ADVERTISEMENT

ವಿಜಯಪುರದಿಂದ ಲಾರ್ಡ್ಸ್‌ ಅಂಗಳದವರೆಗೆ...

ಪ್ರಮೋದ ಜಿ.ಕೆ
Published 31 ಜುಲೈ 2017, 4:30 IST
Last Updated 31 ಜುಲೈ 2017, 4:30 IST
ರಾಜೇಶ್ವರಿ ಗಾಯಕವಾಡ್‌
ರಾಜೇಶ್ವರಿ ಗಾಯಕವಾಡ್‌   

‘ನಾನು ಆಡಿದ ಮೊದಲ ವಿಶ್ವಕಪ್‌ನಲ್ಲಿಯೇ ಭಾರತ ತಂಡ ಟ್ರೋಫಿ ಎತ್ತಿ ಹಿಡಿಯಬೇಕು ಎಂಬುದು ದೊಡ್ಡ ಕನಸಾಗಿತ್ತು. ಲೀಗ್‌ ಹಂತದಲ್ಲಿ ಅಂದುಕೊಂಡಂತೆಯೇ ಆಡಿದೆವು. ಫೈನಲ್‌ನಲ್ಲಿಯೂ ನಮ್ಮ ಯೋಜನೆ ಸರಿಯಾಗಿಯೇ ಇತ್ತು. ಆದರೆ ಅದೃಷ್ಟ ಇಂಗ್ಲೆಂಡ್‌ ಪರವಾಗಿತ್ತು. ಫೈನಲ್‌ನಲ್ಲಿ ಸೋತರೂ ನಮ್ಮ ಆಟದ ಬಗ್ಗೆ ಹೆಮ್ಮೆಯಿದೆ’... ಹೀಗೆ ಸಂತಸ ವ್ಯಕ್ತಪಡಿಸಿದ್ದು ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌.

ಮಹಿಳೆಯರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ ತಲುಪುವಲ್ಲಿ ವಿಜಯಪುರದ ರಾಜೇಶ್ವರಿ ಅವರ ಪಾತ್ರ ಮಹತ್ವದ್ದು. ಅದು ನ್ಯೂಜಿಲೆಂಡ್‌ ವಿರುದ್ಧದ ಕೊನೆಯ ಲೀಗ್‌ ಪಂದ್ಯ. ಆ ಪಂದ್ಯದಲ್ಲಿ ಗೆದ್ದರಷ್ಟೇ ಭಾರತ ಸೆಮಿಫೈನಲ್‌ ತಲುಪುತ್ತಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಮಿಥಾಲಿ ಬಳಗ 265 ರನ್‌ಗಳನ್ನು ಕಲೆ ಹಾಕಿ ಎದುರಾಳಿ ತಂಡವನ್ನು ಕೇವಲ 79 ರನ್‌ಗಳಿಗೆ ಕಟ್ಟಿ ಹಾಕಿತ್ತು. ಆ ಪಂದ್ಯದಲ್ಲಿ ಸ್ಪಿನ್‌ ಮೋಡಿ ಮಾಡಿದ್ದ ರಾಜೇಶ್ವರಿ ಪ್ರಮುಖ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.

ವಿಜಯಪುರದ ಪ್ರತಿಭೆ ರಾಜೇಶ್ವರಿ ಬಾಲ್ಯದಿಂದಲೇ ಜಾವಲಿನ್‌, ಡಿಸ್ಕಸ್‌ ಥ್ರೊ ಮತ್ತು ಥ್ರೋಬಾಲ್‌ ಕ್ರೀಡೆಗಳಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದರು. ಅವರ ತಂದೆ ಶಿವಾನಂದ ಗಾಯಕವಾಡ ಅವರು ಅಥ್ಲೆಟಿಕ್ಸ್‌ ಬಿಡಿಸಿ ಮಗಳಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ ಬೆಳೆಸಿದರು.

ADVERTISEMENT

ಅನಿರೀಕ್ಷಿತವಾಗಿ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟ ರಾಜೇಶ್ವರಿ, ವಿಶ್ವಕಪ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದರು. ‘ಈ ಬಾರಿಯ ಟೂರ್ನಿಗೆ ಕಠಿಣ ಅಭ್ಯಾಸ ಮಾಡಿದ್ದೆವು. ಆದ್ದರಿಂದ ಫೈನಲ್‌ ತಲುಪುವ ವಿಶ್ವಾಸವಿತ್ತು. ಅಂದುಕೊಂಡಂತೆ ಪ್ರಶಸ್ತಿ ಹಂತ ತಲುಪಿದೆವಾದರೂ ಕೊನೆಯಲ್ಲಿ ನಿರಾಸೆ ಕಾಡಿತು’ ಎಂದು ರಾಜೇಶ್ವರಿ ಬೇಸರ ವ್ಯಕ್ತಪಡಿಸಿದರು.

