ADVERTISEMENT

ವೀರ್ಯಾಂತರ್ಯ

ಅಂಕುರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 19:30 IST
Last Updated 19 ಸೆಪ್ಟೆಂಬರ್ 2014, 19:30 IST
ವೀರ್ಯಾಂತರ್ಯ
ವೀರ್ಯಾಂತರ್ಯ   

ಒಂದು ಹನಿ ವೀರ್ಯ ಒಂದು ಹನಿ ರಕ್ತಕ್ಕೆ ಸಮವಂತೆ. ವೀರ್ಯ ನಾಶದಿಂದ ದೌರ್ಬಲ್ಯ ಉಂಟಾಗುತ್ತದೆ ಎಂದು ಸ್ನೇಹಿತರು ಹೇಳುತ್ತಾರೆ. ನನಗೂ ದಿನದಿಂದ ದಿನಕ್ಕೆ ದುರ್ಬಲನಾಗುತ್ತಿರುವೆ ಎನಿಸುತ್ತಿದೆ... ಮೇಲ್‌ನಲ್ಲಿ ಬರುವ ಬಹುತೇಕ ಪ್ರಶ್ನೆಗಳು ಹೀಗಿರುತ್ತವೆ. ಇಂಥವೇ ಆತಂಕಗಳು. ಬಹುತೇಕ ಯುವಕರನ್ನು ಮಾನಸಿಕ ದುಗುಡಕ್ಕೂ ದೂಡುತ್ತವೆ. ಆದರೆ ಸತ್ಯವೇನು ಗೊತ್ತೆ?

ಬಹುತೇಕ ಜನರಿಗೆ ಜೀವದ್ರವ್ಯ ಹಾಗೂ ವೀರ್ಯಾಣುವಿನ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ವೀರ್ಯ ಮತ್ತು ವೀರ್ಯಾಣು ಎರಡೂ ಬೇರೆಬೇರೆ. ವೀರ್ಯ ಜೀವದ್ರವ್ಯ. ವೀರ್ಯಾಣು ಮಗುವಿನ ಹುಟ್ಟಿಗೆ ಕಾರಣವಾಗುವ ಜೀವಾಣು. ವೀರ್ಯಾಣು ವೀರ್ಯವೆಂಬ ಜೀವದ್ರವ್ಯದಲ್ಲಿರುತ್ತದೆ. ಈ ಜೀವದ್ರವ್ಯವು ಶೇ 65ರಷ್ಟು ಮೂಲಕೋಶದಲ್ಲಿ ಉತ್ಪತ್ತಿ ಆಗಿರುತ್ತದೆ. ಶೇ 30ರಿಂದ 35ರಷ್ಟು ಪ್ರಾಸ್ಟೇಟ್‌ ಗ್ರಂಥಿಯು ಉತ್ಪಾದಿಸುತ್ತದೆ. ಶೇ 5ರಷ್ಟು ವೃಷಣಗಳಲ್ಲಿಯೂ ಜನನಾಂಗದ ಒಳಸುರಳಿಯಲ್ಲಿಯೂ ಈ ಜೀವದ್ರವ್ಯ ಉತ್ಪತ್ತಿಯಾಗುತ್ತದೆ.

ಯಾಕಿದು ಜೀವದ್ರವ್ಯ?: ಈ ಜೀವದ್ರವ್ಯದ ಮುಖ್ಯ ಕಾರ್ಯವೆಂದರೆ ಮಕ್ಕಳನ್ನು ಪಡೆಯುವಲ್ಲಿ ಸಹಾಯ ಮಾಡುವುದು. ನೀವು ಕಾಂಡೋಮ್‌ ಬಳಕೆ ಇಲ್ಲದ ಮಿಲನದಲ್ಲಿ ಪಾಲ್ಗೊಂಡಾಗ ಈ ಪುಟ್ಟ ವೀರ್ಯಾಣುವು, ನಿಮ್ಮ ಸಂಗಾತಿಯನ್ನು ಪ್ರವೇಶಿಸುತ್ತದೆ. ನಂತರ ಗರ್ಭನಾಳದಲ್ಲಿ ಸುದೀರ್ಘ ಈಜನ್ನು ಆರಂಭಿಸುತ್ತದೆ. ಅಂಡಾಣುವಿನ ಶೋಧದಲ್ಲಿ ಹೊರಟ ಈ ವೀರ್ಯಾಣು ಫಲಿತದ ಆಸೆ ಹೊತ್ತು ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ಒಂದು ವೇಳೆ ಅಲ್ಲಿ ಅಂಡಾಣುವು ಜೊತೆಗೂಡಿದರೆ... ಓಹ್‌, ನಿಮ್ಮ ಮಗು ಅದು.

