ADVERTISEMENT

ಮನೆಯೆಂಬ ಭಾವನಾತ್ಮಕ ತಾಣ

ಸರಿತಾ ನವಲಿ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ಮನೆಯೆಂಬ ಭಾವನಾತ್ಮಕ ತಾಣ
ಮನೆಯೆಂಬ ಭಾವನಾತ್ಮಕ ತಾಣ   

ಮನೆಯೆಂದರೇನು? ಹೀಗೆಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡು ಉತ್ತರ ಹುಡುಕಲು ಹೊರಟೆ. ಕೇವಲ ಗಾರೆ-ಸಿಮೆಂಟು, ಇಟ್ಟಿಗೆ-ಕಟ್ಟಿಗೆಗಳಿಂದ ಮನುಷ್ಯ ಕಟ್ಟಿಕೊಂಡ ವಾಸಸ್ಥಾನವಾಗಿರದೇ ಬದುಕನ್ನು ರೂಪಿಸಿಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸುವುದೇ ಮನೆ ಎಂದು ಅನಿಸಿತು.

ಮನೆಯೆಂದರೆ ಬರೀ ಕಟ್ಟಡವಲ್ಲ, ಪತ್ರವ್ಯವಹಾರದ ವಿಳಾಸವಲ್ಲ; ಜೀವನದಲ್ಲಿ ಪ್ರೀತಿ, ವಿಶ್ವಾಸ, ಸಂಬಂಧ, ಸಂಸ್ಕಾರಗಳ ಮಹತ್ವವನ್ನು ಕಲಿಸಿಕೊಡುವ ಮಂದಿರವೇ ಮನೆ; ಪುಟ್ಟ ಮಗುವನ್ನೊಳಗೊಂಡು ವಯೋವೃದ್ಧರವರೆಗೆ ಮನಸ್ಸಿನ ಸ್ವಾತಂತ್ರ್ಯವನ್ನು ನೀಡುವ ನೆಲೆಯೇ ಮನೆ. ಹುಟ್ಟಿ ಬೆಳೆದು ದೊಡ್ಡವರಾದಂತೆ, ಪ್ರತಿ ವ್ಯಕ್ತಿಯ ಮೊಗ್ಗಿನ ಮನಸ್ಸನ್ನು ಹೂವಾಗಿ ಅರಳಿಸಿ, ಕಾಯಾಗಿಸಿ ಹಣ್ಣಾಗಿಸುವ ಕಾರ್ಯದಲ್ಲಿನ ಹೆಚ್ಚಿನ ಪಾತ್ರ ಇರುವುದೇ ಮನೆಗೆ.

ಮನೆಯೊಂದಿಗೆ ಕುಟುಂಬ, ಅದರೊಡನೆ ಬರುವ ಸಂಬಂಧಗಳು, ಈ ಎಲ್ಲ ಸಂಬಂಧಗಳೊಂದಿಗೆ ಕಳೆಯುವ ಕ್ಷಣಗಳು ಬದುಕಿನುದ್ದಕ್ಕೂ ಜೊತೆಯಾಗುವವು. ತಾಯಿಯ ಮನೆಯಾಗಿರಲಿ, ಅತ್ತೆಯ ಮನೆಯಾಗಿರಲಿ ಅಥವಾ ನಮ್ಮದೆಂಬ ಪುಟ್ಟ ಮನೆಯಿರಲಿ, ಸಂಬಂಧಗಳ ನಡುವಿನ ವಿಶ್ವಾಸ, ಅಲ್ಲಿನ ಪ್ರತಿಯೊಬ್ಬ ಸದಸ್ಯನೂ ಬೆಳೆಸಿಕೊಳ್ಳುವ ಆತ್ಮವಿಶ್ವಾಸಕ್ಕೂ ಕಾರಣವಾಗುತ್ತದೆ. ಮನೆಯ ಹಿರಿಯರು, ಪುಟ್ಟ ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಭಾವ-ಮೈದುನ – ಹೀಗೆ ಹಲವಾರು ಸಂಬಂಧಗಳನ್ನು ಗೌರವಿಸಿ, ಎಲ್ಲರೊಂದಿಗೆ ಹೊಂದಿಕೊಂಡು ಬದುಕುವ ಕಲೆಯನ್ನೂ ಮನೆ ಕಲಿಸಿಕೊಡುತ್ತದೆ.

