ADVERTISEMENT

ದಕ್ಷಿಣದ ರಾಜ್ಯಗಳಿಗೆ ಬಲ

ವಿನಾಯಕ ಭಟ್ಟ‌
Published 25 ಸೆಪ್ಟೆಂಬರ್ 2016, 19:30 IST
Last Updated 25 ಸೆಪ್ಟೆಂಬರ್ 2016, 19:30 IST
ಪ್ರಜಾವಾಣಿ ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ
ಪ್ರಜಾವಾಣಿ ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ   

ಮಲೇಷ್ಯಾ ಮೂಲದ ಸೆಪಕ್‌ ಟಕ್ರಾ ಆಟ ಭಾರತಕ್ಕೆ ಬಂದು ಹಲವು ವರ್ಷಗಳಾಗಿವೆ. ಆದರೆ ಈ ಆಟದಲ್ಲಿ  ದೇಶದ ಈಶಾನ್ಯ ರಾಜ್ಯಗಳ ತಂಡ ಗಳೇ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದವು. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲೂ ಸೆಪಕ್‌ ಟಕ್ರಾ ಆಟದ ಗಾಳಿ ಬಲವಾಗಿ ಬೀಸುತ್ತಿದೆ. ಈ ಭಾಗದಲ್ಲೂ ಪ್ರತಿಭಾನ್ವಿತ ಆಟಗಾರರು ಹೊರಹೊಮ್ಮುತ್ತಿದ್ದಾರೆ.

ದಾವಣಗೆರೆಯಲ್ಲಿ ಈಚೆಗೆ ಐದು ದಿನಗಳ ಕಾಲ ನಡೆದ 20ನೇ ರಾಷ್ಟ್ರೀಯ ಜೂನಿಯರ್‌ ಸೆಪಕ್‌ ಟಕ್ರಾ ಚಾಂಪಿಯನ್‌ಷಿಪ್‌ ದಕ್ಷಿಣ ಭಾರತದ ರಾಜ್ಯಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. 24 ರಾಜ್ಯಗಳ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿ ದ್ದವು. ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂ ರಾಜ್ಯಗಳ ನಡುವೆಯೇ ಪ್ರಶಸ್ತಿಗಾಗಿ        ಹೆಚ್ಚಾಗಿ ಪೈಪೋಟಿ ನಡೆಯುತ್ತದ್ದ ಕಾಲವೀಗ ಬದಲಾಗಿದೆ.

ತಮಿಳುನಾಡು ತಂಡ ಟೀಮ್‌ ಚಾಂಪಿಯನ್‌ ಷಿಪ್‌ ಗೆದ್ದುಕೊಳ್ಳುವ ಮೂಲಕ ಬೆರಗು ಮೂಡಿಸಿತು. ಡಬಲ್ಸ್‌ ಬಾಲಕರ ವಿಭಾಗದ ಫೈನಲ್‌ನಲ್ಲಿ ಆಂಧ್ರಪ್ರದೇಶ ತಂಡವೂ ಮಿಜೊರಾಂ ತಂಡಕ್ಕೆ ಪ್ರಬಲ ಪೈಪೋಟಿ ನೀಡಿತ್ತು. ಬಾಲಕಿಯರ ವಿಭಾಗದ ಫೈನಲ್‌ನಲ್ಲೂ ಆಂಧ್ರಪ್ರದೇಶವು ಅಸ್ಸಾಂ ತಂಡಕ್ಕೆ ತೀವ್ರ ಸವಾಲು ಒಡ್ಡಿತ್ತು. ಆತಿಥೇಯ ಕರ್ನಾಟಕ ತಂಡವೂ ಬಾಲಕರ ಟೀಮ್‌ ಚಾಂಪಿಯನ್‌ ಷಿಪ್‌, ಬಾಲಕರ ಹಾಗೂ ಬಾಲಕಿಯರ ಡಬಲ್ಸ್‌ ವಿಭಾಗಗಳಲ್ಲಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದು ವಿಶೇಷವಾಗಿದೆ.

