ADVERTISEMENT

ಏಷ್ಯಾ ಸ್ನೂಕರ್‌ನಲ್ಲಿ ಕನ್ನಡತಿಯರ ಸವಾಲು

ಜಿ.ಶಿವಕುಮಾರ
Published 9 ಏಪ್ರಿಲ್ 2017, 19:30 IST
Last Updated 9 ಏಪ್ರಿಲ್ 2017, 19:30 IST
ವರ್ಷಾ ಸಂಜೀವ್‌
ವರ್ಷಾ ಸಂಜೀವ್‌   

ಏಷ್ಯಾಖಂಡದ ಮಟ್ಟಿಗೆ ಏಷ್ಯನ್‌ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಅತ್ಯಂತ ಪ್ರತಿಷ್ಠೆಯ ಟೂರ್ನಿ.

1984ರಿಂದಲೂ ಪುರುಷರ ವಿಭಾಗದಲ್ಲಿ ನಡೆಯುತ್ತಾ ಬಂದಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಈಗ ವನಿತೆಯರೂ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಏಷ್ಯಾದ ಎಲ್ಲಾ ಭಾಗಗಳಿಗೂ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಕ್ರೀಡೆಯ ಕಂಪು ಪಸರಿಸುವ ಉದ್ದೇಶದಿಂದ ಏಷ್ಯನ್‌ ಕಾನ್ಫೆಡರೇಷನ್‌ ಆಫ್‌ ಬಿಲಿಯರ್ಡ್ಸ್‌ ಸ್ಪೋರ್ಟ್ಸ್‌ ಸಂಸ್ಥೆ ಈ ಬಾರಿ ಮಹಿಳೆಯರ ವಿಭಾಗದಲ್ಲೂ ಸ್ಪರ್ಧೆ ಆಯೋಜಿಸಲು ಮುಂದಾಗಿದೆ. ಚಂಡಿಗಡದಲ್ಲಿ ಏಪ್ರಿಲ್‌ 8ರಿಂದ 14ರವರೆಗೆ ನಡೆಯುವ ಟೂರ್ನಿಯಲ್ಲಿ  20 ದೇಶಗಳ 100ಕ್ಕೂ ಹೆಚ್ಚು ಸ್ನೂಕರ್‌ ಪಟುಗಳು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಕರ್ನಾಟಕದ ಚಿತ್ರಾ ಮಗಿಮೈರಾಜ್‌, ವಿದ್ಯಾ ಪಿಳ್ಳೈ ಮತ್ತು ವರ್ಷಾ ಸಂಜೀವ್‌ ಅವರೂ ಕಣದಲ್ಲಿದ್ದಾರೆ.

ಚೊಚ್ಚಲ ಚಾಂಪಿಯನ್‌ಷಿಪ್‌ನಲ್ಲಿ ಎದುರಾಗಬಹುದಾದ ಸವಾಲುಗಳು ಮತ್ತು ಹೊಸ ಕನಸುಗಳ ಬಗ್ಗೆ ರಾಜ್ಯದ ಚಿತ್ರಾ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ADVERTISEMENT

* ಈ ಬಾರಿ ಮಹಿಳೆಯರ ವಿಭಾಗದಲ್ಲೂ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ ಆರಂಭವಾಗಿದೆ. ಹೇಗನಿಸುತ್ತಿದೆ?
ತುಂಬಾ ಸಂತೋಷವಾಗುತ್ತಿದೆ.  ಮಹಿಳೆಯರಿಗೂ ಪುರುಷರಷ್ಟೇ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಏಷ್ಯನ್‌ ಕಾನ್ಫೆಡರೇಷನ್‌ ಆಫ್‌ ಬಿಲಿಯರ್ಡ್ಸ್‌ ಸ್ಪೋರ್ಟ್ಸ್‌ ಸಂಸ್ಥೆ ಚಾಂಪಿಯನ್‌ಷಿಪ್‌ ಆರಂಭಿಸಿದೆ. ಎಸಿಬಿಎಸ್‌ನ ಈ ನಿರ್ಧಾರ ಸ್ವಾಗತಾರ್ಹ. ಏಷ್ಯಾದಲ್ಲಿ ಮಹಿಳಾ ಸ್ನೂಕರ್‌ ಕೂಡ ಹೆಚ್ಚು ಜನಮನ್ನಣೆ ಗಳಿಸುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ.  ಮೊದಲು ನಾವು ವಿಶ್ವ ಚಾಂಪಿಯನ್‌ಷಿಪ್‌ ಮುಗಿದ ನಂತರ ಅದೇ ಟೂರ್ನಿಯಲ್ಲಿ ಆಡಲು ಒಂದು ವರ್ಷ ಕಾಯಬೇಕಾದ ಅನಿವಾರ್ಯತೆ ಇತ್ತು. ಈಗ ಏಷ್ಯನ್‌ ಚಾಂಪಿಯನ್‌ಷಿಪ್‌ ಆರಂಭವಾಗಿರುವುದರಿಂದ ವರ್ಷದಲ್ಲಿ ಎರಡು ಪ್ರತಿಷ್ಠಿತ ಕೂಟಗಳಲ್ಲಿ ಆಡುವ ಅವಕಾಶ ಸಿಕ್ಕಂತಾಗಿದೆ.

