ADVERTISEMENT

ರಾಹುಲ್ ಬಳಗ ಋತುರಾಜ್ ಪಡೆ ಮುಖಾಮುಖಿ ಇಂದು; ‘ಸೂಪರ್‌’ ಹಣಾಹಣಿಗೆ ಲಖನೌ ಸಜ್ಜು

ನಿಕೊಸಲ್ ಪೂರನ್, ಪಥಿರಾಣ ಮೆಲೆ ಕಣ್ಣು

ಪಿಟಿಐ
Published 19 ಏಪ್ರಿಲ್ 2024, 0:30 IST
Last Updated 19 ಏಪ್ರಿಲ್ 2024, 0:30 IST
<div class="paragraphs"><p>ಲಖನೌ ಸೂಪರ್‌ ಜೈಂಟ್ಸ್ ತಂಡದ ನಿಕೊಲಸ್ ಪೂರನ್&nbsp; </p></div>

ಲಖನೌ ಸೂಪರ್‌ ಜೈಂಟ್ಸ್ ತಂಡದ ನಿಕೊಲಸ್ ಪೂರನ್ 

   

ಪಿಟಿಐ ಚಿತ್ರ

ಲಖನೌ: ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್ ಜೈಂಟ್ಸ್‌ ತಂಡದ ಸ್ಫೋಟಕ ಶೈಲಿಯ ಬ್ಯಾಟರ್‌ಗಳು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳ ನಡುವಣ ಹಣಾಹಣಿಯಾಗುವ ನಿರೀಕ್ಷೆ ಇದೆ.

ADVERTISEMENT

ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಸೋಲಿನ ಸರಪಳಿ ಕಳಚಿಕೊಳ್ಳುವ ತವಕದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಋತುರಾಜ್ ಗಾಯಕವಾಡ ಅವರ ಚೆನ್ನೈ ತಂಡವು ಗೆಲುವಿನ ಓಟವನ್ನು ಮುಂದುವರಿಸುವತ್ತ ಚಿತ್ತ ನೆಟ್ಟಿದೆ. 

ಲಖನೌ ತಂಡವು ಐದನೇ ಸ್ಥಾನದಲ್ಲಿದೆ. ತನ್ನ ಕಳೆದ ಎರಡೂ ಪಂದ್ಯಗಳಲ್ಲಿ ಸೋತಿದೆ. ಅದೇ ಚೆನ್ನೈ ಸತತ ಎಡಡು ಪಂದ್ಯಗಳನ್ನು ಜಯಿಸಿದೆ. ಅದರಲ್ಲಿ ಚೆನ್ನೈ ಬೌಲರ್‌ಗಳು ಮಿಂಚಿದ್ದರು. ಮಥೀಷ ಪಥಿರಾಣ ಯಾರ್ಕರ್‌ಗಳು, ಮುಸ್ತಫಿಜುರ್ ರೆಹಮಾನ್ ಅವರ ಕಟರ್ಸ್ ಮತ್ತು ಸ್ವಿಂಗ್‌ ಎಸೆತಗಳಿಗೆ ಬ್ಯಾಟರ್‌ಗಳು ಶರಣಾಗಿದ್ದರು.  ಇನ್ನೊಂದೆಡೆ ರವೀಂದ್ರ ಜಡೇಜ ಸ್ಪಿನ್ ಮೋಡಿಯೂ ನಡೆಯುತ್ತಿದೆ. ಲಖನೌ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದ್ದು, ಜಡೇಜ ಪರಿಣಾಮ ಬೀರುವ ಸಾಧ್ಯತೆ ಇದೆ. 

ಲಖನೌ ತಂಡದ ಪ್ರಮುಖ ಬ್ಯಾಟರ್‌ಗಳಾದ ಕ್ವಿಂಟನ್ ಡಿಕಾಕ್, ರಾಹುಲ್, ನಿಕೊಲಸ್ ಪೂರನ್ ಅವರನ್ನು ಕಟ್ಟಿಹಾಕುವುದು ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ಮಾರ್ಕಸ್ ಸ್ಟೊಯಿನಿಸ್, ದೇವದತ್ತ ಪಡಿಕ್ಕಲ್ ಹಾಗೂ ಕೃಣಾಲ್ ಪಾಂಡ್ಯ ತಮ್ಮ ನೈಜ ಲಯಕ್ಕೆ ಮರಳಿದರೆ ಲಖನೌ ತಂಡವು ಹೆಚ್ಚು ರನ್ ಕಲೆ ಹಾಕಬಹುದು. 

ಆತಿಥೇಯ ತಂಡದ ಸ್ಪಿನ್ನರ್ ರವಿ ಬಿಷ್ಣೋಯಿ, ನವೀನ್ ಉಲ್ ಹಕ್, ಶಾಮರ್ ಜೋಸೆಫ್ ಮತ್ತು ಮೊಹಸಿನ್ ಖಾನ್ ಅವರ ಮುಂದಿರುವ ಸವಾಲು ಕೂಡ ಸಣ್ಣದಲ್ಲ. ಚೆನ್ನೈ ತಂಡದ ಆರಂಭಿಕ ಬ್ಯಾಟರ್ ಋತುರಾಜ್, ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ, ಡ್ಯಾರಿಲ್ ಮಿಚೆಲ್ ಮತ್ತು ಮಹೇಂದ್ರಸಿಂಗ್ ಧೋನಿ ಉತ್ತಮ ಲಯದಲ್ಲಿದ್ಧಾರೆ.  ಡೆವೊನ್ ಕಾನ್ವೆ ಗಾಯಗೊಂಡಿರುವುದರಿಂದ ವಿಶ್ರಾಂತಿ ಪಡೆದಿದ್ದು, ಅವರ ಬದಲಿಗೆ ಇಂಗ್ಲೆಂಡ್ ತಂಡದ ಆಟಗಾರ ರಿಚರ್ಡ್ ಗ್ಲೀಸನ್ ವರನ್ನು ಚೆನ್ನೈ ಸೇರ್ಪಡೆ ಮಾಡಿಕೊಂಡಿದೆ. ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಲಯಕ್ಕೆ ಮರಳಿದರೆ ಬ್ಯಾಟಿಂಗ್ ವಿಭಾಗ ಮತ್ತಷ್ಟು ಗಟ್ಟಿಯಾಗಲಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಮಥೀಷ ಪಥಿರಾಣ  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.