ADVERTISEMENT

ಆಧುನಿಕ ಕುರುಕ್ಷೇತ್ರ!

ವಿ.ಬಾಲಕೃಷ್ಣನ್
Published 6 ಜುಲೈ 2013, 4:52 IST
Last Updated 6 ಜುಲೈ 2013, 4:52 IST

ಹಾಭಾರತದ ಕುರುಕ್ಷೇತ್ರ ನಿಜವಾಗಿ ನಡೆದದ್ದೋ ಅಥವಾ ಅದು ವೇದವ್ಯಾಸರ ಕಲ್ಪನೆಯ ಮೂಸೆಯಿಂದ ಅರಳಿದ್ದೋ ಗೊತ್ತಿಲ್ಲ. ಆದರೆ ನಮ್ಮ ಜೀವನದಲ್ಲಿ ಪ್ರತಿದಿನ, ಪ್ರತಿಕ್ಷಣ ಕುರುಕ್ಷೇತ್ರ ನಡೆಯುತ್ತಲೇ ಇರುತ್ತದೆ! ಎಲ್ಲಿ ಅಸ್ಥಿರತೆ ಇದೆಯೋ ಅಲ್ಲೆಲ್ಲ ಯುದ್ಧವಿದೆ.

ಉದ್ಯಮದಲ್ಲಿ ಅಸ್ಥಿರತೆ- ಆರ್ಥಿಕ ಕುರುಕ್ಷೇತ್ರ, ಆರೋಗ್ಯದಲ್ಲಿ ಅಸ್ಥಿರತೆ- ಆರೋಗ್ಯ ಕುರುಕ್ಷೇತ್ರ, ಯಾರ ಜೊತೆಯೋ ಸಂಬಂಧ ಸರಿ ಇಲ್ಲ- ವೈಯಕ್ತಿಕ ಕುರುಕ್ಷೇತ್ರ, ಮನಸ್ಸು ಸರಿ ಇಲ್ಲ, ಕಳವಳ ಉಂಟಾಗಿದೆ- ಮಾನಸಿಕ ಕುರುಕ್ಷೇತ್ರ.

ಒಂದು ವಿಭಾಗದಲ್ಲಂತೂ ಕುರುಕ್ಷೇತ್ರ ನಡೆಯಲೇಬಾರದು. ಆದರೆ ಅದರಲ್ಲೂ ನಾವು ಕುರುಕ್ಷೇತ್ರ ತಂದಿಟ್ಟಿದ್ದೇವೆ. ಅದು ಆಧ್ಯಾತ್ಮಿಕ ವಿಭಾಗ. ಏನದು? ನಮ್ಮ ದೇವರು ಹೆಚ್ಚು, ನಿಮ್ಮ ದೇವರು ಕಡಿಮೆ; ನಮ್ಮ ಜಾತಿ ಹೆಚ್ಚು, ನಿಮ್ಮ ಜಾತಿ ಕಡಿಮೆ, ಇದೇ ಆಧ್ಯಾತ್ಮಿಕ ಕುರುಕ್ಷೇತ್ರ. ಸ್ವರ್ಗದಲ್ಲಿ ಕೃಷ್ಣ, ಅಲ್ಲಾ, ಜೀಸಸ್ ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡು ಆರಾಮಾಗಿ ಕಾಫಿ ಕುಡಿಯುತ್ತಿರಬಹುದು. ಆದರೆ ಅವರ ಭಕ್ತರಾದ ನಾವಿಲ್ಲಿ ಕಿತ್ತಾಡುತ್ತಿರುತ್ತೇವೆ.

ಮಹಾವೀರ- ಬುದ್ಧರಲ್ಲಿ ಪರಸ್ಪರ ವ್ಯತ್ಯಾಸವಿಲ್ಲ. ಭಕ್ತರ ನಡುವೆ ಕಿತ್ತಾಟ. ಇದಕ್ಕೆ ಬದಲು ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ... ಯಾವುದೋ ಒಂದು ಪ್ರಶಾಂತವಾದ ಸ್ಥಳದಲ್ಲಿ ಅರ್ಧ ಗಂಟೆ ನೆಮ್ಮದಿಯಿಂದ ಒಂದಷ್ಟು ಹೊತ್ತು ಧ್ಯಾನ ಮಾಡಿ ಬಂದರೆ ಸಾಕು,