(ವಿದ್ಯಾ ಪಿಳ್ಳೈ)

* ಈ ಬಾರಿ ಕರ್ನಾಟಕದ ಮೂರು ಮಂದಿ ಕಣದಲ್ಲಿದ್ದೀರಿ. ಈ ಬಗ್ಗೆ ಹೇಳಿ?
ನಾನು, ವಿದ್ಯಾ ಮತ್ತು ವರ್ಷಾ, ಚೊಚ್ಚಲ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದೇವೆ. ನಾವು ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ (ಕೆಎಸ್‌ಬಿಎ) ಒಟ್ಟಿಗೆ ಅಭ್ಯಾಸ ನಡೆಸುತ್ತೇವೆ. ಈ ಹಿಂದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಉತ್ತಮ ಸಾಧನೆ ತೋರಿದ್ದೇವೆ.  ಈ ಬಾರಿಯೂ  ದೇಶಕ್ಕೆ ಪ್ರಶಸ್ತಿ ಗೆದ್ದು ಕೊಡಲು ಪ್ರಯತ್ನಿಸುತ್ತೇವೆ.

* ಏಷ್ಯನ್‌ಚಾಂಪಿಯನ್‌ಷಿಪ್‌ ಭಾರತದಲ್ಲಿ ಹೊಸ ಪ್ರತಿಭೆಗಳ ಉಗಮಕ್ಕೆ ನಾಂದಿಯಾಗಬಹುದೆ?
ಖಂಡಿತವಾಗಿಯೂ. ಈಗ ಶಾಲಾ, ಕಾಲೇಜುಗಳಿಗೆ ರಜೆ ಇರುವ ಕಾರಣ ಸಾಕಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಚಾಂಪಿಯನ್‌ಷಿಪ್‌ ನೋಡಲು ಬರುವ ನಿರೀಕ್ಷೆ ಇದೆ. ಏಷ್ಯಾದ ಘಟಾನುಘಟಿಗಳ ಪೈಪೋಟಿಯನ್ನು ಮಕ್ಕಳು ಹತ್ತಿರದಿಂದ ನೋಡಿದಾಗ. ಅವರಲ್ಲಿ ಕ್ರೀಡೆಯ ಬಗೆಗೆ ಆಸಕ್ತಿ ಮೊಳಕೆಯೊಡೆದು ಮುಂದೆ ಅವರು ನಮ್ಮಂತೆ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಟವನ್ನು ವೃತ್ತಿಪರವಾಗಿ ಸ್ವೀಕರಿಸಿ ಇದರಲ್ಲೇ ಬದುಕು ಕಟ್ಟಿಕೊಳ್ಳಲು ಮುಂದಾಗಬಹುದು.

* ಭಾರತದ ಸ್ನೂಕರ್‌ಪಟುಗಳಿಗೆ ಯಾವ ರಾಷ್ಟ್ರದ ಸ್ಪರ್ಧಿಗಳಿಂದ ಕಠಿಣ ಪೈಪೋಟಿ ಎದುರಾಗಬಹುದು?
ಹಾಂಕಾಂಗ್‌, ಚೀನಾ, ಥಾಯ್ಲೆಂಡ್‌ ಮತ್ತು ಸಿಂಗಪುರದ ಆಟಗಾರ್ತಿಯರು ತುಂಬಾ ಚೆನ್ನಾಗಿ ಆಡುತ್ತಾರೆ. ಈ ಬಾರಿ ಇರಾನ್‌ನ ಸ್ಪರ್ಧಿಗಳೂ ಭಾಗವಹಿಸುತ್ತಿದ್ದು ಎಲ್ಲರೂ ತೀವ್ರ ಪೈಪೋಟಿ ಒಡ್ಡಬಹುದು.

* ಭಾರತ ತಂಡದ ಬಗ್ಗೆ ಹೇಳಿ?
ಒಟ್ಟು ಎಂಟು ಮಂದಿ ತಂಡದಲ್ಲಿದ್ದೇವೆ. ಆರು ಮಂದಿ ನೇರ ಅರ್ಹತೆ ಗಳಿಸಿದ್ದರೆ, ತವರಿನಲ್ಲಿ ಚಾಂಪಿಯನ್‌ಷಿಪ್‌ ನಡೆಯುತ್ತಿರುವ ಕಾರಣ ಇಬ್ಬರಿಗೆ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಸಿಕ್ಕಿದೆ. ತಂಡದಲ್ಲಿರುವ ಎಲ್ಲರೂ ಬಲಿಷ್ಠರಾಗಿದ್ದು, ಈ ಹಿಂದೆ ನಡೆದ ಅನೇಕ ಟೂರ್ನಿಗಳಲ್ಲಿ ವಿಶ್ವದ ಘಟಾನುಘಟಿಗಳಿಗೆ ಸೋಲಿನ ರುಚಿ ತೋರಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ನಮ್ಮ ನಡುವೆಯೇ ನೇರ ಪೈಪೋಟಿ ಎದುರಾಗಬಹುದೆಂಬ ನಿರೀಕ್ಷೆ ಇದೆ.

