ADVERTISEMENT

ಹಾರುವ ತಟ್ಟೆ ಮೆಣಸು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 19:30 IST
Last Updated 9 ಡಿಸೆಂಬರ್ 2019, 19:30 IST
ಹಾರುವ ತಟ್ಟೆ ಮೆಣಸು
ಹಾರುವ ತಟ್ಟೆ ಮೆಣಸು   

ಐದು ವರ್ಷಗಳ ಹಿಂದಿನ ಮಾತು.ಟರ್ಕಿಯ ಇಸ್ತಾಂಬುಲ್‌ನ ಸಾವಯವ ಸಮ್ಮೇಳನದ ವಸ್ತು ಪ್ರದರ್ಶನ ನೋಡುತ್ತಿದ್ದೆ. ಅಲ್ಲೊಂದು ಮಳಿಗೆಯಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಬೀಜ, ಕಾಯಿಗಳ‌ನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ವಿಚಿತ್ರ ಆಕಾರದ, ಟೊಪ್ಪಿಯ ತರಹ ಕಾಣುತ್ತಿದ್ದ ಹತ್ತಾರು ಮೆಣಸಿನಕಾಯಿಗಳು ನನ್ನ ಗಮನ ಸೆಳೆದವು.

ಫೋಟೊ ತೆಗೆವ ನೆಪದಲ್ಲಿ ಹಣ್ಣೊಂದನ್ನು ಮೆಲ್ಲಗೆ ಜೇಬಿಗಿಳಿಸಿದೆ. ಅದ್ಯಾವ ಮಾಯದಲ್ಲೋ ನನ್ನ ‘ಬೀಜ ಚೌರ್ಯ’ ವನ್ನು ಗಮನಿಸಿದ್ದ ಆ ಮಳಿಗೆಯ ಒಡತಿ ದೊಡ್ಡ ದನಿಯಲ್ಲಿ‌ ಗದ್ದಲ ಎಬ್ಬಿಸಿದರು. ನನ್ನ ಜೊತೆಗಿದ್ದ ಟರ್ಕಿಯ ರೈತ ಗೆಳೆಯ ಆಕೆಯನ್ನು ಸಮಾಧಾನ ಮಾಡಿ, ನಾನು ಕದ್ದಿದ್ದ ಮೆಣಸಿನ ಹಣ್ಣನ್ನು ವಾಪಸ್ ಕೊಡಿಸಿದರು. ‘ಮೇಳದ ಕೊನೆ ದಿನ ಬನ್ನಿ. ಹಣ್ಣು ಕೊಡುವೆ. ಈಗ ಪ್ರದರ್ಶನಕ್ಕೆ ಬೇಕು’ ಎಂದು ಹುಸಿಮುನಿಸು ತೋರಿದರು. ಮೇಳದ ಕೊನೆಯ ದಿನ ಎರಡು ಮೆಣಸಿನಹಣ್ಣು ನನ್ನ ಕೈಗಿತ್ತು ‘ಇದು ಹಾರುವ ತಟ್ಟೆ ಮೆಣಸು. ಜೋಪಾನ ಮಾಡಿ ಬೆಳೆಸಿ’ ಎಂದು ಕೈ ಕುಲುಕಿದರು.

ಹಾರುವ ತಟ್ಟೆ ಮೆಣಸು, ಕೆರೆಬಿಯನ್ ಸಮುದ್ರದ ಬಾರ್ಬಡೋಸ್ ದ್ವೀಪದ ಮೆಣಸಿನಕಾಯಿ ತಳಿ. ದಕ್ಷಿಣ ಅಮೆರಿಕ ಇದರ ಮೂಲ. ಇದರ ಕಾಯಿಯ ತಳದಲ್ಲಿ ಮೂರು ಮೂಲೆಗಳಿದ್ದು, ನೋಡಲು ಟೋಪಿಯ ತರಹ ಕಾಣುತ್ತದೆ. ಹಾಗಾಗೇ ಇದಕ್ಕೆ ‘ಪಾದ್ರಿಯ ಟೋಪಿ’ ಎಂಬ ಹೆಸರಿದೆ. ‘ಕ್ರಿಸ್ ಮಸ್ ಬೆಲ್’, ‘ಜೋಕರ್ ಹ್ಯಾಟ್’ ಎಂದೆಲ್ಲ ಕರೆಯುತ್ತಾರೆ. ಹಾರುವ ತಟ್ಟೆಯನ್ನು ಹೋಲುವುದರಿಂದ ‘ಹಾರುವ ತಟ್ಟೆ ಮೆಣಸು’ ಎಂದೇ ಜನಪ್ರಿಯ.