ADVERTISEMENT

ವ್ಯಕ್ತಿತ್ವ ವಿಕಸನ ತರಬೇತುದಾರ ವಿ.ಬಾಲಕೃಷ್ಣನ್ ವಿಶಿಷ್ಟ ಮಾತುಗಾರಿಕೆಗೆ ಹೆಸರಾದವರು. `ನಮ್ಮ ಸಂತೋಷ ನಮ್ಮ ಕೈಯಲ್ಲೇ ಅಡಗಿದೆ' ಎಂಬ ನಂಬಿಕೆಯೊಂದಿಗೆ ಅವರು, ಸಾವಿರಾರು ಜನರಿಗೆ ಬದುಕಿನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ದಿನನಿತ್ಯದ ಜಂಜಡಗಳಿಗೆ ಶರಣಾಗಿ ನಾವು ಬೆಳೆಸಿಕೊಳ್ಳುವ ನಕಾರಾತ್ಮಕ ಧೋರಣೆಯೇ ನಮ್ಮ ಎಲ್ಲ ಸಮಸ್ಯೆಗಳಿಗೂ ಮೂಲ, ಹೀಗಾಗಿ ಸಕಾರಾತ್ಮಕ ದೃಷ್ಟಿಕೋನವೊಂದೇ ಬದುಕಿನ ಯಶಸ್ಸಿನ ಗುಟ್ಟು ಎಂಬ ತತ್ವದಲ್ಲಿ ಅವರಿಗೆ ಅಚಲವಾದ ನಂಬಿಕೆ.

ಈ ತಳಹದಿಯ ಆಧಾರದ ಮೇಲೇ ಹಲವಾರು ಮಂದಿಯ ವ್ಯಕ್ತಿತ್ವ ರೂಪಿಸುವಲ್ಲಿ ಅವರು ಶ್ರಮಿಸುತ್ತಿದ್ದಾರೆ. 6 ಭಾಷೆಗಳಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಬಾಲಕೃಷ್ಣನ್, ಕನ್ನಡ ಪರ ಸಂಘಟನೆಗಳಿಂದ `ಜ್ಞಾನ ನಿಧಿ' `ಕರುನಾಡ ಕುಲತಿಲಕ' `ಕದಂಬ ಶ್ರೀ'  `ಸಮಾಜ ಸೇವಾ ಕಣ್ಮಣಿ' ಯಂತಹ ಹಲವು ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ.

ನಮ್ಮ ಮಾನಸಿಕ ತುಮುಲಗಳಿಗೆ, ಶಿಥಿಲಗೊಳ್ಳುತ್ತಿರುವ ಸಂಬಂಧಗಳಿಗೆ ದಿನನಿತ್ಯದ ಸಣ್ಣ ಪುಟ್ಟ ಸಂಗತಿಗಳು ಹೇಗೆ ಕೊಡುಗೆ ನೀಡುತ್ತವೆ, ಮುಂದಾಲೋಚನೆ ಇಲ್ಲದ ನಮ್ಮ ನಿರ್ಧಾರಗಳು, ಅನುಚಿತ ವರ್ತನೆಗಳು ಹೇಗೆ ನಮ್ಮ ನೆಮ್ಮದಿಯನ್ನು ಹಾಳುಗೆಡವುತ್ತವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸುವ ಅವರ ನೂತನ ಅಂಕಣ `ಅಂತರ್ಯುದ್ಧ' ಭೂಮಿಕಾದಲ್ಲಿ ಪ್ರಕಟವಾಗಲಿದೆ.

ಸಾಕಷ್ಟು ಮಾನಸಿಕ ಬಲ ನಮಗೆ ದೊರೆಯುತ್ತದೆ. ಆದರೆ ಪ್ರಪಂಚದಲ್ಲಿ ಹೆಚ್ಚು ಯುದ್ಧ ನಡೆಯುತ್ತಿರುವುದು ಆಧ್ಯಾತ್ಮಿಕ ವಿಷಯದಲ್ಲಿ.
ಎಲ್ಲಿ ನೆಮ್ಮದಿ ಇದೆಯೋ ಅಲ್ಲಿ ಬಲ ಇದ್ದೇ ಇರುತ್ತದೆ.

ಅಂತರಾಳದಲ್ಲಿ ಶಾಂತಿ ಇದ್ದರೆ ಬಲ ತಾನಾಗೇ ಬರುತ್ತದೆ. ಬಲವಿದ್ದ ಕಡೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಂತಹದ್ದೊಂದು ಯಶಸ್ಸು ಯಾರಿಗೆ ತಾನೇ ಬೇಡ? ಆದರೆ ನೆಮ್ಮದಿ ಇಲ್ಲದೆ ಯಶಸ್ಸು ನಮ್ಮ ಹತ್ತಿರ ಸುಳಿಯುವುದಾದರೂ ಹೇಗೆ? ಬನ್ನಿ, ನಮ್ಮಳಗಿನ ಅರ್ಜುನ- ದುರ್ಯೋಧನರು ಬೆಳಗಿನಿಂದ ಸಂಜೆಯವರೆಗೂ ಹೇಗೆ ಕಾದಾಡುತ್ತಾರೆ ನೋಡೋಣ. ಬೆಳಿಗ್ಗೆ 6 ಗಂಟೆಗೆ ಏಳಬೇಕೆಂದು ಅಲಾರಾಂ ಇಡುತ್ತೇವೆ. ಕುರುಕ್ಷೇತ್ರ ಯುದ್ಧ ಪ್ರಾರಂಭಿಸಲು ಕೃಷ್ಣ ಶಂಖನಾದ ಮಾಡಿದಂತೆ ಅಲಾರಾಂ ಟರ್ರ‌ ಟರ್ರ‌... ಎನ್ನುತ್ತದೆ.