ಜೀವದ್ರವ್ಯವು ಮೂಲ ಕೋಶದಲ್ಲಿ ಉತ್ಪತ್ತಿಯಾಗುತ್ತದೆ. ಜನನಾಂಗದಲ್ಲಿರುವ ಗ್ರಂಥಿಗಳು ಇದನ್ನು ಉತ್ಪಾದಿಸುತ್ತದೆ. ಜನನಾಂಗದಲ್ಲಿರುವ ಒಳಸುರಳಿಗಳು ಈ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸುತ್ತವೆ. ಆದರೆ ಪ್ರಾಸ್ಟೇಟ್‌ ಮತ್ತು ಬಲ್ಬುರೆಥ್ರಲ್‌ ಗ್ರಂಥಿಗಳು ಈ ಮಿಶ್ರಣಕ್ಕೆ ಇನ್ನೊಂದಷ್ಟು ಸೇರ್ಪಡೆಗೊಳಿಸುತ್ತವೆ. ಈ ಮಿಶ್ರಣಕ್ಕೆ ವೃಷಣಗಳು ವೀರ್ಯಾಣುವನ್ನು ಬೆರೆಸುತ್ತವೆ. ಇದು ಜೀವದ್ರವ್ಯಕ್ಕೆ ಅತಿ ಕಡಿಮೆ, ಅತ್ಯಲ್ಪ ಪ್ರಮಾಣವನ್ನು ಬೆರೆಸುತ್ತದೆ ಎನ್ನುವುದು ನೆನಪಿರಲಿ. ಮತ್ತು ವೀರ್ಯಾಣುಗಳನ್ನು ಸೇರ್ಪಡೆಗೊಳಿಸಲು ಆರೋಗ್ಯವಂತವಾಗಿರುವ ಒಂದೇ ಒಂದು ವೃಷಣವೂ ಸಾಕು.
ಪುರುಷ ಲೈಂಗಿಕ ಸುಖದ ಪರಾಕಾಷ್ಠೆಯನ್ನು ತಲುಪಿದಾಗ ಅವನ ಜನನಾಂಗದಿಂದ ವೀರ್ಯಸ್ಖಲನವಾಗುತ್ತದೆ.

5ರಿಂದ 10 ಸಲ ವೀರ್ಯ ಚಿಮ್ಮುತ್ತದೆ. ಕೆಲವರಲ್ಲಿ ಇದು ಕಾರಂಜಿಯಂತೆ ಚಿಮ್ಮಿದರೆ, ಇನ್ನು ಕೆಲವು ಪುರುಷರಲ್ಲಿ ಜಿನುಗುತ್ತದೆ. ಆದರೆ ಇದು ಹೇಗೆ ಹೊರ ಬರುತ್ತದೆ ಎನ್ನುವುದು ಗರ್ಭಧಾರಣೆಯೊಂದಿಗೆ ಯಾವ ಸಂಬಂಧವನ್ನೂ ಹೊಂದಿಲ್ಲ ಎನ್ನುವುದು ಮಹತ್ವದ ಮಾಹಿತಿ. ಕೆಲವೊಮ್ಮೆ ಪುರುಷರಿಗೆ ನಿದ್ದೆಯಲ್ಲಿಯೇ ಸ್ಖಲನವಾಗುತ್ತದೆ. ಇದಕ್ಕೆ ಸ್ವಪ್ನಸ್ಖಲನವೆಂದು ಹೆಸರು. ಕೆಲವರು ಸ್ಖಲಿಸದೆಯೂ ಸುಖದ ಪರಾಕಾಷ್ಠೆಯನ್ನು ಅನುಭವಿಸಬಲ್ಲರು.

