ADVERTISEMENT

ರಾಜೀನಾಮೆ ಕೊಡಲು ಹೋದ ಕಾಂಗ್ರೆಸ್ ಎಂಎಲ್‌ಸಿಗಳ ಬಗ್ಗೆ KH ಮುನಿಯಪ್ಪ ಪ್ರತಿಕ್ರಿಯೆ

ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ನಜೀರ್‌ ಅಹ್ಮದ್‌ ಮತ್ತು ಅನಿಲ್‌ ಕುಮಾರ್‌ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹೋಗಿದ್ದರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 10:34 IST
Last Updated 27 ಮಾರ್ಚ್ 2024, 10:34 IST
<div class="paragraphs"><p>ಕೆ.ಎಚ್‌. ಮುನಿಯಪ್ಪ</p></div>

ಕೆ.ಎಚ್‌. ಮುನಿಯಪ್ಪ

   

ಬೆಂಗಳೂರು: ‘ಕೋಲಾರ ಟಿಕೆಟ್‌ ಯಾರಿಗೆ ಕೊಡಬೇಕೆಂದು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಸೇರಿ ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ರಾಜೀನಾಮೆ ಕೊಡಲು ಹೋದವರ ಬಗ್ಗೆ ನಾನು ಚಕಾರ ಎತ್ತುವುದಿಲ್ಲ’ ಎಂದು ಕೆ.ಎಚ್‌. ಮುನಿಯಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಎಲ್ಲರೂ ಹೇಳಿದ್ದರು. ರಮೇಶ್ ಕುಮಾರ್ ಮತ್ತು ಅವರ ಸಂಗಡಿಗರು ಕೂಡಾ ಅದೇ ಮಾತು‌ ಹೇಳಿದ್ದರು. ಆ ಸಭೆಯಲ್ಲಿ ಎಲ್ಲರೂ ಇದ್ದರು. ಈ ಹಿಂದೆ ಅಹಿತಕರ ಘಟನೆ ನಡೆದಿದ್ದರೆ ಮರೆಯೋಣ ಎಂದೂ ಆ ಸಭೆಯಲ್ಲಿ ನಾನು ಹೇಳಿದ್ದೆ’ ಎಂದರು.

ADVERTISEMENT

‘‌ಕೋಲಾರದಲ್ಲಿ ಕಾಂಗ್ರೆಸ್ ಬಹಳ ಭದ್ರವಾಗಿದೆ. ಜಾಫರ್ ಷರೀಫ್, ಶಂಕರಾನಂದ ಬಳಿಕ ಏಳು ಬಾರಿ ನಿರಂತರ ಗೆದ್ದವನು ನಾನು. ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆ. ಸುಧಾಕರ್ ಮಂತ್ರಿ ಇದ್ದಾನೆ. ಅವರವರಿಗೆ ಇಷ್ಟ ಬಂದ ತೀರ್ಮಾನ ತೆಗೆದುಕೊಳ್ಳಲಿ. ನಾನು ಯಾರಿಗೂ ತೊಂದರೆ ಮಾಡಿಲ್ಲ’ ಎಂದರು.

‘ಕೋಲಾರ ಲೋಕಸಭಾ ಟಿಕೆಟ್‌ನ್ನು ಸಚಿವ ಕೆ.ಎಚ್‌. ಮುನಿಯಪ್ಪ ಕುಟುಂಬದವರಿಗೆ ನೀಡಬಾರದು. ಬಲಗೈ ಸಮುದಾಯಕ್ಕೆ ನೀಡಬೇಕು’ ಎಂದು ಪಟ್ಟು ಹಿಡಿದಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ನಜೀರ್‌ ಅಹ್ಮದ್‌ ಮತ್ತು ಅನಿಲ್‌ ಕುಮಾರ್‌ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬುಧವಾರ ಬೆಳಿಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಬಂದರೂ ರಾಜೀನಾಮೆ ನೀಡದೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.