ADVERTISEMENT

ಅಂತಿಮ ಹಂತದತ್ತ ಕ್ಯಾಂಡಿಡೇಟ್ಸ್‌ ಟೂರ್ನಿ: ಅಗ್ರಸ್ಥಾನಕ್ಕೆ ಹೆಚ್ಚಿದ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 13:30 IST
Last Updated 17 ಏಪ್ರಿಲ್ 2024, 13:30 IST
<div class="paragraphs"><p>ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌</p></div>

ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌

   

ಟೊರಾಂಟೊ: ಅಗ್ರಸ್ಥಾನ ಹಂಚಿಕೊಂಡಿರುವ ಭಾರತದ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿಯ 11ನೇ ಸುತ್ತಿನಲ್ಲಿ ಅಗ್ರ ಶ್ರೆಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು ಎದುರಿಸಲಿದ್ದು, ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಪಂದ್ಯ ಅವರಿಗೆ ಮಹತ್ವದ್ದಾಗಿದೆ.

ಎಂಟು ಆಟಗಾರರ, 14 ಸುತ್ತುಗಳ ಕ್ಯಾಂಡಿಡೇಟ್ಸ್‌ ಟೂರ್ನಿ ಈಗ ಅಂತಿಮ ಹಂತದತ್ತ ಸಾಗಿದೆ. ಭಾರತದ ಇನ್ನೊಬ್ಬ ಆಟಗಾರ, 18 ವರ್ಷದ ಪ್ರಜ್ಞಾನಂದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಹಿಕಾರು ನಕಾಮುರಾ (ಅಮೆರಿಕ) ಅವರನ್ನು ಎದುರಿಸಲಿದ್ದಾರೆ.

ADVERTISEMENT

ರಷ್ಯಾದ ಇಯಾನ್‌ ನೆಪೊಮ್‌ನಿಯಾಚಿ, 17 ವರ್ಷದ ಗುಕೇಶ್‌ ಅವರ ಜೊತೆ ಆರು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಮೂವರು ಆಟಗಾರರು– ಅಮೆರಿಕದ ಆಟಗಾರ ಫ್ಯಾಬಿಯಾನೊ ಕರುವಾನಾ, ಹಿಕಾರು ನಕಾಮುರಾ ಮತ್ತು ಭಾರತದ ಪ್ರಜ್ಞಾನಂದ ತಲಾ ಐದೂವರೆ ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ (ಸದ್ಯದ ಟೈಬ್ರೇಕ್‌ ಆಧಾರದಲ್ಲಿ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನ) ಸ್ಥಾನದಲ್ಲಿದ್ದಾರೆ.

ಭಾರತದ ಮೂರನೇ ಆಟಗಾರ ವಿದಿತ್‌ ಗುಜರಾತಿ (5) ಅವರೂ ತೀರಾ ಹಿಂದೆಯೇನೂ ಇಲ್ಲ. ಕೊನೆಯ ಕೆಲವು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದರೆ ಅವರಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ. ಅವರಿಗೆ ಮುಂದಿನ ಎದುರಾಳಿ ನೆಪೊಮ್‌ನಿಯಾಚಿ.

ನೆಪೊಮ್‌ನಿಯಾಚಿ ಮಾತ್ರ ಇದುವರೆಗೆ ಅಜೇಯರಾಗಿದ್ದಾರೆ. ಉಕ್ರೇನ್‌ ವಿರುದ್ಧ ದಂಡೆತ್ತಿಹೋದ ರಷ್ಯಾ ಕ್ರಮ ಖಂಡಿಸಿ ಆ ದೇಶದ ಮೇಲೆ ನಿರ್ಬಂಧ ಹೇರಿರುವ ಕಾರಣ ಅವರು ಇಲ್ಲಿ ಫಿಡೆ ಧ್ವಜದಡಿ ಆಡುತ್ತಿದ್ದಾರೆ. ಎರಡು ಸಲ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದಿರುವ ಅವರು ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಚೀನಾದ ಡಿಂಗ್‌ ಲಿರೆನ್‌ ಅವರಿಗೆ ಮಣಿದಿದ್ದರು.

ಇಟಲಿಯಲ್ಲಿ ಬೆಳೆದು ಅಮೆರಿಕದಲ್ಲಿ ನೆಲೆಸಿರುವ ಕರುವಾನಾ ಸತತ ಆರನೆ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆದರೆ ಒಮ್ಮೆ ಮಾತ್ರ ಗೆದ್ದಿದ್ದಾರೆ.

ಪ್ರಜ್ಞಾನಂದ ಅವರು ಕಳೆದ ವಿಶ್ವಕಪ್‌ನಲ್ಲಿ ನಕಾಮುರಾ ವಿರುದ್ಧ ಜಯಗಳಿಸಿದ್ದರು. ನಂತರ ಅವರು ನೆಪೊಮ್‌ನಿಯಾಚಿ ಅವರನ್ನು ಎದುರಿಸಬೇಕಾಗುತ್ತದೆ.

ಓಪನ್‌ ವಿಭಾಗದಲ್ಲಿ ಗೆಲ್ಲುವ ಆಟಗಾರ ಸುಮಾರು ₹43 ಲಕ್ಷ ಜೇಬಿಗಿಳಿಸಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಚೀನಾದ ಆಟಗಾರ್ತಿಯರಾದ ಝೋಂಗ್ವಿ ತಾನ್‌ ಮತ್ತು ಟಿಂಗ್ಜಿ ಲೀ ಅವರು ಉತ್ತ ಸಾಧನೆ ತೋರಿದ್ದಾರೆ. ಇವರಿಬ್ಬರು ತಲಾ 6.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ.

ಈ ವಿಭಾಗದಲ್ಲಿ ಭಾರತದ ಆಟಗಾರ್ತಿಯರಿಗೆ ಪ್ರಶಸ್ತಿ ಸಾಧ್ಯತೆ ಬಹುತೇಕ ಕ್ಷೀಣವಾಗಿದೆ. ಹಂಪಿ (4.5) ಅವರು ಸದ್ಯ ಐದನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ವೈಶಾಲಿ ರಮೇಶಬಾಬು (3.5) ಅವರು 10ನೇ ಸುತ್ತಿನಲ್ಲಿ ನುರ್ಗ್ಯುಲ್‌ ಸಲಿಮೋವಾ ಅವರನ್ನು ಸೋಲಿಸಿದ್ದರೂ, ಎಂಟು ಆಟಗಾರ್ತಿಯರ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.