ADVERTISEMENT

ಬಿಸಿಸಿಐಗೆ ನಾಡಾ ಅಂಕುಶ?

ಪ್ರಮೋದ ಜಿ.ಕೆ
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಬಿಸಿಸಿಐಗೆ ನಾಡಾ ಅಂಕುಶ?
ಬಿಸಿಸಿಐಗೆ ನಾಡಾ ಅಂಕುಶ?   

ಅದು 2003ರ ವಿಶ್ವಕಪ್‌ ಟೂರ್ನಿ. ಆ ಟೂರ್ನಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯ ಆಡಬೇಕಿತ್ತು. ಪಂದ್ಯ ಆರಂಭವಾಗಲು ಇನ್ನು ಕೆಲ ಗಂಟೆಗಳಷ್ಟೇ ಬಾಕಿಯಿತ್ತು. ಆಗ ಹೆಸರಾಂತ ಸ್ಪಿನ್ನರ್‌ ಶೇನ್‌ ವಾರ್ನ್‌ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಪರೀಕ್ಷಾ ವರದಿಯಿಂದ ಸಾಬೀತಾಗಿತ್ತು. ಆದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಯಿತು. ಅಷ್ಟೇ ಅಲ್ಲ, ಕ್ರಿಕೆಟ್‌ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧ ಕೂಡ ಹೇರಿತು.

ಮದ್ದು ಸೇವಿಸಿದ್ದು ನಿಮಗೆ ಗೊತ್ತಿರಲಿಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಶೇನ್‌ ವಾರ್ನ್‌ ನೀಡಿದ ಉತ್ತರ ಹಾಸ್ಯಾಸ್ಪದವಾಗಿತ್ತು. ‘ದೇಹದ ತೂಕ ಕಡಿಮೆಯಾಗಲು ಅಮ್ಮ ಔಷಧ ಕೊಡುತ್ತಿದ್ದಳು. ಅದು ನಿಷೇಧಿತ ಮದ್ದು ಎಂಬುದು ಗೊತ್ತಿರಲಿಲ್ಲ’ ಎಂದಿದ್ದರು.

ಪಾಕಿಸ್ತಾನದ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಪದೇ ಪದೇ ಗಾಯದ ಸಮಸ್ಯೆ ಹಾಗೂ ಫಿಟ್‌ನೆಸ್‌ ಕೊರತೆಯಿಂದ ಬಳಲುತ್ತಿದ್ದರು. ಇದರಿಂದ ಹೊರಬರಲು, ಕ್ರಿಕೆಟ್‌ ಅಂಗಳದಲ್ಲಿ ಅನ್ಯ ಮಾರ್ಗದಿಂದ ‘ಹೀರೋ’ ಆಗುವ ದುರಾಸೆಯಿಂದ ನಿಷೇಧಿತ ಉದ್ದೀಪನ ಮದ್ದು ಸೇವಿಸುತ್ತಿದ್ದರು. 2006ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಮೊದಲ ಪಂದ್ಯವಾಡಲು ಕೆಲವು ಗಂಟೆಗಳಷ್ಟೇ ಬಾಕಿಯಿದ್ದಾಗ ಶೋಯಬ್‌ ನಿಷೇಧಿತ ಅನಾಬೊಲಿಕ್‌ ಸ್ಟಿರಾಯ್ಡ್‌ ಸೇವಿಸಿದ್ದು ಸಾಬೀತಾಗಿದ್ದರಿಂದ ಎರಡು ವರ್ಷ ನಿಷೇಧಕ್ಕೆ ಒಳಗಾದರು.

