ADVERTISEMENT

ಗ್ರ್ಯಾಂಡ್‌ಮಾಸ್ಟರ್‌ ಪಟ್ಟದ ಹಾದಿಯಲ್ಲಿ...

ಕೆ.ಓಂಕಾರ ಮೂರ್ತಿ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ತೇಜ್‌ಕುಮಾರ್‌ (ಎಡ ತುದಿ)
ತೇಜ್‌ಕುಮಾರ್‌ (ಎಡ ತುದಿ)   

ಮೈಸೂರಿನಲ್ಲಿ ಚೆಸ್‌ ಪ್ರತಿಭೆಗಳಿಗೆ ಬರವಿಲ್ಲ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಆಟಗಾರರು ಇಲ್ಲಿದ್ದಾರೆ. ಚೆಸ್‌ ಆಟದಲ್ಲಿ ರಾಜ್ಯದಲ್ಲೇ ‘ನಂಬರ್‌ 1’ ಎಂದು ಹೇಳಬಹುದು. ಈ ಕ್ರೀಡೆಯನ್ನು ಪೋಷಿಸುವವರು ಹಾಗೂ ಆಡುವವರ ಸಂಖ್ಯೆ ಇಲ್ಲಿಯೇ ಅಧಿಕ. ಜಿಲ್ಲೆಯ ಆಟಗಾರರು ಒಂದಿಲ್ಲೊಂದು ಟೂರ್ನಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದು ಬರುತ್ತಿರುತ್ತಾರೆ.

ಅದರಲ್ಲೂ ಗ್ರ್ಯಾಂಡ್‌ಮಾಸ್ಟರ್‌ ‍ಪಟ್ಟದ ಸನಿಹದಲ್ಲಿರುವ ಎಂ.ಎಸ್‌.ತೇಜ್‌ಕುಮಾರ್‌ ದಶಕಗಳಿಂದ ಸಾಂಸ್ಕೃತಿಕ ನಗರಿಯ ಚೆಸ್‌ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಟಗಾರನಾಗಿ, ಮಾರ್ಗದರ್ಶಕನಾಗಿ ಚೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶ ವಿದೇಶಗಳ ಹಲವು ಟೂರ್ನಿಗಳಲ್ಲಿ ಆಡುತ್ತಾ ಫಿಡೆ ರೇಟಿಂಗ್‌ ಹೆಚ್ಚಿಕೊಳ್ಳುತ್ತಿದ್ದಾರೆ.

ನೈರುತ್ಯ ರೈಲ್ವೆಯ ಉದ್ಯೋಗಿಯಾಗಿರುವ ಇವರು ಈಗಾಗಲೇ ಮೂರು ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್ಸ್‌ ಪೂರ್ಣಗೊಳಿಸಿದ್ದಾರೆ. ಜಿಎಂ ಪಟ್ಟಕ್ಕೆ ಕೇವಲ 13 ಇಎಲ್‌ಒ ಪಾಯಿಂಟ್‌ಗಳ ಅಗತ್ಯವಿದೆ.

2013ರಲ್ಲಿ ಮೂರನೇ ಜಿಎಂ ನಾರ್ಮ್ಸ್‌ ಪಡೆದಿದ್ದ ಇವರು 2008ರಲ್ಲಿ ಮೊದಲ ಹಾಗೂ ಎರಡನೇ ನಾರ್ಮ್ಸ್‌ ಸಂಪಾದಿಸಿದ್ದರು. 2009ರಲ್ಲೇ 2467 ಇಎಲ್‌ಒ ರೇಟಿಂಗ್ ತಲುಪಿದ್ದರು. ಬಳಿಕ ಹಲವು ಏಳುಬೀಳು ಕಂಡರು.

ರಾಜ್ಯದಿಂದ ಮೊದಲ ಬಾರಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಐಎಂ) ಗೌರವ ಪಡೆದವರು ಡಿ.ವಿ.ಪ್ರಸಾದ್‌. ಬಳಿಕ ರವಿ ಗೋಪಾಲ ಹೆಗಡೆ ಈ ಸಾಧನೆ ಮಾಡಿದರು. ಆನಂತರ ಐಎಂ ಪದವಿ ಪಡೆದವರು ತೇಜ್‌ಕುಮಾರ್. 2008ರಲ್ಲಿ ಅವರು ಈ ಸಾಧನೆ ಮಾಡಿದರು.