ADVERTISEMENT

ನಾವು ಬೆಳೆಸಿಕೊಳ್ಳುವ ಮೌಲ್ಯಗಳು ಮತ್ತು ರೂಢಿಸಿಕೊಂಡ ಸಂಸ್ಕಾರಗಳೊಂದಿಗೆ, ಜೀವನದಲ್ಲಿ ಅತಿ ಮುಖ್ಯವೆನಿಸುವ ಸಂಬಂಧದ ಎಳೆಗಳು ಸಡಿಲಗೊಳ್ಳದಂತೆ ಅಥವಾ ಕಾಲಾಂತರದಲ್ಲಿ ಸ್ವಲ್ಪಮಟ್ಟಿಗೆ ಸಡಿಲಗೊಂಡರೂ ಹರಿದು ಹೋಗದಂತೆ ಕಾಪಾಡಿಕೊಳ್ಳಬೇಕೆಂಬ ಪಾಠವನ್ನು ನಾವು ಮನೆಯಲ್ಲೇ ಕಲಿಯುತ್ತೇವೆ. ಜೀವನದ ಅನುಭವಗಳಿಂದ ಕಲಿತ ಅದೆಷ್ಟೋ ವಿಷಯಗಳನ್ನು ಮನನ ಮಾಡಿಕೊಳ್ಳಲು ಅವಶ್ಯವೆನಿಸುವ ಮುಕ್ತ ಮನಸ್ಸನ್ನೂ ಏಕಾಂತತೆಯನ್ನೂ ನಮ್ಮ ಮನೆಯೇ ನಮಗೆ ಒದಗಿಸುತ್ತದೆ.

ಮನೆಯ ಅಂಗಳದಲ್ಲಿ ಬಣ್ಣಬಣ್ಣದ ರಂಗೋಲಿಯನ್ನು ಬಿಡಿಸುತ್ತವೇ ಅಲ್ಲವೆ? ಅಂತೆಯೇ ನಾವೆಲ್ಲರೂ ನಮ್ಮ ಮನದಂಗಳದಲ್ಲಿ ಮನೆಯ ಸಾವಿರಾರು ನೆನಪಿನ ಚಿತ್ತಾರಗಳನ್ನು ಮೂಡಿಸಿಕೊಂಡಿರುತ್ತೇವೆ. ಮನೆಯೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಬೆಸೆದುಕೊಳ್ಳದವರು ಯಾರು? ನೋವು-ನಲಿವಿನ ನೆನಪುಗಳು, ಸೋಲು-ಗೆಲುವಿನ ನೆನಪುಗಳು, ಹಿಂಜರಿಕೆ, ನಂಬಿಕೆ, ಹೊಂದಾಣಿಕೆ, ಯಶಸ್ಸಿನ ನೆನಪುಗಳು ಜೊತೆಯಾಗಿ Home is a feeling ಎಂದು ಒಪ್ಪಿಕೊಳ್ಳುವಂತೆ ಮಾಡುತ್ತವೆ.

ಪ್ರತಿಯೊಬ್ಬರಿಗೂ ತಮ್ಮ ಮನೆಯ ಬಗ್ಗೆ ಅವರದ್ದೇ ಆದ ಭಾವನೆಗಳಿರುತ್ತವೆ ಎಂದು ಯೋಚಿಸಿದಾಗ ನೆನಪಿಗೆ ಬಂದದ್ದು ಹಿಂದಿ ಚಲನಚಿತ್ರಗೀತೆಯ ಈ ಸಾಲುಗಳು: ‘ಯೆ ತೇರಾ ಘರ್, ಯೆ ಮೇರಾ ಘರ್| ಕಿಸೀಕೊ ದೇಖನಾ ಹೊ ಅಗರ್| ತೊ ಪೆಹೆಲೆ ಆಕೆ ಮಾಂಗಲೆ ತೇರಿ ನಜರ್, ಮೇರಿ ನಜರ್| ಯೆ ಘರ್ ಬೊಹುತ್ ಹಸೀನ ಹೈ||’ ಈ ಗೀತೆ ಅದೆಷ್ಟು ಅರ್ಥಪೂರ್ಣವಾಗಿದೆ –‘ನಮ್ಮ ಮನೆ ಬಹಳ ಸುಂದರವಾಗಿದೆ. ಇದು ನನ್ನ-ನಿನ್ನ ಮನೆ. ಈ ಮನೆಯ ಸಂದರ್ಯವನ್ನು ನೋಡಲು ಬಯಸುವವ, ಮೊದಲು ನನ್ನ-ನಿನ್ನ ದೃಷ್ಟಿಯನ್ನು ಕೇಳಿ ಪಡೆಯಬೇಕು’.

ನಮ್ಮೆಲ್ಲರ ಬದುಕಿನ ಪಯಣದಲ್ಲಿ  ನಮ್ಮ ನೆನಪುಗಳನ್ನು, ಭಾವನೆಗಳನ್ನು, ಕನಸುಗಳನ್ನು, ಸಂಬಂಧಗಳನ್ನು ಬೆಸೆಯುವ ಸುಂದರ ತಾಣವೇ ಮನೆ.

(ಸರಿತಾ ನವಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.