ADVERTISEMENT

ಇವೆಲ್ಲಾ ಉದಾಹರಣೆಗಳಷ್ಟೇ. ಉದ್ದೀಪನ ಮದ್ದು ಸೇವಿಸಿ ಮದ್ದಿನ ಸೆರಗಲ್ಲಿ ಕ್ರೀಡಾ ಬದುಕನ್ನು ಅಂತ್ಯಗೊಳಿಸಿಕೊಂಡವರ ದೊಡ್ಡ ಪಟ್ಟಿಯೇ ಇದೆ. ಶ್ರೀಲಂಕಾದ ಉಪುಲ್‌ ತರಂಗ, ಭಾರತದ ಪ್ರದೀಪ್‌ ಸಾಂಗ್ವಾನ್‌, ಪಾಕಿಸ್ತಾನದ ಮೊಹಮ್ಮದ್ ಆಸಿಫ್‌, ಅಬ್ದುಲ್ ರೆಹಮಾನ್‌, ರಝಾ ಹಸನ್‌, ಆಸೀಮ್‌ ಭಟ್‌, ಇಂಗ್ಲೆಂಡ್‌ನ ಇಯಾನ್‌ ಬಾಥಮ್‌, ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್ ಹೀಗೆ ಸಾಕಷ್ಟು ಕ್ರಿಕೆಟಿಗರು ಮದ್ದು ಸೇವಿಸಿ ಶಿಕ್ಷೆ ಅನುಭವಿಸಿದ್ದಾರೆ. ಮೊಹಮ್ಮದ್‌ ಆಸಿಫ್‌ 2006ರಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದರು. ಆದರೂ ಬುದ್ದಿ ಕಲಿಯದ ಆಸಿಫ್‌ ಎರಡು ವರ್ಷಗಳ ಬಳಿಕ ಮತ್ತೆ ಮದ್ದು ಸೇವಿಸಿದ್ದರು.

ಮೊದಲಿನಿಂದಲೂ ಕ್ರಿಕೆಟ್‌ನಲ್ಲಿ ಮದ್ದು ಸೇವನೆಯ ಘಟನೆಗಳು ನಡೆಯುತ್ತಿದ್ದರೂ, ಐಸಿಸಿಯಾಗಲಿ, ಬಿಸಿಸಿಐ ಆಗಲಿ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಇತ್ತೀಚೆಗೆ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ವರದಿ ಬಿಡುಗಡೆ ಮಾಡಿದ್ದು 2016ರಲ್ಲಿ 153 ಕ್ರಿಕೆಟಿಗರು ನಿಷೇಧಿತ ಮದ್ದು ಸೇವಿಸಿದ್ದಾರೆ. ಇದರಲ್ಲಿ ಒಬ್ಬ ಆಟಗಾರನ ಮೇಲೆ ನಿಷೇಧ ಹೇರಲಾಗಿದೆ ಎನ್ನುವುದನ್ನು ಬಹಿರಂಗ ಮಾಡಿದೆ.

ಆದ್ದರಿಂದ ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ತಡೆಘಟಕದ (ನಾಡಾ) ಮೂಲಕವೇ ಕ್ರಿಕೆಟಿಗರ ಉದ್ದೀಪನ ಮದ್ದು ಪರೀಕ್ಷೆ ನಡೆಯಬೇಕು ಎಂದು ವಾಡಾ ಈಗ ಒತ್ತಾಯಿಸುತ್ತಿದೆ. ಕೇಂದ್ರ ಕ್ರೀಡಾ ಸಚಿವಾಲಯ ‘ಕ್ರಿಕೆಟಿಗರ ಮದ್ದು ಸೇವನೆ ಪರೀಕ್ಷೆ ನಾಡಾ ಮೂಲಕವೇ ಆಗಲಿ. ಇದಕ್ಕೆ ನಮ್ಮ ಬೆಂಬಲವಿದೆ’ ಎಂದಿದೆ. ಆದರೆ ಬಿಸಿಸಿಐ ಇದರ ಬಗ್ಗೆ ಸ್ಪಷ್ಟ ನಿಲುವು ತೆಳೆದಿಲ್ಲ. ಇದರ ಹಿಂದೆ ಆಟಗಾರರ ಒತ್ತಡವಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

‘ನಿಷೇಧಿತ ಮದ್ದು ಸೇವಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಆಟಗಾರರಿಗೆ ಅರಿವು ಮೂಡಿಸುತ್ತಿದ್ದೇವೆ’ ಎಂದು ಬಿಸಿಸಿಐ ಮತ್ತು ಐಸಿಸಿ ಹೇಳುತ್ತಲೇ ಇದೆ. ಆದರೆ ಈ ನಿಷೇಧಕ್ಕೆ ಒಳಗಾಗುತ್ತಿರುವ ಆಟಗಾರರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಅಷ್ಟಕ್ಕೂ ಪರೀಕ್ಷೆಯ ಕೆಲಸವನ್ನು ನಾಡಾ ವ್ಯಾಪ್ತಿಗೆ ತಂದರೆ ತಪ್ಪೇನು?

ಕ್ರಿಕೆಟ್‌ ಆಡಳಿತ ಸಂಸ್ಥೆಗಳು ಆಟಗಾರರಲ್ಲಿ ಮದ್ದು ಸೇವನೆಯ ಅಪಾಯದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕೆಲಸ ಮಾಡಿದ್ದರೆ ಮದ್ದು ಸೇವಿಸುವರ ಸಂಖ್ಯೆ ಕಡಿಮೆಯಾಗಬೇಕಿತ್ತಲ್ಲವೇ?

ಹಿಂದಿನ ನಾಲ್ಕೈದು ವರ್ಷಗಳಿಂದಲೂ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. 2011ರ ವಿಶ್ವಕಪ್‌ ಟೂರ್ನಿಯ ವೇಳೆ ಶ್ರೀಲಂಕಾದ ಉಪುಲ್ ತರಂಗ ಸಿಕ್ಕಿಬಿದ್ದಿದ್ದರು. ನಂತರದ ವರ್ಷ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟೆಸ್ಟ್‌ ಸರಣಿ ನಡೆದಿತ್ತು.

ಆಗ ಆಂಗ್ಲರ ನಾಡಿನ ತಂಡ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೂ ಪಾಕಿಸ್ತಾನ ವೈಟ್‌ವಾಷ್‌ ಸಾಧಿಸಿ ಇಂಗ್ಲೆಂಡ್‌ ವಿರುದ್ಧ ಮೊದಲ ಬಾರಿಗೆ ಶ್ರೇಷ್ಠ ಸಾಧನೆ ಮಾಡಿದ ಹಿಗ್ಗಿನಿಂದ ಬೀಗಿತ್ತು. ಆ ಸರಣಿಯಲ್ಲಿ 19 ವಿಕೆಟ್‌ಗಳನ್ನು ಉರುಳಿಸಿದ್ದ ಪಾಕ್‌ನ ಸ್ಪಿನ್ನರ್‌ ಅಬ್ದುಲ್‌ ರಹಮಾನ್‌ ಮದ್ದು ಸೇವಿಸಿದ್ದರು ಎನ್ನುವ ಅಂಶ ಬಯಲಾಗುತ್ತಿದ್ದಂತೆಯೇ ಪಾಕ್ ತಂಡದ ಸಾಧನೆ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

ಯಾರೋ ಒಬ್ಬ ಆಟಗಾರ ಮದ್ದು ಸೇವಿಸಿದರೆ ಇಡೀ ಕ್ರಿಕೆಟ್‌ಗೆ ಕಳಂಕ ಅಂಟಿಕೊಳ್ಳುತ್ತದೆ. ಆಟಗಾರರು ಮದ್ದು ಸೇವಿಸಿ ಆಡುವುದು ಸಹಜ ಎನ್ನುವ ಭಾವನೆ ಕ್ರಿಕೆಟ್‌ ಪ್ರೇಮಿಗಳಲ್ಲಿ ಬಂದುಬಿಡುತ್ತದೆ. ಇದಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆ ವಹಿಸುವ ಕೆಲಸವನ್ನು ಐಸಿಸಿ ಮತ್ತು ಬಿಸಿಸಿಐ ಮಾಡಬೇಕಲ್ಲವೇ?

**

ಈಗ ಹೀಗೆ ನಡೆಯುತ್ತದೆ ಪರೀಕ್ಷೆ

ಭಾರತದ ಕ್ರಿಕೆಟ್‌ ಆಟಗಾರರ ಉದ್ದೀಪನ ಮದ್ದು ಪರೀಕ್ಷೆಯನ್ನು ಈಗ ಮದ್ದು ಪರೀಕ್ಷೆ ಹಾಗೂ ನಿರ್ವಹಣಾ ಆಯೋಗ (ಐಡಿಟಿಎಂ) ನೋಡಿಕೊಳ್ಳುತ್ತಿದೆ.

ಈ ಜವಾಬ್ದಾರಿಯನ್ನು ನಾಡಾಗೆ ಕೊಡಬೇಕು. ನಾಡಾದ ಪರೀಕ್ಷಾ ಅಧಿಕಾರಿಗಳೇ ಕ್ರಿಕೆಟಿಗರ ಮದ್ದು ಪರೀಕ್ಷೆ ಮಾಡಬೇಕು ಎಂದು ವಾಡಾ ಒತ್ತಾಯಿಸುತ್ತಿದೆ. ಕೇಂದ್ರ ಕ್ರೀಡಾ ಸಚಿವಾಲಯ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಆದರೆ ಆಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

