ADVERTISEMENT

‘ನನಗೆ ಯಾರ ಮೇಲೂ ನಂಬಿಕೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
‘ನನಗೆ ಯಾರ ಮೇಲೂ ನಂಬಿಕೆ ಇಲ್ಲ’
‘ನನಗೆ ಯಾರ ಮೇಲೂ ನಂಬಿಕೆ ಇಲ್ಲ’   

1. ನಾನು ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಮುಗಿಸಿದ್ದೇನೆ. ಎಂ.ಸಿ.ಎ. ಸ್ಟೂಡೆಂಟ್‌ಗೆ ಮೂರು ವರ್ಷ ಪಾಠ ಮಾಡಿದ್ದೇನೆ. ಮದುವೆಯಾಗಿ ಮೂರು ತಿಂಗಳಾಗಿದೆ, ಗಂಡನ ಮನೆಯಲ್ಲಿ ಕೆಲಸಕ್ಕೆ ಹೋಗುವುದು ಬೇಡ ಎಂದರು. ಓದಿರುವ ನನಗೆ ಗೃಹಿಣಿಯಾಗಿ ಮನೆಯಲ್ಲಿ ಇರಲು ಇಷ್ಟವಿಲ್ಲ. ಮನೆಯಲ್ಲಿ ಯಾರೂ ನನ್ನ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.
ಶ್ರದ್ಧಾ, ಊರು ಬೇಡ

ನಿಮ್ಮಂತಹ ಯುವಜನರು ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದು ಒಂದು ರೀತಿಯ ನೊಬೆಲ್‌ ಸೇವೆ. ಇಂದಿನ ಅನೇಕ ಕುಟುಂಬಗಳು ತಮ್ಮ ಸೊಸೆ ಕೆಲಸಕ್ಕೆ ಹೋಗುವುದನ್ನು ಪ್ರೋತ್ಸಾಹಿಸುತ್ತಾರೆ. ಅದರಲ್ಲೂ ಅಧ್ಯಾಪಕರ ವೃತ್ತಿ ಎಂದರೆ ಖಂಡಿತ ಒಪ್ಪುತ್ತಾರೆ. ಮದುವೆಯಾದ ಮಹಿಳೆಗೆ ಈ ವೃತ್ತಿ ಆರಾಮದಾಯಕ ಕೂಡ. ನನಗೆ ಅನ್ನಿಸಿದ ಹಾಗೇ ಇದರ ಬಗ್ಗೆ ನಿಮ್ಮ ಕುಟುಂಬದವರಿಗೆ ಮಾಹಿತಿ ಕಡಿಮೆ ಇದೆ ಎಂದೆನ್ನಿಸುತ್ತಿದೆ. ನಿಮ್ಮ ಗಂಡನ ಮನವೋಲಿಸಿ ಮನೆಯವರ ಬಳಿ ನಿಮ್ಮ ಕೆಲಸದ ಬಗ್ಗೆ ಮಾತನಾಡುವಂತೆ ತಿಳಿಸಿ. ಈ ಕೆಲಸ ಎಷ್ಟು ಆರಾಮದಾಯಕವಾಗಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ನೀವೂ ಪ್ರಯ್ನತಿಸಿ. ಈ ಕೆಲಸದಲ್ಲಿ ನಿಮಗೆ ಒಂದು ನಿರ್ದಿಷ್ಟ ಕಾಲಾವಕಾಶ ಮತ್ತು ರಜೆ ಇರುತ್ತದೆ ಎಂಬುದನ್ನು ತಿಳಿಸಿ, ಮನೆಯವರ ಬಳಿ ಮಾತನಾಡಿ. ಅವರು ಯಾಕೆ ಒಪ್ಪುತ್ತಿಲ್ಲ ಮತ್ತು ಕೆಲಸಕ್ಕೆ ಕಳುಹಿಸಲು ಒಪ್ಪದಿರಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ, ಬಹುಶಃ ಅವರು ಮನೆ ಕೆಲಸ ಹಾಗೂ ಅಡುಗೆಯ ಕೆಲಸದಲ್ಲಿ ನಿಮ್ಮ ಸಹಾಯ ದೊರೆಕದೇ ಇರಬಹುದು ಎಂಬುದರ ಬಗ್ಗೆ ಚಿಂತಿಸುತ್ತಿರಬಹುದು. ಅದಕ್ಕೆ ಬದಲಿ ವ್ಯವಸ್ಥೆ ಮಾಡಿ ಅಥವಾ ಮನೆಯ ಕೆಲವು ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳುವುದಾಗಿ ಅವರಿಗೆ ಭರವಸೆ ನೀಡಿ. ಅವರ ಕಾಳಜಿಗೆ ಸ್ಪಂದಿಸಿ, ಸ್ವೀಕರಿಸಿ. ಬಹುಶಃ ಆಮೇಲೆ ಅವರು ಈ ಬಗ್ಗೆ ಧನಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಬಹುದು. ನಿರಂತರವಾಗಿ ಅವರ ಮನವೊಲಿಸಲು ಪ್ರಯ್ನತಿಸಿ. ಖಂಡಿತ ನೀವು ಯಶಸ್ಸು ಸಾಧಿಸುತ್ತೀರಿ.


