ADVERTISEMENT

ಹೆಂಗರುಳು ಬಂದದ್ದು ಅಪ್ಪನಿಂದ!

ಗುಡಿಹಳ್ಳಿ ನಾಗರಾಜ
Published 26 ಜೂನ್ 2015, 19:30 IST
Last Updated 26 ಜೂನ್ 2015, 19:30 IST

‘ಭೂಮಿ ತೂಕದ ಹೆಣ್ಣು’ ಪ್ರಕಾಶ ಕಡಪಟ್ಟಿ ಎಂಬ ನಾಟಕಕಾರರು ಬರೆದ ಪ್ರಸಿದ್ಧ ನಾಟಕ. ಹಲವು ವೃತ್ತಿ ನಾಟಕ ಕಂಪನಿಗಳು ಪ್ರದರ್ಶಿಸಿದ ಜನಪ್ರಿಯ ನಾಟಕ ಇದು. ಹೆಣ್ಣನ್ನು ಭೂಮಿಗೆ ಹೋಲಿಸಿದ ಇದಕ್ಕಿಂತ ಬೇರೆ ಪ್ರತಿಮೆ ಬೇಕಿಲ್ಲ. ಹೆಣ್ಣಿನ ಸಹನೆ, ಆತ್ಮಸ್ಥೈರ್ಯಕ್ಕೆ ಇದಕ್ಕಿಂತ ಮತ್ತೊಂದು ಹೋಲಿಕೆ ಇರಲಾರದು. ಅಂತೆಯೇ ನಾವು ‘ಭೂಮಿ ತೂಕದ ತಾಯಿ’ ಎಂದು ಅವ್ವನನ್ನು ಕರೆಯುತ್ತೇವೆ. ಆದರೆ ನನಗೆ ‘ಭೂಮಿ ತೂಕದ ಅಪ್ಪ’ನೂ ಇದ್ದ. ಹಾಗೆಯೇ ಇತರರ ಬದುಕಲ್ಲೂ ಇರಬಹುದು.

ಅಪ್ಪನಿಗೆ ಗೊತ್ತಿದ್ದದ್ದು ‘ದುಡಿಮೆ’ ಮತ್ತು ‘ಪ್ರೀತಿ’ ಎರಡೇ. ವ್ಯವಹಾರ ಜಗತ್ತಿನಿಂದ ಆತ ಬಹುದೂರ. ತುಂಡು ಭೂಮಿಯ ಬಿತ್ತನೆಗೆ ಬೀಜ ಮತ್ತು ಗೊಬ್ಬರಕ್ಕೆ ಸಾಲ ತರಲು ನಮ್ಮೂರು ಗುಡಿಹಳ್ಳಿ ಸಮೀಪದ ಹರಪನಹಳ್ಳಿ (ದಾವಣಗೆರೆ ಜಿಲ್ಲೆ, ಆಗಿನ ಬಳ್ಳಾರಿ ಜಿಲ್ಲೆ) ದಲಾಲಿ ಅಂಗಡಿಗೆ ಹೋದರೆ, ಆ ಸಾಹುಕಾರರೇ ಈತನನ್ನು ಮಾತನಾಡಿಸುವವರೆಗೆ ಈತ ಬಾಯಿ ಬಿಡುತ್ತಿರಲಿಲ್ಲ! ಅವರು ಎಷ್ಟೇ ಲೆಕ್ಕ ಹಚ್ಚಿದರೂ, ಗಾಣದೆತ್ತಿನಂತೆ ಅದನ್ನೆಲ್ಲ ತೀರಿಸುವ ಕೃತಾರ್ಥ ಭಾವ!

ಮನೆಯಲ್ಲಿ ಮಕ್ಕಳೊಂದಿಗೆ ಅಪಾರ ಅಂತಃಕರಣದ ಮನುಷ್ಯ. ಸೋದರ ಮಾವನಿಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಒಂದು ವರ್ಷದವನಿದ್ದಾಗಲೇ ನನ್ನನ್ನು ಸಮೀಪದ ಅರಸೀಕೆರೆಗೆ ಕರೆದೊಯ್ದು ಅವರ ಮನೆಯಲ್ಲೇ ಬೆಳೆಸಿದ್ದರಿಂದ ಅಪ್ಪನ ಅಂತಃಕರಣದ ಸವಿ ಸುಖದಿಂದ ನಾನು ವಂಚಿತನಾದೆ. ಮುಂದೆ ಬಹುಕಾಲದ ನಂತರ ಸೋದರ ಮಾವನಿಗೆ ಮಕ್ಕಳಾದವು. ಹಿರಿಯಣ್ಣನಂತೆ ಮಾವನ ಮಕ್ಕಳೊಂದಿಗೆ ಬೆಳೆದ ನನಗೆ ಅವರ ಮಗಳನ್ನು ಮದುವೆ ಆಗಲು ಮನಸ್ಸು ಇರಲಿಲ್ಲ. ನನ್ನ ಮನಸ್ಥಿತಿಯನ್ನು ಬಹುಬೇಗ ಅರ್ಥ ಮಾಡಿಕೊಂಡವನೇ ಈ ನನ್ನ ಮೌನಿ ಅಪ್ಪ.

ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ನನಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡಲು ಸಾಕಷ್ಟು ಮಂದಿ ಮುಂದೆ ಬಂದರು. ನಾನೊಲ್ಲೆ ಎಂದೆ. ಭಲೆ ಮಗನೆ ಎಂದ. ನನ್ನ ಬೆಂಬಲಕ್ಕೆ ನಿಂತ. ನನ್ನ ದುಡಿಮೆಯ ಪುಡಿಗಾಸು, ಆತ ತಂದ ಕೈಗಡ ಸಾಲ, ಮಾವನ ಮನೆಯವರ ಸಹಕಾರ -ಎಲ್ಲ ಸೇರಿ ಇಪ್ಪತ್ತು ಸಾವಿರದಲ್ಲಿ ನನ್ನ ಮದುವೆ ಮುಗಿದುಹೋಯಿತು. ಹೊಲ ಮನೆಯಲ್ಲಿ ಅವುಡುಗಚ್ಚಿ ದುಡಿಯುತ್ತಿದ್ದ ಅವ್ವ- ಅಪ್ಪನ ವ್ಯವಹಾರ ಶೂನ್ಯತೆಗೆ ಬೈಗುಳದ ಸುರಿಮಳೆಗರೆಯುತ್ತಿದ್ದರೆ ಅಪ್ಪ ತುಟಿ ಪಿಟಕ್ಕೆನ್ನುತ್ತಿರಲಿಲ್ಲ.

ನನಗೆ ನಾಲ್ವರು ತಂಗಿಯರು. ಮೂವರು ವಿಧವೆಯರಾದರು. ಇಬ್ಬರಿಗೆ ಗಂಡನ ಮನೆಯಲ್ಲಿ ಏನೂ ದೊರೆಯಲಿಲ್ಲ (ಇರಲೂ ಇಲ್ಲ). ಬೀದಿಗೆ ಬಿದ್ದ ಅವರಿಗೆ ನಾವೇ ಆಸರೆ ಎಂದು ಬದುಕಿ ತೋರಿಸಿದ ಅಪ್ಪ ನನ್ನ ಹಾಗೂ ನನ್ನ ತಮ್ಮನಲ್ಲಿ ಅದೇ ಅಂತಃಕರಣ ತುಂಬಿ ಹೋದ. ಶಾಲೆಯ ಮುಖವನ್ನೇ ಕಂಡರಿಯದ ಅಪ್ಪನಿಗೆ ಬಹಳ ಸೂಕ್ಷ್ಮತೆ ಇತ್ತು. ಯಾರಿಂದಲಾದರೂ ನಮಗೆ ಅವಮಾನವಾದರೆ ಆತ ಬಹಳ ನೊಂದುಕೊಳ್ಳುತ್ತಿದ್ದ. ಕಣ್ಣೀರು ಹಾಕುತ್ತಿದ್ದ. ಆದರೆ ಆ ಕಣ್ಣೀರು ನಮಗೆ ಕಾಣಬಾರದೆಂದು ಬಯಸುತ್ತಿದ್ದ. ನನ್ನ ಸಲುವಾಗಿ ಆತನ ಕಣ್ಣು ಹನಿಗೂಡಿದ್ದನ್ನು ಹಾಗೂ ಅದು ನನಗೆ ಕಾಣಬಾರದೆಂದು ಆತ ಮುಖವನ್ನು ಬೇರೆಡೆಗೆ ತಿರುಗಿಸಿದ್ದನ್ನು ನಾನೇ ಒಂದೆರಡು ಬಾರಿ ಗಮನಿಸಿದ್ದೇನೆ.

ಚಿಕ್ಕ ಮಕ್ಕಳೆಂದರೆ ಅಪ್ಪನಿಗೆ ಬಹಳ ಇಷ್ಟ. ಅವರಿಗಿಂತ ಚಿಕ್ಕವನಾಗಿಬಿಡುತ್ತಿದ್ದ. ತನ್ನ ಹೆಣ್ಣುಮಕ್ಕಳನ್ನು ಆತ ಅತಿಯಾಗಿ ಹಚ್ಚಿಕೊಂಡಿದ್ದ. ಗಂಡನ ಮನೆ ಹೇಗೋ.. ಏನೋ.. ನಾವು ಆಸರೆಯಾಗಿರಬೇಕು ಎಂದೇ ಆತ ನಂಬಿದ್ದ. ಮೊಲೆ, ಮುಡಿ ಬಂದರೆ ಹೆಣ್ಣೆಂಬರು... ಮೀಸೆ, ಕಾಸೆ ಬಂದರೆ ಗಂಡೆಂಬರು... ಎಂದರು ಜೇಡರ ದಾಸಿಮಯ್ಯ. ಅದೇ ಅರ್ಥವನ್ನು ವಿಸ್ತರಿಸುವುದಾದರೆ  ಹೆಣ್ಣು ಹೆಣ್ಣಲ್ಲ... ಗಂಡು ಗಂಡಲ್ಲ... ಹೆಣ್ಣು ಗಂಡೂ ಹೌದು. ಗಂಡು ಹೆಣ್ಣೂ ಹೌದು. ಗಂಡಿನಲ್ಲಿ ಹೆಂಗರಳು ಬೇಕು. ಹೆಣ್ಣು ಗಂಡಾಗಿರಬೇಕು.

ಗಂಡು ಹೆಣ್ಣಾದ, ಹೆಣ್ಣು ಗಂಡಾದ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಸಿದ್ಧರಾಮೇಶನ ವಚನದ ಆಶಯದಂತೆ ನನ್ನಲ್ಲಿ ಹೆಂಗರಳು ಮೂಡಲು ಅಪ್ಪನೇ ಕಾರಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.