ADVERTISEMENT

ಗರ್ಭಿಣಿಗೆ ಕಾಡುವ ಕಾಲು ನೋವು

ಡಾ.ಕೆ.ಎಸ್‌.ಪಲ್ಲವಿ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ಮದುವೆಯಾಗಿ 2 ವರ್ಷದ ನಂತರ ಸ್ಮಿತ ಗರ್ಭಿಣಿಯಾದಳು. ಒಟ್ಟು ಕುಟುಂಬದಲ್ಲಿದ್ದರಿಂದ ವಿಪರೀತ ಕೆಲಸವಿರುತ್ತಿತ್ತು. ಕೆಲಸ ಮಾಡಿ ಮಾಡಿ ಸಾಕಾಗಿ ಮಲಗಿದರೆ ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಬಹಳ ಹೊತ್ತಿನ ನಂತರ ನಿದ್ದೆ ಬಂದು ನಂತರ ಇದ್ದಕ್ಕಿದ್ದಂತೆ ಕಾಲು ನೋವು ಶುರುವಾಗುತ್ತಿತ್ತು. ಅದು ಎಷ್ಟು ತೀವ್ರವಾಗಿರುತ್ತಿತ್ತೆಂದರೆ ಒಮ್ಮೆ ಅವಳ ಜೀವ ಹೋಯಿತೆನ್ನಿಸುತಿತ್ತು. ಎಣ್ಣೆ ಬಿಸಿಮಾಡಿ ಹಚ್ಚಿ ಅರ್ಧ ಗಂಟೆ ತಿಕ್ಕಿದ ನಂತರವಷ್ಟೇ ಸ್ವಲ್ಪ ಕಡಿಮೆಯಾಗುತ್ತಿತ್ತು. ಇದು ಕ್ರಮೇಣ ಹೆಚ್ಚುತ್ತಾ ಹೋಗಿ ಅವಳಿಗೆ ಹೆರಿಗೆಯ ಸಮಯದಲ್ಲಿ ಹೆರಿಗೆ ನೋವಿಗಿಂತ ಅದರ ನೋವೇ ಹೆಚ್ಚಾಯಿತು.

ಇದು ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಾಣಬಹುದಾದ ಗಂಭೀರವಲ್ಲದ, ಆದರೆ ತಡೆಯಲಾಗದ ಸಮಸ್ಯೆ.
ಇದು ಹೆಚ್ಚು ಮೀನು ಖಂಡದಲ್ಲಿ ಬರುತ್ತದೆ. ಇದು ಅತಿ ತೀವ್ರವಾಗಿದ್ದು ತಡೆಯಲಸಾಧ್ಯವಾಗಿರುತ್ತದೆ. ಇದು ರಾತ್ರಿ ವೇಳೆ ಬರುವುದು ಸಾಮಾನ್ಯ.

ಕಾರಣ
* ಅತಿ ಹೆಚ್ಚು ಸಮಯ ನಿಂತು ಕೆಲಸ ಮಾಡುವುದು, ಕಾಲಿನ ಮೇಲೆ ಒತ್ತಡ
* ಹಸಿದುಕೊಂಡಿರುವುದು, ಮಲಬದ್ಧತೆ
* ಅತಿಯಾದ ದೇಹದ ಆಯಾಸ
* ಚಳಿಗಾಲದಲ್ಲಿ, ತಣ್ಣನೆಯ ಸಮಯದಲ್ಲಿ ಉದಾ: ರಾತ್ರಿಯ ವೇಳೆ. ದೇಹಕ್ಕೆ ಬೇಕಾಗುವಷ್ಟು ಜಿಡ್ಡು ಸೇವಿಸದೇ ಇರುವಾಗ
* ಹೈಪರ್‌ ಥೈರಾಯ್ಡಿಸಂ ಇದ್ದರೆ
* ಮಧುಮೇಹದಿಂದ

ಪರಿಹಾರೋಪಾಯಗಳು
* ಪ್ರತಿನಿತ್ಯ ಮಲಗುವ ಮೊದಲು ಕಾಲಿಗೆ ಎಣ್ಣೆ ಹಚ್ಚಿ ಬಿಸಿನೀರಿನಲ್ಲಿ 10 ನಿಮಿಷ ಕಾಲಿರಿಸಿಕೊಂಡು ನಂತರ ಮಲಗುವುದು.
* ಸಾಯಂಕಾಲ ಕಾಲಿಗೆ ಎಣ್ಣೆ ಹಚ್ಚಿ ಲಘು ವ್ಯಾಯಾಮ ಮಾಡುವುದು.
* ಸಿಹಿ ಪದಾರ್ಥಗಳನ್ನು ಉಪಯೋಗಿಸುವುದು
* ಆದಷ್ಟು ಕೂತು ಕೆಲಸ ಮಾಡುವುದು. ನಿಂತು ಕೆಲಸ ಮಾಡುವುದನ್ನು ಕಡಿಮೆಮಾಡಬೇಕು
* ಕಾಲು ಮಡಚಿ ಕೂರುವುದು ಒಳಿತು
* ಕಾಲುಚೀಲ ಬಳಸುವುದು, ಕಾಲ ಕೆಳಗೆ ಕಂಬಳಿ ಹಾಸಿಕೊಳ್ಳುವುದು ಒಳಿತು
* ದೇಹಕ್ಕೆ ಬೇಕಾಗುವಷ್ಟು ಜಿಡ್ಡು ತಿನ್ನಬೇಕು
* ನಡೆಯುವುದರಿಂದ ಕಾಲಿನಲ್ಲಿ ರಕ್ತಸಂಚಾರ ಹೆಚ್ಚಿ ಕಾಲು ನೋವು ಕಡಿಮೆಯಾಗುತ್ತದೆ
* ಮಲಗುವಾಗ ಕಾಲನ್ನು ಸ್ವಲ್ಪ ಎತ್ತರದಲ್ಲಿ ಇಟ್ಟುಕೊಳ್ಳುವುದು ಒಳಿತು.
* ಮಲಗುವಾಗ ಫ್ಯಾನ್‌ ಹಾಕದಿರುವುದು ಒಳಿತು
* ಆದಷ್ಟು ಬೆಚ್ಚಗಿರುವುದು ಉತ್ತಮ. ಹಾಗು ಮಧುಮೇಹದಿಂದಾದರೆ ಸೂಕ್ತ ಚಿಕಿತ್ಸೆ ಪಡೆಯಬೇಕು.

ಆಯುರ್ವೇದ ಚಿಕಿತ್ಸೆ
* ಸುಕುಮಾರ ಗೃತ, ಗುಗ್ಗುಲು ತಿಕ್ತಕ ಗೃತ ಸೇವನೆ.
* ಕ್ಷೀರಬಲ ಸೇವನೆ, ಸ್ಥಾನಿಕ ಅಭ್ಯಂಗ, ಸ್ವೇದನ, ಮಾತ್ರಾ ಬಸ್ತಿ, ಕ್ಷೀರ ಬಸ್ತಿ, ವ್ಯಾಯಾಮ, ಪ್ರಾಣಾಯಾಮ.‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.