ADVERTISEMENT

ಪುಟಾಣಿ ಹೆಜ್ಜೆಗಳ ಹಾದಿ ನಿರಾಳವಿರಲಿ

ಗೀತಾ ವಸಂತ
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST
ಪುಟಾಣಿ ಹೆಜ್ಜೆಗಳ  ಹಾದಿ ನಿರಾಳವಿರಲಿ
ಪುಟಾಣಿ ಹೆಜ್ಜೆಗಳ ಹಾದಿ ನಿರಾಳವಿರಲಿ   

ಸಕ್ಕರೆ ಸವಿನಿದ್ದೆಗೆ ಕಣ್ಣೋ ಮಣಭಾರ. ತೆರೆಯಲಾಗದೇ ಮತ್ತೆ ಮತ್ತೆ ಮುಚ್ಚುವ ಮುದ್ದಾದ ರೆಪ್ಪೆಗಳು. ಚಾದರ ಎಳೆದುಕೊಂಡು ಮುದುಡಿ ಬೆಚ್ಚಗೆ ಮಲಗಲೆಣಿಸುವ ಪುಟಾಣಿ ಕೈಕಾಲುಗಳು. “ಇವತ್ತಿಂದ ಸ್ಕೂಲು, ಹೊತ್ತಾಯ್ತು ಏಳೋ...’ ಎಂದು ಗೋಗೆರೆವ ಅಮ್ಮನ ದನಿಯಲ್ಲೇ ತೇವ! ಇನ್ನು ಮಗುವಿನ ಕತೆ ಕೇಳುವುದೇ ಬೇಡ. ರಜೆಯಿಡೀ ಅಮ್ಮ, ಅಪ್ಪ, ಅಜ್ಜಿ, ಅಜ್ಜ  ಎಂದು ಸುಭದ್ರ ಭಾವನೆಯಲ್ಲಿ ಅರಳುತ್ತಿರುವ ಮಗುವಿಗೆ ಧುತ್ತನೇ ಯಾವುದೋ ಸಂಕಟ ಬಂದೆರಗಿದಂತೆ ಸ್ಕೂಲು! ಅಂತೂ ನಿದ್ದೆಯಲ್ಲೇ ಎದ್ದು ನಡೆವ ದೇವತೆಗಳ ಮುದ್ದು ಪಾದಗಳಲ್ಲಿ ಗೆಲುವಿಲ್ಲ.

ಬಾತ್ ರೂಂಗೆ ಹೋದರೆ ಸುಮ್ಮಸುಮ್ಮನೆ ಅಳುವಿನ ರಾಗ. ಬೆಳ ಬೆಳಗ್ಗೆಯೇ ನೀರು ಸೋಕಿಸಲು ಯಾಕೋ ದೇಹದ ನಕಾರ ತಿಂಡಿ ತಟ್ಟೆಯ ಮುಂದೆ ಮುಷ್ಕರ. ಟಿಫನ್ ಬಾಕ್ಸ್‌ ಅನ್ನು ಕಂಡರೇ ಓಕರಿಕೆ, ಅಂತೂ ಇಂತೂ ಯೂನಿಫಾರಂನಲ್ಲಿ ಮೈ ತುರುಕಿ, ಕಾಲಿಗೆ ಸಾಕ್ಸು ಏರಿಸಿ, ಶೂಸು ಹಾಕುವಾಗ ತೂಕಡಿಕೆ. ಲಂಚ್ ಬ್ಯಾಗು, ನೀರು, ನ್ಯಾಪ್‌ಕಿನ್ನು ಎಲ್ಲ ಸರಿಯಾಗಿದೆಯೂ ಅಂತ ಹತ್ತಾರು ಬಾರಿ ನೋಡಿದರೂ ಅಮ್ಮನಿಗಿನ್ನೂ ತಳಮಳ. ಮಗು ಗಡಿಬಿಡಿಯಲ್ಲಿಂದು ಟಾಯ್ಲೆಟ್ಟಿಗೇ ಹೋಗಿಲ್ಲ! ಕಳ್ಳಹಸಿವು ನಟಿಸುತ್ತಾ, ಡಬ್ಬಿಗಳ ಜಾಲಾಡಿ ಬೈಸಿಕೊಳ್ಳುತ್ತಿದ್ದ ಮಗುವಿಗೆ ಲಂಚ್‌ ಅವರ್‌ವರೆಗೆ ಕಾಯೋಕಾಗುತ್ತಾ?... ಇಂಥವೇ ಸಿಲ್ಲಿ ಸಿಲ್ಲಿ ಸಂಕಟಗಳು. ಆದರೆ ಅವತ್ತಿನ ಮಟ್ಟಿಗಂತೂ ಅವೇ ಗುಡ್ಡವಾಗಿ ಕಾಡುವುವು.

