ADVERTISEMENT

ಏನಾದ್ರೂ ಕೇಳ್ಬೋದು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 19:30 IST
Last Updated 1 ಸೆಪ್ಟೆಂಬರ್ 2017, 19:30 IST
ಸುನಿತಾ ರಾವ್
ಸುನಿತಾ ರಾವ್   

ನನ್ನ ಹೆಸರು ನೀತು, ಬೆಂಗಳೂರು. ನಾನು 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಈಗ ನಾನು ಇಂಟರ್ನ್‌ಶಿಪ್ ಮುಗಿಸಬೇಕಿದೆ. ಆದರೆ 2 ವರ್ಷ ಬ್ಯಾಕ್‌ಲಾಗ್ ಇದೆ. ನಾನು ಹೈಸ್ಕೂಲ್ ಹಾಗೂ ಪಿಯುಸಿನಲ್ಲಿ ರ‍್ಯಾಂಕ್ ವಿದ್ಯಾರ್ಥಿನಿಯಾಗಿದ್ದೆ. ಆದರೆ ಈಗ ನನಗೆ ಏನಾಗುತ್ತಿದೆ ತಿಳಿಯುತ್ತಿಲ್ಲ.  ನನಗೆ ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಪಾಸ್ ಆಗುವಷ್ಟು ಅಂಕಗಳನ್ನು ಗಳಿಸಲು ಕೂಡ ಸಾಧ್ಯವಾಗುತ್ತಿಲ್ಲ. ಪರೀಕ್ಷಾ ಕೊಠಡಿಗೆ ತೆರಳುವ ಮೊದಲು ಎಲ್ಲಾ ಮರೆತು ಹೋಗುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತದೆ. ಇದರಿಂದ ಹೊರಬಂದು ಉತ್ತಮ ಅಂಕ ಗಳಿಸುವುದು ಹೇಗೆ ಎಂಬುದನ್ನು ತಿಳಿಸಿ?

ಪಿಯುಸಿಗೆ ಹೋಲಿಸಿದರೆ ವೃತ್ತಿಪರ ಕೋರ್ಸ್‌ಗಳಿಗೆ ಓದುವ ವಿಧಾನವು ಭಿನ್ನವಾಗಿರುತ್ತದೆ. ಒಮ್ಮೆಲೆ ಹೊಸ ವಿಷಯವನ್ನು ಆಳವಾಗಿ ಅಭ್ಯಸಿಸಬೇಕು. ಇಲ್ಲಿ ನೀವು ವಿಷಯವನ್ನು ನೆನಪಿಸಿಕೊಂಡು ಬರೆಯಲು ಸಾಧ್ಯವಿಲ್ಲ. ಹಾಗಾಗಿ ವಿಷಯವನ್ನು ಅರ್ಥ ಮಾಡಿಕೊಂಡು, ‌ಏನು ಕಲಿಯಬೇಕು ಎಂಬುದನ್ನು ಅರಿತು ನೋಟ್ಸ್ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ನೋಟ್ಸ್ ಮಾಡಿಕೊಳ್ಳುವ ಅಭ್ಯಾಸ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಓದುವ ಸಮಯದಲ್ಲಿ ಆ ನೋಟ್ಸ್ ಅನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಓದುವ ವೇಳೆಯಲ್ಲಿ ಹೆಚ್ಚು ತೊಂದರೆ ನೀಡುವ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಂದ್ ಮಾಡಿ ಬದಿಗಿರಿಸಿ. ವಿಷಯದ ಆಳವನ್ನು ಅರಿಯಲು ಪ್ರೊಫೆಸರ್ ಹಾಗೂ ಸೀನಿಯರ್ಸ್‌ಗಳ ಸಹಾಯ ಪಡೆದುಕೊಳ್ಳಿ. ಯಾವಾಗಲೂ ಪಠ್ಯಪುಸ್ತಕಗಳಿಗೆ ಅಂಟಿಕೊಂಡಿರಬೇಡಿ. ನಿಮಗೆ ಆಸಕ್ತಿ ಇರುವ ವೈದ್ಯಕೀಯ ಪತ್ರಿಕೆಗಳು, ಬ್ಲಾಗ್‌ಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ. ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಿ. ನಿಮಗೆ ಇಷ್ಟವಾಗುವ ಕೆಲಸಗಳನ್ನು ಮಾಡಿ, ಇವೆಲ್ಲವನ್ನೂ ಹೊರತುಪಡಿಸಿ ನಿಮ್ಮ ಗಮನವನ್ನು ಹೆಚ್ಚಿಸಿಕೊಳ್ಳಲು ಪ್ರತಿದಿನ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ಅಲ್ಲದೇ ಇದನ್ನು ನಿಮ್ಮ ಜೀವನದ ಭಾಗವಾಗಿ ರೂಢಿಸಿಕೊಳ್ಳಿ. ಇದು ನಿಮ್ಮ ಮನಸ್ಸಿನಲ್ಲಿ ಅನೇಕ ವಿಷಯಗಳು ನೆನಪಿನಲ್ಲಿಳಿಯಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಬಗ್ಗೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ನನ್ನ ಹೆಸರು ಸುನೀತಾ, ನಾನು ಬಿ.ಎಡ್. ಮುಗಿಸಿದ್ದೇನೆ. ನನಗೆ ಮದುವೆಯಾಗಿ 3 ವರ್ಷ ಆಗಿದೆ. ನನ್ನ ಗಂಡನಿಗೆ ಅವರ ಅತ್ತಿಗೆ ಜೊತೆಗೆ ಅನೈತಿಕ ಸಂಬಂಧವಿತ್ತು. ಆದರೆ ನನಗೆ ಮದುವೆಯಾದ ಮೇಲೆ ಅದು ತಿಳಿಯಿತು. ನಾನು ಎಷ್ಟು ಬಾರಿ ನೀವು ಮಾಡುತ್ತಿರುವುದು ಸರಿಯಲ್ಲ ಎಂದರು ಅವರು ಕೇಳಲು ಸಿದ್ಧ ಇಲ್ಲ. ನನಗೆ ಅವರ ಜೊತೆ ಬದುಕಲು ಆಗುತ್ತಿಲ್ಲ. ದಯವಿಟ್ಟು ನಾನು ಏನು ಮಾಡಬೇಕು ಹೇಳಿ?

