ADVERTISEMENT

ಕೊಡೆ ತಂದ ಭಯ

ಲತಾ ಹೆಗಡೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಕೊಡೆ ತಂದ ಭಯ
ಕೊಡೆ ತಂದ ಭಯ   

‘ ಮಳೆ ಬಂತು ಮಳೆ
  ಕೊಡೆ ಹಿಡಿದು ನಡೆ
ಜಾರಿ ಬಿದ್ದು ಹೋದ ಮೇಲೆ
  ಬಟ್ಟೆಯೆಲ್ಲ ಕೊಳೆ ... !’

ಪ್ರತಿ ಮಳೆಗಾಲದಲ್ಲಿ ಕೊಡೆ ಹಿಡಿದು ನಡೆಯುವಾಗ ಅಥವಾ ಶಾಲೆ ಮಕ್ಕಳು ಕೊಡೆ ಹಿಡಿದು ನಡೆಯುವಾಗ ನನಗೆ ಈ ಸಾಲು ನೆನಪಾಗಿ ಗುನುಗುತ್ತಿರುತ್ತೇನೆ. ಜೊತೆಗೆ ಬಾಲ್ಯದ ನೆನಪಿಗೆ ಜಾರುತ್ತೇನೆ.

ಬಾಲ್ಯದಲ್ಲಿ ಈ ಪದ್ಯ ನನಗೆ ಭಯ ಹುಟ್ಟಿಸಿತ್ತು. ಮಳೆ ಬಂದರೆ ಕೊಡೆ ಹಿಡಿದು ನಡೆದರೆ ಎಲ್ಲಿ ಜಾರಿ ಬೀಳುತ್ತೇನೋ ಎಂಬ ತರ್ಕ ನನ್ನ ಮನದಲ್ಲಿ ಬಲವಾಗಿ ಬೇರೂರಿತ್ತು.ನನ್ನಷ್ಟೇ ಎತ್ತರವಿದ್ದ ಆ ಚೂಪು ಕೊಡೆಯನ್ನು ಮುಟ್ಟಲೂ ಹೆದರುತ್ತಿದ್ದೆ.  ಧೈರ್ಯ ಮಾಡಿ ಕೊಡೆ ಬಿಡಿಸಿ, ಮಳೆ ಬರುವಾಗ ಅಂಗಳದಲ್ಲಿ ನಿಂತೆನೆಂದರೆ ಅಣ್ಣಂದಿರ ಗೇಲಿ ಶುರುವಾಗುತ್ತಿತ್ತು.

‘ಏ ಹಂಚಿಕಡ್ಡಿ...ಛತ್ರಿ ಜೊತೆಗೆ ಗಾಳೀಲಿ ಏಲ್ಲಾದ್ರೂ ಹಾರಿ ಹೋದಿಯಾ! ಇರೋದು ಒಂದು ಛತ್ರಿ, ಸುಮ್ನೆ ಒಳಗೆ ಬಾ’ ಎನ್ನುತ್ತಿದ್ದರು. ಅವರ ಮಾತು ಕೇಳುತ್ತಿದ್ದಂತೆ ಧೈರ್ಯವೆಲ್ಲ  ಗಾಳಿಯಲ್ಲಿ  ತೂರಿ ಹೋಗುತ್ತಿತ್ತು.  ಹಾಗಾಗಿ ಹೊರಗೆ ಹೋಗುವ ಪ್ರಮೇಯ ಬಂದಾಗಲೆಲ್ಲ ನೆನೆದುಕೊಂಡೇ ಹೋಗುತ್ತಿದ್ದೆ. ಶೀತ ಹೆಚ್ಚಾಗಿ ಜೋರಾಗಿ ಸೀನಿದಾಗಲೆಲ್ಲಾ ತಲೆಯನ್ನು ಮೊಟಕುತ್ತಿದ್ದ ಅಮ್ಮನ ಗಂಟುಮುಖದ ಚಿತ್ರಣ ನೆನಪಿನಂಗಳದಲ್ಲಿ ಇನ್ನೂ ಹಚ್ಚ ಹಸುರಾಗಿದೆ.

ಪದವಿಯನ್ನು ಕೊಡೆ ಇಲ್ಲದೆ ಮುಗಿಸಿದೆ. ಸ್ನಾತಕೋತ್ತರ ಪದವಿಯಲ್ಲಿದ್ದಾಗ ಬಿಳಿ ಚುಕ್ಕೆಯಿರುವ ಮನಮೋಹಕ ಕೆಂಪುಬಣ್ಣದ  ಕೊಡೆ  ತೆಗೆದುಕೊಂಡಿದ್ದೆ. ಈ ವೇಳೆ ಬಾಲ್ಯದಲ್ಲಿ ಕೊಡೆಯ ಕುರಿತು ಇದ್ದ ಪೂರ್ವಾಗ್ರಹಗಳೆಲ್ಲಾ ತೊಲಗಿತು.

ಗೆಳೆತಿಯರ ಜೊತೆ ಸಿನಿಮಾ ನೋಡಲು ಹೋಗುವಾಗ ಮೆಜೆಸ್ಟಿಕ್‌ನಲ್ಲಿ ಬೇಕೆಂದೆ ಮೈಕೈ ತಾಗಿಸಿ ‘ಸಾರಿ’ ಎಂದು ಹಲ್ಲು ಕಿರಿಯುವ ಬೀದಿಕಾಮಣ್ಣರಿಂದ  ರಕ್ಷಣೆ ಪಡೆಯಲು ಈ ಮಡಚಿದ ಕೊಡೆ ಸಹಾಯಕ್ಕೆ ಬಂದಿದೆ. ಕೈ ತಾಗಿಸಲು ಪ್ರಯತ್ನಿಸುವವರ ಕೈಗೆ ಕೊಡೆಯಿಂದ ಆಕಸ್ಮಿಕವೆಂಬಂತೆ ಬಲವಾಗಿ ಹೊಡೆದು ‘ಸಾರಿ’ ಎಂದು ನಾನು ನಕ್ಕಿದಿದೆ. 

ಕೊಡೆಯಲ್ಲಿ ಸಾಕಷ್ಟು ಬದಲಾವಣೆಗಳಾದರೂ ನಾನು ಮೊದಲ ಬಾರಿ ಬಳಸಿದ ಬಿಳಿ ಚುಕ್ಕೆಯ ಕೆಂಪು ಕೊಡೆ ಇಂದಿಗೂ ನನ್ನ ಬಳಿ  ಭದ್ರವಾಗಿದೆ. ತೂತು ಬಿದ್ದು ಬಣ್ಣಗೆಟ್ಟಿರುವ ಆ ಕೊಡೆಯನ್ನು ಕೈಯಲ್ಲಿ ಹಿಡಿದುಕೊಂಡು ಸವಿನೆನಪಿಗೆ ಜಾರಿ ಮೌನ ಸಂಭಾಷಣೆ  ನಡೆಸುತ್ತಿರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.