ADVERTISEMENT

ಪೋರ್ಚುಗೀಸರ ಮೂಲಕ ಯುರೋಪಿಗೆ ಬಂದ ಈ ತಳಿ ಅಲ್ಲಿನ ಕೈತೋಟಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಅಲಂಕಾರಿಕ ಸಸ್ಯವಾಗಿ ನಮ್ಮ ದೇಶಕ್ಕೆ ಬಂದಿದೆ. ಮೈಸೂರಿನ ದಸರಾ, ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದಲ್ಲಿ ಹಾರುವ ತಟ್ಟೆ ಮೆಣಸು ನೋಡಲು ಸಿಗುತ್ತದೆ.

ಹಾರುವ ತಟ್ಟೆಯ ಹೆಗ್ಗಳಿಕೆ ಇರುವುದು ಅದರ ರುಚಿ ಅಥವಾ ಮಾರುಕಟ್ಟೆ ದೃಷ್ಟಿಯಿಂದಲ್ಲ. ನೋಡಿದವರನ್ನು ಒಂದು ಕ್ಷಣ ಬೆರಗುಗೊಳಿಸಿ, ಇದೇನೂ ಹೂವೋ ಕಾಯಿಯೋ ಇಲ್ಲ ಪ್ಲಾಸ್ಟಿಕ್ ಬೊಂಬೆಯೋ ಎಂಬ ಗೊಂದಲದಲ್ಲಿ ಬೀಳುವಂತೆ ಮಾಡುತ್ತದೆ. ನಿಮ್ಮ ಹಿತ್ತಲಲ್ಲಿ ಒಂದೆರೆಡು ಹಾರುವ ತಟ್ಟೆ ಮೆಣಸಿನ ಗಿಡಗಳಿದ್ದರೆ, ಮನೆಗೆ ಬಂದ ಅತಿಥಿಗಳು ಇದರ ಚೆಲುವಿಗೆ ಮನಸೋಲುವುದು ಖಚಿತ.

ಟರ್ಕಿಯಿಂದ ಕಾಡಿಬೇಡಿ ತಂದ ಎರಡು ಮೆಣಸಿನ ಹಣ್ಣಿನಲ್ಲಿ ಹದಿನೆಂಟು ಬೀಜ ಸಿಕ್ಕವು. ಅವುಗಳಲ್ಲಿ ಎಂಟನ್ನು ಬೀಜಪ್ರೀತಿಯ ಬರಹಗಾರ ನಾಗೇಶ ಹೆಗಡೆಯವರಿಗೆ ಕೊಟ್ಟೆ. ಅವರು, ಹುಟ್ಟಿದ ಎರಡು ಗಿಡಗಳನ್ನು ಜೋಪಾನ ಮಾಡಿ ಬೆಳೆಸಿದರು. ಮನೆಯಿಂದ ಹೊರ ಹೋಗುವ ಸಂದರ್ಭ ಬಂದರೆ, ಹಾರುವ ತಟ್ಟೆ ಮೆಣಸಿನ ಗಿಡಗಳು ಕಳ್ಳ ಕಾಕರಿಗೆ ಸಿಕ್ಕಿ ಹಾರಿಹೋಗದಂತೆ ಮನೆಯೊಳಗಿಟ್ಟು ಬಂದೋಬಸ್ತು ಮಾಡಿದರು. ಮುಂದಿನ ಬಾರಿ ಸಿಕ್ಕಾಗ ಹಾರುವ ತಟ್ಟೆ ಮೆಣಸಿನ ಬೀಜದ ಸಣ್ಣ ಪ್ಯಾಕೆಟ್ ಕೊಟ್ಟು ‘ನೋಡಿ! ಬೀಜಗಳನ್ನು ಹೆಚ್ಚು ಮಾಡಿ ಕೊಟ್ಟಿದ್ದೇನೆ. ಈಗ ಕನ್ನಡ ನಾಡಿನಲ್ಲಿ ಇವನ್ನು ಪಸರಿಸುವ ಜವಾಬ್ದಾರಿ ನಿಮ್ಮದು’ ಎಂದು ನಗು ಚೆಲ್ಲಿದರು.

