ADVERTISEMENT

‘‘ಅಮ್ಮನಿಗೇ ನಾನೇ ಅಮ್ಮನಾಗಿದ್ದೆ...

ನಿಸರ್ಗ ಎಚ್.ಮಲ್ಲಿಗೆರೆ
Published 12 ಏಪ್ರಿಲ್ 2017, 19:30 IST
Last Updated 12 ಏಪ್ರಿಲ್ 2017, 19:30 IST
ರಶ್ಮಿಕಾ ಮಂದಣ
ರಶ್ಮಿಕಾ ಮಂದಣ   

* ಸಾನ್ವಿ ಮತ್ತು ರಶ್ಮಿಕಾ ಸ್ವಭಾವದ ಸಾಮ್ಯತೆ–ವ್ಯತ್ಯಾಸದ ಬಗ್ಗೆ ಹೇಳಿ?
ಸಾನ್ವಿ ಮತ್ತು ರಶ್ಮಿಕಾ ನಡುವೆ ಹೆಚ್ಚೇನೂ ವ್ಯತ್ಯಾಸ ಇಲ್ಲ. ಇಬ್ಬರೂ ಮೌನವನ್ನೇ ಪ್ರೀತಿಸುವವರು. ಹೆಚ್ಚು ಮಾತು ನನಗೆ ಇಷ್ಟ ಇಲ್ಲ. ನನ್ನಷ್ಟಕ್ಕೆ ನಾನಿರಲು ಬಯಸುತ್ತೇನೆ. ನಟಿಸಿದ ಮೊದಲ ಚಿತ್ರದಲ್ಲಿ ನನ್ನ ಸ್ವಭಾವಕ್ಕೆ ತಕ್ಕ ಪಾತ್ರ ಸಿಕ್ಕಿತು. ಅದೇ ಖುಷಿಯ ವಿಚಾರ.

* ನೀವು ಶಿಸ್ತಿನ ಸಿಪಾಯಿಯಂತೆ?
ನಾನು ಓದಿದ್ದೆಲ್ಲ ಹಾಸ್ಟೆಲ್‌ನಲ್ಲಿ. ಅಲ್ಲಿ ಹೆಚ್ಚು ಶಿಸ್ತು ಕಲಿಸಿದರು. ಅದೇನೋ ಗೊತ್ತಿಲ್ಲ– ಅದೇ ಜೀವನಶೈಲಿ ಅಭ್ಯಾಸವಾಗಿಹೋಯ್ತು. ಸ್ವಭಾವತಃ ನಾನು ಮೌನಿಯೋ ಅಥವಾ ಹಾಸ್ಟೆಲ್‌ ಪ್ರಭಾವದಿಂದ ಮಾತು ಕಡಿಮೆಯಾಯಿತೋ ಗೊತ್ತಿಲ್ಲ. ಕಾಲೇಜಿನಲ್ಲೂ ಸೈಲೆಂಟ್ ಆಗಿದ್ದೆ. ಆದರೆ  ಕಾರ್ಯಕ್ರಮ ಇದ್ದಾಗ  ಭಾಗವಹಿಸುತ್ತಿದ್ದೆ, ಡಾನ್ಸ್ ಮಾಡುತ್ತಿದ್ದೆ. ಚಟುವಟಿಕೆಯಿಂದ ಇರುತ್ತಿದ್ದೆ.

* ನಿಮ್ಮ ಕನಸಿನ ಹುಡುಗ ಹೇಗಿರಬೇಕು?
ಡ್ರೀಮ್‌ ಬಾಯ್‌, ನನ್ನನ್ನು ತುಂಬಾ ಪ್ರೀತಿಸಬೇಕು, ಕಾಳಜಿ ವಹಿಸಬೇಕು. ನನ್ನ ಕುಟುಂಬ ಅವನಿಗೆ ಇಷ್ಟ ಆಗಬೇಕು. ಹೀಗೆ ಪಟ್ಟಿ ತುಂಬಾ ದೊಡ್ಡದಿದೆ.