  ತಕ್ಷಣ ನಮ್ಮಳಗಿನ ಅರ್ಜುನ- ದುರ್ಯೋಧನ ಇಬ್ಬರೂ ಎಚ್ಚರಗೊಳ್ಳುತ್ತಾರೆ. ಅರ್ಜುನ ಹೇಳುತ್ತಾನೆ `ಏಳು, ಮೊದಲು ವ್ಯಾಯಾಮ ಮಾಡಿ ನಂತರ ಕೆಲಸ ಶುರುಮಾಡು. ದುರ್ಯೋಧನ ಹೇಳುತ್ತಾನೆ `ಸುಮ್ಮನೆ ಹೊದ್ದು ಮಲಗು. ಬೆಂಗಳೂರಲ್ಲಿ 6 ಗಂಟೆಗೆ ಏಳೋದಾ? ನಿನಗೆಲ್ಲೋ ತಲೆ ಕೆಟ್ಟಿದೆ. ರಾತ್ರಿ ಬೇರೆ ಸರಿಯಾಗಿ ನಿದ್ದೆ ಮಾಡಿಲ್ಲ' ಅಂತ. ಈಗ ಅಲಾರಾಂ ಮೇಲೆ ಸಿಟ್ಟು. ಆದರೆ ಅದನ್ನು ಇಟ್ಟವರು ಯಾರು? ಹಾಗಿದ್ದ ಮೇಲೆ ಕೋಪ ಯಾಕೆ? ಮತ್ತೆ ಗೊಂದಲ.

ತಿಂಡಿ ತಿಂದು ಸ್ನಾನ ಮಾಡುವುದೋ, ಸ್ನಾನ ಮಾಡಿ ತಿಂಡಿ ತಿನ್ನುವುದೋ! ಅರ್ಜುನ ಹೇಳುತ್ತಾನೆ `ಸ್ನಾನ ಮಾಡಿದರೆ ಶುದ್ಧ ಭಾವದಿಂದ ಮನಸ್ಸು ಉಲ್ಲಸಿತವಾಗುತ್ತದೆ, ಮೊದಲು ಸ್ನಾನ ಮಾಡು'. ದುರ್ಯೋಧನ ಹೇಳುತ್ತಾನೆ `ತಿಂಡಿ ತಿಂದು ಆಮೇಲೆ ಸ್ನಾನ ಮಾಡು'.

ತಿಂಡಿ ಆದ ಮೇಲೆ ಅರ್ಜುನ ಹೇಳುತ್ತಾನೆ `ತಿಂಡಿ ಮಾಡಿಕೊಟ್ಟವರಿಗೆ ಮೆಚ್ಚುಗೆ ಸೂಚಿಸು'. ಆಗ ದುರ್ಯೋಧನ `ಬೇಡ ಬೇಡ ಹೇಳಿದರೆ ತಲೆ ಮೇಲೆ ಕೂತುಕೊಳ್ಳುತ್ತಾರೆ.' ಮತ್ತೆ ಅರ್ಜುನ ಹೇಳುತ್ತಾನೆ `ಪರವಾಗಿಲ್ಲ, ತಿಂಡಿ ಚೆನ್ನಾಗಿದೆ' ಅಂತ ಹೇಳು. ದುರ್ಯೋಧನ ಹೇಳುತ್ತಾನೆ `ಅಯ್ಯೋ ಮೂರು ದಿನಗಳ ಹಿಂದೆ ಚೆನ್ನಾಗಿರಲಿಲ್ಲ. ಆದ್ದರಿಂದ ಸದ್ದಿಲ್ಲದೆ ಸುಮ್ಮನೇ ಇದ್ದುಬಿಡು'.
                                                                 * * *

