.

ಹೀಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 269 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಏಡನ್ ಮರ್ಕರಮ್‌ (94; 150 ಎ, 15 ಬೌಂ) ಮತ್ತು ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹಾಶೀಂ ಆಮ್ಲಾ (82; 153 ಎ, 14 ಬೌಂ) ದಕ್ಷಿಣ ಆಫ್ರಿಕಾ ಪರ ಮಿಂಚಿದರು. ದಿನದಾಟ ಮುಕ್ತಾಯಗೊಂಡಾಗ ನಾಯಕ ಫಾಫ್‌ ಡು ಪ್ಲೆಸಿ (25) ಮತ್ತು ಕೇಶವ್ ಮಹಾರಾಜ್‌ (10) ಕ್ರೀಸ್‌ನಲ್ಲಿದ್ದರು.

ADVERTISEMENT

ಶಿಖರ್ ಧವನ್ ಬದಲಿಗೆ ಕೆ.ಎಲ್.ರಾಹುಲ್‌ ಮತ್ತು ಭುವನೇಶ್ವರ್ ಕುಮಾರ್ ಬದಲಿಗೆ ಇಶಾಂತ್ ಶರ್ಮಾ ಅವರನ್ನು ಭಾರತ ಕಣಕ್ಕೆ ಇಳಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧಿಮಾನ್ ಸಹಾ ಬದಲಿಗೆ ಪಾರ್ಥಿವ್ ಪಟೇಲ್ ಅವರಿಗೆ ವಿಕೆಟ್ ಕೀಪಿಂಗ್‌ ಜವಾಬ್ದಾರಿ ವಹಿಸಲಾಗಿದೆ.

ಟಾಸ್ ಗೆದ್ದ ಆತಿಥೇಯರ ನಾಯಕ ಬ್ಯಾಟಿಂಗ್ ಆಯ್ದುಕೊಳ್ಳಲು ಹಿಂಜರಿಯಲಿಲ್ಲ. ಡೀನ್ ಎಲ್ಗರ್ ಜೊತೆ ತನ್ನೂರಿನ ಅಂಗಣದಲ್ಲಿ ಬ್ಯಾಟಿಂಗ್‌ ಆರಂಭಿಸಿದ ಏಡನ್‌ ಮರ್ಕರಮ್‌ ಯಾವುದೇ ಆತಂಕ ಇಲ್ಲದೆ ಬ್ಯಾಟ್ ಬೀಸಿದರು. ಹೊಸ ಚೆಂಡನ್ನು ಹಂಚಿಕೊಂಡ ಜಸ್‌ಪ್ರೀತ್‌ ಬೂಮ್ರಾ ಮತ್ತು ಮಹಮ್ಮದ್ ಶಮಿ ಅವರಿಗೆ ಪರಿಣಾಮ ಬೀರಲು ಆಗಲಿಲ್ಲ.  ಶಮಿ ತಮ್ಮ ಮೊದಲ ನಾಲ್ಕು ಓವರ್‌ಗಳಲ್ಲಿ 23 ರನ್‌ ನೀಡಿದರು.

ಎಂಟನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಮತ್ತು 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ದಾಳಿಗೆ ಇಳಿದರು. ಆದರೂ ಎದುರಾಳಿಗಳ ಮೇಲೆ ಒತ್ತಡ ಬೀಳಲಿಲ್ಲ. ಆದರೆ 20ನೇ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಕೈಗೆ ಚೆಂಡು ನೀಡಿದ ನಂತರ ಭಾರತ ಯಶಸ್ಸು ಕಂಡಿತು. ಅಂತಿಮ ಓವರ್‌ಗಳಲ್ಲಿ ಬಿಗಿ ದಾಳಿ ನಡೆಸಿದ ಕೊಹ್ಲಿ ಬಳಗ ಫೀಲ್ಡಿಂಗ್‌ನಲ್ಲೂ ಚಮತ್ಕಾರ ಮಾಡಿತು. ಹೀಗಾಗಿ ಎದುರಾಳಿಗಳ ರನ್‌ ಗಳಿಕೆಗೆ ಕಡಿವಾಣ ಬಿತ್ತು.

30ನೇ ಓವರ್‌ನಲ್ಲಿ ಮೊದಲ ಪೆಟ್ಟು
ಮೊದಲ ವಿಕೆಟ್‌ಗೆ 85 ರನ್‌ ಸೇರಿಸಿದ ತಂಡಕ್ಕೆ 30ನೇ ಓವರ್‌ನಲ್ಲಿ ಅಶ್ವಿನ್ ಪೆಟ್ಟು ನೀಡಿದರು. ಸ್ಲಿಪ್‌ನಲ್ಲಿ ಮುರಳಿ ವಿಜಯ್‌ ಪಡೆದ ಸುಲಭ ಕ್ಯಾಚ್‌ಗೆ ಎಲ್ಗರ್ ಬಲಿಯಾದರು. ನಂತರ ಮರ್ಕರಮ್ ಮತ್ತು ಹಾಶೀಂ ಆಮ್ಲಾ ಇನಿಂಗ್ಸ್ ಕಟ್ಟಿದರು. 48ನೇ ಓವರ್‌ನಲ್ಲಿ ಮರ್ಕರಮ್ ವಿಕೆಟ್ ಕೂಡ ಅಶ್ವಿನ್ ಉರುಳಿಸಿದರು.


