ADVERTISEMENT

ಉಪ ಆದಾಯದ ಜೇನು ಕೃಷಿ

ಚಳ್ಳಕೆರೆ ವೀರೇಶ್
Published 24 ಫೆಬ್ರುವರಿ 2020, 19:30 IST
Last Updated 24 ಫೆಬ್ರುವರಿ 2020, 19:30 IST
   

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹೋಬಳಿ ನೆಲಗೇತನಹಟ್ಟಿಯ ರೈತ ಕೊಡ್ಲಿಬೋರಯ್ಯ ಅವರದ್ದು ಒಟ್ಟು ನಾಲ್ಕು ಎಕರೆ ಕೆಂಪು ಮರಳು ಮಿಶ್ರಿತ ಮಣ್ಣಿನ ಜಮೀನಿದೆ. ಮಳೆ ಕಡಿಮೆ ಬೀಳುವ ಪ್ರದೇಶವಾದ್ದರಿಂದ, ಈ ಭೂಮಿಯಲ್ಲಿ ಮೆಕ್ಕೆಜೋಳ, ಶೇಂಗಾದಂತಹ ಬೆಳೆಗಳನ್ನೇ ಬೆಳೆಯುತ್ತಿದ್ದರು.

ಆದರೆ, ಇಷ್ಟೇ ಧಾನ್ಯಗಳನ್ನು ಬೆಳೆದುಕೊಂಡು ಜೀವನ ನಡೆಸು ವುದು ಬಹಳ ಕಷ್ಟ. ಇದನ್ನು ಅರಿತ ಕೊಡ್ಲಿಬೋರಯ್ಯ ಹೆಚ್ಚುವರಿ ಆದಾಯ ಪಡೆಯಲು ಗೆಳೆಯರ ಸಲಹೆ ಮೇರೆಗೆ ಅಣಬೆ ಬೆಳೆದರು. ವಿದೇಶಿ ಕುರಿ, ಮೊಲ ಸಾಕಾಣಿಕೆ ಮಾಡಿದರು. ಆದರೆ ಯಾವುದರಲ್ಲೂ ಲಾಭದ ಮುಖ ಕಾಣಲಿಲ್ಲ. ಬದಲಿಗೆ ಐದಾರು ಲಕ್ಷ ರೂಪಾಯಿಯ ಸಾಲಗಾರರಾದರು.

ಈ ನಡುವೆ, ಅಂದರೆ 2007ರಲ್ಲಿ ತೋಟಗಾರಿಕೆ ಇಲಾಖೆಯ ಅನುವುಗಾರರು, ಕೊಡ್ಲಿಬೋರಯ್ಯ ಅವರನ್ನು ‘ಜೇನು ಕೃಷಿ ತರಬೇತಿ’ಗೆ ಬನ್ನಿ ಎಂದು ಕರೆದರು. ಆದರೆ, ಇವರಿಗೆ ಇಷ್ಟವಿರಲಿಲ್ಲ. ಆದರೂ ಬಲವಂತವಾಗಿ ಇವರನ್ನು ವಾರದ ತರಬೇತಿಗೆ ಹೋದರು. ಆ ತರಬೇತಿಯಲ್ಲಿ ಜೇನು ಸಾಕಣಿಕೆ ಜತೆಗೆ, ಜೇನುತುಪ್ಪ ತೆಗೆಯುವುದು, ಮಾರಾಟ ಮಾಡುವ ವಿಧಾನಗಳ ಬಗ್ಗೆಯೂ ಹೇಳಿಕೊಟ್ಟಿದ್ದರು. ಅಂದಿನ ಜೇನು
ಕೃಷಿಯ ಪಾಠ ಅವರಿಗೆ ಈಗ ಉಪಯೋಗಕ್ಕೆ ಬಂತು.

ADVERTISEMENT

ಹೇಗೆ ಶುರುವಾಯಿತು ?

