ADVERTISEMENT

ರಾಣಿ ರಾಂಪಾಲ್‌, ಗುರ್ಜಿತ್ ಕೌರ್ ಮಿಂಚಿನ ಆಟ

ಸ್ಪೇನ್‌ ವಿರುದ್ಧದ ಮಹಿಳಾ ಹಾಕಿ ಸರಣಿ: ಕೊನೆಯ ಪಂದ್ಯದಲ್ಲಿ 4–1ರಿಂದ ಜಯ; ಸರಣಿ ಸಮಬಲ

ಪಿಟಿಐ
Published 19 ಜೂನ್ 2018, 18:56 IST
Last Updated 19 ಜೂನ್ 2018, 18:56 IST
ರಾಣಿ ರಾಂಪಾಲ್‌
ರಾಣಿ ರಾಂಪಾಲ್‌   

ಮ್ಯಾಡ್ರಿಡ್‌, ಸ್ಪೇನ್‌: ನಾಯಕಿ ರಾಣಿ ರಾಂಪಾಲ್ ಮತ್ತು ರಕ್ಷಣಾ ವಿಭಾಗದ ಗುರುಜೀತ್ಕೌರ್‌ ಇಲ್ಲಿನ ಕಾನ್ಸೆಜೊಸುಪೀರಿಯರ್‌ ಡಿ ಡಿಪೋರ್ಟ್ಸ್‌ ಹಾಕಿ ಕ್ರೀಡಾಂಗಣದಲ್ಲಿ ಮಿಂಚಿದರು. ಅವರಿಬ್ಬರ ಅಬ್ಬರದ ಆಟದಿಂದ ಭಾರತ ಮಹಿಳಾ ತಂಡ ಸ್ಪೇನ್‌ಎದುರಿನ ಹಾಕಿ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯಸಾಧಿಸಿತು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 4–1ರಿಂದ ಆತಿಥೇಯರನ್ನು ಮಣಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–2ರ ಸಮಬಲ ಸಾಧಿಸಿತು.

ಮೊದಲ ಮತ್ತು ನಾಲ್ಕನೇ ಪಂದ್ಯದಲ್ಲಿ ಸ್ಪೇನ್‌ ಕ್ರಮವಾಗಿ 3–0 ಹಾಗೂ 4–1ರಿಂದ ಗೆದ್ದಿತ್ತು. ಮೂರನೇ ಪಂದ್ಯದಲ್ಲಿ ಭಾರತ 3–2ರ ಜಯ ಸಾಧಿಸಿತ್ತು. ಎರಡನೇ ಪಂದ್ಯ 1–1ರಿಂದ ಡ್ರಾ ಆಗಿತ್ತು.

ADVERTISEMENT

ಸಮಬಲಕ್ಕೆ ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಜಯ ಅನಿವಾರ್ಯ ಆಗಿತ್ತು. ಗೆಲ್ಲುವ ಛಲದಿಂದಲೇ ಕಣಕ್ಕೆ ಇಳಿದ ತಂಡ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿತು. ಚೆಂಡಿನ ಮೇಲೆ ನಿರಂತರವಾಗಿ ಹಿಡಿತ ಸಾಧಿಸಿತು. ಹೀಗಾಗಿ ತಂಡಕ್ಕೆ ಸಾಕಷ್ಟು ಅವಕಾಶಗಳು ಲಭಿಸಿದವು.

33 ಮತ್ತು 37ನೇ ನಿಮಿಷಗಳಲ್ಲಿ ರಾನಿ ರಾಂಪಾಲ್ ಗೋಲು ಗಳಿಸಿ ಮುನ್ನಡೆ ಗಳಿಸಿಕೊಟ್ಟರೆ, 55 ಮತ್ತು 50ನೇ ನಿಮಿಷಗಳಲ್ಲಿ ಗುರುಜೀತ್ ಕೌರ್‌ ಪೆನಾಲ್ಟಿ ಕಾರ್ನರ್ಅವಕಾಶಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮಿಂಚಿದರು. ಸ್ಪೇನ್ ಪರ ಏಕೈಕ ಗೋಲು ಗಳಿಸಿದವರು ಲೋಲಾ ರೀರಾ (58ನೇ ನಿಮಿಷ).

