ADVERTISEMENT

ನೆನಪಾಗುವ ಬಳೆಗಾರ

ಸಿ.ಎಸ್.ಅನುರಾಧ
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ಶ್ರಾವಣ ಮಾಸ ಎಂದರೆ ಮತ್ತೆ ಮತ್ತೆ ನೆನಪಾಗುವ ಮುಖ ಬಳೆಗಾರನದು. ಈಗವನು ಬಂದರೆ ಅವನು ತಂದಿದ್ದ ಬಳೆಗಳನ್ನೆಲ್ಲಾ ತೆಗೆದುಕೊಂಡು ಬಿಡುತ್ತಿದ್ದೆನಾ? ಗೊತ್ತಿಲ್ಲಾ. ಬಳೆ ತೆಗೆದುಕೊಳ್ಳುವಾಗಲೆಲ್ಲಾ ಅವನ ನೆನಪಾಗಿ ಕಣ್ಣು ತೇವವಾಗತ್ತೆ.

28 ವರ್ಷಗಳ ಹಿಂದಿನ ಮಾತಿದು. ಶ್ರಾವಣ ಮಾಸದ ಮೊದಲ ದಿನ ಇರಬಹುದು, ಬಳೆ ಮಲ್ಹಾರ ಹೊತ್ತುಬಂದ ಬಳೆಗಾರ ಮನೆ ಜಗುಲಿಮೇಲೆ ಬಳೆಚೀಲ ಇಳಿಸಿದ. ನಮ್ಮ ಅತ್ತೆಯವರಿಗೆ ಬಹಳ ಸಂಭ್ರಮವಾಯಿತು. ನನ್ನ ಪರಿಚಯ ಮಾಡಿಕೊಟ್ಟರು. ಮನೆಗೆ ಬಂದ ನೆಂಟರಿಗೆ ಉಪಚರಿಸುವ ಹಾಗೆ, ನಮ್ಮ ಅತ್ತೆ ಚಾಪೆ ತಂದು ಹಾಸಿದರು. ನೆಲದ ಮೇಲೆ ಕುಳಿತ ಅವನು, ಬಳೆಯ ಚೀಲವನ್ನು ಚಾಪೆಯ ಮೇಲಿಟ್ಟು ಅದರಿಂದ ಬಳೆಗಳ ದಿಂಡು ತೆಗೆಯತೊಡಗಿದ. ನಮ್ಮ ಅತ್ತೆ ನನಗೆ, ‘ನಿನಗೆ ಯಾವ ಯಾವ ಬಳೆಗಳು ಬೇಕೋ ತೊಗೋ’ ಎಂದು ಹೇಳಿ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾದಿ, ರತ್ನಿ, ಶಿವಮ್ಮ ಎಲ್ಲರನ್ನೂ ಕೂಗಿ ಕರೆದರು.

ಬಳೆಗಾರ ಇರುವ ಎಲ್ಲಾ ಬಳೆಗಳನ್ನೂ ತೆಗೆದಿಟ್ಟರೂ ನನ್ನ ಮನಸ್ಸಿಗೆ ಒಂದೂ ಒಪ್ಪುತ್ತಿಲ್ಲ. ಹಾಗೆಂದು ಹೇಳಲೂ ಏನೋ ಹಿಂಜರಿಕೆ. ಮೈಸೂರಿನಲ್ಲೇ ಹುಟ್ಟಿ ಬೆಳೆದವಳು ನಾನು. ಬಳೆ ಬೇಕೆನಿಸಿದಾಗಲೆಲ್ಲಾ ಮೀರಾ ಬ್ಯಾಂಗಲ್ಸ್, ರಾಧಾ ಬ್ಯಾಂಗಲ್ಸ್, ಲಲಿತಾ ಫ್ಯಾನ್ಸಿ ಸ್ಟೋರ್‌್ಸ್ ಹೀಗೆ ಅಂಗಡಿ, ಅಂಗಡಿ ಸುತ್ತಿ ಕಣ್ಣಿಗೆ ಅಂದ ಕಂಡ, ಮನಸ್ಸಿಗೊಪ್ಪುವ ಬಳೆಗಳನ್ನು ಕೊಂಡು ರೂಢಿ ಆಗಿತ್ತು.