ADVERTISEMENT

* ನಿಮಗೆ ಅತ್ಯಂತ ಖುಷಿ ಕೊಟ್ಟ ಗಳಿಗೆ ಯಾವುದು?
ನನ್ನ ತಂಗಿ ಹುಟ್ಟಿದಾಗ! ನಾನಾಗ ಪಿಯುಸಿ ಓದುತ್ತಿದ್ದೆ. ನಾನೀಗ ಅವಳ ಎರಡನೇ ಅಮ್ಮ. ನಾನು ಮನೆಯಲ್ಲಿರುವಾಗ ನನ್ನೊಟ್ಟಿಗೆ ಇರುತ್ತಾಳೆ. ನನ್ನ ಮಾತು ಹೊರತಾಗಿ ಯಾರ ಮಾತೂ ಕೇಳುವುದಿಲ್ಲ. ಅದು ಖುಷಿ ಕೊಡುತ್ತದೆ. ಅಮ್ಮ ಸಹ ಅದನ್ನೇ ಹೇಳುತ್ತಾರೆ. ಅವಳಿಗೆ ಊಟ ತಿನ್ನಿಸುವುದು, ಮಲಗಿಸುವುದು, ಅವಳೊಟ್ಟಿಗೆ ಸಮಯ ಕಳೆಯುವುದು ಒಂಥರಾ ಚೆನ್ನಾಗಿ ಅನ್ನಿಸುತ್ತೆ. ಅವಳು ಅಮ್ಮನ ಹೊಟ್ಟೆಯಲ್ಲಿದ್ದಾಗಲೂ ಅಷ್ಟೇ. ನನ್ನಮ್ಮನಿಗೆ ನಾನೇ ಅಮ್ಮನಾಗಿಬಿಟ್ಟಿದ್ದೆ.

* ಕನ್ನಡದಲ್ಲಿ ನಿಮ್ಮ ನೆಚ್ಚಿನ ನಟ-ನಟಿ ಯಾರು?
ಪುನೀತ್, ರಕ್ಷಿತ್, ಯಶ್, ನಟಿ ಕೃತಿ ಕರಬಂಧ. ಕೃತಿ ಅವರ ಸ್ಟೈಲ್ ನನಗಿಷ್ಟ.

* ಸಾನ್ವಿಯ ಉಡುಗೆ-ತೊಡುಗೆ, ಕನ್ನಡಕಕ್ಕೆ ಹುಡುಗರು ಫಿದಾ ಆಗಿದ್ದಾರಲ್ಲ?
ಖುಷಿ ಆಗುತ್ತೆ. ನಾನು ಸಲ್ವಾರ್, ಕುರ್ತಾ, ಸ್ಕರ್ಟ್‌ಗಳನ್ನೇ ಪ್ರತಿದಿನ ಬಳಸುತ್ತೇನೆ. ನಮ್ಮ ಉಡುಗೆ ನಮಗೆ ಆರಾಮ ಅನ್ನಿಸುವಂತಿರಬೇಕು. ಇನ್ನು ಸಿನಿಮಾದಲ್ಲಿ ಹಾಕಿದ್ದ ಆ ಕನ್ನಡಕ ನನಗೂ ಬಹಳ ಇಷ್ಟ. ಇದು ಹುಡುಗಿಯರಿಗೆ ಹಾಗೂ ಹುಡುಗರಿಗೂ ತುಂಬಾ ಇಷ್ಟ ಆಗಿದೆಯಂತೆ. ಅದನ್ನು ತುಂಬಾ ಜನ ಅನುಸರಿಸುತ್ತಿರುವುದು ನೋಡಿ ಖುಷಿ ಅನ್ನಿಸಿತು.

* 2014ರ ‘ಫ್ರೆಶ್ ಫೇಸ್ ಆಫ್ ಇಂಡಿಯಾ’ ಆಗಿದ್ದಿರಂತೆ? ಆ ಅನುಭವ ಹೇಗಿತ್ತು?
ಅದನ್ನು ಮರೆಯೋಕೆ ಆಗೊಲ್ಲ. ಪ್ರತೀ ಹಂತದಲ್ಲಿ ಆಯ್ಕೆ ಆಗಿ ಮುಂದೆ ಸಾಗುವಾಗ ಆತ್ಮವಿಶ್ವಾಸ ಇಮ್ಮಡಿಯಾಗುತ್ತಿತ್ತು. ಬೆಂಗಳೂರಿನಲ್ಲಿ ಆಯ್ಕೆ ಆದಾಗ ಉಪೇಂದ್ರ ಮತ್ತು ಕೃತಿ ಕರಬಂಧ ಅವರಿಂದ ಬಹುಮಾನ ಪಡೆದೆ. ಆಲ್ ಇಂಡಿಯಾ ಹಂತದಲ್ಲಿ ಅಕ್ಷಯ್ ಕುಮಾರ್ ಅವರು ಬಂದಿದ್ದರು. ನಂತರ ಜಾನ್ಸನ್ ಅಂಡ್ ಜಾನ್ಸನ್ ಕ್ಲಿಯರ್ ಕ್ರಿಮ್‌ಗೆ ಆ ವರ್ಷ ರಾಯಭಾರಿ ಆಗಿದ್ದೆ. 

