ADVERTISEMENT

ಗೂಗಲ್‌ ‘ಸ್ಪರ್ಶಸಂವೇದಿ ವಸ್ತ್ರ’

​ಪ್ರಜಾವಾಣಿ ವಾರ್ತೆ
Published 9 ಜೂನ್ 2015, 19:30 IST
Last Updated 9 ಜೂನ್ 2015, 19:30 IST

ತಂತ್ರಜ್ಞಾನದ ಈ ಜಗತ್ತು ಊಹೆಗೂ ಮೀರಿ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ದಿನ ದಿನಕ್ಕೂ ಹೊಸ ಬಗೆಯ ಸಂಶೋಧನೆಗಳು, ಪ್ರಯೋಗಗಳು ಹಾಗೂ ಅನ್ವೇಷಣೆಗಳು ಮನುಷ್ಯನ ಹುಬ್ಬೇರಿಸುವಂತೆ ಮಾಡುತ್ತಿವೆ. ಇದೇ ರೀತಿಯ ಹೊಸದೊಂದು ಪ್ರಯೋಗಕ್ಕೆ ತಂತ್ರಜ್ಞಾನ ದೈತ್ಯ ಸಂಸ್ಥೆ ‘ಗೂಗಲ್’ ಕೈ ಹಾಕಿದೆ.

ನಾವು ಧರಿಸಿರುವ ಬಟ್ಟೆಯ ಮೇಲೆ ಹಾಗೆ ಕೈಯಾಡಿಸಿ ನಮ್ಮ ಸ್ಮಾರ್ಟ್‌ಫೋನ್‌ ಆಪರೇಟ್‌ ಮಾಡುವಂತಹ ‘ಟಚ್ ಸ್ಕ್ರೀನ್ ಕ್ಲಾತ್‌’, ಅಂದರೆ ಸ್ಪರ್ಶ ಸಂವೇದಿ ವಸ್ತ್ರವನ್ನು ಗೂಗಲ್ ಅಭಿವೃದ್ಧಿ ಪಡಿಸುತ್ತಿದೆ!

ಹೌದು, ಸ್ಪರ್ಶಪರದೆ ‌ ಮೇಲೆ ಬೆರಳಾಡಿಸಿದರೆ ಮಾತ್ರವೇ ಕಾರ್ಯನಿರ್ವಹಿಸುವ ಈಗಿನ ಸ್ಮಾರ್ಟ್‌ಫೋನ್‌ಗಳು, ಗೂಗಲ್‌ನ ಈ ಹೊಸ ತಂತ್ರಜ್ಞಾನ ಅಭಿವೃದ್ಧಿಯಾದ ನಂತರ ಯಾವ ರೂಪ ಪಡೆದುಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಲಂಡನ್‌ನಲ್ಲಿರುವ ಗೂಗಲ್‌ನ ‘ಅಡ್ವಾನ್ಸ್ಡ್‌ ಟೆಕ್ನಾಲಜಿ ಆ್ಯಂಡ್ ಪ್ರಾಜೆಕ್ಟ್ಸ್’(ಎಟಿಎಪಿ) ಪ್ರಯೋಗಾಲಯದಲ್ಲಿ ‘ಟಚ್‌ ಸ್ಕ್ರೀನ್‌ ಕ್ಲಾತ್‌’ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.

ಮಾಮೂಲಿಯಂತೆಯೇ ನೇಯ್ಗೆ ಮಾಡಿರುವ ಅತ್ಯುತ್ತಮ ಗುಣಮಟ್ಟದ ಶರ್ಟ್‌, ಪ್ಯಾಂಟ್‌, ಜಾಕೆಟ್ ಅಥವಾ ಕೋಟ್‌ಗೆ ಸ್ಮಾರ್ಟ್‌ಟಚ್‌ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ನಂತರ ಶರ್ಟ್‌ನ ಒಂದು ಭಾಗದಲ್ಲಿ ಮೆಮೊರಿ ಕಾರ್ಡ್‌ (ಸ್ಮರಣಕೋಶದ ಬಿಲ್ಲೆ) ಗಾತ್ರದ  ಸಾಧನವೊಂದನ್ನು ಅಳವಡಿಸಲಾಗುತ್ತದೆ. ಈ ಸಾಧನವು ನಾವು ತೊಟ್ಟಿರುವ ಯಾವುದೇ  ಬಗೆಯ ಬಟ್ಟೆಯು ಸ್ಮಾರ್ಟ್‌ ಟಚ್‌ ನಿಯಂತ್ರಕದಂತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಇದರ ಮೂಲಕ ನಾವು ಕುಳಿತಿರುವ ಕುರ್ಚಿ ಅಥವಾ ಮಲಗಿರುವ ಮಂಚದ ಪಕ್ಕ ಇಟ್ಟುಕೊಳ್ಳುವ ಸ್ಮಾರ್ಟ್‌ಫೋನನ್ನು ಶರ್ಟ್‌ನ ಮೇಲೆ ಬೆರಳಾಡಿಸುವ ಮೂಲಕವೇ ಆಪರೇಟ್‌ ಮಾಡಬಹುದು. ಕರೆ ಮಾಡುವುದು, ಸ್ವೀಕರಿಸುವುದು ಸೇರಿದಂತೆ ಹಲವು ಬಗೆಯ ಆಪರೇಟಿಂಗ್ ವ್ಯವಸ್ಥೆಯನ್ನೂ ಈ ಸ್ಪರ್ಶವಸ್ತ್ರದ ತಂತ್ರಾಂಶ ಒಳಗೊಂಡಿರಲಿದೆ.