ಬಿ.ಎಸ್‌.ಶಿವಾನಂದ, ಜಿ.ಎ.ಸ್ಟ್ಯಾನಿ, ವಿಯಾನಿ ಆಂಟೊನಿಯೊ, ಗಿರೀಶ್‌ ಕೌಶಿಕ್‌ ಅವರು ನಂತರದ ದಿನಗಳಲ್ಲಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಪಟ್ಟಕ್ಕೇರಿದರು.

36 ವರ್ಷ ವಯಸ್ಸಿನ ತೇಜ್‌ಕುಮಾರ್‌ ಅವರು ಗ್ರ್ಯಾಂಡ್‌ಮಾಸ್ಟರ್ ಪಟ್ಟ ಪಡೆದರೆ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಆಟಗಾರ ಎನಿಸಲಿದ್ದಾರೆ. ಅವರೀಗ 2,487 ಇಎಲ್ಒ ರೇಟಿಂಗ್‌ ಹೊಂದಿದ್ದಾರೆ.

ಕಳೆದ ವಾರ ಶ್ರೀಲಂಕಾದಲ್ಲಿ ನಡೆದ ಧಾಮ್ಸೊ ಅಂತರರಾಷ್ಟ್ರೀಯ ಚೆಸ್‌ ಟೂರ್ನಿಯಲ್ಲಿ ತೇಜ್‌ಕುಮಾರ್‌ ಚಾಂಪಿಯನ್ ಆಗಿದ್ದಾರೆ. ಆಡಿದ 9 ಪಂದ್ಯಗಳಲ್ಲಿ ಗೆದ್ದು 9 ಪಾಯಿಂಟ್‌ ಸಂಪಾದಿಸಿದರು. ಜನವರಿಯಲ್ಲಿ ಫ್ರಾನ್ಸ್‌ನಲ್ಲಿ ನಡೆದ ಲಿಫ್ರ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಮಹಾರಾಷ್ಟ್ರ ಚೆಸ್‌ ಲೀಗ್‌ ಟೂರ್ನಿಯಲ್ಲಿ ಆಡಿದ ರಾಜ್ಯದ ಏಕೈಕ ಆಟಗಾರ ಕೂಡ. ಅವರ ತಂದೆ ಶಿವರಾಮೇಗೌಡ ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಕಾರ್ಯದರ್ಶಿ.

ತೇಜ್‌ಕುಮಾರ್ ಸಂದರ್ಶನ ...
* ಗ್ರ್ಯಾಂಡ್‌ಮಾಸ್ಟರ್‌ ಪಟ್ಟದ ಕ್ಷಣವನ್ನು ಯಾವ ರೀತಿ ಎದುರು ನೋಡುತ್ತಿದ್ದೀರಿ?

ರಾಜ್ಯದಿಂದ ಇದುವರೆಗೆ ಯಾರೂ ಗ್ರ್ಯಾಂಡ್‌ಮಾಸ್ಟರ್‌ ಪದವಿ ಪಡೆದಿಲ್ಲ. ಹೀಗಾಗಿ, ಸಹಜವಾಗಿ ಎಲ್ಲರೂ ಈ ಕ್ಷಣವನ್ನು ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ, ಪಾಯಿಂಟ್‌ಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ ಆಟದತ್ತ ಗಮನ ಹರಿಸುತ್ತಿದ್ದೇನೆ.