ನನ್ನ ಸಂಗ್ರಹದ ಬೀಜಗಳನ್ನು ರೈತರಿಗೊಬ್ಬರಿಗೆ ಕೊಟ್ಟು, ಅವು ಮರಳಿ ಬರದೆ ಮಂಕಾಗಿದ್ದ ನನಗೆ, ಕಳೆದು ಹೋದ ಮಗು ಮನೆಗೆ ಬಂದಂತಾಯ್ತು. ಕಳೆದ ಮೂರು ವರ್ಷಗಳಿಂದ ನನ್ನ ತೋಟದಲ್ಲೇ ಹಾರುವ ತಟ್ಟೆ ನೆಲೆಯೂರಿದೆ. ಬೀಜಗಳು ಅನೇಕ ಬೀಜ ಪ್ರಿಯರ ಮನೆಗೆ ಹಾರಿ ಹೋಗಿವೆ!

ಹಾರುವ ತಟ್ಟೆ ಮೆಣಸು ಬೆಳೆಸಲು ಬೇಸಿಗೆ ಹೆಚ್ಚು ಸೂಕ್ತಕಾಲ. ಗಿಡದಿಂದ ಗಿಡಕ್ಕೆ ಎರಡು ಅಡಿಗಳ ಅಂತರ ಕೊಟ್ಟು ನೆಡಬೇಕು. ಕುಂಡಗಳಲ್ಲೂ ಬೆಳೆದುಕೊಳ್ಳಬಹುದು. ಆರಂಭದಲ್ಲಿ ನಿಧಾನಗತಿಯ ಬೆಳವಣಿಗೆ. ಮಳೆಗಾಲದಲ್ಲಿ ಕೊಳೆ ರೋಗ ಹೆಚ್ಚು. ಈ ಬಾರಿಯಂತೂ ಕಾಯಿ ಕೊಳೆತು, ತೊಟ್ಟು ಕಳಚಿ ಬೀಳುತ್ತಿದ್ದವು.

ಎರಡೂವರೆ ತಿಂಗಳಿಗೆ ಕಾಯಿ ಬಿಡಲು ಆರಂಭವಾಗುತ್ತದೆ. ಗಿಡ ಸಾಮಾನ್ಯ ಮೆಣಸಿನಗಿಡಕ್ಕಿಂತ ಹೆಚ್ಚು ಹರಡಿಕೊಳ್ಳುತ್ತದೆ. ಸೊಂಟದೆತ್ತರಕ್ಕೆ ಬೆಳೆವ ಈ ತಳಿಯ ಗಿಡದ ಕಾಂಡ ಮೃದುವಾಗಿದ್ದು, ಹಬ್ಬಿ ಬೆಳೆವ ಗುಣವಿದೆ.

ಕೈ ಚಾಚಿದಂತೆ ಕಾಣುವ ಇದರ ಕೊಂಬೆಯ ಮೇಲೆ ಇಳಿಬಿದ್ದ ಟೊಪ್ಪಿ ಆಕಾರದ ಕಾಯಿಗಳ ನೋಡುವುದೇ ಒಂದು ಸೊಗಸು. ಪ್ರತಿ ಗಿಡ ಇಪ್ಪತ್ತು ಮೂವತ್ತು ಕಾಯಿ ಬಿಡುತ್ತದೆ. ಕೊಳೆ ರೋಗ ಮತ್ತು ಸೊರಗು ರೋಗಕ್ಕೆ ಸುಲಭವಾಗಿ ತುತ್ತಾಗುತ್ತದೆ. ಆರೋಗ್ಯಪೂರ್ಣವಾಗಿ ಬೆಳೆದ ಗಿಡಗಳು ಒಮ್ಮೆ ನೆಲೆ ನಿಂತರೆ, ಆರು ತಿಂಗಳವರೆಗೆ ಕಾಯಿ ಬಿಡುತ್ತಲೇ ಇರುತ್ತವೆ. ಕತ್ತರಿಸಿದ ಗಿಡಗಳು ಚಿಗುರಿ, ಮತ್ತೆ ಹೂ ಕಚ್ಚಲು ಆರಂಭವಾಗುತ್ತವೆ.