ಗಾಜಿನ ಬಳೆಗಳು ಸಣ್ಣಗೆ ಇರಬೇಕು, ನನ್ನ ಬಳಿ ಇರುವ ಸೀರೆಗಳ ಬಣ್ಣವೇ ಬಳೆಗಳೂ ಇರಬೇಕು, ಬೇರೆ ಬೇರೆ ಡಿಸೈನ್ ಇರಬೇಕು ಹೀಗೆ ಕಣ್ಣು ಬಳೆದಿಂಡಿನಲ್ಲಿ ಬಳೆಗಳನ್ನು ಹುಡುಕುತ್ತಿತ್ತು. ಶಿವಮ್ಮ, ರತ್ನಿ ಅವರೆಲ್ಲಾ ಬಂದವರೇ ಮಲ್ಹಾರವನ್ನು ಕಣ್ಣಿಗೊತ್ತಿಕೊಂಡು, ಬಳೆಗಾರನ ಮುಂದೆ ಕೈ ಹಿಡಿದರು. ಕೈ ತಿರುಗಿಸಿ, ತಿರುಗಿಸಿ ಬಿಗಿಯಾಗಿ ಬಳೆಗಳನ್ನು ತೊಡಿಸಿದ. ಬಳೆತೊಡಿಸಿಕೊಂಡ ಅವರೂ ಬಳೆಗಳನ್ನು ಲೆಕ್ಕಹಾಕಲಿಲ್ಲ, ತೊಡಿಸಿದ ಬಳೆಗಾರನೂ ಬಳೆಗಳ ಲೆಕ್ಕ ಹಾಕಲಿಲ್ಲ.

ಮೊಣಕೈಯಿಂದ ಮುಂಗೈವರೆಗೂ ಬಳೆತೊಡಿಸಿದ. ದಪ್ಪ ದಪ್ಪ ಬಳೆಗಳು, ಅಂದ ಇಲ್ಲ ಅಲಂಕಾರ ಇಲ್ಲ, ಹೀಗೆ ಬಳೆ ಹಾಕಿಕೊಂಡರೆ ಬಳೆಗಳು ಸದ್ದು ಮಾಡುವುದೂ ಇಲ್ಲ, ಬಣ್ಣಗಳೋ ನೀಲಿ, ಹಳದಿ, ಕೆಂಪು, ಹಸಿರು ಅದೇಕೋ ಬಳೆಗಳು ನನ್ನ ಕಣ್ಣಿಗೆ ಮಂಕಾಗಿ ಕಾಣುತ್ತಿತ್ತು. ಹೀಗೆ ನನ್ನ ಮನಸ್ಸು ಯೋಚಿಸುತ್ತಿದ್ದಾಗಲೇ ನಮ್ಮ ಅತ್ತೆ ಒಳಗೆ ಕರೆದು, ಮನೆಗೆ ಬಂದ ಬಳೆಗಾರನನ್ನು ಬಳೆ ತೊಡಿಸಿಕೊಳ್ಳದೇ ಕಳುಹಿಸಬಾರದು, ಇರುವುದರಲ್ಲೇ ಯಾವುದಾದರೂ ಚೆನ್ನಾಗಿರುವುದನ್ನು ತೊಡಿಸಿಕೋ ಎಂದರು.