ಏನಿದೆ ವೀರ್ಯದಲ್ಲಿ?
ವೀರ್ಯವು ಬಿಳಿ, ತಿಳಿ ಹಳದಿ ಅಥವಾ ಬೂದು ಬಣ್ಣದ ಅಂಟುಅಂಟಾಗಿರುವ ದ್ರವವಾಗಿದೆ. ಕೆಲವೊಮ್ಮೆ ತಿಳುವಾಗಿಯೂ ಕೆಲವೊಮ್ಮೆ ಗಾಢವಾಗಿಯೂ ಇರುತ್ತದೆ. ಅದು ಯಾವುದೇ ಸ್ವರೂಪದಲ್ಲಿದ್ದರೂ ಫಲವಂತಿಕೆಗೆ ಸಂಬಂಧವಿಲ್ಲ. ವೀರ್ಯದ ಸ್ವರೂಪಕ್ಕೆ ನಿಮ್ಮ ಆಹಾರ ಪದ್ಧತಿ, ಜೀವನಶೈಲಿ ಹಾಗೂ ನಿಮ್ಮ ಉಡುಗೆ ತೊಡುಗೆಯನ್ನೂ ಸೇರಿದಂತೆ ಇನ್ನೂ ಹಲವು ಕಾರಣಗಳಾಗಿರುತ್ತವೆ. ಒಂದು ವೇಳೆ ನಿಮ್ಮ ವೀರ್ಯದ ಬಣ್ಣ ಗುಲಾಬಿ ಅಥವಾ ಕೆಂಬಣ್ಣದಾಗಿದ್ದರೆ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಒಳಿತು. ಬಣ್ಣ ಹೀಗೆ ಬದಲಾದರೆ, ವೀರ್ಯದಲ್ಲಿ ರಕ್ತ ಬೆರೆತಿದೆ ಎಂದರ್ಥ.

ಈ ಜೀವದ್ರವ್ಯದಲ್ಲಿ ವೀರ್ಯಾಣುವನ್ನು ಹೊರತುಪಡಿಸಿ, ಇನ್ನಷ್ಟು ಅಂಶಗಳು ಇವೆ. ಹೇರಳವಾದ ಪ್ರೋಟೀನು, ಫ್ರುಕ್ಟೋಸ್‌, ಕ್ರಿಯೇಟೈನ್‌, ಕ್ಯಾಲ್ಸಿಯಂ, ವಿಟಾಮಿನ್‌ ಸಿ, ವಿಟಾಮಿನ್‌ ಬಿ 12 ಝಿಂಕ್‌ ಅಲ್ಲದೇ ಕ್ಲೋರೈನ್‌ ಸಹ ಇರುತ್ತದೆ. ಯೋನಿಯೊಳಗೆ ಕ್ಷಾರಿಕ ಅಂಶವಿರುವುದರಿಂದ, ವೀರ್ಯಾಣುವಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಈ ವ್ಯವಸ್ಥೆಯಾಗಿರುತ್ತದೆ.

ಗುಣಮಟ್ಟ ಮತ್ತು ಪ್ರಮಾಣ
ಪುರುಷ ಸ್ಖಲಿಸಿದಾಗಲೆಲ್ಲ ಸರಾಸರಿ 25 ಎಂ.ಎಲ್‌ನಷ್ಟು ವೀರ್ಯವನ್ನು ಉತ್ಪಾದಿಸುತ್ತಾನೆ. 5 ಎಂಎಲ್‌ ಅಂದ್ರೆ ಒಂದು ಟೀ ಸ್ಪೂನಿನಷ್ಟು ಎಂದರ್ಥ. ಒಂದು ವೇಳೆ ಸುದೀರ್ಘ ಕಾಲದಿಂದ ನೀವು ಸ್ಖಲಿಸಿರದಿದ್ದರೆ ಪ್ರಮಾಣ ಇನ್ನಷ್ಟು ಹೆಚ್ಚಬಹುದು. ಮೇಲಿಂದ ಮೇಲೆ ಸ್ಖಲಿಸಿದ್ದರೆ ಕಡಿಮೆಯೂ ಆಗಬಹುದು. ಪ್ರತಿ ಸಲವೂ ನಿಮ್ಮ ಸ್ಖಲನ ಒಂದೂವರೆ ಎಂಎಲ್‌ನಿಂದ ಐದೂವರೆ ಎಂಎಲ್‌ನಷ್ಟಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಒಮ್ಮೆ ಸ್ಖಲಿಸಿದಾಗ ಅದೆಷ್ಟು ವೀರ್ಯಾಣುಗಳ ಬಿಡುಗಡೆಯಾಗುತ್ತದೆ?
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ, ಪ್ರತಿ ಸ್ಖಲನದಲ್ಲೂ 4 ಕೋಟಿ ವೀರ್ಯಾಣುಗಳಿರಬೇಕು ಎಂದು ಹೇಳುತ್ತದೆ. ಅಥವಾ ಪ್ರತಿ ಮಿಲಿ ಲೀಟರ್‌ನಲ್ಲಿಯೂ ಹದಿನೈದು ಲಕ್ಷ ವೀರ್ಯಾಣುಗಳಿರಬೇಕು ಎನ್ನಲಾಗುತ್ತದೆ. ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿದ್ದರೂ ವೀರ್ಯಾಣುಗಳು ಉತ್ತಮ ಆಕಾರ ಮತ್ತು ಗಾತ್ರದಲ್ಲಿರಬೇಕು. ಸದೃಢವಾಗಿರಬೇಕು. ಈ ನಾಲ್ಕು ಕೋಟಿ ವೀರ್ಯಾಣುಗಳಲ್ಲಿ ಒಂದೆರಡು ಕೋಟಿಯಷ್ಟು ವೀರ್ಯಾಣುಗಳು ಉಪಯುಕ್ತವಾಗಿರುತ್ತವೆ.