ಮಗು ಟಾಟಾ ಮಾಡಿ ರಸ್ತೆ ಕೊನೆಯ ತಿರುವಿನಲ್ಲಿ ಕಣ್ಮರೆಯಾದಾಗ ಅಮ್ಮಂದಿರ ಎದೆಯಲ್ಲಿ ಮಿಶ್ರರಾಗಗಳ ಪಲಕು. ವಿಚಿತ್ರ ಕಲಸು. ಮಗು ದೊಡ್ಡದಾಯ್ತು... ಸ್ವತಂತ್ರ ಜೀವವಾಗಿ ತನ್ನ ಕಕ್ಷೆ ದಾಟಿತು... ಇನ್ನಾದರೂ ತನ್ನ ಪಾಲಿಗೆ ಒಂದಷ್ಟು ತನ್ನದೇ ಸಮಯ ದೊರೆಯಬಹುದು ಎನಿಸುತ್ತಿದ್ದರೂ, ಇಷ್ಟು ದಿನ ಮಡಿಲಿಗಂಟಿಕೊಂಡಿದ್ದ  ಮುಗ್ದ ಪ್ರೀತಿಯ ಜೀವವೊಂದು ಹೊಕ್ಕುಳಬಳ್ಳಿ ಕಳಚಿಕೊಂಡು ಎದ್ದು ನಡೆದಂತ ಸಂಕಟ. ತನ್ನ ಬೆರಳ ವರ್ತುಲದಲ್ಲೇ ಸುತ್ತುವ ಬೆಚ್ಚನೆಯ ಭಾವವೊಂದು ಅನಾಥವಾಗಿ, ತನ್ನನ್ನೂ ತಬ್ಬಲಿಯಾಗಿಸಿ ಹೊರಟ ಭಾಸ. ಆದರೆ, ಚಲನೆ ಬದುಕಿಗೆ ಮತ್ತೊಂದು ಹೆಸರಲ್ಲವೇ – ಎಂಬ ವಾಸ್ತವದ ಎಚ್ಚರ. ಹೊರಗೆ ದುಡಿಯುವ ಮಹಿಳೆಯರಿಗಂತೂ ಇದೊಂದು ದೊಡ್ಡ ಸವಾಲು. ಮಗುವನ್ನು ಶಾಲೆಗೆ ಕಳಿಸುವುದು, ವಾಪಸ್ ಮನೆಗೆ ಕರೆತರುವುದು, ಅದು ಊಟ ಮಾಡಿತಾ ಇಲ್ಲವಾ ಎಂದು ಪ್ರತಿ ದಿನ ಗಮನಿಸುವುದು, ಕುಂಡೆ ತೊಳೆಯಲೂ ಬಾರದ ಮಗು ಹೇಳಲು ಸಂಕೋಚವಾಗಿ ಎಷ್ಟು ಸಂಕಟಪಟ್ಟಿರಬಹುದು ಎಂದು ಆತಂಕಪಡುವುದು, ಇತ್ತೀಚೆಗಂತೂ ಪುಟ್ಟ ಹೆಣ್ಣುಮಕ್ಕಳ ಮೇಲೆ ಶಾಲಾ ಸಿಬ್ಬಂದಿ–ಶಿಕ್ಷಕರಿಂದಲೇ ನಡೆಯುವ ಲೈಂಗಿಕ ದೌರ್ಜನ್ಯಗಳು... ಇವೆಲ್ಲ ಎದೆ ಕೊರೆವ ತಲ್ಲಣಗಳಾಗಿ ಕೆಲಸ ನಡುವೆಯೂ ಕಾಡುವವು. ಇದನ್ನವಳು ಹೇಳುವಂತಿಲ್ಲ, ಅನುಭವಿಸುವಂತಿಲ್ಲ! ಎಲ್ಲವನ್ನೂ ನಿಭಾಯಿಸುವ ಸೂಪರ್‌ ವುಮೆನ್ ಕಲ್ಪನೆಗೆ ಫಿಟ್ ಆಗುವ ಸರ್ಕಸ್ಸಿನಲ್ಲಿ ಅವಳು ಹಣ್ಣುಗಾಯಿ-ನೀರುಗಾಯಿ. ಮಗು ಏಕೆ ಪದೇ ಪದೇ ರಚ್ಚೆ ಹಿಡಿಯುತ್ತಿದೆ, ಏಕೆ ಕನಸಲ್ಲಿ ಕನವರಿಸುತ್ತಿದೆ, ಏಕೆ ಪದೇ ಪದೇ ಜ್ವರ ಕಾಡುತ್ತಿದೆ – ಎಂಬ ಪ್ರಶ್ನೆಗಳ ದಾಳಿ. ಮೊಂಡುತನ ಮಾಡುವ, ಸಿಟ್ಟಾಗುವ, ಕೆಲವೊಮ್ಮೆ ಹಿಂಸೆಗಿಳಿಯುವ ಮಗುವಿನ ಭಾವನಾತ್ಮಕ ಸಮತೋಲನವನ್ನು ತಾನು ಕಾಯಲಾಗುತ್ತಿಲ್ಲವಲ್ಲಾ –  ಎಂಬ ಕಳವಳ. ದುಡಿಯುವ ಮಹಿಳೆಯರಿಗೆ ಮಕ್ಕಳನ್ನು ಡೇ ಕೇರ್, ಬೇಬಿ ಸಿಟ್ಟಿಂಗ್‌ಗಳಲ್ಲಿ ಬಿಡುವುದು ಅನಿವಾರ್ಯ. ನಗರದ ನ್ಯೂಕ್ಲಿಯರ್ ಫ್ಯಾಮಿಲಿಗಳ ಬದುಕಲ್ಲಿ ಬವಣೆಯಿದು. ಕೆಲವೊಮ್ಮೆ ಮಗು ಹುಷಾರು ತಪ್ಪಿದಾಗಲೂ ಅಟೆಂಡ್ ಮಾಡಲಾಗದ ಅನಿವಾರ್ಯತೆ. ಹೊರಡುವ ಸಮಯದಲ್ಲಿ ವಾಂತಿ ಮಾಡಿಕೊಂಡ ಮಗು... ಅದರ ಜ್ವರ ತುಂಬಿದ ಕಣ್ಣುಗಳು, ಅದರ ಟಿಫನ್ ಬಾಕ್ಸಿನಲ್ಲಿ ತಣ್ಣಗಾಗುತ್ತಿರುವ ಊಟ... ಎಲ್ಲವೂ ತಾಯಂದಿರನ್ನು ತಪ್ಪಿತಸ್ಥ ಭಾವನೆಯಿಂದ ನರಳುವಂತೆ ಮಾಡುತ್ತದೆ. ಮಗು ಶಾಲೆಯಿಂದ ಬಂದದ್ದೇ ಅಭಯ ನೀಡುವ ಅಮ್ಮನನ್ನು ಬಯಸುತ್ತದೆ. ಎಲ್ಲ ಹೇಳಿಕೊಳ್ಳಬೇಕೆನ್ನುವ ಅಗಾಧ ಉತ್ಸಾಹ ಅಮ್ಮನ ಮಡಿಲಲ್ಲಿ ಕಟ್ಟೆಯೊಡೆಯುತ್ತದೆ. ನೂರಾರು ಪ್ರಶ್ನೆಗಳು ತುಂಟಕಣ್ಣುಗಳಲ್ಲಿ ಕುಣಿಯುವುದು ಕಾಣುತ್ತದೆ. ಆದರೆ ಇದೊಂದು ಅನುಭವಿಸಲಾಗದ ಮಗು ಹಾಗೂ ಮಗುವಿಗೆ ಭಾವನಾತ್ಮಕ ಭದ್ರತೆ ಕೊಡಲಾಗದ ತಾನು... ತಪ್ಪು ಮಾಡುತ್ತಿರುವೆನಾ –  ಎಂಬ ಸಂಕಟದಲ್ಲಿ ತಾಯಿ ನವೆಯುತ್ತಾಳೆ. ಇಂಥ ಬಾಂಧವ್ಯದ ಅರಿವಿಲ್ಲದ ಮಕ್ಕಳು ಮುಂದೆ ಸಂಬಂಧಗಳ ಅರ್ಥವನ್ನೇ ಅರಿಯದೇ ಹೋಗುತ್ತವಾ? ಎಂಬ ಆತಂಕ ಬೇರೆ. ತಾಯಿ ಮಗುವಿನ ಕುರಿತು ಹತ್ತು ಹಲವು ಕೋನಗಳಲ್ಲಿ ಯೋಚಿಸಿ ಕುಸಿಯುತ್ತಾಳೆ. ಇಂಥ ಸಂದರ್ಭದಲ್ಲಿ ಕೂಡುಕುಟುಂಬದ ಬೆಚ್ಚನೆ ನೆರಳು ಬೇಕೆನಿಸುತ್ತದೆ.

