ADVERTISEMENT

ರೈತ ಆವಿಷ್ಕಾರದ ಯಂತ್ರಗಳು

ಬಸವರಾಜ ಹವಾಲ್ದಾರ
Published 11 ಮಾರ್ಚ್ 2019, 19:30 IST
Last Updated 11 ಮಾರ್ಚ್ 2019, 19:30 IST
ಧರ್ಮರೆಡ್ಡಿ ಲಕ್ಕಣ್ಣವರ ಸಿದ್ಧಪಡಿಸಿರುವ ಕೂರಿಗೆ
ಧರ್ಮರೆಡ್ಡಿ ಲಕ್ಕಣ್ಣವರ ಸಿದ್ಧಪಡಿಸಿರುವ ಕೂರಿಗೆ   

ಟ್ರ್ಯಾಕ್ಟರ್‌ಗಳ ರಿಪೇರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದ ಧರ್ಮರೆಡ್ಡಿ ಲಕ್ಕಣ್ಣವರ ಅವರಿಗೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರನ್ನು ಹುಡುಕುವುದೇ ದೊಡ್ಡ ಸವಾಲಾಗಿತ್ತು. ಕಾರ್ಮಿಕರ ಕೊರತೆಯಿಂದ ಕೃಷಿ ಚಟುವಟಿಕೆ ಮಾಡುವುದೇ ಕಷ್ಟವಾಗಿತ್ತು. ಆಗಲೇ ಅವರಿಗೆ ಯಂತ್ರಗಳಿಂದಲೇ ಕೃಷಿ ಕಾರ್ಯಗಳನ್ನು ಮಾಡಿದರೆ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅರೆಕುರಹಟ್ಟಿಯ ಲಕ್ಕಣ್ಣವರ, ಐಟಿಐ ಕಲಿತು ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಮಲಪ್ರಭಾ ಶುಗರ್ಸ್‌ನಲ್ಲಿಯೂ ಕೆಲಸ ಮಾಡಿದರು. ಈ ನಡುವೆ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಟ್ರ್ಯಾಕ್ಟರ್‌ ಬಳಸುವ ರೈತರ ಸಂಖ್ಯೆ ಹೆಚ್ಚಾಗಿತ್ತು. ಅವುಗಳು ದುರಸ್ತಿ ಬಂದರೆ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಬೇಕಾಗುತ್ತಿತ್ತು. ಹತ್ತಾರು ದಿನಗಳ ಕಾಲ ರಿಪೇರಿಯಾಗದಿದ್ದರೆ ಕೃಷಿ ಚಟುವಟಿಕೆಗಳು ನಿಂತು ಹೋಗುತ್ತಿದ್ದವು.ಅವರ ಸಂಕಷ್ಟ ನೋಡಿ ನೌಕರಿ ಬಿಟ್ಟು ಬಂದು ಗ್ರಾಮದಲ್ಲಿಯೇ ಶ್ರೀನಿವಾಸ ಜನರಲ್‌ ಎಂಜಿನಿಯರಿಂಗ್‌ ವರ್ಕ್ಸ್‌ ಆರಂಭಿಸಿದರು.

ಐದು ವರ್ಷಗಳ ಕಾಲ ಟ್ರಾಕ್ಟರ್‌ಗಳ ದುರಸ್ತಿಯ ಜತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಾವು ಎದುರಿಸುತ್ತಿದ್ದ ಕಾರ್ಮಿಕರ ಸಮಸ್ಯೆಯನ್ನು ರೈತರೂ ಎದುರಿಸುತ್ತಿದ್ದಾರೆ ಎಂಬುದು ಗೊತ್ತಾದಾಗ ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಪರಿಣಾಮವೇ ಕೂರಿಗೆ, ಎಡೆ ಕುಂಟೆ, ಔಷಧ ಸಿಂಪರಣೆ ಯಂತ್ರಗಳ ಅವಿಷ್ಕಾರವಾಗಿದೆ.

ADVERTISEMENT

ಸ್ವಯಂ ಚಾಲಿತ ಕೂರಿಗೆ ರೈತರಿಂದ ಬಹಳ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿ ಮೇಳದ ಒಕ್ಕುಲತನ ಉಪಕರಣಗಳ ವಿಭಾಗದಲ್ಲಿ ಸತತ ಎಂಟು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಮೇಳದಲ್ಲಿಯೂ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ವರ್ಷ ಸುಕೊ ಬ್ಯಾಂಕ್‌ ನೀಡುವ ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಸ್ವಯಂ ಚಾಲಿತ ಕೂರಿಗೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕಡಲೆ, ಸೂರ್ಯಕಾಂತಿ, ಹೆಸರು, ಮೆಕ್ಕೆಜೋಳ, ಗೋಧಿ, ಜೋಳ, ಹತ್ತಿ, ಸಜ್ಜೆ ಸೇರಿದಂತೆ ಬಹುತೇಕ ಬೆಳೆಗಳ ಬಿತ್ತನೆಯನ್ನು ಮಾಡಬಹುದಾಗಿದೆ. ಬೆಳೆಯಿಂದ ಬೆಳೆಗೆ ಬಿತ್ತನೆ ಅಂತರದಲ್ಲಿ ವ್ಯತ್ಯಾಸವಾಗುತ್ತದೆ. ಅದಕ್ಕೆ ತಕ್ಕಂತೆ ಪ್ಲೇಟ್‌ಗಳನ್ನು ಸಿದ್ಧಪಡಿಸಿದ್ದು, ಅವುಗಳ ಬದಲಾವಣೆ ಮೂಲಕ ಆ ಬೆಳೆಗೆ ಬೇಕಾದ ಅಂತರದಲ್ಲಿಯೇ ಬಿತ್ತನೆ ಮಾಡಬಹುದು.