ಸ್ಖಲನದ ಸಮಯದಲ್ಲಿಯೇ ಶೇ 25ರಷ್ಟು ವೀರ್ಯಾಣುಗಳು ಮೃತಪಟ್ಟಿರುತ್ತವೆ. ಬಹಳಷ್ಟು ಜನರು, ವೀರ್ಯ ನಾಶದಿಂದ ದುರ್ಬಲರಾಗುತ್ತೇವೆ ಎಂದುಕೊಳ್ಳುತ್ತಾರೆ. ವೀರ್ಯಸಂರಕ್ಷಣೆ ಅತ್ಯಗತ್ಯ ಎಂದುಕೊಳ್ಳುತ್ತಾರೆ. ಆದರೆ ಇದು ಸಂಪೂರ್ಣವಾಗಿ ಸುಳ್ಳು ನಂಬಿಕೆಯಾಗಿದೆ. ನಿಮಗೆ ತುಸುಮಟ್ಟಿಗೆ ಸುಸ್ತು ಎನ್ನಿಸಬಹುದು. ನಿದ್ದೆ ಬಂದಂತೆ ಎನಿಸಬಹುದು. ಟೆಸ್ಟೊಸ್ಟೆರೆನ್‌ ಮಟ್ಟದಲ್ಲಿ ಇಳಿಕೆಯಾಗಬಹುದು. ಆದರೆ ಅದು ಬಹುಕಾಲದ ಬಳಲಿಕೆ ಅಲ್ಲ. ನಿಮ್ಮ ವೀರ್ಯದಲ್ಲಿರುವ ವೀರ್ಯಾಣು ದೃಢವಾಗಿರಲಿ, ಫಲವಂತಿಕೆಗೆ ವೀರ್ಯದ ಹರಿವು ಇದ್ದಷ್ಟೂ ಒಳಿತು.
 
ಲೈಂಗಿಕ ರೋಗಗಳು
ವೀರ್ಯದಲ್ಲಿರುವ ಈ ಎಲ್ಲ ಪೋಶಕಾಂಶಗಳು, ಜೀವ ನೀಡುವ ಶಕ್ತಿ ಇದ್ದರೂ ಇದು ರೋಗವಾಹಕ ಎನ್ನುವುದನ್ನೂ ಮರೆಯುವಂತಿಲ್ಲ. ಲೈಂಗಿಕಕ್ರಿಯೆಯ ಮೂಲಕ ಎಚ್‌ಐವಿ ಏಯ್ಡ್‌್ಸ, ಗೊನೊರಿಯಾ, ಹರ್ಪಿಸ್‌, ಸಿಫಿಲಿಸ್‌ ಮುಂತಾದ ಗುಹ್ಯರೋಗವನ್ನೂ ಸಾಗಿಸುವ ವಾಹಕವಾಗಿದೆ. ಸಂಭೋಗ, ಮುಖ ರತಿ ಅಥವಾ ಗುದ ಸಂಭೋಗದ ಮೂಲಕವೂ ರೋಗ ಹರಡುವ ಸಾಧ್ಯತೆ ಇದೆ.