ಗೂಗಲ್‌ನ ಈ ನೂತನ  ಟಚ್ ಸ್ಕ್ರೀನ್‌ ಕ್ಲಾತ್‌ ತಂತ್ರಜ್ಞಾನದ ಮೂಲಕ ಫಿಲಿಪ್ಸ್‌ ಹ್ಯೂ ದೀಪಗಳನ್ನು ನಿಯಂತ್ರಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಅದರಲ್ಲಿ ಈ ತಂತ್ರಜ್ಞಾನ ಬಹುತೇಕ ಯಶಸ್ವಿಯಾಗಿದೆ ಎಂದು ‘ಗಿಜ್‌ಮಾಗ್’ ನಿಯತಕಾಲಿಕೆ ವರದಿ ಮಾಡಿದೆ.

ಈಗಿನ್ನೂ ಅಭಿವೃದ್ಧಿ ಹಂತದಲ್ಲಿರುವ ಈ ತಂತ್ರಜ್ಞಾನ ಮುಂದೆ ಹೇಗೆ ಬಳಕೆಗೆ ಬರಲಿದೆ ಎಂಬ ಗುಟ್ಟನ್ನು ಇನ್ನೂ ಬಿಟ್ಟು ಕೊಡದ ಗೂಗಲ್ ಸಂಸ್ಥೆ, ತನ್ನ ಈ ಯೋಜನೆಯ ಸಹಭಾಗಿತ್ವ  ಅತ್ಯುತ್ತಮ ಗುಣಮಟ್ಟದ ಡೆನಿಮ್ ಲೆವಿಸ್‌ ಬ್ರಾಂಡ್‌ನೊಂದಿಗೆ ಮುಂದುವರಿಯಲಿದೆ ಎಂದು ಹೇಳಿದೆ.

ಆ ಮೂಲಕ, ಡೆನಿಮ್ ಲೆವಿಸ್‌ ಬ್ರಾಂಡ್‌ನ ಸ್ಮಾರ್ಟ್ ಟಚ್‌ ಬಟ್ಟೆಗಳು ಭವಿಷ್ಯದಲ್ಲಿ ಮಾರುಕಟ್ಟೆಗೆ ಬರಲಿವೆ. ಕಣ್ಣಿಗೆ ಕಾಣದಂತಿರುವ ಈ ಆಪರೇಟಿಂಗ್ ವ್ಯವಸ್ಥೆ ಹೊಂದಿರುವ ಇವುಗಳ ಮೂಲಕ, ಕರೆ ಮಾಡುವುದು, ಸ್ವೀಕರಿಸುವುದು, ಸಂದೇಶ ಕಳುಹಿಸುವುದು, ಮನೆಯಲ್ಲಿರುವ ಸ್ಮಾರ್ಟ್‌ ಲೈಟ್‌ಗಳನ್ನು ಅಡ್ಜಸ್ಟ್‌ ಮಾಡುವುದು...

ಹೀಗೆ ಹಲವು ಬಗೆಯಲ್ಲಿ ನಾವು ಧರಿಸಿರುವ ಬಟ್ಟೆಯ ಮೂಲಕವೇ ಸ್ಮಾರ್ಟ್‌ಫೋನನ್ನು ಆಪರೇಟ್‌ ಮಾಡುವ ದಿನಗಳು ದೂರವಿಲ್ಲ ಎಂಬುದನ್ನು ಗೂಗಲ್‌ನ ಈ ಯತ್ನ ಖಚಿತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.