ADVERTISEMENT

ಅಜ್ಜನ ಊರಿನಲ್ಲಿ ಶ್ರಾವಣ ಆಚರಣೆ

ಶಿವರಾಜ್.ಆರ್
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ಶ್ರಾವಣ ಎಂದರೆ ನನಗೆ ನನ್ನಜ್ಜನ ಊರು ಕಣ್ಣ ಮುಂದೆ ಬರುತ್ತದೆ. ಆಗಿನ್ನು ನಾನು ಚಿಕ್ಕ ಹುಡುಗ. ಶಾಲೆ ಪ್ರಾರಂಭವಾಗುತ್ತಿದ್ದುದು ಜುಲೈ ಕೊನೆ ವಾರದಲ್ಲಿ. ನಾವು ರಜೆಗೆಂದು ಊರಿಗೆ ಹೋದರೆ ಶ್ರಾವಣವನ್ನು ಕಳೆಯುತ್ತಿದ್ದುದು ಅಲ್ಲಿಯೇ. ರಜೆಯನ್ನು ಮೋಜು ಮಸ್ತಿಯಲ್ಲಿ ಕಳೆಯುತ್ತಿದ್ದ ನಮಗೆ ಶ್ರಾವಣ ಪ್ರಾರಂಭವಾದೊಡನೆ ಖುಷಿ ಬೇಜಾರು ಎರಡೂ ಅಗುತ್ತಿತ್ತು.

ಶ್ರಾವಣದಲ್ಲಿ ಬೇಗ ಏಳಬೆಕಿತ್ತು. ಅದು ನಮಗೆ ಕಿರಿಕಿರಿ. ಬೇಗ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಬಂದರೇನೆ ನಮ್ಮ ಹೊಟ್ಟೆ ಅನ್ನ ಕಾಣುತ್ತಿತ್ತು. ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಮನೆಯನ್ನು ಶುಚಿಗೊಳಿಸಿ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದರು. ಶ್ರಾವಣದಲ್ಲಿ ನಮಗೆ ಎಲ್ಲಿಲ್ಲದ ಖುಷಿ. ಆ  ಮಾಸದಲ್ಲಿ ತರಹೇವಾರಿ ತಿಂಡಿಗಳನ್ನು ಮಡುತ್ತಿದ್ದರು. ಆಟ ಅಡುತ್ತ ಒಂದೊಂದೆ ತಿಂಡಿಗಳನ್ನು ತಿನ್ನುವುದು, ಕರ್ಚಿಕಾಯಿ, ಚಕ್ಕುಲಿ, ಕಾಯಿಹೋಳಿಗೆ, ಗಾರಿಗೆ, ಶಂಕರಪಾಳ್ಯ ಇವನ್ನೆಲ್ಲ ಕದ್ದು ಬೇರೆಕಡೆ ಮುಚ್ಚಿಟ್ಟುಕೊಂಡು ಸ್ವಲ್ಪ ಸ್ವಲ್ಪವೇ ತಿನ್ನುತ್ತಿದ್ದೆವು.

ಶ್ರಾವಣದಲ್ಲಿ ಬರುವ ನಾಗರ ಪಂಚಮಿ ಮರೆಯಲಾರದ ನೆನಪು. ಎಲ್ಲರೂ ಬೇಗ ಎದ್ದು ಸ್ನಾನ ಮುಗಿಸಿ ಪೂಜೆಯ ಸಾಮಾನು ಸಿದ್ಧಮಾಡಿ ಕಡಲೆಕಾಳು, ಹೆಸರುಕಾಳು, ಮಡಕೆಕಾಳು, ತಂಬಿಟ್ಟು ಎಲ್ಲವನ್ನೂ ಪ್ರಸಾದವಾಗಿ ಮಾಡುತ್ತಿದ್ದರು. ಅವತ್ತು ಕಾಳುಗಳನ್ನು ಬಿಟ್ಟು ಅನ್ನವಾಗಲೀ, ಬೇರೆ ಯಾವುದೇ ಪದಾರ್ಥವನ್ನು ಮಾಡುತ್ತಿರಲಿಲ್ಲ. ಎಲ್ಲರೂ ಊರ ಹೊರಗಿನ ಹುತ್ತಕ್ಕೆ ‘ದೇವರ ಪಾಲು.. ದಿಂಡರ ಪಾಲು..’ ಎಂದು ಹಾಲು ಹಾಕಿ ಹೊಲಕ್ಕೆ ಓಡುತ್ತಿದ್ದೆವು. ಶ್ರಾವಣದ ಪಂಚಮಿಯಲ್ಲಿ ಜೋಕಾಲಿ ಆಡುವುದು ರೂಢಿ. ನಾವು ಪೈಪೋಟಿಯಲ್ಲಿ ಜೀಕುತ್ತಿದ್ದೆವು. ಹೀಗೆ ಜೀಕುವಾಗ ಆಯತಪ್ಪಿ ಮುಗ್ಗರಿಸಿ ಬಿದ್ದು, ಮಂಡಿ ಕಿತ್ತು ಎರಡು ದಿನ ಓಡಾಡದ ಹಾಗಾಗಿದ್ದು ಇನ್ನು ಕಣ್ಣ ಮುಂದೆ ಕಟ್ಟಿದಂತಿದೆ.

ಶ್ರಾವಣದಲ್ಲಿ ಬರುವ ಲಕ್ಷ್ಮಿಹಬ್ಬದಲ್ಲಿ ನಮ್ಮದೆ ಓಡಾಟ. ಪೂಜೆ ಸಾಮಾನು ತರುವುದು, ಜೋಡಿಸುವುದು, ಬಾಳೆಎಲೆ, ಬಾಳೆಕಂಬ ಹೀಗೆ ಎಲ್ಲ ತಯರಿಯಲ್ಲಿ ನಾವೇ ಮುಂದೆ. ಅಂದು ಸಂಜೆ ಮನೆಮನೆಗೆ ಹೋಗಿ ಮುತ್ತೈದೆಯರನ್ನು ಕರೆಯಬೇಕದ್ದು ನಮ್ಮ ಪಾಲಿಗೆ ಬರುತ್ತಿದ್ದ ಇನ್ನೊಂದು ಕೆಲಸ. ತಿಂಡಿ ಸಿಗುವುದಲ್ಲಾ ಎಂದು ಮನೆಗಳಿಗೆ ಓಡಾಡುತ್ತಿದ್ದೆವು. ಶ್ರಾವಣ ಬಂದರೆ ಎಲ್ಲರೊಡನೆ ಸೇರಿ ಹಬ್ಬ ಅಚರಿಸುವ, ಅತ್ತೆ ಮಕ್ಕಳೊಂದಿಗೆ ಜೋಕಾಲಿ ಆಡುವ ಖುಷಿ ನೆನಪಿನ ಪುಟದಲ್ಲಿ ಅಚ್ಚೊತ್ತಿದೆ. ಈಗ ಆ ಶ್ರಾವಣದ ದಿನಗಳು ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.