‘ನಾಲ್ಕೈದು ವರ್ಷಗಳವರೆಗೂ ಚಾಂಪಿಯನ್‌ಷಿಪ್‌ ಆರಂಭಗೊಳ್ಳುವ ಮೊದಲೇ ಮಣಿಪುರ ತಂಡವೇ ಗೆಲ್ಲುತ್ತದೆ ಎಂಬ ನಿರ್ಧಾರಕ್ಕೆ ಎಲ್ಲರೂ ಬಂದಿರುತ್ತಿದ್ದರು. ಸೆಪಕ್‌ ಟಕ್ರಾ ಆಟ ಈಶಾನ್ಯ ರಾಜ್ಯಗಳಿಗೇ ಸೀಮಿತ ಎಂಬಂತಾಗಿತ್ತು. ದೆಹಲಿ ತಂಡ ಹೊರತು ಪಡಿಸಿದರೆ ಉಳಿದವರಿಗೆ ಪ್ರಶಸ್ತಿ   ಸಿಗುವುದಿಲ್ಲ ಎಂಬ ಸ್ಥಿತಿಯಿತ್ತು. ಆದರೆ, ಎರಡು ವರ್ಷಗಳಿಂದ ಬದಲಾವಣೆಯ ಗಾಳಿ ಬೀಸುತ್ತಿದೆ. ಇದೀಗ ದಕ್ಷಿಣ ಭಾರತದ ತಂಡಗಳೂ ಪ್ರಬಲ ಪೈಪೋಟಿ ಒಡ್ಡುತ್ತಿವೆ. ನಿರೀಕ್ಷೆಗೂ ಮೀರಿ ಈ ಬಾರಿ ತಮಿಳು ನಾಡು           ತಂಡ ಟೀಮ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿರುವುದೇ ಉತ್ತಮ ನಿದರ್ಶನ’ ಎನ್ನುತ್ತಾರೆ ದೆಹಲಿ ತಂಡದ ತರಬೇತುದಾರ ರೋಹಿತ್‌ ಅದ್ವಾನ್‌.

‘ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ತಂಡದ ಆಟಗಾರರು ಈ ಟೂರ್ನಿಯಲ್ಲಿ ಈಶಾನ್ಯ ರಾಜ್ಯಗಳ ಮತ್ತು ದೆಹಲಿ ತಂಡದ ಆಟಗಾರರಿಗೆ ಬೆವರಿಳಿಸಿದರು. ದಕ್ಷಿಣದ ರಾಜ್ಯಗಳಿಂದಲೂ ಉತ್ತಮ ಆಟಗಾರರ ಹೊರಹೊಮ್ಮುತ್ತಿದ್ದಾರೆ. ಭಾರತದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ’ ಎಂದು ರೋಹಿತ್‌ ಅಭಿಪ್ರಾಯಪಟ್ಟರು.

‘ಮಣಿಪುರ, ದೆಹಲಿ ತಂಡಗಳೇ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದವು. ಇದೇ ಮೊದಲ ಬಾರಿ ನಮ್ಮ ತಂಡ ಟೀಮ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ. ರೇಗೊ ವಿಭಾಗದಲ್ಲೂ ಫೈನಲ್‌ಗೆ ಬಂದಿತ್ತು. ನಮ್ಮಲ್ಲೂ ಈಗ ಒಳ್ಳೆಯ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಈ ಕ್ರೀಡೆ ಬಗೆಗೂ ಮಕ್ಕಳಲ್ಲಿ ಆಸಕ್ತಿ ಹೆಚ್ಚುತ್ತಿದೆ’ ಎನ್ನುತ್ತಾರೆ ತಮಿಳುನಾಡಿನ ತಂಡದ ತರಬೇತುದಾರ ಪೆಚುಮುತ್ತು.

‘ರಾಷ್ಟ್ರೀಯ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದ ಮಣಿಪುರ ಎರಡನೇ ಸ್ಥಾನಕ್ಕೆ ಇಳಿದಿದೆ. ದೆಹಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎಂಟನೇ ಸ್ಥಾನದಲ್ಲಿದೆ. ಬಾಲಕರ ಹಿರಿಯರ ವಿಭಾಗದಲ್ಲಿ ಈ ಹಿಂದೆ ಸತತ 9 ವರ್ಷಗಳ ಕಾಲ ಕರ್ನಾಟಕ ರನ್ನರ್ಸ್‌ ಅಪ್‌ ಪ್ರಶಸ್ತಿ ಗೆದ್ದುಕೊಂಡಿತ್ತು. ಕಾಲೇಜು ಅಧ್ಯಯನ ಕಾರಣಕ್ಕೆ ಪ್ರತಿಭಾವಂತರು ಮಧ್ಯದಲ್ಲಿಯೇ ಆಟವನ್ನು ಬಿಡುತ್ತಿರುವುದರಿಂದ ಸೀನಿಯರ್‌ ವಿಭಾಗಕ್ಕೆ ಈಗ ಪ್ರಶಸ್ತಿ ಲಭಿಸುತ್ತಿಲ್ಲ.

