ADVERTISEMENT

ಸವಿಯಿರಿ ಸಿರಿಧಾನ್ಯದ ಅಡುಗೆ

ನಮ್ಮೂರ ಊಟ

ಪ್ರಜಾವಾಣಿ ವಿಶೇಷ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ಸಿರಿಧಾನ್ಯಗಳಾದ ರಾಗಿ, ಸಾವೆ, ನವಣೆ, ಸಜ್ಜೆ, ಜೋಳ, ಹಾರಕ, ಕೊರಲುಗಳಿಗೆ ಸಾವಿರಾರು ವರ್ಷದ ಇತಿಹಾಸವಿದೆ. ಕರ್ನಾಟಕ ಸಿರಿಧಾನ್ಯಗಳ ತವರೂರು. ಬರಗಾಲದಲ್ಲಿಯೂ ಹುಲುಸಾಗಿ ಬೆಳೆದು ಸಮೃದ್ಧ ಫಸಲು ಕೊಡುವ ಸಿರಿಧಾನ್ಯಗಳು ‘ಬರಗಾಲದ ಮಿತ್ರ’ ಎಂದೇ ಕರೆಸಿಕೊಂಡಿವೆ.

ಈ ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿದ್ದು, ಇವುಗಳಿಂದ ಮಾಡಿದ ಆಹಾರಗಳ ಸೇವನೆಯಿಂದ ಸಕ್ಕರೆ ಕಾಯಿಲೆ, ಸ್ಥೂಲಕಾಯವನ್ನು ದೂರವಿಡಬಹುದು. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ದೇಹಕ್ಕೆ ಅವಶ್ಯವಿರುವ ಪ್ರೋಟೀನ್‌, ಖನಿಜಾಂಶ ಹಾಗೂ ನಾರಿನಾಂಶ ಒದಗಿಸುತ್ತದೆ. ಸಿರಿಧಾನ್ಯಗಳು ಆರೋಗ್ಯ ಸಿರಿಯ ಆಗರವಾಗಿವೆ. ಮಕ್ಕಳಿಂದ ವೃದ್ಧರವರೆಗೂ ತಿನ್ನಲು ಯೋಗ್ಯವಾದ ಆಹಾರ ಇವಾಗಿವೆ. ಸಿರಿಧಾನ್ಯಗಳ ಕೆಲವು ಆಹಾರ ವಿಧಾನವನ್ನು ಇಲ್ಲಿ ಪರಿಚಯಿಸಲಾಗಿದೆ.
–ಕೆ.ಆರ್‌. ನಾಗೇಶ್‌, ಬೆಂಗಳೂರು

ಜೋಳದ ದೋಸೆ
ಸಾಮಗ್ರಿ:
ಒಂದು ಲೋಟ ಬಿಳಿ ಜೋಳ, 1 ಚಮಚ ಮೆಂತ್ಯೆ, ರುಚಿಗೆ ಉಪ್ಪು.
ವಿಧಾನ: ಬಿಳಿ ಜೋಳ, ಮೆಂತ್ಯೆ ಬೆಳಗ್ಗೆಯೇ ನೆನೆಸಿಡಿ. ಸಂಜೆ ಮಿಕ್ಸಿಗೆ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಬೆಳಿಗ್ಗೆ ದೋಸೆ ಕಾವಲಿಯ ಮೇಲೆ, ಎಣ್ಣೆ ಹಾಕಿ, ದೋಸೆಯಂತೆ ಹುಯ್ದು ನೋಡಿ... ಜೋಳದ ದೋಸೆಯ ಘಮ ಮನೆಯಲ್ಲಿ ಹರಡುತ್ತದೆ. ಇದಕ್ಕೆ ಬೆಣ್ಣೆ ಸವರಿದರೆ ಇನ್ನಷ್ಟು ರುಚಿಯಾಗುವುದು. ಇದು ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಲು ಚೆಂದ.

ರಾಗಿ ಇಡ್ಲಿ
ಸಾಮಗ್ರಿ: 400 ಗ್ರಾಂ ರಾಗಿ, 100 ಗ್ರಾಂ ಉದ್ದು, 25 ಗ್ರಾಂ ಮೆಂತ್ಯೆ, 50 ಗ್ರಾಂ ಅಕ್ಕಿ. ರುಚಿಗೆ ಉಪ್ಪು.