ಕಾರಿನಲ್ಲಿ ಹೋಗುತ್ತಿರುತ್ತೇವೆ. ಕೆಂಪು ದೀಪ ಕಾಣಿಸುತ್ತದೆ. ಪೊಲೀಸರ ಸುಳಿವಿರುವುದಿಲ್ಲ. ಅರ್ಜುನ `ನಿಲ್ಲು' ಎಂದರೆ ದುರ್ಯೋಧನ,  `ಜೀವನದಲ್ಲಿ ಮುಂದೆ ಸಾಗಬೇಕು, ನಡೆ ಮುಂದೆ' ಎನ್ನುತ್ತಾನೆ. ಪಕ್ಕದಲ್ಲಿ ಸುಂದರವಾದ ಹುಡುಗಿ ಕಂಡರೆ ಅರ್ಜುನ `ತಂಗಿಯಂತೆ' ಎನ್ನುತ್ತಾನೆ. ದುರ್ಯೋಧನ `ಹೆಂಡತಿಯಂತೆ' ಎಂದು ವಾದಿಸುತ್ತಾನೆ. ಹೀಗೆ ಪ್ರತಿ ಹೆಜ್ಜೆ, ಪ್ರತಿ ಕ್ಷಣದಲ್ಲೂ ನಮ್ಮಲ್ಲಿ ಅರ್ಜುನ ದುರ್ಯೋಧನರು ಕಾಣುತ್ತಾರೆ, ಕಾದಾಡುತ್ತಾರೆ. ವೇದವ್ಯಾಸರಿಗೆ 5000 ವರ್ಷಗಳ ಹಿಂದೆಯೇ ಗೊತ್ತಿತ್ತು ನಮ್ಮಂತಹ ಅರ್ಜುನ, ದುರ್ಯೋಧನರು ಮುಂದೆ ಹುಟ್ಟುತ್ತಾರೆಂದು. ಅದಕ್ಕೇ ಕಥೆ ರೂಪದಲ್ಲಿ ಕುರುಕ್ಷೇತ್ರವನ್ನು ಬರೆದಿಟ್ಟಿದ್ದಾರೆ.

`ಸಂಬಳ ಮತ್ತು ಲಾಭದಲ್ಲಿ ಆದಾಯ ತೆರಿಗೆ ಕಟ್ಟು' ಎಂದು ಅರ್ಜುನ ಹೇಳಿದರೆ `ಬೇಡ ರಾಜಕಾರಣಿಗಳು ತಿಂದು ಹಾಕುತ್ತಾರೆ' ಎಂದು ದುರ್ಯೋಧನ ಹೇಳುತ್ತಾನೆ. ಎಷ್ಟೋ ಬಾರಿ ಯಾವುದಾದರೂ ವಿಷಯದ ಬಗ್ಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ನಮ್ಮ ಮನಸ್ಸಿನೊಳಗೆ ಇನ್ನಿಲ್ಲದಂತೆ ಕುರುಕ್ಷೇತ್ರ ನಡೆಯುತ್ತಿರುತ್ತದೆ. ಅರ್ಜುನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ದುರ್ಯೋಧನ ನಕಾರಾತ್ಮಕವಾದ ಪ್ರಭಾವ ಬೀರುತ್ತಿರುತ್ತಾನೆ.

ಅರ್ಜುನ ಗೆಲ್ಲಬೇಕು; ಗೆಲ್ಲಲೇಬೇಕು. ದುರ್ಯೋಧನ ಗೆದ್ದರೆ ಮೊದಲು ಲಾಭವಾದಂತೆ ಎನಿಸಿದರೂ ಕೊನೆಗೆ ನಷ್ಟವಾಗುವುದು ಖಚಿತ. ಬೆಳಿಗ್ಗೆ 6 ಗಂಟೆಗೆ ಏಳುವುದು ಮೊದಲಿಗೆ ನಷ್ಟ ಎನಿಸಿದರೂ ಕೊನೆಗೆ ಲಾಭವಾಗುತ್ತದೆ. ಪ್ರತಿ ದಿನ ನಿಧಾನವಾಗಿ ಅರ್ಜುನನ ಪ್ರಭಾವವನ್ನು ಜಾಸ್ತಿ ಮಾಡುತ್ತಾ, ದುರ್ಯೋಧನನ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುತ್ತಾ ಬರಬೇಕು. ಸಾಧ್ಯವಾದರೆ ದುರ್ಯೋಧನನನ್ನು ಕೊಂದು ಬಿಡಬೇಕು. ಇದರಿಂದ ನಾವೂ ಮಹಾತ್ಮರಾಗಬಹುದು.

ಮಹಾನ್ ವ್ಯಕ್ತಿಗಳು ಮಹಾನ್ ಕಾರ್ಯಗಳನ್ನು ಮಾಡುವುದಿಲ್ಲ; ಇತರರು ಮಾಡುವ ಸಣ್ಣ ಕಾರ್ಯಗಳನ್ನು ಮಹಾನ್ ರೀತಿಯಲ್ಲಿ ಮಾಡಿ ತೋರಿಸುತ್ತಾರೆ. ಮಹಾನ್ ವ್ಯಕ್ತಿಗಳಿಗೂ ಬೆಳಿಗ್ಗೆ ಬೇಗ ಏಳುವುದು, ವ್ಯಾಯಾಮ-ಧ್ಯಾನ ಮಾಡುವುದು ಕಷ್ಟವೇ. ಆದರೆ ಅವರಿಗೂ ನಮಗೂ ಇರುವ ಒಂದೇ ವ್ಯತ್ಯಾಸವೆಂದರೆ, ನಾವು ಕಷ್ಟ ಎಂದು ಬಿಟ್ಟುಬಿಡುತ್ತೇವೆ; ಅವರು ಕಷ್ಟವಾದರೂ ಮಾಡುತ್ತಾರೆ.
                                                                       * * *