ADVERTISEMENT

ಗಂಡ-ಹೆಂಡರಿಬ್ಬರೇ ಇರುವ ಮನೆಯಲ್ಲೂ ಮಗುವಿನ ಕುರಿತಾದ ಸಮಾನ ಕಳಕಳಿ, ಕಾಳಜಿ ಹಾಗೂ ಪಾಲ್ಗೋಳ್ಳುವಿಕೆ ಇದ್ದಾಗ ಸಮಸ್ಯೆಯನ್ನು ದಾಟಬಹುದು.

ಜೂನ್ ಬಂತೆಂದರೆ ಚುರುಕಾಗುವ ಮಾನ್ಸೂನಿನಂತೆ ಈ ಚಿಣ್ಣರ ಕಲರವದ ಜಗತ್ತೂ ತನ್ನೆಲ್ಲ ಬಣ್ಣಗಳೊಂದಿಗೆ ಬಿಚ್ಚಿಕೊಳ್ಳುವುದು. ತಮ್ಮೆಲ್ಲ ಕಾಂಪ್ಲೆಕ್ಸ್‌ಗಳನ್ನು ಬದಿಗೊತ್ತಿ ಅಮ್ಮಂದಿರ ಜಗತ್ತು ಸಚೇತನಗೊಳ್ಳುವುದು. ಚಿಣ್ಣರ ಬಣ್ಣಗಳ ಹಿಂದೆ ತುಡಿಯುವ ಅಮ್ಮಂದಿರ ಭಾವಜಗತ್ತೂ ಹನಿಯತೊಡಗುವುದು. ಸ್ಕೂಲ್‌ಬ್ಯಾಗು, ಲಂಚ್ ಬಾಕ್ಸು, ವಾಟರ್ ಬಾಟಲ್ಲು, ಜಾಮಿಟ್ರಿ ಬಾಕ್ಸು – ಎಲ್ಲ ಆಯ್ಕೆ ಮಾಡುವ ಸಂಭ್ರಮ ಅದರ ಬಣ್ಣಗಳು ಮಗುವಿಗೆ ಹಿಡಿಸಬೇಕು. ಚಿತ್ರಗಳು ಖುಷಿಕೊಡಬೇಕು ಎಂದು ಬಾರ್ಬಿಡಾಲ್, ಪೊಕೆಮಾನ್‌, ಡೊರೆಮನ್, ನೊಬಿತಾ, ಚೋಟಾಬೀಮ್... ಇವರೆಲ್ಲರ ಪರಿವಾರವನ್ನೇ ಅವರು ಎದರುಗೊಳ್ಳುತ್ತಾರೆ. ಎರಡು ತಿಂಗಳ ರಜೆಯಲ್ಲಿ ಅಟ್ಟವೇರಿದ್ದ ಕೆಲವರನ್ನು ಸಂದುಗೊಂದುಗಳಿಂದ ಹುಡುಕಿ ತೆಗೆದು ಸ್ವಚ್ಛಗೊಳಿಸುತ್ತಾರೆ. ಚೆಲ್ಲಾಪಿಲ್ಲಿಯಾಗಿದ್ದ ಸಾಕ್ಸುಗಳನ್ನು ಜೊತೆಗೂಡಿಸಿ, ಯೂನಿಫಾರಂ ಇಸ್ತ್ರಿ ಮಾಡಿ ಸಿದ್ಧಗೊಳಿಸುತ್ತಾರೆ. ಮತ್ತೆ ಶುರು ದೈನಂದಿನ ಚಕ್ರ... ನಾಳೆ ತಿಂಡಿಗೆ ಏನು? ಬಾಕ್ಸಿಗೆ ಹಾಕಲು ಏನು? ಏನು ಮಾಡಿದರೆ ಅದು ಖಾಲಿಯಾಗಿ ಅದು ವಾಪಸ್ ಬರಬಹುದು, ಬೆಳೆಯುತ್ತಿರುವ ಮಗುವಿಗೆ ಏನೆಲ್ಲ ಕೊಟ್ಟು ಅದರ ಆರೋಗ್ಯ ಪೂರ್ಣ ಚಟುವಟಿಕೆ ಹೆಚ್ಚಿಸಬೇಕು ಎಂಬೆಲ್ಲ ಯೋಚನೆಗಳೇ ಎಡಬಿಡದೆ ತುಂಬಿರುತ್ತವೆ. ಮಗುವನ್ನು ಮಾನಸಿಕವಾಗಿ ಶಾಲೆಗೆ ಹೋಗಲು ಸಿದ್ಧಗೊಳಿಸುವ ಕೆಲಸವೂ ಒಟ್ಟೊಟ್ಟಿಗೆ ಆಗಬೇಕು. ಆಟಗಳಲ್ಲಿ ಮುಳುಗಿಹೋಗಿದ್ದ ಮಗುವನ್ನು ನಿಧಾನವಾಗಿ ಟೈಮ್‌ಟೇಬಲ್ಲಿನ ಅನಿವಾರ್ಯತೆಯೊಳಗೆ ಎಳೆದು ತರಬೇಕಲ್ಲ! ಮಗುವಿನ ಇಷ್ಟದ ಮಿಸ್ಸುಗಳು, ಇಷ್ಟದ ಗೆಳೆಯ-ಗೆಳತಿಯರ ಪಟ್ಟಿ ಮಾಡುತ್ತ, ಹಿತವಾದ ನೆನಪುಗಳನ್ನು ಉತ್ತೇಜಿಸುತ್ತ... ಶಾಲೆಗೆ ಹೋಗುವುದೆಂದರೆ ಎಷ್ಟು ಚೆಂದ ಅಲ್ಲವೆ? ಹೀಗೆ ಅನಿಸುವಂತೆ ಮಾಡಲು ಹರಸಾಹಸ. ದೊಡ್ಡವರಾದ ಮೇಲೆ ಹಾಗಾಗಬೇಕು, ಹೀಗಾಗಬೇಕು ಎಂದೆಲ್ಲ ಕನಸು ಹೆಣೆಯುತ್ತ ಅದನ್ನು ಮಕ್ಕಳಲ್ಲೂ ಮುಂಗಾರಿನ ಬಿತ್ತನೆಯೂ ನಡೆಯುತ್ತದೆ!

ಸ್ಪರ್ಧಾತ್ಮಕ ಜಗತ್ತಿನ ಓಟದಲ್ಲಿ ತನ್ನ ಮಗು ಎಡವಿ ಬೀಳಬಾರದು, ಅದು ಗೆಲ್ಲಬೇಕು, ಗೆಲುವಿನ ನಗು ಬೀರುವುದನ್ನು ತಾನು ಕಣ್ತುಂಬಿಕೊಳ್ಳಬೇಕೆಂಬುದು ಎಲ್ಲ ತಾಯಂದಿರ ಹಂಬಲ. ಈ ಹಂಬಲಕ್ಕೆ ಮನೆ ನಿರ್ವಹಿಸುವ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು, ಕಾರ್ಪೊರೇಟ್ ವಲಯದ ಮಹಿಳೆಯರು, ಮನೆಗೆಲಸದ, ಗಾರ್ಮೆಂಟ್‌ಗಳಲ್ಲಿ ದುಡಿಯುವ, ಕೃಷಿ ಕೂಲಿಯಲ್ಲಿ ತೊಡಗಿದ ಮಹಿಳೆಯರು ಎಂಬ ಭೇದವಿಲ್ಲ. ಆಧುನಿಕ ಜಗತ್ತು ಕನಸುಗಳನ್ನು ಎಲ್ಲರಲ್ಲಿ  ಭೇದವಿಲ್ಲದೆ ಬಿತ್ತುತ್ತಿದೆ. ಕನಸಿನ ಕುದುರೆಯ ಗುರಿಯಿಲ್ಲದ ನಾಗಾಲೋಟ ಕೆಲವೊಮ್ಮೆ ಗಾಬರಿಯನ್ನೂ ಹುಟ್ಟಿಸುತ್ತಿದೆ!

