ADVERTISEMENT

ಕಗ್ಗವೆಂಬ ದಾರಿದೀಪ

ಎಚ್.ಎಸ್.ನವೀನಕುಮಾರ್
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

‘ಸತ್ತೆನೆಂದನ ಬೇಡ ಸೋತೆನೆಂದನ ಬೇಡ
ಬತ್ತಿತೆನ್ನೊಳು ಸತ್ವದೂಟೆ ಎಂದೆನಬೇಡ
ಮೃತ್ಯು ತೆರೆಯಿಳೆತ, ತೆರೆಯೇರೆ
ಮತ್ತೆ ತೋರ್ಪುದು ನಾಳೆ- ಮಂಕುತಿಮ್ಮ||

ಈ ಸಾಲುಗಳನ್ನು ಓದಿದಾಗ ಎಂತಹ ಸಂಕಷ್ಟದ ಸಂದರ್ಭದಲ್ಲೂ ಕಳೆದುಹೋದ ಚೈತನ್ಯ ಮರಳಿ ಬಂದಂತಾಗುವುದು. ಋಣಾತ್ಮಕ ಚಿಂತನೆಗಳಲ್ಲಿ ಮನಸ್ಸು ಕುಗ್ಗಿಹೋದ ಸಂದರ್ಭಗಳಲ್ಲಿ ಚಿಂತೆಯ ತೆರೆ ಏರಿ, ಬೆಳಕಿನ ನಾಳೆ ಕಾಣಿಸುವಂತೆ ಮಾಡುವ ನನ್ನ ನೆಚ್ಚಿನ ಪುಸ್ತಕ ಸಂಗಾತಿಯೆಂದರೆ, ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗಕ್ಕೆ ಅದ್ಭುತ ವ್ಯಾಖ್ಯಾನ ನೀಡಿರುವ ಡಿ.ಆರ್. ವೆಂಕಟರಮಣನ್ ಅವರ ಕೃತಿ ‘ಕಗ್ಗಕ್ಕೊಂದು ಕೈಪಿಡಿ’. 

ಒಂಟಿತನ ಕಾಡಿದಾಗ ನೆನಪಾಗುವ ಕಗ್ಗದ ಸಾಲೆಂದರೆ, ‘ಓರ್ವ ನಾನೆಂದು ನೀನೇಕೆ ತಿಳಿವೆ ಜಗದಿ? ನೂರ್ವಣಹಗಿಹರು ನಿನ್ನಾತ್ಮ ಕೋಶದಲಿ| ಪೂರ್ವಿಕರು, ಜೊತೆಯವರು, ಬಂಧು ಸಖ ಶತ್ರುಗಳು| ಸರ್ವರಿಂ ನಿನ್ನ ಗುಣ-ಮಂಕುತಿಮ್ಮ’ ನನ್ನೊಡನೆ ಇಷ್ಟೆಲ್ಲಾ ಜನರಿದ್ದಾರೆ ಎಂಬ ನಿರಂತರ ವಿಶ್ವಾಸ ಮೂಡಿಸುವ ಕಗ್ಗದ ಸಾಲುಗಳು ನನ್ನೆಲ್ಲಾ ಕ್ರಿಯಾಶೀಲತೆಗೆ ಪ್ರೇರಕ. ನನ್ನ ಕೆಲಸಕ್ಕೆ ತಕ್ಕ ಮನ್ನಣೆ ಪ್ರಾಪ್ತವಾಗುತ್ತಿಲ್ಲ ಎಂಬ ಕೊರಗು ಕಾಡಿದಾಗಲೆಲ್ಲಾ ಬಡಿದೆಬ್ಬಿಸುವುದು, ‘ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ| ಚಿನ್ನದಾತುರಕಿಂತ ಹೆಣ್ಣು ಗಂಡೊಲವು| ಮನ್ನಣೆಯ ದಾಹವುಂ ಈ ಎಲ್ಲಕುಂ ತೀಕ್ಷ್ಣತಮ| ತಿನ್ನುವುದಾತ್ಮವನೆ- ಮಂಕುತಿಮ್ಮ’ ಎಂಬ ಮಂಕುತಿಮ್ಮನ ವಾಣಿ. ಆತ್ಮವನ್ನೇ ತಿಂದು ಹಾಕುವ ಮನ್ನಣೆಯ ದಾಹಕ್ಕೆ ಬಲಿಯಾಗದಂತೆ ಕಾರ್ಯನಿರತನಾಗು ಎಂದು ಸದಾ ಎಚ್ಚರಿಸುವ ಈ ಸಾಲುಗಳು ನನ್ನ ಬದುಕನ್ನು ರೂಪಿಸಿವೆ. ನನಗಿರುವ ಸೌಲಭ್ಯಗಳು ಕಡಿಮೆ, ಬೇರೊಂದು ಕಡೆ, ಇನ್ನೊಂದು ಕ್ಷೇತ್ರದಲ್ಲಿದ್ದಿದ್ದರೆ ಇನ್ನಷ್ಟು ಸಾಧಿಸಬಹುದಿತ್ತು ಎಂಬ ಹಪಹಪಿ ಶುರುವಾದಾಗ ‘ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ಇರುವ ಕಣ್ಣಿರುವ ಬೆಳಕಿನೊಳಾದಿನಿತ ನೋಡಿ| ಪರಿಕಿಸಿದೊಡದು ಲಾಭ- ಮಂಕುತಿಮ್ಮ’ ಎಂಬ ತಿಮ್ಮ ಗುರುವಿನ ಸಾಲು ನೆನಪಾಗಿ, ಕಾಣಿಸುತ್ತಿರುವ ಬೆಳಕಲ್ಲಿ ಬದುಕ ಹಸನಾಗಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತದೆ. ಇನ್ನೊಬ್ಬರ ತಪ್ಪಿನ ಕಡೆಗೆ ಬೊಟ್ಟು ಮಾಡುವಾಗ, ಬೇರೆಯರನ್ನು ತಿದ್ದಬೇಕೆಂಬ ಅಹಂಭಾವ ಕಾಡಿದಾಗ ‘ತಿದ್ದಿಕೊಳೋ ನಿನ್ನ ನೀಂ ಜಗವ ತಿದ್ದುವುದಂತಿರಲಿ’ ಎಂದು, ಕಗ್ಗಕ್ಕೊಂದು ಕೈಪಿಡಿ ಪುಸ್ತಕ ಮುಖಪುಟದ ಚಿತ್ರದಲ್ಲಿರುವ ಡಿ.ವಿ.ಜಿ.ಅವರು ತಾವು ಹಿಡಿದ ಕೋಲಿಂದ ತಿವಿದು ಎಚ್ಚರಿಸಿದಂತಾಗುತ್ತದೆ!