2. ನಾನು ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆಂಡತಿ ಕಳೆದ ಆರು ವರ್ಷಗಳಿಂದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ನನಗೆ ನನ್ನ ಹೆಂಡತಿಯ ಆರ್ಥಿಕ ಸ್ಥಿತಿ ಮತ್ತು ಸಂಬಳದ ಬಗ್ಗೆ ಅಸಮಾಧಾನವಿದೆ. ಅವಳಿಗೆ ತಿಂಗಳಿಗೆ 16 ಸಾವಿರ ಸಂಬಳ ದೊರೆಯುತ್ತದೆ. ಆದರೆ ಅವಳು ಅಷ್ಟು ಹಣವನ್ನು ಖರ್ಚು ಮಾಡಿ, ಬೇರೆಯವರಿಂದ ಸಾಲ ಪಡೆಯುತ್ತಾಳೆ. ಆದರೆ ಅವಳು ಮಾಡಿದ ಸಾಲವನ್ನು ತೀರಿಸುವುದಿಲ್ಲ. ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇದೆ. ಅವಳ ಬಳಿ ಹಣಕಾಸಿನ ಬಗ್ಗೆ ಕೇಳಿದರೆ ಅಸಡ್ಡೆ ತೋರುತ್ತಾರೆ. ಇದರಿಂದ ನಾನು ತುಂಬಾ ನೊಂದಿದ್ದೇನೆ.
ಹೆಸರು, ಊರು ಇಲ್ಲ.

ADVERTISEMENT

ನನಗೆ ಅರ್ಥವಾಗುತ್ತದೆ. ಮನೆಯಲ್ಲಿ ಇಬ್ಬರು ದುಡಿಯುವಾಗ ಇಬ್ಬರೂ ಸಂಸಾರಕ್ಕಾಗಿ ದುಡಿಯುತ್ತಾರೆಯೇ ಹೊರತು ಒಬ್ಬರಿಗಾಗಿ ಮಾತ್ರವಲ್ಲ. ನಿಮ್ಮ ಹೆಂಡತಿ ಅದನ್ನು ಅರ್ಥಮಾಡಿಕೊಳ್ಳಬೇಕು. ನೀವು ಹೇಳಿದಂತೆ ಈಗಾಗಲೇ ನೀವು ಅವರ ಬಳಿ ಮಾತನಾಡಲು ಪ್ರಯ್ನತಿಸಿದ್ದೀರಿ. ಇನ್ನೊಮ್ಮೆ ಅವರ ಬಳಿ ಪ್ರೀತಿಯಿಂದ, ಮನವೊಲಿಸುವ ರೀತಿಯಲ್ಲಿ ಮಾತನಾಡಲು ಪ್ರಯ್ನತಿಸಿ, ಬದಲಾಗಿ ಆಳುವ ಮನೋಭಾವದಿಂದಲ್ಲ. ಮನೆಯಲ್ಲಿ ಅವರು ಗೌರವ ನೀಡುವ, ಮಾತನ್ನು ಕೇಳುವವರ ಬಳಿ ಸಹಾಯ ಪಡೆದುಕೊಳ್ಳಿ. ‘ನೀನು ಮಾಡಿದ ಸಾಲವನ್ನು ಹಿಂದಿರುಗಿಸುವ ಜವಾಬ್ದಾರಿ ನಿನ್ನದೇ’ ಎಂಬುದನ್ನು ನಿಮ್ಮ ಹೆಂಡತಿಗೆ ಮನವರಿಕೆಯಾಗುವಂತೆ ಅವರ ಬಳಿ ಹೇಳಿಸಿ. ಆರೋಗ್ಯಕರ ಸಂವಹನದಿಂದ ಖಂಡಿತ ಪರಿಹಾರದ ದಾರಿಯನ್ನು ಕಂಡುಕೊಳ್ಳಬಹುದು.