ಕೊನೆಗೆ ನಾನು ಬಳೆ ತೊಗೋತೀನಿ, ಆದರೆ ತೊಡಿಸಿಕೊಳ್ಳುವುದಿಲ್ಲ ಎಂದೆ. ಅಂತೂ ಒಂದು ಡಜ಼ನ್ ಕೆಂಪು ಬಳೆ ಕೊಡಿ ಎಂದೆ. ಯಾಕೆ ತಾಯಿ ಬಳೆ ಮನಸ್ಸಿಗೆ ಹಿಡಿಸಲಿಲ್ಲವಾ ಎಂದರು. ನನ್ನ ಕೈಯಲ್ಲಿದ್ದ ಬಳೆಗಳನ್ನು ತೋರಿಸಿ, ಹೀಗೆ ಸಣ್ಣಗೆ ಇರುವ ಬಳೆಗಳನ್ನು ಹಾಕಿಕೊಂಡು ನನಗೆ ಅಭ್ಯಾಸ ಎಂದೆ. ನಮ್ಮ ಅತ್ತೆ ನನ್ನ ಕೈಯಲ್ಲೇ ಅವರಿಗೆ ಅಕ್ಕಿ, ಬೆಲ್ಲ, ಕಾಯಿ, ಸ್ವಲ್ಪ ಹಣ ಕೊಡಿಸಿದರು.

ಮತ್ತೆ ಸಂಕ್ರಾತಿಯ ವೇಳೆಗೆ ಬಳೆಗಾರ ಬಂದ. ಅದದೇ ಪುನರಾವರ್ತನೆ. ಈ ಬಾರಿ ಕೆಲವು ಬಳೆಗಳನ್ನು ವಿಶೇಷವಾಗಿ ಕಟ್ಟಿ ತಂದು ನನ್ನ ಮುಂದೆ ಬಿಡಿಸಿಟ್ಟರು. ಬಹಳ ಮುತುವರ್ಜಿಯಿಂದ ಒಪ್ಪಿಗೆಯಾಯಿತಾ ತಾಯಿ ಎಂದಾಗ ಬಳೆಗಳು ಮನಸ್ಸನ್ನು ಆಕರ್ಷಿಸದಿದ್ದರೂ, ಅವರು ನನಗಾಗಿ ನೆನಪಿನಿಂದ ಬೇರೆ ಬೇರೆ ರೀತಿಯ ಬಳೆಗಳನ್ನು ತಂದಿದ್ದರಿಂದ, ಸೌಜನ್ಯಕ್ಕೆ ತಲೆ ಆಡಿಸಿ ಬಳೆ ತೆಗೆದುಕೊಂಡೆ. ಮತ್ತೆ ನಮ್ಮ ಅತ್ತೆ ಅಕ್ಕಿ, ಬೆಲ್ಲ, ಕಾಯಿ, ಹಣ ಕೊಟ್ಟು ಕಳುಹಿಸಿದರು.

ಮುಂದಿನ ಶ್ರಾವಣಮಾಸದ ವೇಳೆಗೆ ನನಗೂ ಹಳ್ಳಿಯ ಪರಿಚಯವಾಗಿತ್ತು. ಬರಿಗಾಲಿನಲ್ಲಿ ಹಳ್ಳಿ ಹಳ್ಳಿ ಸುತ್ತುವ ಬಳೆಗಾರನ ಅಂತಃಕರಣ ಅರ್ಥವಾಗಿತ್ತು. ಇದೊಂದು ವ್ಯಾಪಾರವಲ್ಲದ ವ್ಯಾಪಾರ ಎಂದೂ ಗೊತ್ತಾಗಿತ್ತು. ಹಾಗಾಗಿ ಬಳೆಗಳಿಗಿಂತ, ಬಳೆಗಾರನ ಪರಿಶ್ರಮಕ್ಕೆ ಬೆಲೆ ಕೊಡಬೇಕೆಂದು ನನ್ನರಿವಿಗೆ ಬಂದಿತ್ತು. ಹಳ್ಳಿಯ ಹೆಣ್ಣು ಮಕ್ಕಳು ಬಳೆಗಳು ಮತ್ತೆ ಮತ್ತೆ ಒಡೆಯಬಾರದೆಂದು ಗಟ್ಟಿ ಬಳೆಗಳನ್ನು ತೊಡಿಸಿಕೊಳ್ಳುತ್ತಿದ್ದರು. ಬಳೆಗಾರನನ್ನು ಬೇರೆ ವ್ಯಾಪಾರ ದವರಂತೆಣಿಸದೆ, ಶಿವ ಸ್ವರೂಪಿಯಾಗಿ ಇವರೆಲ್ಲಾ ಭಾವಿಸುತ್ತಿದ್ದರು. ಅವರೂ ಸಹನೆ, ಏಕಾಗ್ರತೆಗಳಿಂದ ಬಳೆ ತೊಡಿಸುತ್ತಿದ್ದರು.