ವಿಧಾನ: ರಾಗಿ, ಉದ್ದು, ಮೆಂತ್ಯೆ ಹಾಗೂ ಅಕ್ಕಿಯನ್ನು ಸುಮಾರು ಎಂಟು ಗಂಟೆ ನೆನೆಸಿಡಬೇಕು. ನೆನೆದ ಕಾಳುಗಳನ್ನು ರುಬ್ಬಿ, 12 ಗಂಟೆವರೆಗೆ ಇಡಬೇಕು. ರುಬ್ಬಿದ ಹಿಟ್ಟನ್ನು ಇಡ್ಲಿ ಅಥವಾ ದೋಸೆಯನ್ನು ಮಾಡಿ ಸವಿಯಬಹುದು. ಇದಕ್ಕೆ ಹುರಳಿ ಚಟ್ನಿ ಚೆನ್ನಾಗಿರುತ್ತದೆ.

ಚಟ್ನಿ: ಸಾಮಗ್ರಿ: 100 ಗ್ರಾಂ ಹುರಳಿ, ಬ್ಯಾಡಗಿ ಮೆಣಸಿನಕಾಯಿ 75 ಗ್ರಾಂ, ಮಣ್ಣುಕಟ್ಟು ಖಾರದ ಮೆಣಸಿನಕಾಯಿ 25 ಗ್ರಾಂ, ಎಂಟು ಎಸಳು ಬೆಳ್ಳುಳ್ಳಿ, ಅರ್ಧ ತೆಂಗಿನ ಕಾಯಿ ತುರಿ.
ವಿಧಾನ: ಸ್ವಲ್ಪ ಎಣ್ಣೆಯೊಂದಿಗೆ ಎಲ್ಲವನ್ನೂ ಬೇರೆ ಬೇರೆ ಹುರಿದುಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

ನವಣೆ ಪೊಂಗಲ್‌
ಸಾಮಗ್ರಿ: 250 ಗ್ರಾಂ ನವಣೆ ಅಕ್ಕಿ, 250 ಗ್ರಾಂ ಹೆಸರುಕಾಳು, ಒಂದು ಚಮಚ ಕಾಳು ಮೆಣಸು, 2ಇಂಚು ಶುಂಠಿ, ಐದಾರು ಎಸಳು ಕರಿಬೇವು, ಕಾಲುಭಾಗ ತೆಂಗಿನ ಕಾಯಿಯನ್ನು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ಕಾಯಿ, ಜೀರಿಗೆ, ಸಾಸಿವೆ ತಲಾ ಒಂದು ಚಮಚ. 25 ಗ್ರಾಂ ಗೋಡಂಬಿ. ರುಚಿಗೆ ಉಪ್ಪು.

ವಿಧಾನ: ತುಪ್ಪದೊಂದಿಗೆ ಅಕ್ಕಿ ಮತ್ತು ಹೆಸರು ಕಾಳನ್ನು ಪ್ರತ್ಯೇಕವಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಪಾತ್ರೆಯಲ್ಲಿ ಸಾಸಿವೆ ಸಿಡಿಸಿ, ಜೀರಿಗೆ, ಶುಂಠಿ, ಕರಿಬೇವು ಹಾಗೂ ತೆಂಗಿನ ಹೋಳು, ಗೋಡಂಬಿ ಹಾಕಿ ಫ್ರೈ ಮಾಡಬೇಕು. ನಂತರ ನಾಲ್ಕರಿಂದ ಐದರಷ್ಟು ನೀರನ್ನು ಹಾಕಬೇಕು. ಚೆನ್ನಾಗಿ ಕುದಿ ಬಂದಾಗ ಹುರಿದಿಟ್ಟುಕೊಂಡ ನವಣೆ ಮತ್ತು ಹೆಸರುಬೇಳೆಯನ್ನು ಹಾಕಬೇಕು. ಹದವಾಗಿ ಬೆಂದ ನಂತರ ಕೆಳಗಿಳಿಸಬೇಕು. ಪೊಂಗಲ್‌ನೊಂದಿಗೆ ಹುಣಸೆಹಣ್ಣಿನ ಗೊಜ್ಜು ರುಚಿಯಾಗಿರುತ್ತದೆ. ಚಳಿಗಾಲಕ್ಕೆ ಉತ್ತಮ ಆಹಾರವಾಗಿದೆ.