ADVERTISEMENT

* ಮುಂದಿನ ಟೂರ್ನಿ, ಅದಕ್ಕೆ ಸಿದ್ಧತೆಗಳ ಬಗ್ಗೆ ಹೇಳಿ?
ಸದ್ಯಕ್ಕೆ ಯಾವುದೇ ಟೂರ್ನಿಗಳು ಇಲ್ಲ. ಜೂನ್‌ ತಿಂಗಳ ಬಳಿಕ ಟೂರ್ನಿಗಳಲ್ಲಿ ಭಾಗವಹಿಸುತ್ತೇನೆ. ನನ್ನ ಮುಖ್ಯ ಗುರಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಗಿಟ್ಟಿಸುವುದು. ಅದಕ್ಕಾಗಿ ಉತ್ತಮ ಟೂರ್ನಿಗಳಲ್ಲಿ ಆಡಬೇಕು. ಉತ್ತಮ ಆಟಗಾರರ ಎದುರು ಗೆಲ್ಲಬೇಕು.

* ನಿಮ್ಮ ಚೆಸ್‌ ಜೀವನದ ಪ್ರಮುಖ ಕ್ಷಣಗಳನ್ನು ನೆನಪಿಸಿಕೊಳ್ಳಬಹುದೇ?
12 ವರ್ಷಗಳಿಂದ ಸಂಪೂರ್ಣವಾಗಿ ಚೆಸ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಪಯಣವೇ ತುಂಬಾ ಖುಷಿ ನೀಡಿದೆ. ನಿತ್ಯ ಹೊಸ ವಿಚಾರ ಕಲಿಯುತ್ತಿದ್ದೇನೆ. 2013ರಲ್ಲಿ ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದು ನನ್ನ ಪಾಲಿನ ಇದುವರೆಗಿನ ಸ್ಮರಣೀಯ ಸಾಧನೆ. ಕಳೆದ ವರ್ಷ ದುಬೈನಲ್ಲಿ ಇಬ್ಬರು ಗ್ರ್ಯಾಂಡ್‌ಮಾಸ್ಟರ್‌ ಎದುರು ಗೆದ್ದಿದ್ದೆ. ಅದು ಕೂಡ ತುಂಬಾ ಖುಷಿ ನೀಡಿದ ಸಾಧನೆ.

* ರಾಜ್ಯದಲ್ಲಿ ಚೆಸ್‌ ಆಟದ ಸ್ಥಿತಿಗತಿ ಬಗ್ಗೆ ಹೇಳಿ?
ರಾಜ್ಯದಲ್ಲಿ ಕೋಚಿಂಗ್‌ ಸಮಸ್ಯೆ ಇದೆ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ರೀತಿ ಇಲ್ಲಿ ವೃತ್ತಿಪರ ಮಾರ್ಗದರ್ಶಕರು ಸಿಗುತ್ತಿಲ್ಲ. ಸರ್ಕಾರದಿಂದಲೂ ಹೇಳಿಕೊಳ್ಳುವಂಥ ಬೆಂಬಲ ಇಲ್ಲ. ಈ ನಡುವೆಯೂ ಆಟಗಾರರು ಸ್ವಪ್ರಯತ್ನದಿಂದ ದೇಶ ವಿದೇಶಗಳಲ್ಲಿ ಮಿಂಚುತ್ತಿದ್ದಾರೆ.

ಎಲ್ಲವೂ ದುಬಾರಿ ಆಗಿರುವ ಈ ಕಾಲದಲ್ಲಿ ಚೆಸ್‌ ಕ್ರೀಡೆಗೆ ಪ್ರಾಯೋಜಕರ ಕೊರತೆಯಿದೆ. ಹೀಗಾಗಿ, ಕೆಲ ಆಟಗಾರರು ಚೆಸ್‌ನಿಂದ ದೂರ ಸರಿಯುತ್ತಿದ್ದಾರೆ. ಹೊರಗಡೆಯಿಂದ ಕೋಚ್‌ ಆಹ್ವಾನಿಸಿ ಪ್ರತಿಭಾವಂತ ಮಕ್ಕಳಿಗೆ ತರಬೇತಿ ನೀಡಬೇಕು. ಕಂಪ್ಯೂಟರ್‌ ನೆರವು ಪಡೆಯಬೇಕು. ಹೆಚ್ಚು ಹೆಚ್ಚು ಟೂರ್ನಿಗಳನ್ನು ಆಯೋಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.