ADVERTISEMENT

ನನಗೆ ನಿಮ್ಮ ಪ್ರಶ್ನೆಯಲ್ಲಿ ಸ್ಪಷ್ಟತೆ ಇಲ್ಲ ಸಮಸ್ಯೆ ಏನೆಂದು ಕಂಡುಕೊಳ್ಳಲಾಗುತ್ತಿಲ್ಲ. ಮೊದಲು ನೀವು ನಿಮ್ಮ ಗಂಡನಿಗೆ ಅವರ ಅತ್ತಿಗೆಯ ಜೊತೆ ಅನೈತಿಕ ಸಂಬಂಧವಿತ್ತು ಎಂದು ಹೇಳಿದ್ದೀರಿ. ಮುಂದೆ ನೀವೇ ಹೇಳಿದಂತೆ ‘ನೀವು ಮಾಡುತ್ತಿರುವುದು ಸರಿಯಲ್ಲ’ ಎಂದು ಗಂಡನಿಗೆ ಹೇಳಲು ಪ್ರಯತ್ನಿಸಿದ್ದೀರಿ. ಅಂದರೆ ಈಗಲೂ ನಿಮ್ಮ ಗಂಡ ಅತ್ತಿಗೆಯ ಜೊತೆ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಅರ್ಥವೇ? ಹಾಗೇನಾದರೂ ಇದ್ದರೆ ಮನೆಯ ಹಿರಿಯರೊಂದಿಗೆ ಮಾತನಾಡಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಿ. ಈ ಹಿಂದೆ ಆಗಿರುವುದನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅವರು ಹಿಂದಿನಂತಿಲ್ಲದಿದ್ದರೆ ಅವರನ್ನು ಕ್ಷಮಿಸಿ, ಅವರೊಂದಿಗೆ ಜೀವನವನ್ನು ಮುಂದುವರೆಸಿ.

ನನ್ನ ಹೆಸರು ಮಾಧವಿ. ನಾನು ಶೇ.96 ಅಂಕ ಪಡೆದು ಪಿಯುಸಿ ಮುಗಿಸಿದ್ದೆ. ಆದರೆ ಆಗಾಗ ನನಗೆ ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುತ್ತದೆ. ಆದರೆ ಗಮನ ಕೊಟ್ಟು ಓದಿದರೆ ಒಳ್ಳೆಯ ಅಂಕ ಗಳಿಸುತ್ತೇನೆ ಎಂಬ ನಂಬಿಕೆ ನನಗಿದೆ. ನನಗೆ ಈ ಸಮಸ್ಯೆಯಿಂದ ಹೊರ ಬರಲು ಪರಿಹಾರ ತಿಳಿಸಿ.