ಇವಕ್ಕೆಲ್ಲ ಪೂರಕವಾಗಿ ಮೇ ತಿಂಗಳಿನಿಂದಲೇ ಎಲ್ಲಿ ನೋಡಿದರೂ ಬಣ್ಣ ಬಣ್ಣದ ಭಿತ್ತಿ ಪತ್ರಗಳು ಹಾರಾಡತೊಡಗುತ್ತವೆ. ಪೇಪರ್ ಮಡಿಕೆಗಳಿಂದ ಹೊರ ಜಿಗಿಯುತ್ತವೆ, ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿರುವ ಹೊಸ ಶಾಲೆಗಳ ಜಾಹೀರಾತುಗಳು ಅವು. ಆಟದ ಮೈದಾನ, ಸ್ವಿಮ್ಮಿಂಗ್ ಫೂಲು, ತರಹೇವಾರಿ ಆಟಿಕೆಗಳು, ಕಂಪ್ಯೂಟರ್ ಲ್ಯಾಬು, ನುರಿತ ಶಿಕ್ಷಕರು ಅಂತೆಲ್ಲ ಎಂಥೆಂಥದೋ ಆಮಿಷಗಳು. ಅವುಗಳ ಸಿಟಿ ಬಸ್ಸಿನಲ್ಲಿ ಒಜ್ಜೆಯಾದ ಪದಗಳ ಆಟ. ಬುದ್ಧಿವಂತರನ್ನು ತಯಾರು ಮಾಡುವ ಕಾರ್ಖಾನೆಗಳು ತಾವು ಎಂಬುದನ್ನು ಬಗೆಬಗೆಯಲ್ಲಿ ಸಾಬೀತು ಮಾಡುವ ಸರ್ಕಸ್ಸು. ಸ್ಕೂಲಿನ ಹೆಸರುಗಳ ಮುಂದೆ ‘ಇಂಟರ್‌ನ್ಯಾಷನಲ್’ ಎಂದು ಸೇರಿಸುವ ಹಾಸ್ಯಾಸ್ಪದ ಹವ್ಯಾಸ ಬೇರೆ! ಹತ್ತು ಹಲವು ಕಿಂಡರ್ ಗಾರ್ಡನ್‌ಗಳು, ರೆಸಿಡೆನ್ಸಿಯಲ್ ಸ್ಕೂಲುಗಳು...  ಅಲ್ಲಿ ಸೇರಲು ಮಕ್ಕಳಿಗೂ, ಪಾಲಕರಿಗೂ ಇಂಟರ್ ವ್ಯೂಗಳು, ಬಹು ದೊಡ್ಡ ಕ್ಯೂಗಳಲ್ಲಿ ನಿಂತು, ಲಕ್ಷಾಂತರ ಡೊನೇಷನ್ ಸುರಿದು ತಮ್ಮ ಮಕ್ಕಳ ಉಜ್ವಲ ಭವಿಷ್ಯ ರಿಸರ್ವ್‌ ಮಾಡುವ ಬೆಪ್ಪು ಅಪ್ಪ-ಅಮ್ಮಂದಿರು! ಹೀಗೇ ಹೊಳೆಯಲ್ಲಿ ಮಳೆ ಹೊಯ್ದಂತೆ ನಡೆಯುತ್ತಲೇ ಇರುವ ವಿದ್ಯಮಾನಗಳು.