‘ವಿಶ್ವದ ಎಲ್ಲಾ ಕ್ರೀಡೆಗಳು ಮತ್ತು ಕ್ರೀಡಾಪಟುಗಳು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಬೇಕು. ಆಯಾ ರಾಷ್ಟ್ರದ ಘಟಕಗಳು ಪರೀಕ್ಷೆ ಮಾಡಬೇಕು’ ಎಂದು ವಾಡಾ ಸ್ಪಷ್ಟವಾಗಿ ಹೇಳಿದೆ. ಬಿಸಿಸಿಐ ಇದಕ್ಕೆ ಒಪ್ಪದ ಹೋದರೇ ಭಾರತದಲ್ಲಿ ನಾಡಾದ ಮಾನ್ಯತೆಯನ್ನೇ ರದ್ದು ಮಾಡಬೇಕಾಗುತ್ತದೆ ಎಂದು ವಾಡಾ ಎಚ್ಚರಿಕೆ ನೀಡಿದೆ.

ಆಟಗಾರರ ವಿರೋಧವೇಕೆ?

ರಾಷ್ಟ್ರೀಯ ತಂಡಗಳಲ್ಲಿ ಆಡುವ ಕ್ರಿಕೆಟಿಗರು ಪ್ರತಿ ಮೂರು ತಿಂಗಳಿಗೊಮ್ಮೆ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆಟಗಾರರು ತಮ್ಮ ಚಲನವಲನಗಳ ಕುರಿತು ಸಮಗ್ರ ಮಾಹಿತಿಯನ್ನೂ ನಾಡಾಗೆ ನೀಡಬೇಕು. ಆದ್ದರಿಂದ ಆಟಗಾರರು ಮದ್ದು ಪರೀಕ್ಷೆಯನ್ನು ನಾಡಾ ವ್ಯಾಪ್ತಿಗೆ ಒಪ್ಪಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ವರ್ಷಪೂರ್ತಿ ಒಂದಲ್ಲಾ ಒಂದು ಕ್ರಿಕೆಟ್‌ ಟೂರ್ನಿಗಳು ಇದ್ದೇ ಇರುತ್ತವೆ. ನಿರಂತರ ಕಾರ್ಯಚಟುವಟಿಕೆಗಳ ನಡುವೆ ಸಮಯ ಸಿಗುವುದೇ ಕಡಿಮೆ. ಪರಿಸ್ಥಿತಿ ಹೀಗಿರುವಾಗ ನಾವು ಎಲ್ಲಿ ಇರುತ್ತೇವೆ. ಯಾವಾಗ ಬಿಡುವು ಇರುತ್ತದೆ ಎಂಬುದರ ಬಗ್ಗೆ ಮಾಹಿತಿ ಕೊಡಲು ಆಗುವುದಿಲ್ಲ. ಇದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂಬುದು ಕ್ರಿಕೆಟಿಗರ ವಾದ.

ವಾಡಾದ ನಿಯಮದ ಪ್ರಕಾರ ಪರೀಕ್ಷೆಗೆ ಒಳಗಾಗಲು ಒಬ್ಬ ಆಟಗಾರನಿಗೆ ಸಮಯ ನಿಗದಿ ಮಾಡಲಾಗಿರುತ್ತದೆ. ಸತತ ಮೂರು ಬಾರಿ ಪರೀಕ್ಷೆಗೆ ಒಳಗಾಗುವುದನ್ನು ತಪ್ಪಿಸಿದರೆ ಆತ ಮದ್ದು ಸೇವಿಸಿದ್ದಾನೆ ಎಂದು ವಾಡಾ ನಿರ್ಧರಿಸುತ್ತದೆ. ಟಿ–20 ಕ್ರಿಕೆಟ್‌ನ ಜಮೈಕಾದ ಪರಿಣತ ಆಟಗಾರ ಆ್ಯಂಡ್ರೆ ರಸೆಲ್‌ಗೆ ಇದೇ ಕಾರಣಕ್ಕೆ ಈಗ ಶಿಕ್ಷೆಗೆ ಗುರಿಯಾಗಿದ್ದಾರೆ.

ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದ್ದರೂ ಅವರು ಸತತ ಮೂರು ಸಲ ಗೈರಾಗಿದ್ದರು. ಪರಿಣಾಮ ಒಂದು ವರ್ಷ ನಿಷೇಧ ಶಿಕ್ಷೆ ಎದುರಿಸುತ್ತಿದ್ದಾರೆ. ಆಫ್ಘಾನಿಸ್ತಾನದ ಮೊಹಮ್ಮದ್‌ ಶೆಹ್ಜಾದ್‌ ಕೂಡ ಇದೇ ತಪ್ಪು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.