ಜೂನಿಯರ್‌ ಹಾಗೂ ಸಬ್‌ ಜೂನಿಯರ್‌ ವಿಭಾಗದಲ್ಲಿ ಒಳ್ಳೆಯ ಆಟಗಾರರು ಬರುತ್ತಿದ್ದಾರೆ. ಹೀಗಾಗಿ ಈ ಟೂರ್ನಿಯಲ್ಲಿ ರಾಜ್ಯಕ್ಕೆ ಒಟ್ಟಾರೆಯಾಗಿ ಮೂರು ಕಂಚಿನ ಪದಕ ಲಭಿಸಿದೆ’ ಎಂದು ಕರ್ನಾಟಕ ಅಮೆಚೂರ್‌ ಸೆಪಕ್‌ ಟಕ್ರಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೇಶವ ಸೂರ್ಯವಂಶಿ ಮಾಹಿತಿ ನೀಡಿದರು.

ತರಬೇತಿಯದ್ದೇ ಕೊರತೆ
ಸೆಪಕ್‌ ಟಕ್ರಾ ಕ್ರೀಡೆಗೆ ಸರ್ಕಾರ ರಾಜ್ಯದಲ್ಲಿ ತರಬೇತಿ ಸೌಲಭ್ಯವನ್ನು ಕಲ್ಪಿಸದೇ ಇರುವುದರಿಂದ ಆಟಗಾರರಿಗೆ ತೊಂದರೆಯಾಗಿದೆ. ದೆಹಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ತರಬೇತಿ ಕೇಂದ್ರಗಳಲ್ಲಿ ಸೆಪಕ್‌ ಟಕ್ರಾ ತರಬೇತಿ ನೀಡಲಾಗುತ್ತಿದೆ. ಹೀಗಾಗಿ ಆ ಭಾಗದಿಂದ ಒಳ್ಳೆಯ ಆಟಗಾರರು ಟೂರ್ನಿಗೆ ಬರುತ್ತಿದ್ದಾರೆ.

ನಮ್ಮಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದಲೂ ತರಬೇತಿ ನೀಡಲಾಗುತ್ತಿಲ್ಲ. ಹೀಗಾಗಿ ಶಾಲೆ– ಕಾಲೇಜುಗಳಲ್ಲಿ ಈ ಕ್ರೀಡೆ ಪ್ರಚಲಿತಕ್ಕೆ ಬಂದಿಲ್ಲ. ಸೆಪಕ್‌ ಟಕ್ರಾ ಸಂಸ್ಥೆಯ ಆಶ್ರಯದಲ್ಲಿ ಕೆಲವು ಹಿರಿಯ ಆಟಗಾರರ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ರಾಜ್ಯದಲ್ಲೂ ಕ್ರೀಡಾ ಪ್ರಾಧಿಕಾರ ತರಬೇತಿ ಕೇಂದ್ರಗಳಲ್ಲಿ ಈ ಕ್ರೀಡೆಯ ತರಬೇತಿ ಆರಂಭಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಕೇಶವ ಸೂರ್ಯವಂಶಿ ವಿಷಾದಿಸಿದರು.

ಉತ್ತಮ ತರಬೇತಿ ಪಡೆಯುತ್ತಿರುವ ದೆಹಲಿ, ಮಣಿಪುರ ತಂಡದ ಆಟಗಾರರಲ್ಲಿ ಹೆಚ್ಚಿನ ವೃತ್ತಿಪರತೆ ಇದೆ. ಜೂನಿಯರ್‌ ಬಾಲಕರ ವಿಭಾಗದ ಕರ್ನಾಟಕ ತಂಡದಲ್ಲಿನ 15 ಆಟಗಾರರ ಪೈಕಿ 6 ಆಟಗಾರರು ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ವಸತಿ ಶಾಲೆಯವರೇ ಆಗಿದ್ದರು. ಇತರ ಕ್ರೀಡೆಗಳಂತೆ ಸೂಕ್ತ ತರಬೇತಿ ವ್ಯವಸ್ಥೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಈ ಕ್ರೀಡೆ ಇನ್ನೂ ಬೇರುಗಳನ್ನು ಹೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT