ADVERTISEMENT

ರಾಜ್ಯಪಾಲ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ತಂಡ ರಚಿಸಿದ ಪೊಲೀಸರು

ಪಿಟಿಐ
Published 4 ಮೇ 2024, 14:31 IST
Last Updated 4 ಮೇ 2024, 14:31 IST
ಸಿ.ವಿ. ಆನಂದ ಬೋಸ್‌
ಸಿ.ವಿ. ಆನಂದ ಬೋಸ್‌   

ಕೋಲ್ಕತ್ತ: ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜಭವನದಲ್ಲಿ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಕುರಿತು ತನಿಖೆ ನಡೆಸಲು ಕೋಲ್ಕತ್ತ ಪೊಲೀಸರು ತನಿಖಾ ತಂಡ ರಚಿಸಿದ್ದಾರೆ.

ತಂಡವು ತನ್ನ ತನಿಖೆಯ ಭಾಗವಾಗಿ ಮುಂದಿನ ಕೆಲವು ದಿನಗಳಲ್ಲಿ ಸಾಕ್ಷಿಗಳ ಹೇಳಿಕೆ ಪಡೆಯಲಿದೆ. ಸಿಸಿಟಿವಿ ದೃಶ್ಯಗಳನ್ನು ಒದಗಿಸುವಂತೆ ರಾಜಭವನಕ್ಕೆ ಮನವಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಸಂವಿಧಾನದ 361ನೇ ವಿಧಿಯ ಅಡಿಯಲ್ಲಿ, ರಾಜ್ಯಪಾಲರ ಅಧಿಕಾರಾವಧಿಯಲ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತಿಲ್ಲ.

ADVERTISEMENT

ರಾಜ್ಯಪಾಲರಿಗೆ ಇರುವ ಇಂತಹ ಸಾಂವಿಧಾನಿಕ ವಿನಾಯಿತಿಯ ಹೊರತಾಗಿಯೂ ಪೊಲೀಸರು ತನಿಖೆಯನ್ನು ಹೇಗೆ ಪ್ರಾರಂಭಿಸುತ್ತಾರೆ ಎಂದು ಕೇಳಿದಾಗ, ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ, ‘ಇಂತಹ ಯಾವುದೇ ದೂರು ಬಂದ ನಂತರ, ವಿಶೇಷವಾಗಿ ಮಹಿಳಾ ಅಧಿಕಾರಿಯಿಂದ ತನಿಖೆ ನಡೆಸುವುದು ಸಾಮಾನ್ಯ ಕ್ರಮ’ ಎಂದು ಹೇಳಿದರು.

‘ಯಾರಾದರೂ ಯಾವುದೇ ದೂರು ನೀಡಿದರೂ ಅದನ್ನು ನಾವು ತನಿಖೆ ಮಾಡಬೇಕು. ಇದು ಕ್ರಮಬದ್ಧತೆ. ನಾವು ಅದನ್ನು ಪಾಲಿಸುತ್ತಿದ್ದೇವೆ. ಅಗತ್ಯವಿದ್ದರೆ ನಾವು ರಾಜಭವನಕ್ಕೂ ಭೇಟಿ ನೀಡಬಹುದು’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪಶ್ಚಿಮ ಬಂಗಾಳ ರಾಜ್ಯಪಾಲರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರಾಜಭವನದ ಗುತ್ತಿಗೆ ಮಹಿಳಾ ಉದ್ಯೋಗಿಯೊಬ್ಬರು ಶುಕ್ರವಾರ ಕೋಲ್ಕತ್ತ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.

ರಾಜ್ಯಪಾಲರು, ಚುನಾವಣಾ ಸಮಯದಲ್ಲಿ ತಮ್ಮ ರಾಜಕೀಯ ನಾಯಕರನ್ನು ಮೆಚ್ಚಿಸಲು ರಾಜಭವನಕ್ಕೆ ತನಿಖಾ ನೆಪದಲ್ಲಿ ಅನಧಿಕೃತ ಅಥವಾ ಕಾನೂನುಬಾಹಿರವಾಗಿ ಪೊಲೀಸರು ಭೇಟಿ ನೀಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ ಎಂದು ರಾಜಭವನ ಈಗಾಗಲೇ ಹೇಳಿಕೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.