ಹೊಟ್ಟೆಕಿಚ್ಚೆಂಬ ಮನದ ವೈರಸ್ಸು ಅಲ್ಲಿಲ್ಲಿ ಸುಳಿದಾಡಿದಾಗ ‘ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್’ ಎಂಬ ಕಗ್ಗದ ಸಾಲುಗಳು ನೆನಪಾಗಿ ನಮ್ಮ ವ್ಯಕ್ತಿತ್ವವನ್ನೇ ಸುಡುವ ಕಿಡಿ ಈ ಹೊಟ್ಟೆಕಿಚ್ಚು ಎಂಬ ಸತ್ಯದ ಅರಿವಾಗುತ್ತದೆ. ಯುವಕರಿಗೆ ವ್ಯಕ್ತಿವಿಕಸನ ತರಬೇತಿ ನೀಡುವ ಸಂದರ್ಭಗಳಲ್ಲಿ, ಆತ್ಮವಿಶ್ವಾಸವೆಂಬ ಅದ್ಭುತ ಆಂತರಿಕ ಸಂಪತ್ತಿನ ಕುರಿತು ಹೇಳುವಾಗ ಮೊದಲು ನೆನಪಾಗುವುದು, ‘ಸಂಪೂರ್ಣ ಗೋಳದಲಿ ನೆನದೆಡೆಯೆ ಕೇಂದ್ರವಲ| ಕಂಪಿಸುವ ಕೇಂದ್ರ ನೀ ಬ್ರಹ್ಮ ಕಂದುಕದಿ| ಶಂಪಾತರಂಗವೊದರಳು ತುಂಬಿ ಪರಿಯುತಿರೆ| ದಂಭೋಳಿ ನೀನಾಗು-ಮಂಕುತಿಮ್ಮ||’ ಎಂಬ ದಿವ್ಯ ಸಾಲುಗಳು. ನಮ್ಮಾಳದಲ್ಲಿರುವ ಆತ್ಮಬಲವೆಂಬ ಪ್ರಚಂಡ ಶಕ್ತಿಯನ್ನು, ಇಂದ್ರನ ವಜ್ರಾಯುಧಕ್ಕೆ ಹೋಲಿಸುತ್ತಾರೆ, ಡಿ.ವಿ.ಜಿ.ಅವರು. ‘ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ|| ಎಂಬ ಸಾಲುಗಳಲ್ಲಿ ಏನೇ ಬರಲಿ ನಗುನಗುತಾ ಬಾಳಿ, ಆ ನಗುವಿನ ವರಕ್ಕಾಗಿ ನಿತ್ಯ ಪ್ರಾರ್ಥಿಸುವಂತೆ ಪ್ರೇರೇಪಿಸುವ ಕನ್ನಡದ ಭಗವದ್ಗೀತೆ ಮಂಕುತಿಮ್ಮನ ಕಗ್ಗವನ್ನು ಮನದಾಳಕ್ಕಿಳಿ­ಯುವಂತೆ ವ್ಯಾಖ್ಯಾನಿಸಿರುವ ವೆಂಕಟರಮಣನ್ ಅವರ ಕಗ್ಗಕ್ಕೊಂದು ಕೈಪಿಡಿ ಸದಾ ನನ್ನ ಕೈಹಿಡಿದು ಬೆಳಕಿನೆಡೆಗೆ ನಡೆಸುವ ಪುಸ್ತಕ. ನನ್ನ ಜಿಜ್ಞಾಸೆಗಳಿಗೆ ಪರಿಹಾರ ತೋರುವ ದಾರಿದೀಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.