ಪ್ರತಿಯೊಬ್ಬರಿಗೂ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ ಅದಕ್ಕೆ ಮಿತಿ ಇಲ್ಲದಿದ್ದರೆ ಅದು ಅತಿಯಾದ ನಿರೀಕ್ಷೆಯಾಗುತ್ತದೆ. ಒಮ್ಮೆ ಒಂದು ನಾಯಿ ಮಾಂಸದ ಅಂಗಡಿಯ ಮುಂದೆ ಬಂದು ನಿಂತಿತು. ಮಾಂಸದ ಆಸೆಗೆ ಬಂದಿರಬಹುದೆಂದು ಬಗೆದ ಅಂಗಡಿಯ ಯಜಮಾನ ಒಂದು ಚೂರು ಮಾಂಸವನ್ನು ಅದರತ್ತ ಎಸೆದ. ನಾಯಿ ಅದನ್ನು ಮೂಸಿಯೂ ನೋಡಲಿಲ್ಲ. ಅವನಿಗೆ ಆಶ್ಚರ್ಯವಾಗಿ ಹತ್ತಿರ ಹೋದ.

ಕತ್ತಿನ ಪಟ್ಟಿಯಿಂದ ಅದು ಸಾಕಿದ ನಾಯಿ ಎಂದು ಅವನಿಗೆ ಅರ್ಥವಾಯಿತು. ಕತ್ತಿನಲ್ಲಿ ಒಂದು ಚೀಲವಿತ್ತು. ಅದರಲ್ಲಿ ನೂರು ರೂಪಾಯಿ ಮತ್ತು ಒಂದು ಚೀಟಿ ಇತ್ತು. ಚೀಟಿಯಲ್ಲಿ `ನಾಯಿಯ ಕತ್ತಿನಲ್ಲಿರುವ ಹಣ ತೆಗೆದುಕೊಂಡು ಆ ಬೆಲೆಗೆ ಮಾಂಸವನ್ನು ಕಳಿಸಿ' ಎಂದು ಬರೆದಿತ್ತು. ಅವನು ಹಾಗೇ ಮಾಡಿದ.

ನಾಯಿ ಹಿಂದಕ್ಕೆ ಹೊರಟಿತು. ಅಂಗಡಿಯ ಯಜಮಾನನಿಗೆ ಸೋಜಿಗವಾಗಿ ಅದನ್ನು ಹಿಂಬಾಲಿಸಿದ. ನಾಯಿ ಕೆಂಪು ಸಿಗ್ನಲ್ ಬಂದಾಗ ನಿಂತು, ರಸ್ತೆ ದಾಟಿತು. ಒಂದು ಬಸ್ ಹತ್ತಿ ಹೊರಟಿತು. ಅವನೂ ಬಸ್ ಹತ್ತಿದ. ಯಾವುದೋ ನಿರ್ದಿಷ್ಟ ಸ್ಥಳದಲ್ಲಿ ಇಳಿದು, ಒಂದು ಮನೆಯ ಮುಂದಿನ ಗೇಟು ತೆಗೆದು ಬಾಗಿಲು ಬಡಿಯಿತು. ಬಾಗಿಲು ತೆರೆಯಲಿಲ್ಲ. ಮಾಂಸದ ಚೀಲವನ್ನು ಅಲ್ಲೇ ಇಟ್ಟು, ಹಿಂದಿನಿಂದ ಹೋಗಿ ಕಿಟಕಿಯ ಮೂಲಕ ಮನೆಯನ್ನು ಪ್ರವೇಶಿಸಿ, ಬಾಗಿಲು ತೆಗೆದು ಮಾಂಸದ ಚೀಲವನ್ನು ಎತ್ತಿಕೊಂಡಿತು.

ಅಷ್ಟರಲ್ಲಿ ಮನೆಯ ಯಜಮಾನ ಬಂದು ನಾಯಿಗೆ ಚೆನ್ನಾಗಿ ಬೈದು, ಎರಡೇಟು ಹಾಕಿದ. ಅಂಗಡಿಯವನಿಗೆ ಬೇಸರವಾಯಿತು. ಇಷ್ಟು ಚೆನ್ನಾಗಿ ಕೆಲಸ ಮಾಡಿದ ನಾಯಿಗೆ ಹೊಡೆಯುವುದೇ? ಮನೆಯ ಯಜಮಾನನಿಗೆ `ಇಷ್ಟು ನಿಷ್ಠೆಯಿಂದ ಮಾಂಸವನ್ನು ತಂದ ನಾಯಿಯನ್ನೇಕೆ ಹೊಡೆದಿರಿ?' ಎಂದು ಕೇಳಿದ. `ಒಂದು ವಾರದಲ್ಲಿ ಇದು ಎರಡನೆಯ ಸಲ ಮನೆಯ ಬೀಗದ ಕೈ ತೆಗೆದುಕೊಂಡು ಹೋಗಲು ಮರೆತಿದೆ' ಎಂದ. ಓಹ್! ಎಂತಹ ನಿರೀಕ್ಷೆ! ಇಷ್ಟು ನಿರೀಕ್ಷೆ ಮಾಡಬಹುದೇ? ಇದು ಮಿತಿಮೀರಿದ ನಿರೀಕ್ಷೆ ಅಲ್ಲವೇ?
                                                                      * * *