ಇವೆಲ್ಲದರ ನಡುವೆ ಕಲಿಕೆಯ ಪ್ರಕ್ರಿಯೆಯಲ್ಲಿ ಕೇಂದ್ರವಾಗಬೇಕಿದ್ದ ಮಗು ಕಳೆದುಹೋಗಿದೆಯೆನಿಸುತ್ತದೆ. ಅದು ನಿಜವಾಗಿ ಖುಷಿಯಾಗಿದೆಯಾ? ಅರಿಯುತ್ತಿದೆಯಾ? ಅರಳುತ್ತಿದೆಯಾ? ಈ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲದೆ ಜನ ಓಡುತ್ತಿದ್ದಾರೆ. ಕಲಿಕೆಯೆಂಬುದು ಮೊದಲು ಪಂಚೇಂದ್ರಿಯಗಳ ವಿಕಾಸ. ನಮ್ಮ ಗ್ರಹಿಕೆಗಳು ಮೂಡುವುದು ಪಂಚೇಂದ್ರಿಯಗಳ ಮೂಲಕವೇ. ನೋಡುವ, ಕೇಳುವ, ಮುಟ್ಟುವ, ಮೂಸುವ, ರುಚಿ ನೋಡುವ ಅನುಭವವೇ ಮಗುವಿನಲ್ಲಿ ಲೋಕಗ್ರಹಿಕೆಯನ್ನು ಮೂಡಿಸುತ್ತದೆ. ಮನುಷ್ಯ ಮೊದಲು ನಿಸರ್ಗದ ಶಿಶು. ನಿಸರ್ಗದ ಸ್ಪಂದನೆಯೇ ಇಲ್ಲದ ಜ್ಞಾನ ಎಂತಿದ್ದರೂ ಅರೆಬರೆಯೇ. ಅನುಭವವನ್ನು ಗ್ರಹಿಸುತ್ತಾ ಮೊದಲ ಹೆಜ್ಜೆ ಇಡುವ ಮಗು ನಂತರ ನಿಧಾನವಾಗಿ ಅನುಭವಗಳ ತರತಮವನ್ನು ಗ್ರಹಿಸಲಾರಂಭಿಸುವುದೇ ಜ್ಞಾನಕ್ಕೆ ಮುನ್ನುಡಿ. ತರ್ಕ, ವಿವೇಕ, ವಿವೇಚನೆಯೇ ಎಲ್ಲವೂ ಅದರ ಸಹವರ್ತಿಗಳು. ಅಂಥ ಶಕ್ತಿಯ ಸರಿಯಾದ ಬೆಳವಣಿಗೆ ಶಾಲೆಗಳಲ್ಲಿ ಆಗಬೇಕು. ತಪ್ಪು-ಸರಿ, ಬೇಕು-ಬೇಡ, ಹಿತ-ಅಹಿತಗಳ ವಿವೇಚನೆಗೆ ಸರಿಯಾದ ನೆಲೆಗಟ್ಟನ್ನು ಶಿಕ್ಷಕರು ಒದಗಿಸಬೇಕು. ಖಾಸಗಿ ಭಾವವಲಯದಿಂದ ಸಾಮಾಜಿಕ ವ್ಯವಸ್ಥೆಯೊಳಗೆ ಬರುವ ಮೊದಲ ಹೆಜ್ಜೆಯೇ ಶಾಲೆ. ಅಲ್ಲಿ ಮಕ್ಕಳಿಗೆ ಒದಗುವ ಜ್ಞಾನ ಪೂರ್ವಗ್ರಹಪೀಡಿತವಾದಷ್ಟೂ ಶಾಲೆಗಳೆಂಬ ಕಾರ್ಖಾನೆಗಳಲ್ಲಿ ಸಂವೇದನಾ ರಹಿತವಾದ ವ್ಯಕ್ತಿತ್ವಗಳು ರೂಪುಗೊಳ್ಳುತ್ತಾ ಹೋಗುತ್ತವೆ. ಮುಂದಿನ ಪ್ರಜೆಗಳ ಭವಿಷ್ಯದ ಜೊತೆಗೆ ಮುಂದಿನ ಜನಾಂಗದ ಬದುಕಿನ ಸಮತೋಲನವೋ ತಪ್ಪುತ್ತಲೇ ಹೋಗುತ್ತದೆ.

ಗಿಳಿಯ ಚುಂಚಿನ ಬಣ್ಣ, ಕರುವಿನ ಕಣ್ಣಿನ ಹೊಳಪು, ಆಕಾಶದ ನಿಗೂಢ ನೀಲಿ, ಕಾಡಿನ ದಟ್ಟ ಹಸಿರು, ಹೂಗಳ ಅಸಂಖ್ಯಾ ವರ್ಣ ಸಂಯೋಜನೆಯ ಸೃಜನಶೀಲತೆ, ಚಿಟ್ಟೆಯ ಮೈ ಮೇಲಿನ ಗ್ರಾಫಿಕ್ ಡಿಸೈನ್! ಮಣ್ಣಿನ ಗಂಧ-ಸ್ಪರ್ಶ, ಹಕ್ಕಿಗಳ ತರಹೇವಾರಿ ಇಂಚರ, ನೀರಿನ ಝುಳು-ಝುಳು ಕಲರವ, ಸೂರ್ಯೋದಯ, ಸೂರ್ಯಾಸ್ತ, ಬೆಳದಿಂಗಳು, ನಕ್ಷತ್ರ ತುಂಬಿದ ರಾತ್ರಿ... ಅನಂತ ಅಗಾಧ ಎಂಬ ಅನುಭವಗಳು ಇಂದಿನ ನಗರ ಕೇಂದ್ರಿತ ಮಕ್ಕಳಿಗೆ ಒದಗುವುದೇ ಇಲ್ಲ. ಆಟೊ ವ್ಯಾನುಗಳಲ್ಲಿ ತುರುಕಿಕೊಂಡು ಟೈಮಾಯ್ತು, ಲೇಟಾಯ್ತು, ಎಂಬ ಉದ್ಗಾರಗಳು, ಸಿಗ್ನಲ್‌ಗಳಲ್ಲಿ ತಳಮಳ,  ಹಾರನ್‌ಗಳ ಕರ್ಕಶ ಶಬ್ದಗಳನ್ನೇ ಕೇಳುತ್ತ, ನೋಡುತ್ತ ಯಾವ ಬಣ್ಣಗಳನ್ನೂ ಕಣ್ತುಂಬಿಕೊಳ್ಳಲಾಗದ, ಯಾವ ಇನಿದನಿಗಳನ್ನು ಕಿವಿ ತುಂಬಿಕೊಳ್ಳಲಾಗದ ವಿಚಿತ್ರ ಕಾತರವೊಂದೇ ನಿಜವಾಗುತ್ತದೆ.