ಮಿನಿ, ಮೀಡಿಯಂ ಹಾಗೂ ರೆಗ್ಯೂಲರ್‌ ಮೂರು ಟ್ರಾಕ್ಟರ್‌ಗಳಿವೆ. ಅವುಗಳಿಗೆ ಸೂಕ್ತವಾಗುವ ಹಾಗೆ ಮೂರು ಅಳತೆಯ ಕೂರಿಗೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಒಂದು ದಿನಕ್ಕೆ ಹತ್ತಾರು ಎಕರೆ ಬಿತ್ತನೆ ಮಾಡಬಹುದಾಗಿದೆ.

ಬೆಳೆಯಲ್ಲಿನ ಕಳೆ ಕೀಳಿಸಲೂ ರೈತರು ಪರದಾಡಬೇಕಾಗಿತ್ತು. ಒಮ್ಮೊಮ್ಮೆ ಕಾರ್ಮಿಕರು ಸಿಗದಿದ್ದಾಗ ಕಳೆ ಕೀಳಿಸದಿರುವುದೂ ಉಂಟು. ಕಳೆ ಕೀಳಲು ಎಡೆಕುಂಟೆಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳ ಮೂಲಕ ಒಂದು ಗಂಟೆಯಲ್ಲಿ ಎಕರೆಗಟ್ಟಲೇ ಕಳೆಯನ್ನು ಇನ್ನಿಲ್ಲದಂತೆ ಮಾಡಬಹುದಾಗಿದೆ.

ಬೆಳೆಗಳಿಗೆ ಕೀಟಗಳ ಹಾವಳಿ ಹೆಚ್ಚಾಗಿದೆ. ಔಷಧ ಸಿಂಪಡಣೆ ಮಾಡಬೇಕು. ಇದಕ್ಕಾಗಿ ಟ್ರಾಕ್ಟರ್‌ಗೆ ಹೈಡ್ರಾಲಿಕ್‌ ಬಳಸಿ ಔಷಧ ಸಿಂಪಡಣೆ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ. ಏಕಕಾಲದಲ್ಲಿ ಹತ್ತಾರು ಸಾಲುಗಳಿಗೆ ಸಿಂಪಡಣೆ ಮಾಡಬಹುದಾಗಿದೆ. ಡ್ರೈವರ್‌ ಬಳಿಯೇ ವಾಲ್ವ್‌ಗಳನ್ನು ಅಳವಡಿಸಿರುವುದರಿಂದ ಎಲ್ಲವನ್ನೂ ಅವರೇ ನಿಯಂತ್ರಣ ಮಾಡಬಹುದು.‘ಒಂದು ಗಂಟೆಯಲ್ಲಿ ಎಂಟು ಎಕರೆಗೆ ಔಷಧ ಸಿಂಪಡಣೆ ಮಾಡಬಹುದು’ ಎನ್ನುತ್ತಾರೆ ಧರ್ಮರೆಡ್ಡಿ ಲಕ್ಕಣ್ಣವರ.

ಧಾರವಾಡ ಜಿಲ್ಲೆಯಲ್ಲದೇ ದಾವಣಗೆರೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಗದಗ ಸೇರಿದಂತೆ ಹಲವಾರು ಜಿಲ್ಲೆಗಳ ರೈತರು ಇಲ್ಲಿ ಸಿದ್ಧಪಡಿಸಿರುವ ಕೃಷಿ ಯಂತ್ರಗಳನ್ನು ಬಳಸುತ್ತಿದ್ದಾರೆ. ರೈತರಿಗೆ ಅವಶ್ಯವಿರುವ ಬದಲಾವಣೆಗಳನ್ನು ಯಂತ್ರಗಳಲ್ಲಿ ಮಾಡಿಕೊಂಡೇ ಬಂದಿದ್ದಾರೆ.

ಬೆಳೆಗಳ ಕಟಾವಿಗೆ ಹಲವಾರು ಯಂತ್ರಗಳಿವೆ. ಆದರೆ, ಅವುಗಳ ಬಳಕೆಯಿಂದ ಬಹಳಷ್ಟು ಧಾನ್ಯ ವ್ಯರ್ಥವಾಗುತ್ತಿದೆ. ಜೊತೆಗೆ ಮೇವು ಜಾನುವಾರುಗಳ ಬಳಕೆಗೂ ಬರುತ್ತಿಲ್ಲ. ಧಾನ್ಯ ಅಪವಯ್ಯ ಆಗುವುದನ್ನು ತಡೆಯುವುದರ ಜೊತೆಗೆ ಮೇವು ಜಾನುವಾರುಗಳಿಗೆ ಬಳಸುವಂತೆ ಮಾಡುವ ಯಂತ್ರದ ಅವಿಷ್ಕಾರ ಸಾಧ್ಯವಿದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಸಾಮಾನ್ಯ ರೈತರಿಗೂ ಅದು ಕೈಗೆಟುಕಲಿದೆ. ಅಂತಹ ಯಂತ್ರ ಸಿದ್ಧಪಡಿಸುವ ಚಿಂತನೆ ನಡೆದಿದೆ ಎನ್ನುತ್ತಾರೆ ಲಕ್ಕಣ್ಣವರ.

‘ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಸಲಾಗುತ್ತಿದೆ. ಆದರೆ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಕಡಿಮೆ ಇದೆ. ಅದನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಉತ್ಪನ್ನ ಪಡೆಯಬಹುದಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.