ವಾರ ಪೂರ್ತಿ ದೆಹಲಿ, ಮುಂಬೈ, ಕೋಲ್ಕತ್ತ ಇತ್ಯಾದಿ ನಗರಗಳಿಗೆ ತಿರುಗಿ, ಕಾರ್‌ನ ಸಾಲದ ಕಂತು ಕಟ್ಟಿ, ಮಕ್ಕಳ ಶಾಲಾ- ಕಾಲೇಜು ಶುಲ್ಕಕ್ಕೆ ವ್ಯವಸ್ಥೆ ಮಾಡಿ, ಮನೆ ಬಾಡಿಗೆ, ವಿದ್ಯುತ್ ಬಿಲ್‌ಗಳನ್ನು ಪಾವತಿಸಿ ಮನೆಗೆ ಬಂದ ಗಂಡನಿಗೆ `ಮಲ್ಲಿಗೆ ಹೂವು ತರಲಿಲ್ವಾ' ಎಂದು ಕೇಳಿದರೆ ಅದು ಅತಿಯಾದ ನಿರೀಕ್ಷೆ ಅಲ್ಲವೇ? ಮದುವೆಯಾದ ಹೊಸದರಲ್ಲಿ ಜವಾಬ್ದಾರಿ ಕಡಿಮೆ ಇದ್ದಾಗ ಪ್ರತಿದಿನ ತರುತ್ತಿದ್ದ ಗಂಡನಿಂದ ಈಗಲೂ ಮಲ್ಲಿಗೆ ಹೂವು ನಿರೀಕ್ಷಿಸಿದರೆ?

ಮದುವೆಯಾದ ಮೇಲೆ ಹೆಂಡತಿ ತನ್ನ ಎಲ್ಲ ಬಂಧು-ಬಳಗವನ್ನೂ ಬಿಟ್ಟು ಇನ್ನೊಂದು ಕುಟುಂಬವನ್ನು ಸೇರುತ್ತಾಳೆ. ಅಲ್ಲಿ ಒಬ್ಬೊಬ್ಬರ ರುಚಿ-ಅಭಿರುಚಿಗಳಿಗೆ ತಕ್ಕಂತೆ ಅಡುಗೆ ಮಾಡಿ, ಮನೆಯನ್ನು ನೋಡಿಕೊಂಡು ಎಲ್ಲರನ್ನೂ ತೃಪ್ತಿಗೊಳಿಸಬೇಕು. ಎಲ್ಲರಿಗಿಂತ ಮೊದಲು ಎದ್ದು ಎಲ್ಲರಿಗಿಂತ ಕೊನೆಗೆ ಮಲಗುವ ಅವಳು ಮಾಡಿದ ಅಡುಗೆಯನ್ನು ಸದಾಕಾಲ ಟೀಕಿಸುತ್ತಲೇ ಇದ್ದರೆ ಅದು ಸಹ ಅತಿಯಾದ ನಿರೀಕ್ಷೆಯೇ.

ಮಗ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ವಿಜ್ಞಾನದಲ್ಲಿ ಆಲ್ಬರ್ಟ್ ಐನ್‌ಸ್ಟೀನ್, ಈಜಿನಲ್ಲಿ ಮೈಕಲ್ ಫ್ಲಿಪ್, ಚೆಸ್‌ನಲ್ಲಿ ವಿಶ್ವನಾಥನ್ ಆನಂದ್ ಎಲ್ಲವೂ ಆಗಬೇಕು ಎಂದುಕೊಂಡರೆ? ಇವರೆಲ್ಲ ಒಂದೊಂದು ಕ್ಷೇತ್ರದಲ್ಲಿ ಪರಿಣತಿ ಹೊಂದಿ ಆರಾಮಾಗಿ ಇರುತ್ತಾರೆ. ಆದರೆ ನಿಮ್ಮ ಮಗ ಎಲ್ಲದರಲ್ಲೂ ಪರಿಣತಿ ಹೊಂದಬೇಕೆಂದರೆ ಅವನ ಗತಿಯೇನು? ಇಷ್ಟೊಂದು ನಿರೀಕ್ಷಿಸಬಹುದೇ?