* ಮಾಡೆಲಿಂಗ್–ನಟನೆ, ಎರಡರಲ್ಲಿ ನಿಮಗೆ ಯಾವುದು ಇಷ್ಟ?
ಮಾಡೆಲಿಂಗ್ ನನಗೆ ಕಷ್ಟ. ನಟನೆಯೇ ಹೆಚ್ಚು ಇಷ್ಟ. ಆದ್ದರಿಂದ ಇಲ್ಲೇ ನನ್ನ ದಾರಿಯನ್ನು ಕಂಡುಕೊಳ್ಳುತ್ತೇನೆ.

* ‘ಕಿರಿಕ್‌ ಪಾರ್ಟಿ’ ಚಿತ್ರತಂಡ ನೀವು ಬಾಯ್ತೆರೆದರೆ ನಗುತ್ತಿದ್ದರಂತೆ?
ಚಿತ್ರೀಕರಣ ಸಂದರ್ಭದಲ್ಲಿ ಪ್ರತಿದಿನ ನಮ್ಮ ತಮಾಷೆ–ತುಂಟತನ ಇದ್ದೇಇತ್ತು. ನನ್ನ ಕನ್ನಡವೇ ಸೆಟ್‌ನಲ್ಲಿ ಒಂದು ಫನ್ನಿ ಸಂಗತಿಯಾಗಿತ್ತು. ನಾನು ಬಾಯ್ತೆರೆದರೆ ನಗುತ್ತಿದ್ದರು. ಅದೊಂದು ಸುಂದರವಾದ ತಂಡ.

* ಸಿನಿಮಾಗೆ ಅಪ್ಪ–ಅಮ್ಮನ ಪ್ರೋತ್ಸಾಹ ಹೇಗಿದೆ?
ಎಲ್ಲರೂ ಫುಲ್ ಖುಷ್. ಅಪ್ಪ-ಅಮ್ಮ ನನಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ನಟನೆಯಲ್ಲಿ ಮುಂದುವರಿಯುವುದರ ಕುರಿತು ಕುಟುಂಬದವರ ಯಾವುದೇ ತಕರಾರಿಲ್ಲ.

* ನಿಮ್ಮ ಮುಂದಿನ ಸಿನಿಮಾಗಳು ಯಾವುವು?
ಸದ್ಯ ಪುನೀತ್, ಗಣೇಶ್ ಜೊತೆ ಅಭಿನಯಿಸುತ್ತಿದ್ದೇನೆ. ಪುನೀತ್ ಅವರ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ. ಅವರು ನನಗೆ ಬಹಳ ವರ್ಷಗಳಿಂದ ಪರಿಚಿತರೇನೋ ಅನಿಸುತ್ತದೆ.

* ಫ್ಯಾಷನ್‌ ವಿಷಯದಲ್ಲಿ ನಿಮಗೆ ಇಷ್ಟವಾಗುವವರು ಯಾರು?
ಪ್ರತಿಯೊಬ್ಬರೂ ತಮ್ಮದೇ ಸ್ಟೈಲ್ ಹೊಂದಿದ್ದಾರೆ. ಆದರೆ ಅಲಿಯಾ ಭಟ್, ಶ್ರುತಿ ಹರಿಹರನ್, ಸುದೀಪ್, ರಣಧೀರ್ ಕಪೂರ್ ಅವರ ನಟನೆ, ಆಂಗಿಕ ಅಭಿನಯ, ಡ್ರೆಸ್ ಸೆನ್ಸ್ ಚೆನ್ನ ಅನಿಸುತ್ತೆ.

* ‘ಕಿರಿಕ್ ಪಾರ್ಟಿ’ಯ ನಂತರ ಜನರ ಪ್ರತಿಕ್ರಿಯೆ ಹೇಗಿದೆ?
ಜನರು ನನ್ನನ್ನು ಸಾನ್ವಿ ಜೋಸೆಫ್‌ ಆಗಿಯೇ ಗುರುತಿಸಿ ಮಾತನಾಡಿಸುತ್ತಾರೆ. ಫೋಟೊ ತೆಗೆಸಿಕೊಳ್ಳುತ್ತಾರೆ.
ಸಂತೋಷ ಆಗುತ್ತೆ.

*   ಕನಸಲ್ಲೇ ಹುಡುಗರಿಗೆ ಕಚಗುಳಿ ಕೊಡುವಿರಲ್ಲ?
ಆ ಹಾಡು ನನಗೆ ತುಂಬಾ ಇಷ್ಟ. ಸೆಟ್‌ನಲ್ಲೂ ಆ ಸಾಲುಗಳನ್ನೇ ಗುನುಗಿ ರೇಗಿಸುತ್ತಿದ್ದರು. ನಾವೆಲ್ಲ ಬ್ರೇಕ್‌ ಸಿಕ್ಕಾಗ ಇದೇ ಹಾಡನ್ನೇ ಹಾಡುತ್ತಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.