* ತವರಿನ ಅಭಿಮಾನಿಗಳ ಎದುರು ಆಡುತ್ತಿರುವುದರಿಂದ ನಿಮ್ಮ ಮೇಲೆ ಒತ್ತಡ ಹೆಚ್ಚಿದೆಯೇ?
ಹಾಗೇನಿಲ್ಲ. ತವರಿನ ಪ್ರೇಕ್ಷಕರ ಎದುರು ಆಡುವುದು ಯಾವಾಗಲೂ ಖುಷಿ ಕೊಡುತ್ತದೆ. ಜೊತೆಗೆ ಕುಟುಂಬದ ಸದಸ್ಯರು, ಕೋಚ್‌ ಮತ್ತು ಆಪ್ತ ಸಲಹೆಗಾರರ ಬೆಂಬಲ ನಮ್ಮ ಮನೋಬಲವನ್ನು ಹೆಚ್ಚಿಸಲಿದೆ. ನನ್ನ ಪಾಲಿಗೆ ಚಂಡಿಗಡ ಅದೃಷ್ಟದ ಜಾಗ. ಅಲ್ಲಿ ಈ ಹಿಂದೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಈ ಬಾರಿಯೂ ತವರಿನ ಅಭಿಮಾನಿಗಳ ಪ್ರೋತ್ಸಾಹದೊಂದಿಗೆ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸ ಇದೆ.

* 44ರ ಹರೆಯದಲ್ಲಿ ಯುವ ಆಟಗಾರ್ತಿಯರ ಸವಾಲಿಗೆ ಎದೆಯೊಡ್ಡುವುದು ನಿಮಗೆ ಕಷ್ಟ ಅನಿಸುವುದಿಲ್ಲವೇ?
ವಯಸ್ಸು ಕೇವಲ ಸಂಖ್ಯೆ ಮಾತ್ರ. ವಯಸ್ಸಾಗಿರುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ. ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಡುವುದಕ್ಕೆ ವಯಸ್ಸಿನ ಮಿತಿ ಇಲ್ಲ. ದೈಹಿಕ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಇದ್ದರೆ ಎಂತಹ ಬಲಿಷ್ಠ ಎದುರಾಳಿಯ ಸವಾಲನ್ನೂ ಮೀರಿ ನಿಲ್ಲಬಹುದು.

* ಪುರುಷರ ವಿಭಾಗದಲ್ಲಿ ಯಾರು ಪ್ರಶಸ್ತಿ ಗೆಲ್ಲಬಹುದು?
ಕರ್ನಾಟಕದ ಪಂಕಜ್‌ ಅಡ್ವಾಣಿ ಮತ್ತು ಬಿ. ಭಾಸ್ಕರ್‌ ಅವರು ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿದ್ದಾರೆ. ಇವರಿಬ್ಬರೂ ಫೈನಲ್‌ ಪ್ರವೇಶಿಸಬಹುದು. ಪಂಕಜ್‌, ವಿಶ್ವ ಚಾಂಪಿಯನ್‌ ಆಟಗಾರ. ಹೀಗಾಗಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಭಾಸ್ಕರ್‌ ಟ್ರೋಫಿ ಎತ್ತಿ ಹಿಡಿದರೂ ಅಚ್ಚರಿ ಪಡಬೇಕಿಲ್ಲ.

***

ಚಿತ್ರಾ ಅವರ ಕುರಿತು...
ಕರ್ನಾಟಕದ ಚಿತ್ರಾ ಅವರು ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಡಬ್ಲ್ಯುಎಲ್‌ಬಿಎಸ್‌ಎ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಬಾರಿ ಚಿನ್ನದ ಸಾಧನೆ ಮಾಡಿದ್ದ ಬೆಂಗಳೂರಿನ ಚಿತ್ರಾ, 2014ರಲ್ಲಿ ನಡೆದಿದ್ದ ವಿಶ್ವ ಸೀನಿಯರ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನಕ್ಕೆ ಮುತ್ತಿಕ್ಕಿದ್ದರು. ಇಷ್ಟೇ ಅಲ್ಲದೆ ಆಸ್ಟ್ರೇಲಿಯಾ ಓಪನ್‌ ಸ್ನೂಕರ್‌ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲೂ ಪದಕಗಳ ಬೇಟೆಯಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.