ಅದು ಬೇಕು, ಇದು ಬೇಕು ಎಂಬ ನಮ್ಮ ಆಸೆಗಳು ಭಯಂಕರವಾಗಿ ಇರುತ್ತವೆ. ಆದರೆ ಏನನ್ನು ನಿರೀಕ್ಷಿಸಬೇಕು ಎಂಬುದನ್ನು ನಾವು ತಿಳಿದುಕೊಂಡಿಲ್ಲ. ಹೋಗಲಿ ದೊರೆತುದನ್ನು ಸ್ವೀಕರಿಸುವುದನ್ನೂ ಕಲಿತಿಲ್ಲ. ಎಮರ್‌ಸನ್ ಹೇಳಿದ್ದಾರೆ `ಪ್ರತಿಯೊಬ್ಬರ ಆಸೆಯನ್ನೂ ಪೂರೈಸುವಷ್ಟು ಸರಕು ಭೂಮಿಯ ಮೇಲಿದೆ. ಆದರೆ ಎಲ್ಲರ ದುರಾಸೆಯನ್ನೂ ಪೂರೈಸುವಷ್ಟು ಅಲ್ಲ'.

ದೊರೆತುದನ್ನು ಸ್ವೀಕರಿಸಿ ತೃಪ್ತರಾಗದಿದ್ದರೆ ಅಸಂತೃಪ್ತಿ ನಮ್ಮನ್ನು ಕಾಡುತ್ತದೆ. ಅದರಿಂದ ಅಸ್ಥಿರತೆ ಉಂಟಾಗಿ ಮಾನಸಿಕ ಯುದ್ಧ ಆರಂಭವಾಗುತ್ತದೆ. ನಮಗೆ ನೈತಿಕಶಕ್ತಿ ಬೇಕಾಗಿದೆ. ಅದೇ ಜೀವನದ ನಿಯಮ. ಹೆಚ್ಚಿನ ನೈತಿಕ ಶಕ್ತಿ ಇರಬೇಕೆಂದರೆ ಒಳಗೆ ಹೆಚ್ಚಿನ ಸ್ಥಿತಶಕ್ತಿ, ಸ್ಥಿರಶಕ್ತಿ ಇರಬೇಕು. ಅಂತರಂಗದೊಳಗೆ ಸ್ಥಿತಪ್ರಜ್ಞೆ ಇಲ್ಲದಿದ್ದರೆ ನೈತಿಕ ಶಕ್ತಿ ಬರಲಾರದು. ಅದಿಲ್ಲದಿದ್ದರೆ ಪ್ರಗತಿಯೂ ಸಾಧ್ಯವಿಲ್ಲ.

ಜಪಾನ್ ಮತ್ತು ಫ್ರಾನ್ಸ್‌ಗಳಲ್ಲಿ ಬುಲೆಟ್ ಟ್ರೇನ್ ಗಂಟೆಗೆ 360 ಕಿ.ಮೀ ವೇಗದಲ್ಲಿ ಓಡಲು ಹೇಗೆ ಸಾಧ್ಯವಾಗುತ್ತದೆ? ಅದರ ಕಂಬಿಗಳು ಅಷ್ಟು ಸ್ಥಿರವಾಗಿವೆ. ಭಾರತದಲ್ಲಿ ಅಂತಹ ಎಂಜಿನ್ ತಯಾರಿಸಲು ಸಾಧ್ಯವೇ? ಸಾಧ್ಯವಿದೆ. ಆದರೆ ನಮ್ಮ ಕಂಬಿಗಳ ಮೇಲೆ 80 ಕಿ.ಮೀ ವೇಗದಲ್ಲಿ ಮಾತ್ರ ಓಡಲು ಸಾಧ್ಯವಾಗುತ್ತದೆ. ಅಂದರೆ ನಮ್ಮ ಕಂಬಿಗಳಲ್ಲಿ ಸ್ಥಿರತೆ ಇಲ್ಲ. ಸ್ವಲ್ಪ ದೊಡ್ಡದು ಅಥವಾ ಚಿಕ್ಕದಾದ ಶೂ ತೊಟ್ಟುಕೊಂಡರೆ ಓಡಲು ಸಾಧ್ಯವೇ? ಶೂ ಅಳತೆ ಸರಿಯಾಗಿದ್ದರೆ ಮಾತ್ರ ಸ್ಥಿರವಾಗಿ ಓಡಬಹುದು. ಅದೇ ರೀತಿ, ನಮಗಿರುವ ಸಮಸ್ಯೆ ಎಂದರೆ ನಮ್ಮಳಗೆ ಸ್ಥಿರತೆ ಇಲ್ಲದಿರುವುದು.

ಸಮುದ್ರದೊಳಗೆ ಕಲ್ಲನ್ನು ಹಾಕಿದರೆ ಏನೂ ವ್ಯತ್ಯಾಸ ಆಗುವುದಿಲ್ಲ. ಯಾಕೆಂದರೆ ಅದು ಸದಾ ಅಲ್ಲೋಲ ಕಲ್ಲೋಲ ಆಗುತ್ತಿರುತ್ತದೆ. ಆದರೆ ಶಾಂತವಾದ ಸರೋವರದಲ್ಲಿ ಒಂದು ಸಣ್ಣ ಕಲ್ಲನ್ನು ಎಸೆದರೂ ಅಲೆಗಳು ಏಳುತ್ತವೆ. ಅದೇ ರೀತಿ ನಮ್ಮೆಲ್ಲರ ಮನಸ್ಸೂ ಸಮುದ್ರದಂತೆ ಆಗಿದೆ. ಅದರ ಬದಲು ಮನಸ್ಸು ಸರೋವರದ ರೀತಿ ಶಾಂತವಾಗಿದ್ದರೆ ನಾವು ಬೆಳೆಯುತ್ತೇವೆ, ನಮ್ಮಡನೆ ಇರುವವರನ್ನೂ ಬೆಳೆಸುತ್ತೇವೆ.
                                                                            ***