ಆ ವರ್ಷಗಳಲ್ಲಿ ಜೇನುಕೃಷಿ ತರಬೇತಿ ಪಡೆದಿದ್ದ ರೈತರಿಗೆ ತೋಟಗಾರಿಕೆ ಇಲಾಖೆ 2015–16ನೇ ಸಾಲಿನಲ್ಲಿ ಜೇನು ಸಾಕಾಣಿಕೆ ಮಾಡುವಂತೆ ಪ್ರೋತ್ಸಾಹ ನೀಡಲು ಮುಂದಾಯಿತು. ಈ ಸಂದರ್ಭದಲ್ಲಿ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಅವರು 8 ತಟ್ಟೆಗಳನ್ನೊಳಗೊಂಡ ನಾಲ್ಕು ಪೆಟ್ಟಿಗೆಗಳನ್ನು ಕೊಡ್ಲಿಬೋರಯ್ಯರಂತಹ ರೈತರಿಗೆ ಉಚಿತವಾಗಿ ಕೊಡಿಸಿದರು.

ಪೆಟ್ಟಿಗೆ ಪಡೆದ ಬೋರಯ್ಯ ಅವರು, ತರಬೇತಿ ಅವಧಿಯಲ್ಲಿ ಕಲಿತಿದ್ದ ಪಾಠವನ್ನು ಸಮರ್ಪಕವಾಗಿ ಬಳಸಿಕೊಂಡರು. ಜಮೀನಿನಲ್ಲಿ ಜೇನುಪೆಟ್ಟಿಗೆಗಳನ್ನು ಜೋಡಿಸಿದರು. ಹುಳುಗ ಳನ್ನು ಆರೈಕೆ ಮಾಡಿದರು. ಜೇನುಹುಳುಗಳಿಗೆ ಬೇಕಾದ ಆಹಾರ(ಮಕರಂದಕ್ಕಾಗಿ)ಕ್ಕಾಗಿ ನಾಲ್ಕು ಎಕರೆ ಜಮೀನಿನಲ್ಲಿ ಸೇವತಿ, ಮಲ್ಲಿಗೆ, ಬದನೆ, ಮೆಣಸಿನಕಾಯಿ, ನುಗ್ಗೆಯಂತಹ ಹೂವು, ತರಕಾರಿ ಬೆಳೆಗಳನ್ನು ಬೆಳೆದರು. ಜತೆಗೆ ನೆರಳಿಗಾಗಿ ಚಿಕಡಿ ಬಳ್ಳಿ, ಆಗಲ ಬಳ್ಳಿ, ತೊಗರಿ ಗಿಡಗಳನ್ನು ಹಾಕಿದರು. ಇರುವ ಒಂದು ಇಂಚು ಬೋರ್‌ವೆಲ್‌ ನೀರಿನಲ್ಲಿಯೇ, ಈ ಬೆಳೆಗಳನ್ನು ಬೆಳೆಯುತ್ತಾ,ಅವುಗಳ ನಡುವೆಯೇ ಜೇನು ಪೆಟ್ಟಿಗೆಗಳನ್ನು ಇಟ್ಟರು. ಬೋರಯ್ಯ ಅವರಿಗೆ ಹೂವು, ತರಕಾರಿ ವಾರದ ಆದಾಯ ತಂದುಕೊಡುತ್ತಿವೆ. ಜೇನುತುಪ್ಪ ಉಪ ಆದಾಯ ತಂದುಕೊಡುತ್ತಿದೆ. ಒಂದು ಕಡೆ ಹೂವು, ತರಕಾರಿ ಗಿಡಗಳಿಂದ ಜೇನುಗಳಿಗೆ ಆಹಾರ ಸಿಕ್ಕಂತಾದರೆ, ಇನ್ನೊಂದೆಡೆ ಜೇನುಹುಳುಗಳು ಪರಾಗಸ್ಪರ್ಶದಿಂದಾಗಿ ಬೆಳೆ ಇಳುವರಿಯೂ ಸುಧಾರಿಸಿದೆ. ಈಗ ಅವರ ಜಮೀನಿನಲ್ಲಿ ಜೇನುಪೆಟ್ಟಿಗೆಗಳ ಸಂಖ್ಯೆಯೂ ಹೆಚ್ಚುತ್ತಿದೆ.

