ADVERTISEMENT

ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ

ವಾಗೀಶ ಕುರುಗೋಡು
Published 7 ಮೇ 2024, 4:34 IST
Last Updated 7 ಮೇ 2024, 4:34 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಜನತಾ ಕಾಲೋನಿಯ ಸಾರ್ವಜನಿಕ ನಲ್ಲಿಯ ಬಳಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಜನತಾ ಕಾಲೋನಿಯ ಸಾರ್ವಜನಿಕ ನಲ್ಲಿಯ ಬಳಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು   

ಕುರುಗೋಡು: ಸಮುದ್ರದ ಜತೆ ನೆಂಟಸ್ತನ, ಉಪ್ಪಿಗೆ ಪರದಾಟ ಎನ್ನುವ ಗಾದೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮಕ್ಕೆ ಅಕ್ಷರಶಃ ಅನ್ವಯವಾಗುತ್ತದೆ.

ಏಕೆಂದರೆ ವರ್ಷದಲ್ಲಿ 10 ತಿಂಗಳು ನೀರಿನಿಂದ ತುಂಬಿರುವ ತುಂಗಭದ್ರಾ ಕೆಳಮಟ್ಟದ ಕಾಲುವೆÉ ಗ್ರಾಮ ದಿಂದ ಹತ್ತಿರದಲ್ಲಿಯೇ ಹರಿಯುತ್ತದೆ. 5 ಕಿ.ಮೀ. ದೂರದಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಸದಾ ಜೀವಂತ.

ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಪರಿಣಾಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ.

ADVERTISEMENT

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಇಲ್ಲಿ 15 ಸಾವಿರ ಜನರು ವಾಸವಿದ್ದಾರೆ. 31 ಜನರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದ ಕೆಲವು ವಾರ್ಡ್‍ಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಗೊಳ್ಳುತ್ತಿಲ್ಲ. ನೀರು ಬರುವ ವಾರ್ಡ್‍ಗಳಿಗೆ ಬಂಡಿಗಳಲ್ಲಿ ಕೊಡಗಳನ್ನು ತೆಗೆದುಕೊಂಡು ಹೋಗಿ ನೀರು ಸಂಗ್ರಹಿಸುವುದು ಜನರ ನಿತ್ಯದ ಕೆಲಸವಾಗಿದೆ.

ಗ್ರಾಮದ ಒಂದನೇ ವಾರ್ಡ್, ಜನತಾ ಕಾಲೋನಿ, ಧಾರುಕಾನಗರ, ಆಚಾರಿ ಕಾಲೋನಿಗೆ ಕೆಲವು ದಿನಗಳಿಂದ ನೀರು ಸರಬರಾಜುಗೊಳ್ಳುತ್ತಿಲ್ಲ. ನೆರೆಯ ವಾರ್ಡ್‍ಗಳಿಗೆ ನೀರಿಗಾಗಿ ಕೊಡಗಳನ್ನು ಹಿಡಿದು ಅಲೆಯುವ ಕೆಲಸ ಮಾಡಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿ ಶಿವಮ್ಮ ಮತ್ತು ಎಸ್.ಎಂ. ಲಲಿತಾ

ಗ್ರಾಮದ ಎಲ್ಲ ವಾರ್ಡ್‍ಗಳಲ್ಲಿ ಮನೆಮನೆಗೆ ಗಂಗೆ ಯೋಜನೆಯಲ್ಲಿ ನಲ್ಲಿ ಅಳವಡಿಸಿದೆ. ಆದರೆ ಕೆಲವು ವಾರ್ಡ್‍ಗಳಲ್ಲಿ ಮಾತ್ರ ನೀರು ಸರಬರಾಜುಗೊಳ್ಳುತ್ತಿವೆ. ಮೋಟರ್ ಅಳವಡಿಸಿ ನೀರು ಸಂಗ್ರಹಿಸುತ್ತಿರುವುದರಿಂದ ನಮಗೆ ನೀರು ದೊರೆಯುತ್ತಿಲ್ಲ. ಪರಿಣಾಮ ಜನ ಮತ್ತು ಜಾನುವಾರುಗಳಿಗೂ ನೀರಿನ ಸಮಸ್ಯೆ ಉಂಟಾಗಿದೆ. ಎಲ್ಲ ವಾರ್ಡ್‍ಗಳಿಗೆ ಸಮರ್ಪಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಸುನಂದ ಮತ್ತು ಗಂಗಮ್ಮ ಒತ್ತಾಯಿಸಿದರು.

ಗ್ರಾಮದ ರೈತನಿಗೆ ಸೇರಿದ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದಿದೆ. ಮೂರುದಿನಗಳ ಒಳಗಾಗಿ ಪೈಪ್ ಅಳವಡಿಸಿ ನೀರು ಸರಬರಾಜು ಮಾಡಲಾಗುವುದು
ಯು.ರಾಮಪ್ಪ ಪಿಡಿಒ
ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಕುರಿತು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು
ಎಸ್.ಎಂ.ನಾಗರಾಜಸ್ವಾಮಿ ಧಾರುಕಾ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.