ಲೈಂಗಿಕ ಕ್ರಿಯೆಯ ನಂತರ ಸ್ನಾನ ಮಾಡುವುದರಿಂದ ನಿಮ್ಮನ್ನು ಯಾವುದೇ ಸೋಂಕಿನಿಂದ ಸಂರಕ್ಷಿಸುವುದು ಅಸಾಧ್ಯ. ಈ ಸೋಂಕು ಹರಡದಂತೆ, ಸೋಕದಂತೆ ಇರುವ ಒಂದೇ ಒಂದು ಸುರಕ್ಷಿತ ಮತ್ತು ಖಚಿತ ಪರಿಹಾರವೆಂದರೆ ಲೈಂಗಿಕ ಕ್ರಿಯೆಯಿಂದ ದೂರವಿರುವುದು! ಹೌಹಾರಬೇಡಿ, ಇದು ತೀರ ಅಸಾಧ್ಯವೆನಿಸಬಹುದಲ್ಲವೇ? ಪರ್ಯಾಯ ಮಾರ್ಗವಿದೆ. ಸುರಕ್ಷಿತ ಲೈಂಗಿಕ ಕ್ರಿಯೆ ಅಂದರೆ ಕಾಂಡೋಮ್‌ ಬಳಸುವುದು ಅಥವಾ ಏಕವ್ಯಕ್ತಿ ನಿಷ್ಠೆ. ಇವೆರಡೇ ಪರ್ಯಾಯ ಮಾರ್ಗಗಳು.

ವೀರ್ಯ ಸೇವಿಸಬಹುದೇ?
ಖಂಡಿತವಾಗಿಯೂ. ವೀರ್ಯ ಸೇವನೆಯಿಂದ ತೂಕ ಹೆಚ್ಚುವುದಿಲ್ಲ. ನೀವಿದನ್ನು ಒಪ್ಪುವಿರೋ ಇಲ್ಲವೋ ನಿಮ್ಮ ನಿರ್ಧಾರಕ್ಕೆ ಬಿಟ್ಟ ವಿಷಯ. ವೀರ್ಯದ ವಾಸನೆ ಮತ್ತು ಸವಿ ನಿಮ್ಮ ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ. ಆರೋಗ್ಯವಂತ ಜೀವನಶೈಲಿ ಪ್ರೀತಿಯ ಮಾಧುರ್ಯ ಹೆಚ್ಚಿಸಬಹುದು. ಆಹಾರ ಪದ್ಧತಿಯಲ್ಲಿ ತಾಜಾ ತರಕಾರಿ ಮತ್ತು ಹಣ್ಣುಗಳ ಸೇವನೆ ಇದ್ದರೆ ವೀರ್ಯದ ವಾಸನೆ ಮತ್ತು ಸವಿ ಎರಡೂ ಮಾಧುರ್ಯದಿಂದ ಕೂಡಿರುತ್ತದೆ ಎನ್ನಲಾಗುತ್ತದೆ. ಪೈನಾಪಲ್‌ ಸೇವನೆಯಿಂದ ವೀರ್ಯದ ರುಚಿ ಸಿಹಿಕರ ವಾಗಿರುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.

ಸತ್ಯ ಮತ್ತು ಮಿಥ್ಯಗಳು
* ಒಂದು ಟೇಬಲ್‌ ಸ್ಪೂನ್‌ನಷ್ಟು ವೀರ್ಯವು ಅಜಮಾಸು 25 ಕ್ಯಾಲೋರಿಗಳಷ್ಟಿರುತ್ತದೆ. ಸೇವಿಸುವುದರಿಂದ ತೂಕ ಹೆಚ್ಚುವುದಿಲ್ಲ. ಸ್ಖಲಿಸುವುದರಿಂದ ದೌರ್ಬಲ್ಯವೂ ಆಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವೀರ್ಯವು ರಕ್ತಕ್ಕೆ ಸಮವಲ್ಲ.

* ವೀರ್ಯವು, ನೀರು, ಸಕ್ಕರೆ, ಕ್ಯಾಲ್ಸಿಯಂ, ಕ್ಲೋರಿನ್‌, ಮ್ಯಾಗ್ನೆಸಿಯಂ, ನೈಟ್ರೋಜನ್‌, ವಿಟಾಮಿನ್ಸ್, ಬಿ–12 ಮತ್ತು ಸಿ, ಹಾಗೂ ಜಿಂಕ್‌ ಅಂಶಗಳನ್ನು ಒಳಗೊಂಡಿರುತ್ತದೆ.