ಸಜ್ಜೆ ಇಡ್ಲಿ
ಸಾಮಗ್ರಿ: ಒಂದು ಲೋಟ ಸಜ್ಜೆ, ಒಂದು ಲೋಟ ಅಕ್ಕಿ, ಅರ್ಧ ಲೋಟ ಉದ್ದು, ಒಂದು ಚಮಚ ಮೆಂತ್ಯೆ. ರುಚಿಗೆ ಉಪ್ಪು.

ವಿಧಾನ: ಸಜ್ಜೆ, ಅಕ್ಕಿ, ಉದ್ದು, ಮೆಂತ್ಯೆಯನ್ನು  ಆರು ಗಂಟೆ ನೆನೆಸಿ ರುಬ್ಬಿಕೊಳ್ಳಬೇಕು. ಹಿಟ್ಟನ್ನು ರಾತ್ರಿಯಿಡಿ ಬಿಟ್ಟರೆ ಅದಕ್ಕೆ ಹುದುಗು ಬರುವುದು. ಬೆಳಿಗ್ಗೆ ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದರೆ, ಸಜ್ಜೆ ಇಡ್ಲಿ ಸಿದ್ಧ.  ಹುರುಳಿ, ಟೊಮೆಟೊ ಹಾಗೂ ಕಾಯಿ ಚಟ್ನಿಯೊಂದಿಗೆ ಸವಿಯಬಹುದು.

ನವಣೆ ಪಾಯಸ
ಸಾಮಗ್ರಿ: 250 ಗ್ರಾಂ ನವಣೆ ಅಕ್ಕಿ, ಸಾಕಷ್ಟು ಬೆಲ್ಲ, ಗಸಗಸೆ, ತೆಂಗಿನಕಾಯಿ.

ವಿಧಾನ: ಮೊದಲು ಗಸಗಸೆಯನ್ನು ಸ್ವಲ್ಪ ಹೊತ್ತು ನೆನಸಿ ತೆಂಗಿನ ಕಾಯಿಯೊಂದಿಗೆ ರುಬ್ಬಿಕೊಳ್ಳಬೇಕು. ಹದವಾಗಿ ಬೇಯಿಸಿದ ನವಣೆ ಅಕ್ಕಿಯನ್ನು ಬೆಲ್ಲ ಮತ್ತು ಕಾಯಿ ಮಿಶ್ರಣದೊಂದಿಗೆ ಅರ್ಧ ಲೀಟರ್‌ ಹಾಲನ್ನು ಹಾಕಿ ನಮಗೆ ಬೇಕಾದ ಹದಕ್ಕೆ ಬೇಯಿಸಿಕೊಳ್ಳಬೇಕು. ನಾಲ್ಕೈದು ಚಮಚ ತುಪ್ಪದೊಂದಿಗೆ ಗೋಡಂಬಿ, ದ್ರಾಕ್ಷಿ ಏಲಕ್ಕಿ ಹುರಿದುಕೊಳ್ಳಬೇಕು. ಈ ಮಿಶ್ರಣವನ್ನು ಕುದಿಯುವ ಪಾಯಸಕ್ಕೆ ಸೇರಿಸಬೇಕು.

ಹಾರಕದ ಮೊಸರನ್ನ
ಸಾಮಗ್ರಿ: 250 ಗ್ರಾಂ ಹಾರಕದ ಅಕ್ಕಿ, ಅರ್ಧ ಲೀಟರ್‌ ಮೊಸರು, ಒಗ್ಗರಣೆಗೆ; ಎಣ್ಣೆ, ಸಾಸಿವೆ, ಕರಿಬೇವು, 25 ಗ್ರಾಂ ದ್ರಾಕ್ಷಿ, ಗೋಡಂಬಿ, ಕರಿಬೇವು. ಕಾಯಿ, ಕೊತ್ತಂಬರಿ ಸೊಪ್ಪು. ರುಚಿಗೆ ಉಪ್ಪು.

ವಿಧಾನ: ಹಾರಕದ ಅಕ್ಕಿಯನ್ನು ಹದವಾಗಿ ಬೇಯಿಸಿ ತಣ್ಣಗಾದ ನಂತರ, ಮೊಸರಿನೊಂದಿಗೆ ಕಲಸಬೇಕು. ಒಗ್ಗರಣೆ ಮಾಡಿದ ಪದಾರ್ಥಗಳನ್ನು ಹಾಕಿ, ಅದಕ್ಕೆ ತೆಂಗಿನ ತುರಿ ಹಾಗೂ ಕೊತ್ತಂಬರಿಯನ್ನು ಮಿಶ್ರಣ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.