ನೀವೇ ತಿಳಿಸಿದಂತೆ, ಗಮನವಿಟ್ಟು ಓದಿದರೆ ಉತ್ತಮ ಅಂಕಗಳಿಸಲು ಸಾಧ್ಯ ಎಂಬುದು ನಿಮಗೆ ತಿಳಿದಿದೆ. ಈಗ ನಿಮ್ಮ ಸಮಸ್ಯೆಯ ಬಗ್ಗೆ ನಿಮಗೆ ಅರಿವಿದೆ, ಅಲ್ಲದೇ ಅದಕ್ಕೆ ಪರಿಹಾರ ಕೂಡ ತಿಳಿದಿದೆ. ನಿಮ್ಮ ಓದಿಗೆ ಯಾವುದು ಅಡ್ಡಿ ಪಡಿಸುತ್ತಿದೆ ಎಂಬುದನ್ನು ನೀವೇ ನಿರ್ಧರಿಸಿ. ಓದಿಗೆ ಅಡ್ಡಿಯಾಗುವ ಎಲ್ಲ ಸಾಧ್ಯತೆಗಳಿಂದ ದೂರವಿರಿ. ನಿಮ್ಮ ಗುರಿಯ ಮೇಲೆ ಗಮನ ಹರಿಸಿ. ಗಮನ ಹೆಚ್ಚಿಸಲು ಪ್ರತಿದಿನ ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಿ. ಸಮತೋಲಿತ ಡಯೆಟ್‌ ಹಾಗೂ ಏಕ್ಸ್‌ಸೈಜ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಮತ್ತು ಓದಿನ ಮಧ್ಯೆ ಆಗಾಗ ಬಿಡುವು ಪಡೆದುಕೊಳ್ಳಿ.

ನಾನು ಬಿ.ಎಡ್. ಪದವಿಧರೆ, ನನ್ನ ಗಂಡ ತುಂಬಾ ಕಡಿಮೆ ಓದಿದ್ದಾರೆ. ಆದರೆ ಅವರು ತುಂಬಾ ಒಳ್ಳೆಯವರು. ಮದುವೆಗೆ ಮೊದಲು ಕೆಲಸಕ್ಕೆ ಹೋಗುತ್ತಿದ್ದ ನಾನು ಈಗ ಕೆಲಸ ಬಿಟ್ಟಿದ್ದೇನೆ. ಒಂದು ಮಗುವಿದೆ. ಈಗ ಕೆಲಸಕ್ಕೆ ಹೋಗಬೇಕೆಂಬ ಆಸೆ. ಆದರೆ ‌ಗಂಡನ ಮನೆಯವರು ಅಂರ್ತಮುಖಿಗಳು. ಹಾಗಾಗಿ ನನಗೆ ಮನೆಯಲ್ಲಿ ಅವರೊಂದಿಗೆ ಹೊಂದಿಕೊಂಡು ಹೋಗಲು ಕಷ್ಟವಾಗುತ್ತಿದೆ. ಅತ್ತೆ ಅವರ ಹೆಣ್ಣುಮಕ್ಕಳನ್ನು ತುಂಬ ಪ್ರೀತಿಸುತ್ತಾರೆ. ನನ್ನ ಗಂಡ ಹಾಗೂ ಮಗುವಿನ ಮೇಲೆ ಅವರಿಗೆ ಕಾಳಜಿ ಇಲ್ಲ. ಆ ಕಾರಣಕ್ಕೆ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ಮುಂದಿನ ಜೀವನದ ಬಗ್ಗೆ ಭಯವಾಗುತ್ತಿದೆ. ಏನು ಮಾಡಬೇಕು ಎಂಬುದು ತೋಚುತ್ತಿಲ್ಲ.

ಇವೆಲ್ಲವೂ ಕುಟುಂಬದ ಭಾಗ. ಆರೋಗ್ಯಕರ ಸಂವಹನ, ಪ್ರೀತಿ, ಚಿಕ್ಕ ಪುಟ್ಟ ವಿಷಯಗಳಲ್ಲಿ ಹೊಂದಾಣಿಕೆಯಿದ್ದರೆ ಅದೇ ಕುಟುಂಬ. ಪ್ರತಿಯೊಬ್ಬರು ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ, ಹಾಗಾಗಿ ಕುಟುಂಬದ ಎಲ್ಲರೂ ಬಾಂಧವ್ಯವನ್ನು ಉಳಿಸಲು ಪ್ರಯತ್ನಿಸಬೇಕು. ನೀವು ಮುಂದಾಳತ್ವ ವಹಸಿ. ನಿಮ್ಮ ಗಂಡ ಹಾಗೂ ಅತ್ತೆ–ಮಾವನ ಜೊತೆ ಮಾತನಾಡಿ, ನೀವು ಕೆಲಸಕ್ಕೆ ಸೇರುವ ಬಗ್ಗೆ ಅವರ ಮನವೊಲಿಸಿ, ಕೆಲಸಕ್ಕೆ ಹೋಗಲು ಮನೆಯವರ ಸಹಕಾರ ಬೇಕು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. ನೀವು ಮನೆಯವರೊಂದಿಗೆ ತಾಳ್ಮೆಯಿಂದ, ವಿನಮ್ರರಾಗಿರಿ. ಸಮಯ ಕಳೆದಂತೆ ಅವರು ನಿಮಗೆ ಸಹಕಾರ ನೀಡುತ್ತಾರೆ; ಅಲ್ಲದೇ ನಿಮ್ಮೊಂದಿಗೆ ಪ್ರೀತಿಯಿಂದ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.