ವಾಸನೆ: ಸಾಮಾನ್ಯವಾಗಿ ಕಿವಿ, ಪೈನಾಪಲ್‌ ಅಥವಾ ಕಲ್ಲಂಗಡಿ ಹಣ್ಣಿನ ವಾಸನೆಯನ್ನು ಹೋಲುತ್ತದೆ. ಹೆಚ್ಚು ಬಿಯರ್ ಅಥವಾ ಕಾಫಿ ಕುಡಿಯುವವರ ವೀರ್ಯವು ಕಹಿ ಮತ್ತು ಕಟುವಾದ ವಾಸನೆಯಿಂದ ಕೂಡಿರುತ್ತದೆ. ಕ್ಷಾರೀಯ ಗುಣವುಳ್ಳ, ಮೀನು, ಮಾಂಸದೂಟವನ್ನು ಸೇವಿಸುವವರ ವೀರ್ಯವು ಬೆಣ್ಣೆಯಂತೆ ಮೃದುವಾದ, ನೊರೆಯಂತಿರುತ್ತದೆ. ಪೈನಾಪಲ್‌ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ವೀರ್ಯದ ಸವಿ ಸಿಹಿಯಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
* ಶೇ 5 ರಷ್ಟು ಮಹಿಳೆಯರಿಗೆ ವೀರ್ಯದಿಂದ ಅಲರ್ಜಿ ಇದೆ ಎಂದು ತಿಳಿದು ಬಂದಿದೆ. ಅದರೆ ಅದು ತೀರ ಅಪರೂಪದಲ್ಲಿ ಕಂಡು ಬರುತ್ತದೆ.

ಶೀಘ್ರ ಸ್ಖಲನ
ಒಬ್ಬ ವ್ಯಕ್ತಿ ಲೈಂಗಿಕವಾಗಿ ಪ್ರಚೋದಿತನಾದಾಗ, ಉದ್ರೇಕಗೊಂಡಾಗ ಒಂದು ಬಗೆಯ ದ್ರವವನ್ನು ವಿಸರ್ಜಿಸುತ್ತಾನೆ. ಅದು ವಾಸನಾ ರಹಿತವಾಗಿದ್ದು, ನೀರಿನಂತೆ ಹೊಳೆಯುತ್ತಿದ್ದಲ್ಲಿ ಅಲ್ಲಿ ಶೇ 50ರಷ್ಟು ಮಗುವಾಗುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ. ಇಂಥ ದ್ರವದಲ್ಲಿ ವೀರ್ಯಾಣುಗಳ ಸಂಖ್ಯೆ ಗಮನೀಯವಾಗಿ ಕಡಿಮೆಯಾಗಿರುತ್ತದೆ. ಲೈಂಗಿಕ ಪ್ರಚೋದನೆಯ ಸಂದರ್ಭದಲ್ಲಿ ಕೌಪರ್ಸ್‌ ಗ್ರಂಥಿಗಳು, ವೀರ್ಯನಾಳದಿಂದ ವೀರ್ಯಾಣುವನ್ನು ಸೇರ್ಪಡೆಗೊಳಿಸುವುದು ಸಹಜಕ್ರಿಯೆ. ಆದರೆ ಶೀಘ್ರ ಸ್ಖಲನವಾದಾಗ, ವೀರ್ಯಾಣುಗಳು ಇದರಲ್ಲಿ ಸೇರಿರುವುದಿಲ್ಲ.

ಸಪ್ನಸ್ಖಲನ
ನೀವು ನಿದ್ರಾವಸ್ಥೆಯಲ್ಲಿದ್ದಾಗ ಸ್ಖಲಿಸಿದರೆ ಅದಕ್ಕೆ ಸಪ್ನ ಸ್ಖಲನ ಎನ್ನುತ್ತಾರೆ. ಕನಸಿನಲ್ಲಿ ಮಿಲನದ ದೃಶ್ಯಗಳನ್ನು ನೋಡುತ್ತಿದ್ದರೆ, ಲೈಂಗಿಕ ಯೋಚನೆಗಳಿಂದಾಗಿ ಸಪ್ನಸ್ಖಲನವಾಗುತ್ತದೆ. ಆ ಕನಸಿನ ನೆನಪೂ ನಿಮಗಿರುವುದಿಲ್ಲ. ಶಿಶ್ನವನ್ನು ಮುಟ್ಟದೆಯೂ ಸ್ಖಲಿಸಿರುತ್ತೀರಿ.
ಮಾಹಿತಿಗೆ: info@manipalankur.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.