ದಕ್ಷಿಣ ಆಫ್ರಿಕಾದ ಏಡನ್ ಮಾರ್ಕರಮ್‌ ಬ್ಯಾಟಿಂಗ್‌ ವೈಖರಿ -ಎಎಫ್‌ಪಿ ಚಿತ್ರ

ಆಮ್ಲಾ ಮತ್ತು ಡಿವಿಲಿಯರ್ಸ್‌ ಜೊತೆಗೂಡಿ ಸುಲಭವಾಗಿ ರನ್‌ ಗಳಿಸತೊಡಗಿದಾಗ ಕೊಹ್ಲಿ ಬಳಗದಲ್ಲಿ ಮತ್ತೆ ಆತಂಕ ಮನೆ ಮಾಡಿತು. ಆದರೆ 63ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಮಹತ್ವದ ವಿಕೆಟ್ ಕಬಳಿಸಿ ಮಿಂಚಿದರು. ಆಫ್‌ ಸ್ಟಂಪ್‌ನಿಂದ ಆಚೆ ಹೋಗುತ್ತಿದ್ದ ಚೆಂಡನ್ನು ವಿಕೆಟ್ ಮೇಲೆ ಎಳೆದುಕೊಂಡ ಡಿವಿಲಿಯರ್ಸ್‌ ನಿರಾಸೆಗೆ ಒಳಗಾದರು.

ನಂತರ ಆಮ್ಲಾ ಮತ್ತು ಪ್ಲೆಸಿ ಭಾರತದ ಬೌಲರ್‌ಗಳಿಗೆ ಸವಾಲಾದರು. 81ನೇ ಓವರ್‌ನಲ್ಲಿ ಅತ್ಯಮೋಘ ರೀತಿಯಲ್ಲಿ ಆಮ್ಲಾ ಅವರನ್ನು ರನ್ ಔಟ್ ಮಾಡಿದ ಪಾಂಡ್ಯ ತಂಡಕ್ಕೆ ಮೇಲುಗೈ ಗಳಿಸಿಕೊಟ್ಟರು. ಮುಂದಿನ ಓವರ್‌ನಲ್ಲಿ ಅಶ್ವಿನ್‌ ಅವರ ಸ್ಪಿನ್ ಬಲೆಯಲ್ಲಿ ಬಿದ್ದ ಡಿಕಾಕ್ ಶೂನ್ಯ ಸಂಪಾದನೆಯೊಂದಿಗೆ ಮರಳಿದರು. ಫಿಲ್ಯಾಂಡರ್‌ ಅವರನ್ನು ರನ್‌ ಔಟ್ ಮಾಡಿದ ಭಾರತ ಇನಿಂಗ್ಸ್‌ ಮೇಲೆ ನಿಯಂತ್ರಣ ಸಾಧಿಸಿತು.
***
ಸೋತರೆ ಕೊಹ್ಲಿ ತಲೆದಂಡ: ಸೆಹ್ವಾಗ್‌
ನವದೆಹಲಿ :
‘ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತರೆ ಮುಂದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ವತಃ ತಂಡದಿಂದ ಹೊರಗುಳಿಯಬೇಕು’ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅಭಿಪ್ರಾಯಪಟ್ಟರು.

ಸೆಂಚೂರಿಯನ್ ಟೆಸ್ಟ್‌ನಿಂದ ಶಿಖರ್ ಧವನ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಕೈಬಿಟ್ಟದ್ದಕ್ಕೆ  ಸೆಹ್ವಾಗ್‌ ಅಸಮಾಧಾನ ವ್ಯಕ್ತಪಡಿಸಿದರು. ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ‘ಕೇವಲ ಒಂದು ಪಂದ್ಯದಲ್ಲಿ ವೈಫಲ್ಯ ಕಂಡದ್ದಕ್ಕೆ ಧವನ್‌ ಅವರನ್ನು ಕೈಬಿಟ್ಟದ್ದು ಸರಿಯಲ್ಲ’ ಎಂದರು. ‘ಭುವನೇಶ್ವರ್‌ ಅವರನ್ನು ತಂಡದಿಂದ ಹೊರಗಿಟ್ಟಿದ್ದಕ್ಕೆ ಯಾವುದೇ ಕಾರಣ ಇಲ್ಲ’ ಎಂದು ಅವರು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.