ಪ್ರತಿ ವರ್ಷವೂ ನನಗೆ ಇಷ್ಟವಾಗಬಹುದೆಂದು ಕೆಲವು ಬಳೆಗಳನ್ನು ಬೇರೆಯಾಗೇ ತರುತ್ತಿದ್ದರು. ಕ್ರಮೇಣ ನನಗೂ ಬಳೆ ಮಲ್ಹಾರದವರ ಬರುವಿಕೆಯನ್ನು ಕಾಯುವಂತಾಗುತ್ತಿತ್ತು, ಅವರು ಬಂದರೆ ಜಗುಲಿಯ ಭರ್ತಿ ಹೆಣ್ಣುಮಕ್ಕಳು ಸೇರಿ, ಬಳೆ ತೊಡಿಸಿಕೊಳ್ಳುತ್ತಿದ್ದರೆ ಹಬ್ಬದ ಸಂಭ್ರಮವಿರುತ್ತಿತ್ತು. ನನಗಂತೂ ಅಂಗಡಿಗೆ ಹೋಗಿ ಬಳೆ ಕೊಳ್ಳುವ ಅಭ್ಯಾಸವೇ ಮರೆತುಹೋಯಿತು. ಕೆಲವು ವರ್ಷಗಳ ನಂತರ ಅವರ ಮಗ ಎಂದು ಒಬ್ಬ ಬರಲಾರಂಭಿಸಿದ.

ಅವನು ಬಳೆಗಳನ್ನು ಡಜ಼ನ್ ಲೆಕ್ಕದಲ್ಲಿ ಮಾರುತ್ತಿದ್ದನೇ ಹೊರತು ಬಳೆ ತೊಡಿಸುತ್ತಿರಲಿಲ್ಲ. ಎರಡು ಕೈಯಲ್ಲೂ ಕಿಟ್‌ಬ್ಯಾಗ್ ತರಹದ ಚೀಲದಲ್ಲಿ ಅವನು ಬಳೆ ತಂದರೆ ನಮಗೇನೋ ಬಳೆ ಮಲ್ಹಾರಕ್ಕೆ ಕೊಡುವ ಗೌರವ ಕೊಡಲಾಗುತ್ತಿರಲಿಲ್ಲ. ಗಾಜಿನ ಬಳೆಗಳಲ್ಲದೆ ಬೇರೆ ಬೇರೆ ಮೆಟಲ್ ಬಳೆಗಳೂ ಅವನ ಸಂಗ್ರಹದಲ್ಲಿರುತ್ತಿತ್ತು. ಹೆಣ್ಣು ಮಕ್ಕಳೂ ಚೌಕಾಸಿ ಮಾಡಿ ಅವನು ಕೊಡೆ, ಇವರು ಬಿಡೆ ಎಂದು ವ್ಯಾಪಾರ ಮುಗಿಸುತ್ತಿದ್ದರು.