ಎರಡನೇ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಗಳಿಸಿಕೊಡಲು ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ಶ್ರಮಿಸಿದ್ದರು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್‌ ಮರಿಯಾ ರೂಯಿಜ್‌ ಅವರ ಚಾಣಾಕ್ಷ ಆಟದಿಂದ ವಂದನಾ ನಿರಾಸೆ ಕಂಡರು.

ಮೊದಲ ಐದು ನಿಮಿಷಗಳಲ್ಲಿ ಎರಡು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ ಎರಡೂ ಸಂದರ್ಭದಲ್ಲಿ ಭಾರತದ ಆಸೆಗೆ ಮರಿಯಾ ರೂಯಿಜ್‌ ತಣ್ಣೀರು ಹಾಕಿದರು.

ಎರಡನೇ ಕ್ವಾರ್ಟರ್‌ನಲ್ಲೂ ಭಾರತದ ಆಕ್ರಮಣ ಮುಂದುವರಿಯಿತು. ಮಿಡ್‌ ಫೀಲ್ಡ್ ವಿಭಾಗ ಚುರುಕಿನ ಆಟವಾಡಿ ಚೆಂಡಿನ ಮೇಲೆ ಪೂರ್ಣ ಆಧಿಪತ್ಯ ಸ್ಥಾಪಿಸಿತು. ಈ ಅವಧಿಯಲ್ಲಿ ಯುವ ಆಟಗಾರ್ತಿ ಲಾಲ್‌ರೆಮ್‌ಸ್ಯಾಮಿ ಮಿಂಚಿದರು. ಅವರು ಗೋಲು ಗಳಿಸಲು ನಡೆಸಿದ ಶ್ರಮವನ್ನು ಮರಿಯಾ ವಿಫಲಗೊಳಿಸಿದರು.

ಎರಡು ಕ್ವಾರ್ಟರ್‌ಗಳಲ್ಲಿ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಸ್ಪೇನ್‌ಗೆಸಾಧ್ಯವಾಯಿತು. ಇದರಿಂದ ಇನ್ನಷ್ಟು ಜಿದ್ದಿಗೆ ಬಿದ್ದ ರಾಣಿ ರಾಂಪಾಲ್ ಬಳಗ ಮೂರನೇ ಕ್ವಾರ್ಟರ್‌ನಲ್ಲಿ ಯಶಸ್ಸು ಕಂಡಿತು. ಮಿಡ್‌ಫೀಲ್ಡರ್‌ ನಮಿತಾ ಟೊಪ್ಪೊ ನೀಡಿದ ನಿಖರ ಪಾಸ್‌ನಿಂದ ಗೋಲು ಗಳಿಸಿದ ರಾಣಿ ತಂಡದಖಾತೆ ತೆರೆದರು. ನಾಲ್ಕು ನಿಮಿಷಗಳ ನಂತರ ಮತ್ತೊಮ್ಮೆ ಎದುರಾಳಿ ತಂಡದ ರಕ್ಷಣಾ ವಿಭಾಗವನ್ನು ಲೆಕ್ಕಿಸದೆ ಮುನ್ನುಗ್ಗಿದ ರಾಣಿ,|ತಂಡದ ಮುನ್ನಡೆಯನ್ನುಹಿಗ್ಗಿಸಿದರು.

44ನೇ ನಿಮಿಷದಲ್ಲಿ ಗುರುಜೀತ್ ಗಳಿಸಿದ ಗೋಲಿನೊಂದಿಗೆ 3–0 ಮುನ್ನಡೆಯೊಂದಿಗೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಕಣಕ್ಕೆ ಇಳಿದ ಭಾರತಕ್ಕೆ ಈ ಕ್ವಾರ್ಟರ್‌ನ ಮೊದಲ ಐದು ನಿಮಿಷಗಳಲ್ಲಿ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಇವುಗಳ ಪೈಕಿ ಮೊದಲನೆಯ ಪ್ರಯತ್ನವನ್ನು ಸ್ಪೇನ್ ಡಿಫೆಂಡರ್‌ ವಿಫಲಗೊಳಿಸಿದರು. ಮತ್ತೊಂದರಲ್ಲಿ ರುಜೀತ್‌ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.