‘ಆರಂಭದಲ್ಲಿ ನಾಲ್ಕು ಪೆಟ್ಟಿಗೆಗಳಿದ್ದವು. ಈಗ 12 ಪೆಟ್ಟಿಗೆಗಳಷ್ಟಾಗಿವೆ. ಈ ಜೂನ್‌ ಅಂತ್ಯದೊಳಗೆ 20 ಪೆಟ್ಟಿಗೆಗ ಳನ್ನಿಡಬೇಕೆಂದು ಯೋಚಿಸಿದ್ದೇನೆ’ ಎನ್ನುತ್ತಾ ಜೇನು ಕೃಷಿ ವಿಸ್ತಾರವಾಗಿದ್ದನ್ನು ಬೋರಯ್ಯ ವಿವರಿಸುತ್ತಾರೆ

ಹೆಚ್ಚು ಖರ್ಚು, ಶ್ರಮವಿಲ್ಲ

ತೋಟಗಾರಿಕೆ ಇಲಾಖೆ ಸಹಕಾರದಿಂದ ಸದ್ಯ 12 ಬಾಕ್ಸ್‌ ಗಳನ್ನು ಇಟ್ಟಿದ್ದಾರೆ. ಸುಮಾರು 5 ಬಾಕ್ಸ್‌ಗಳಿಂದ ತುಪ್ಪ ಸಂಗ್ರಹಿಸಲಾಗುತ್ತಿದೆ. ‘ತಿಂಗಳಿಗೆ ₹3 ಸಾವಿರದಿಂದ ₹4 ಸಾವಿರದವರೆಗೂ ಆದಾಯ ಸಿಗುತ್ತಿದೆ. ಅದೂ ಯಾವುದೇ ಖರ್ಚು ಮತ್ತು ಶ್ರಮವಿಲ್ಲದೇ’ ಎನ್ನುತ್ತಾರೆಬೋರಯ್ಯ.

ಚಿತ್ರದುರ್ಗ– ಚಳ್ಳಕೆರೆ ಭಾಗದಲ್ಲಿ ಬೇಸಿಗೆಯಲ್ಲಿ ಜಮೀನಿ ನಲ್ಲಿ ಬೆಳೆಗಳಿರುವುದಿಲ್ಲ.ಆಗ ಜೇನುಹುಳುಗಳಿಗೆ ಆಹಾರ ಕೊರತೆ ಎದುರಾಗುತ್ತದೆ. ಇದರಿಂದ ಹುಳುಗಳನ್ನು ರಕ್ಷಿಸಲು, ಆ ವೇಳೆ ಜೇನು ಪೆಟ್ಟಿಗೆಯೊಳಗೆ ಚಿಕ್ಕ ಪ್ಲಾಸ್ಟಿಕ್, ಸ್ಟೀಲ್ ಬಟ್ಟಲಿನಲ್ಲಿ ಸಕ್ಕರೆ ಮಿಶ್ರಣ ನೀರು ಹಾಕಿ ಪೆಟ್ಟಿಗೆ ಒಳಗೆ ಇಡುತ್ತಾರೆ.

ಬೇಡಿಕೆ ಹೇಗಿದೆ ?

ಚಳ್ಳಕೆರೆ ತಾಲ್ಲೂಕಿನಾದ್ಯಂತ ಸುಮಾರು 5 ರಿಂದ 10 ರೈತರು ಮಾತ್ರ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಅದರಲ್ಲಿ ಐದು ರೈತರು ಇವರ ಬಳಿ ತರಬೇತಿ ಪಡೆದಿದ್ದಾರೆ. ತಿಂಗಳಿಗೆ ಒಂದರಂತೆ ಜೇನು ಪೆಟ್ಟಿಯಲ್ಲಿ ಉತ್ಪತ್ತಿಯಾಗುವ ರಾಣಿಸೆಲ್ (ಮೊಟ್ಟೆ)ಗೆ ಬೇಡಿಕೆ ಇದೆ. ಜತೆಗೆ, ಶುದ್ದ ಜೇನುತುಪ್ಪಕ್ಕೆ ತುಂಬಾ ಬೇಡಿಕೆ ಇದ್ದು, ಸದ್ಯ ಕೆ.ಜಿಗೆ ₹500 ದಿಂದ ₹1ಸಾವಿರದವರೆಗೂ ಮಾರಾಟವಾಗುತ್ತಿದೆ. ‘ಜಮೀನಿಗೆ ಬಂದು ಖರೀದಿಸುವ ಗ್ರಾಹಕರೇ ಹೆಚ್ಚು. ಹೀಗಾಗಿ ಸದ್ಯಕ್ಕೆ ಮಾರುಕಟ್ಟೆ ಕೊರತೆ ಕಂಡಿಲ್ಲ’ ಎನ್ನುತ್ತಾರೆ ಬೋರಯ್ಯ. ರೈತ ಬೋರಯ್ಯ ಅವರ ಸಂಪರ್ಕ ಸಂಖ್ಯೆ 89710 65648.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.