ಅತ್ತ ಸಿಹಿಯೂ ಅಲ್ಲದ ಇತ್ತ ಕಡು ಖಾರವೂ ಇಲ್ಲದ ಮಧ್ಯಮ ಖಾರದ ತಳಿ. ಬೀಜಗಳಿರುವ ತೊಟ್ಟಿನ ಭಾಗ ಮಾತ್ರ ಖಾರ; ಉಳಿದ ಭಾಗವೆಲ್ಲಾ ಸಿಹಿ. ಒಂದು ಬಗೆಯ ಆಹ್ಲಾದಕರ ಘಮಲು. ಸಲಾಡ್‌ಗೆ ಸೂಕ್ತವಾದ ತಳಿ. ಹಸಿರು ಕಾಯಿಯನ್ನು ಮೆಣಸಿನಕಾಯಿಯಂತೆಯೇ ಅಡುಗೆಗೆ ಬಳಸಬಹುದು. ಯುರೋಪ್‌ನಲ್ಲಿ ಬೀಜ ತೆಗೆದು ಉಳಿದ ಭಾಗವನ್ನು ಹುರಿದು ಬಳಸುತ್ತಾರೆ. ಜಾಮ್ ಮಾಡುತ್ತಾರೆ.

ಇದು ವಿವಿಧ ವರ್ಣಗಳ ತಳಿ. ಹಸಿರು ಎಳೆಯ ಕಾಯಿಗಳು ಬಲಿತಂತೆಲ್ಲಾ, ಬೆಣ್ಣೆ ಬಣ್ಣಕ್ಕೆ ತಿರುಗುತ್ತವೆ. ಹಣ್ಣಾದ ಕಾಯಿ ಗಾಢ ಕೆಂಪು. ಪ್ರತಿ ಹಂತದಲ್ಲೂ ಬಣ್ಣ ಬದಲಿಸುವ ಇದರ ಕಾಯಿಗಳ ವರ್ಣ ವೈವಿಧ್ಯ ಗಮನ ಸೆಳೆಯುತ್ತದೆ.

ಅಲಂಕಾರಿಕ ಸಸ್ಯವಾಗಿ ಗಮನ ಸೆಳೆಯುವ ಈ ಮೆಣಸಿನ ತಳಿಯನ್ನು ಕುಂಡಗಳಲ್ಲಿ ಬೆಳೆಸಿ ಮಾರಿ ಹಣ ಗಳಿಸಬಹುದು. ಹೂವಿನಂತೆ ಕಾಣುವ ಇದರ ಹಣ್ಣನ್ನು ಮೇಳಗಳಲ್ಲಿ ಮಾರಾಟಕ್ಕಿಟ್ಟರೆ ಖಾಲಿಯಾಗುವುದು ಖಚಿತ.
ನಮ್ಮ ತೋಟಕ್ಕೆ ಬಂದವರು, ಹಾರುವ ತಟ್ಟೆ ಮೆಣಸಿನ ಚೆಲುವಿಗೆ ಮನಸೋತು, ನನ್ನಂತೆಯೇ ಕದ್ದು ಒಂದೆರೆಡು ಹಣ್ಣನ್ನು ಜೇಬಿಗಿಳಿಸುತ್ತಾರೆ.

ನಾನು ಮುಗಳ್ನಕ್ಕು ಅವರಿಗೆ ಇನ್ನೆರೆಡು ಹಣ್ಣು ಉಡುಗೊರೆ ಕೊಡುತ್ತೇನೆ. ಹಾರುವ ತಟ್ಟೆ ಮೆಣಸು ಬೆಳೆಸಲು ಆಸಕ್ತರಾದವರು ದೂ: 70900 09911 ಸಂಪರ್ಕಿಸಬಹುದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.