ಈಗೀಗ ನಮ್ಮ ಹಳ್ಳಿಗೆ ಬಳೆ ಮಾರಿಕೊಂಡು ಬರುವವನು ಮೊದಲು ಬಳೆ ಮಲ್ಹಾರ ಹೊತ್ತು ಬರುತ್ತಿದ್ದವನ ಮೊಮ್ಮಗ ಎಂದು ಹೇಳಿಕೊಳ್ಳುತ್ತಾನೆ. ಟಿ.ವಿ.ಎಸ್. ಮೊಪೆಡ್‌ನ ಹಿಂದಿನ ಸೀಟನ್ನು ತೆಗೆದು ಅಗಲವಾದ ಕಬ್ಬಿಣದ ಕ್ಯಾರಿಯರ್ ಹಾಕಿಸಿದ್ದಾನೆ. ಅದರಲ್ಲೇ ಅವನ ಸಂಚಾರಿ ಅಂಗಡಿ ಇದೆ.  ಅವನು ಬಂದರೆ ಬಳೆ ಅಂಗಡಿಯೇ ಮನೆ ಬಾಗಿಲಿಗೆ ಬಂದ ಹಾಗೆನಿಸುತ್ತದೆ. ಅಲ್ಲಿ ಏನುಂಟು, ಏನಿಲ್ಲ? ಕನ್ನಡಿ, ಸ್ನೋ, ಪೌಡರ್, ಕಣ್ಣುಕಪ್ಪು, ಹೇರ್‌ಕ್ಲಿಪ್, ಹೇರ್ ಬ್ಯಾಂಡ್, ಮನಸ್ಸನ್ನು ಆಕರ್ಷಿಸುವ ಬಣ್ಣ ಬಣ್ಣದ ಬಳೆಗಳು. 

ದೊಡ್ಡ ಬಳೆ ಅಂಗಡಿಯಲ್ಲಿರ ಬಹುದಾದುದೆಲ್ಲಾ ಅವನ ಸಂಚಾರಿ  ಅಂಗಡಿಯಲ್ಲಿದೆ. 15 ದಿನಕ್ಕೊಮ್ಮೆ ತಪ್ಪದೇ ಹಾಜರಾಗುವ ಅವನಂತೂ ಏನಾದರೂ ವ್ಯಾಪಾರ ಮಾಡದೇ ಇದ್ದರೆ ಬಿಡುವುದೇ ಇಲ್ಲ. ನೀವೆಲ್ಲಾದರೂ ಹೊಸ ಬಳೆ ನೋಡಿದ್ದರೆ, ನಿಮ್ಮ ಮೊಬೈಲ್‌ನಲ್ಲೇ ಫೋಟೊ ತೆಗೆದುಕೊಂಡು ತೋರಿಸಿ ಅಕ್ಕ ಅಂತಹ ಬಳೆ ಮುಂದಿನ ಸಾರಿ ಬಂದಾಗ ತರುವೆ ಎನ್ನುತ್ತಾನೆ. ಒಳ್ಳೆ ವ್ಯವಹಾರಸ್ಥ.

‘ಇದು ನೋಡಿ ಗಾಜಿನ ಬಳೆ, ಮೆಟಲ್ ಬಳೆ ನೋಡಿ ಹೇಗೆ ಹೊಳೀತಿದೆ, ಇದು ನೋಡಿ ಮಣ್ಣಿನ ಬಳೆ ಈಗಿನ ಫ್ಯಾಷನ್, ಅಕ್ಕ ಇದು ನೋಡಿ ಹರಳಿನ ಬಳೆ ಫಂಕ್ಷನ್‌ಗೆ ಹಾಕಿಕೊಂಡು ಹೋಗಬಹುದು, ಅಕ್ಕಾ ಈ ಬಳೆ ನೋಡಿ ಸ್ಯಾಟೀನ್ ಬಟ್ಟೇದು’ ಅಂತೆಲ್ಲಾ ವರ್ಣಿಸುತ್ತಾನೆ. ನಾನು ಹುಡುಕುತ್ತಲೇ ಇರುತ್ತೇನೆ ಬಳೆಗಾಗಿ ಅಲ್ಲ, ಅಲ್ಲೆಲ್ಲಾದರೂ ಅವನ ತಾತನ ಮುಖ ಕಾಣಬಹುದೇ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.