‘ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ’ ಎಂಬ ಕುವೆಂಪು ನುಡಿಯಿದೆ. ಮಗು ಪಂಚೇಂದ್ರಿಯಗಳಿಂದ ಗ್ರಹಿಸುವಾಗ ಅಲ್ಲೊಂದು ಅಪ್ಪಟ ಸಂವೇದನೆಯಿರುತ್ತದೆ, ಶುದ್ದ ಗ್ರಹಿಕೆಯಿರುತ್ತದೆ. ಯಾವಾಗ ಮನುಷ್ಯನ ಸ್ವಾರ್ಥಪೀಡಿತ ಕೃತಕ ಆಲೋಚನೆಗಳು ನುಸುಳುತ್ತವೋ ಆಗ ಗ್ರಹಿಕೆಯು ರೋಗಗ್ರಸ್ತವಾಗುತ್ತದೆ. ತರತಮಗಳ ಭೇದಪ್ರಪಂಚ ಸೃಷ್ಟಿಯಾಗುತ್ತ ವ್ಯವಸ್ಥೆಯ ವಿಷಮತೆ ಅರಿವಿಲ್ಲದಂತೆ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಅಲ್ಪಮಾನವ ಮತ್ತೆ ವಿಶ್ವಮಾನವನಾಗಬೇಕಾದರೆ ಮಗುತನಕ್ಕೆ ಹಿಂದಿರುಗಬೇಕು.  ಅದಕ್ಕಾಗಿಯೇ ಅರಿವಿನ ಕೊನೆಯ ಮೊನೆಯಲ್ಲಿದ್ದ ಎಲ್ಲ ಸಂತರು, ದಾರ್ಶನಿಕರು ಮಗುತನಕ್ಕೆ ಮರಳುವ ಮಾತನಾಡುತ್ತಿದ್ದರು. ಮಾನವನ ಹೃದಯದಲ್ಲಿರುವ ಶಿಶು ಜಾಗೃತಗೊಳ್ಳಲಿ ಎಂಬ ಕುವೆಂಪುವಾಣಿಯ ಹಿಂದೆಯೂ ಇದೇ ಉದ್ದೇಶವಿದೆ. ಅಂಥ ಮಕ್ಕಳು ನಮ್ಮ ಮುಂದಿವೆ ಈಗ. ಅವರ ಸಹಜ ಸಂವೇದನೆ ಅರಳಲಿ. ಕಲೆ-ಸಂಸ್ಕೃತಿ ಎಲ್ಲವೂ ಮನೋರಂಜನೆಯ ಹೆಸರಿನಲ್ಲಿ ಬಿಕರಿಯಾಗುತ್ತಿರುವ ಈ ಕಾಲದಲ್ಲಿ, ಜ್ಞಾನವೂ  ಮಾರ್ಕ್ಸ-ಗ್ರೇಡುಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ನಿಜವಾದ ಅರಿವಿನ ದಾರಿಗಳು ತೆರೆಯಲಿ. ಅಂಥ ದಾರಿಗಳಲ್ಲಿ ನಮ್ಮ ಪುಟಾಣಿ ಮಕ್ಕಳು ನಡೆಯುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.