ತಿರುವು ನೀಡಿದ ದಿಟ್ಟ ನಿರ್ಧಾರ
ಕೆಎಸ್‌ಸಿಎ ರಾಯಚೂರು ವಲಯದ ನಿಮಂತ್ರಕರಾಗಿದ್ದ ಅಬ್ದುಲ್‌ ಹಕೀಂ ಅವರು ಉತ್ತರ ಕರ್ನಾಟಕದಲ್ಲಿ ಮಹಿಳಾ ಕ್ರಿಕೆಟ್‌ ಬೆಳೆಸಲು ವಿಜಯಪುರದಲ್ಲಿ ತರಬೇತಿ ಶಿಬಿರ ಆರಂಭಿಸಿದರು. ಆ ಶಿಬಿರದಲ್ಲಿ ದಾಖಲಾದ ಮೊದಲ ಹೆಸರೇ ರಾಜೇಶ್ವರಿ.

ರಾಜೇಶ್ವರಿ ಅವರು ಮೊದಲು ಎಡಗೈ ವೇಗದ ಬೌಲರ್‌ ಆಗಿದ್ದರು. ಉತ್ತಮ ವೇಗವಿತ್ತಾದರೂ ಎದುರಾಳಿ ಬ್ಯಾಟ್ಸ್‌ವುಮನ್‌ಗಳ ತಂತ್ರವನ್ನು ಅರಿತು ಬೌಲ್‌ ಮಾಡಲು ಬರುತ್ತಿರಲಿಲ್ಲ. ಆದ್ದರಿಂದ ಬೌಲಿಂಗ್‌ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡರು. ವೇಗಕ್ಕೆ ವಿದಾಯ ಹೇಳಿ ಸ್ಪಿನ್ನರ್‌ ಆಗಿ ಬದಲಾದರು. ಈ ಒಂದು ಅಂಶ ಅವರ ಕ್ರಿಕೆಟ್‌ ಬದುಕಿನ ಅನೇಕ ತಿರುವುಗಳಿಗೆ ಕಾರಣವಾಯಿತು.

‘ಭಾರತ ತಂಡದಲ್ಲಿ ಸ್ಪಿನ್ನರ್‌ಗಳಿಗೆ ಈಗ ಹೆಚ್ಚು ಬೇಡಿಕೆಯಿದೆ. ಆದ್ದರಿಂದ ರಾಜೇಶ್ವರಿಗೆ ಅವಕಾಶಗಳು ಸಿಗುತ್ತಿವೆ. ಬೌಲಿಂಗ್‌ನಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು ಮಾಡಿದ್ದ ಸ್ಪಿನ್‌ ಮೋಡಿಯೇ ಇದಕ್ಕೆ ಸಾಕ್ಷಿ’ ಎಂದು ಬಾಲ್ಯದ ಕೋಚ್‌ಗಳಲ್ಲಿ ಒಬ್ಬರಾದ ಪ್ರೊ. ಅಶೋಕ ಜಾಧವ ನೆನಪಿಸಿಕೊಂಡಿದ್ದಾರೆ.

‘ರಾಜೇಶ್ವರಿ ಒಂಬತ್ತನೇ ತರಗತಿ ಓದುತ್ತಿದ್ದಾಗ ವೃತ್ತಿಪರ ತರಬೇತಿ ಆರಂಭಿಸಿದಳು. ಮೊದಲು ಫಿಟ್‌ನೆಸ್ ಬಗ್ಗೆ ತರಬೇತಿ ಕೊಡುತ್ತಿದ್ದೆವು. 19 ವರ್ಷದ ಒಳಗಿನವರ ರಾಜ್ಯ ಟೂರ್ನಿಯಲ್ಲಿ ವೇಗದ ಬೌಲರ್‌ ಆಗಿದ್ದರು. ಸ್ಪಿನ್ನರ್‌ ಆದ ನಂತರ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದಳು’ ಎಂದು ಇಜೇರಿ ಅಕಾಡೆಮಿಯ ಕಾರ್ಯದರ್ಶಿ ಬಸವರಾಜ ಇಜೇರಿ ಹೇಳಿದರು.