3. ನನಗೆ ಯಾವಾಗಲೂ ಒಬ್ಬಳೇ ಇರಬೇಕು ಅನ್ನಿಸುತ್ತೆ. ಯಾರ ಮೇಲೂ ನಂಬಿಕೆ ಇಲ್ಲ. ಎಲ್ಲರ ಮೇಲೂ ಸಿಟ್ಟು ಬರುತ್ತೆ. ನಾನು ಏನು ಮಾಡಬೇಕು ತಿಳಿಯುತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ಸಹನಾ, ಊರು ಇಲ್ಲ.

ನೀವು ಇಲ್ಲಿ ಬೇಕಾದ ಎಲ್ಲಾ ಮಾಹಿತಿಯನ್ನು ತಿಳಿಸಿಲ್ಲ, ನಿಮ್ಮ ವಯಸ್ಸು, ನೀವೇನು ಮಾಡುತ್ತಿದ್ದೀರಿ? ಯಾರ ಜೊತೆ ವಾಸಿಸುತ್ತಿದ್ದೀರಾ? ಅಥವಾ ನೀವು ಆರ್ಥಿಕವಾಗಿ ಸ್ವತಂತ್ರರಾಗಿದ್ದೀರಾ? – ಎಂಬುದನ್ನು ತಿಳಿಸಿಲ್ಲ. ಈ ಎಲ್ಲ ವಿಷಯಗಳನ್ನು ತಿಳಿದರಷ್ಟೇ ನಾನು ನಿಮಗೆ ಸಹಾಯ ಮಾಡಲು ಸಾಧ್ಯ. ನಿಮಗೆ ತುಂಬಾ ಹತ್ತಿರದವರು ಅಂದುಕೊಂಡವರಿಂದ ನಿಮಗೆ ಯಾವುದೋ ಕಹಿ ಅನುಭವವಾಗಿದೆ ಎಂದು ನನಗನ್ನಿಸುತ್ತಿದೆ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬರ ಮೇಲೆ ನಂಬಿಕೆ ಕಳೆದುಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ನೀವು ಒಬ್ಬ ಉತ್ತಮ ಆಪ್ತಸಮಾಲೋಚಕರನ್ನು ಕಂಡು ನಿಮ್ಮ ಭಾವನೆಗಳನ್ನು ಅವರ ಬಳಿ ಹಂಚಿಕೊಳ್ಳುವುದು ಉತ್ತಮ ಎನ್ನುವುದು ನನ್ನ ಸಲಹೆ. ಅದರಿಂದ ಖಂಡಿತ ನಿಮಗೆ ಸಹಾಯವಾಗಬಹುದು.

4. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳು ನನ್ನನ್ನು ಪ್ರೀತಿಸುತ್ತಿದ್ದಳು. ನಿರಂತರವಾಗಿ ಎರಡು ವರ್ಷ ಪ್ರೀತಿ ಮಾಡಿದೆವು. ನನಗೆ ಹಾಸ್ಟೆಲ್ ವಾರ್ಡನ್ ಕೆಲಸ ಸಿಕ್ಕ ಮೇಲೆ ಮದುವೆ ಆಗೋಣ ಎಂದು ನಾವು ಮಾತನಾಡಿಕೊಂಡಿದ್ದೆವು. ಆದರೆ ಕೇವಲ ಒಂದು ಅಂಕದಿಂದ ನನಗೆ ಕೆಲಸ ತಪ್ಪಿ ಹೋಯಿತು. ಈಗ ನಾನು ಫೋನ್ ಮಾಡಿದರೆ ಅವಳು ರಿಸೀವ್ ಮಾಡುತ್ತಿಲ್ಲ. ನನಗೆ ಅವಳನ್ನು ಮರೆಯಲು ಆಗುತ್ತಿಲ್ಲ. ಓದೋಕೆ ಕುಳಿತುಕೊಂಡರೆ ಅವಳ ಮುಖವೇ ಕಣ್ಣ ಮುಂದೆ ಬಂದಂತೆ ಭಾಸವಾಗುತ್ತದೆ. ನಾನು ಏನು ಮಾಡಲಿ? ಅವಳನ್ನು ಹೇಗೆ ಮರೆಯಲಿ?
ಬಸವರಾಜ್, ಊರು ಇಲ್ಲ

ಹುಡುಗಿಯರು ಎಲ್ಲಾ ಕಡೆಯಿಂದ ತಮ್ಮ ಭದ್ರತೆಯನ್ನು ನೋಡುತ್ತಾರೆ. ನಿಮಗೆ ಆ ಕೆಲಸ ದೊರಕದೇ ಇರುವುದಕ್ಕೆ ಆ ಹುಡುಗಿಗೆ ಅಭದ್ರತೆ ಕಾಡಿರಬಹುದು. ಅದಲ್ಲದೇ ನಿಮಗೆ ಕೆಲಸವಿಲ್ಲದೇ ಹೇಗೆ ಮನೆಯವರ ಬಳಿ ಮಾತನಾಡಲು ಸಾಧ್ಯ. ಆದರೆ ದೂರಾಗುವ ಮೊದಲು ಅವರು ನಿಮ್ಮೊಂದಿಗೆ ಸರಿಯಾಗಿ ಮಾತನಾಡಬೇಕಿತ್ತು. ಅದು ಆಕೆಯ ತಪ್ಪು. ಈಗ ನಿಮಗೆ ತಿಳಿದಿರುವಂತೆ ಅವರು ನಿಮ್ಮಿಂದ ದೂರವಾಗಿದ್ದಾರೆ. ನೀವು ಈಗ ಅವರ ಬಗ್ಗೆ ಯೋಚಿಸುವುದಾಗಲೀ, ಚಿಂತಿಸುವುದಾಗಲೀ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗೆಂದು ನಾನು  ಅವರನ್ನು ಮರೆತು ಮುಂದೆ ಸಾಗಿ ಎಂದು ನಿಮಗೆ ಹೇಳುತ್ತಿಲ್ಲ. ಅದಲ್ಲದೇ ಇದು ಪ್ರಾಯೋಗಿಕವಾಗಿ ಅಸಾಧ್ಯ ಕೂಡ. ಅದರ ಬದಲಾಗಿ ನೆನಪು ಬರಲಿ, ಅವರ ಜೊತೆ ಕಳೆದ ಸುಂದರ ಕ್ಷಣಗಳ ಬಗ್ಗೆ ಒಳ್ಳೆಯ ಭಾವನೆ ಇರಿಸಿಕೊಳ್ಳಿ. ಜೀವನದ ಬೆಲೆ ಹಾಗೂ ಕರ್ತವ್ಯವನ್ನು ಮರೆತು ಪ್ರತಿಕ್ಷಣವೂ ಆ ಹುಡುಗಿಯ ನೆನಪು ಮಾಡಿಕೊಂಡು ಭಾವನಾತ್ಮಕ ಮೂರ್ಖನಂತೆ ಇರಬೇಡಿ. ಸಮಯ ಎಲ್ಲವನ್ನು ಮರೆಸುತ್ತದೆ. ಕಾಲದೊಂದಿಗೆ ಮುಂದೆ ಸಾಗಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.