ಎರಡನೇ ಕ್ಲಾಸಿನ ಹುಡುಗನಿಗೆ ತಂದೆಯೊಡನೆ ಆಡಬೇಕೆಂದು ಆಸೆ. ಪ್ರತಿದಿನ ತಂದೆಯನ್ನು ಕರೆಯುತ್ತಿದ್ದ. ಆದರೆ ತಂದೆಗೆ ಮನೆಗೆ ಬಂದ ಮೇಲೆ ಆಫೀಸಿನ ಕೆಲಸ ಇರುತ್ತಿತ್ತು. ಮಗನೊಡನೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಆಟವಾಡಲೇಬೇಕೆಂದು ಮಗು ಹಟ ಹಿಡಿಯಿತು. ತಂದೆ ಯೋಚಿಸಿ ಹೇಳಿದ `ಮಗು ನಾನು ನಿನಗೊಂದು ಕೆಲಸ ಕೊಡುತ್ತೇನೆ. ನೀನು ಅದನ್ನು ಪೂರ್ತಿ ಮಾಡಿದ ನಂತರ ಆಡೋಣ'. ಮಗ ಒಪ್ಪಿದ.

ಅಪ್ಪ ಒಂದು ಪ್ರಪಂಚದ ನಕ್ಷೆಯನ್ನು ಹರಿದು ಹಾಕಿ ಮಗನಿಗೆ ಹೇಳಿದ `ಈ ನಕ್ಷೆಯನ್ನು ಸರಿಯಾಗಿ ಜೋಡಿಸಿ ತಾ. ನಂತರ ಆಡೋಣ'. ಮಗ ಚೂರುಗಳನ್ನು ತೆಗೆದುಕೊಂಡು ಜೋಡಿಸಲು ಕುಳಿತ. ಇನ್ನು ರಾತ್ರಿ ಮಲಗುವವರೆಗೂ ಅವನಿಗೆ ಜೋಡಿಸಲು ಸಾಧ್ಯವಾಗಲಾರದೆಂದು ತಿಳಿದು ಅಪ್ಪ ನಿಶ್ಚಿಂತೆಯಿಂದ ತನ್ನ ಕೆಲಸದಲ್ಲಿ ಮುಳುಗಿದ.

ಸರಿಯಾಗಿ 16 ನಿಮಿಷಗಳಲ್ಲಿ ಮಗ ನಕ್ಷೆಯನ್ನು ಜೋಡಿಸಿ ತಂದ. ಅಪ್ಪನಿಗೆ ನಂಬಲಾಗಲಿಲ್ಲ. ಎರಡನೇ ಕ್ಲಾಸಿನ ಹುಡುಗ ಪ್ರಪಂಚದ ನಕ್ಷೆಯನ್ನು ಜೋಡಿಸಲು ಹೇಗೆ ಸಾಧ್ಯ? ಅಪ್ಪ ಕೇಳಿದ `ನಿನಗೆ ಪ್ರಪಂಚದ ನಕ್ಷೆಯ ಬಗ್ಗೆ ಗೊತ್ತಿಲ್ಲ. ಆದರೂ ಅದ್ಹೇಗೆ ಇಷ್ಟು ಬೇಗ ಜೋಡಿಸಿದೆ?' ಅದಕ್ಕೆ ಮಗ `ನೀನು ನಕ್ಷೆಯನ್ನು ಹರಿಯುವಾಗ ಅದರ ಹಿಂದೆ ಇದ್ದ ಮನುಷ್ಯನ ಚಿತ್ರವನ್ನು ನೋಡಿದ್ದೆ. ಆ ಚಿತ್ರವನ್ನು ಸರಿಯಾಗಿ ಜೋಡಿಸಿದೆ. ಪ್ರಪಂಚದ ನಕ್ಷೆ ತಾನೇ ಸರಿಯಾಯಿತು'. ಹೌದು! ಮನುಷ್ಯ ಸರಿಯಾದರೆ ಪ್ರಪಂಚ ತಾನೇ ಸರಿಯಾಗುತ್ತದೆ. ನಮ್ಮನ್ನು ನಾವು ಸರಿ ಮಾಡಿಕೊಂಡರೆ ಪ್ರಪಂಚ ಮೊದಲಿಗಿಂತ ಸುಂದರವಾಗಿ ಕಾಣತೊಡಗುತ್ತದೆ. 
-ವಿ.ಬಾಲಕೃಷ್ಣನ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.