ಮಹಿಳಾ ಕ್ರಿಕೆಟ್‌ಗೆ ಹೆಚ್ಚು ಸೌಲಭ್ಯಗಳು ಇಲ್ಲದ ಗೊಮ್ಮಟನಗರಿಯಿಂದ ಬಂದ ರಾಜೇಶ್ವರಿ ಈಗ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಒಂದು ಟೆಸ್ಟ್‌, 30 ಏಕದಿನ ಮತ್ತು 13 ಅಂತರರಾಷ್ಟ್ರೀಯ ಟಿ–20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಮೊದಲ ವಿಶ್ವಕಪ್‌ನಲ್ಲಿಯೇ ಭಾರತೀಯರ ಮನಸ್ಸು ಗೆದ್ದಿದ್ದಾರೆ. ವಿಜಯಪುರದಿಂದ ಕ್ರಿಕೆಟ್‌ ಬದುಕು ಆರಂಭಿಸಿದ ಕರ್ನಾಟಕದ ಆಟಗಾರ್ತಿ ಐತಿಹಾಸಿಕ ಲಾರ್ಡ್ಸ್‌ ಅಂಗಳದವರೆಗೆ ಬೆಳೆದ ಪರಿ ಎಲ್ಲರಿಗೂ ಸ್ಫೂರ್ತಿ.

‘ಹೆಮ್ಮೆ ಮೂಡಿಸಿದ ಸಾಧನೆ’
ರಾಜೇಶ್ವರಿ ಬಾಲ್ಯದಿಂದಲೇ ಒಂದಿಲ್ಲೊಂದು ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಕ್ರಿಕೆಟ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡುತ್ತಾ ಹಂತಹಂತವಾಗಿ ಮೇಲಕ್ಕೇರಿದಾಗ ಕುಟುಂಬದ ಬೆಂಬಲ ಇದ್ದೇ ಇತ್ತು. ಟಿವಿಯಲ್ಲಿ ವಿಶ್ವಕಪ್‌ನ ಪಂದ್ಯಗಳನ್ನು ನೋಡಿದೆ. ಪ್ರಶಸ್ತಿ ಗೆಲ್ಲದಿದ್ದರೂ ಭಾರತ ತಂಡದ ಸಾಧನೆಯ ಬಗ್ಗೆ ಹೆಮ್ಮೆಯಿದೆ. ತಂಡದಲ್ಲಿ ನನ್ನ ಮಗಳೂ ಇದ್ದಳು ಎನ್ನುವುದೇ ವಿಶೇಷ.
-ಸವಿತಾ ಗಾಯಕವಾಡ್‌, ರಾಜೇಶ್ವರಿ ತಾಯಿ

*
‘ಅಕ್ಕನ ಸಾಧನೆಯೇ ಸ್ಫೂರ್ತಿ’
ಅಕ್ಕ ಹಾಗೂ ನಾನು ಇಬ್ಬರೂ ಸ್ಪಿನ್ನರ್‌ಗಳು. ಒಂದು ಬದಿಯಿಂದ ನಾನು, ಇನ್ನೊಂದು ತುದಿಯಿಂದ ಅವಳು ಬೌಲಿಂಗ್‌ ಮಾಡುತ್ತಿದ್ದೆವು. ವಿಜಯಪುರದಲ್ಲಿ ಕ್ರಿಕೆಟ್ ತರಬೇತಿಗೆ ಮೊದಲು ನಾವು ಒಟ್ಟಿಗೆ ಸೇರಿಕೊಂಡೆವು. ಮನೆಯ ಬಳಿ ಟೆನಿಸ್‌ ಚೆಂಡಿನಿಂದ ಆಡುತ್ತಿದ್ದೆವು. 19 ವರ್ಷದ ಒಳಗಿನವರ ರಾಜ್ಯ ಮತ್ತು ವಲಯವಾರು ಟೂರ್ನಿಯಲ್ಲಿ ಒಟ್ಟಿಗೆ ಆಡಿದ್ದೇವೆ. ಆಡಲು ಆರಂಭಿಸಿದ ದಿನಗಳನ್ನು ನೆನಪಿಸಿಕೊಂಡರೆ ಮಹಿಳಾ ಕ್ರಿಕೆಟ್‌ಗೆ ಇಷ್ಟೊಂದು ಮಹತ್ವ ಲಭಿಸುತ್ತದೆ, ಎಲ್ಲರೂ ನಮ್ಮನ್ನು ಗುರುತಿಸುತ್ತಾರೆ ಅಂದುಕೊಂಡಿರಲಿಲ್ಲ. ನನ್ನ ಮುಂದಿನ ಬದುಕಿಗೆ ಅಕ್ಕನ ಸಾಧನೆಯೇ ಸ್ಫೂರ್ತಿ.
-ರಾಮೇಶ್ವರಿ ಗಾಯಕವಾಡ, ರಾಜೇಶ್ವರಿ ಸಹೋದರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.