ADVERTISEMENT

ಮೆಟ್ರೊ ಕಾಮಗಾರಿ ವೇಗ ಹೆಚ್ಚಿಸುತ್ತಾ ಬಜೆಟ್‌?

metro-budget

ಸಂಪತ್.ಎಸ್
Published 31 ಜನವರಿ 2019, 19:45 IST
Last Updated 31 ಜನವರಿ 2019, 19:45 IST
   

ನಗರದ ಜನತೆಗೆ ಮೆಟ್ರೊ (ಬಿಎಂಆರ್‌ಸಿಎಲ್‌) ಸಮರ್ಪಕ ಬಳಕೆ ಸಾಧ್ಯವಾಗಲು ಇನ್ನೂ ಎಷ್ಟು ಕಾಲ ಕಾಯಬೇಕೊ ಎನ್ನುವ ಕೊರಗಲ್ಲಿದ್ದಾರೆ.

ವಿವಿಧೆಡೆ ಕುಂಟುತ್ತಾ ಸಾಗಿರುವ ಮೆಟ್ರೊ ಕಾಮಗಾರಿ ನಗರ ನಾಗರಿಕರ ನಿದ್ದೆಕೆಡಿಸಿರುವುದು ಸುಳ್ಳಲ್ಲ. ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಮೆಟ್ರೊಗೆ ಅನುದಾನ ಹೆಚ್ಚಿಸುವ ಘೋಷಣೆ ಮಾಡಲಿದೆ ಎನ್ನುವ ಮಾತುಗಳು ಮಾಧ್ಯಮ ವಲಯದಲ್ಲಿ ಕೇಳಿಬರುತ್ತಿವೆ. ಹಾಗೇನಾದರೂ ಆದರೆ ಮೆಟ್ರೊ ಕಾಮಗಾರಿಗಳ ವೇಗ ಹೆಚ್ಚುವ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿವೆ.

ಬೆಂಗಳೂರು ಮೆಟ್ರೊ ಸೇರಿದಂತೆ ದೇಶದಾದ್ಯಂತ ಇರುವ ಮೆಟ್ರೊ ರೈಲು ನಿಗಮಗಳಿಗೆ ಬಜೆಟ್‌ನಲ್ಲಿ ಶೇ 25ರಿಂದ 30ರಷ್ಟು ಅನುದಾನವನ್ನು ಹೆಚ್ಚಿಗೆ ನೀಡಲು ಕೇಂದ್ರ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಮ್ಮತಿಸಿದೆ ಎಂಬ ಮಾಹಿತಿ ದೇಶದ ತಜ್ಞರ ವಲಯದಲ್ಲಿ ಚರ್ಚೆಯಾಗುತ್ತಿದೆ.

ADVERTISEMENT

ಮೆಟ್ರೊ ಬಂದ ನಂತರ ಬೆಂಗಳೂರಿನ ನಗರೀಕರಣದ ವೇಗ ಹೆಚ್ಚಾಗಿದೆ. ಮೆಟ್ರೊ ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲೆಲ್ಲ ಬೆಂಗಳೂರಿನ ಅಭಿವೃದ್ಧಿಯ ಜತೆಗೆ, ನಗರೀಕರಣದ ವೇಗವೂ ಹೆಚ್ಚಾಗುತ್ತಿದೆ. ಭೂಮಿ ಬೆಲೆ, ರಿಯಲ್‌ ಎಸ್ಟೇಟ್‌ ವ್ಯವಹಾರ, ಮನೆ, ಅಂಗಡಿ, ಮಳಿಗೆಗಳ ಬಾಡಿಗೆ ದರ.. ಇದೆಲ್ಲದರ ಮೇಲೆ ಪರಿಣಾಮವೂ ಹೆಚ್ಚಿದೆ.

ನೇರ ಮತ್ತು ಪರೋಕ್ಷವಾಗಿ ಹಲವು
ಉದ್ಯೋಗಗಳ ಸೃಷ್ಟಿಗೂ ಮೆಟ್ರೊ ಕಾರಣೀಭೂತವಾಗಿದೆ. ಮೆಟ್ರೊ ಹೋದಲ್ಲೆಲ್ಲ ಹೊಸ ವಸತಿ ಯೋಜನೆಗಳೂ ತಲೆಯೆತ್ತುತ್ತಿದ್ದು, ಅಲ್ಲೆಲ್ಲ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಇದು ಹಲವು ನಿಟ್ಟಿನಲ್ಲಿ ದೇಶದ ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡಲಿದೆ.

ಇದೆಲ್ಲವನ್ನೂ ಮನಗಂಡಿರುವ ಕೇಂದ್ರ ಸರ್ಕಾರ ಮೆಟ್ರೊ ಸಂಪರ್ಕ ಜಾಲವನ್ನು ದೇಶದ ಇನ್ನೂ ಹಲವೆಡೆ ಹಬ್ಬಿಸುವ ಮತ್ತು ಈಗಾಗಲೇ ಹಮ್ಮಿಕೊಂಡಿರುವ ಯೋಜನೆಗಳ ವೇಗ ಹೆಚ್ಚಿಸಲು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ ಎಂಬ ವಿಶ್ಲೇಷಣೆಗಳಿವೆ.

ಸದ್ಯಕ್ಕೆ ಮೆಟ್ರೊ ಮೊದಲನೇ ಹಂತವು ಬೆಂಗಳೂರಿನ ಪೂರ್ವದಲ್ಲಿ ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಮೈಸೂರು ರಸ್ತೆ ಟರ್ಮಿನಲ್‍ನಲ್ಲಿ ಕೊನೆಗೊಳ್ಳುವ 18.10 ಕಿ.ಮೀ ಉದ್ದದ ಪೂರ್ವ–ಪಶ್ಚಿಮ ಕಾರಿಡಾರನ್ನು (ನೇರಳೆ ಮಾರ್ಗ) ಹಾಗೂ ಉತ್ತರದಲ್ಲಿ ನಾಗಸಂದ್ರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಯಲಚೇನಹಳ್ಳಿ ಕೊನೆಗೊಳ್ಳುವ 24.20 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರನ್ನು (ಹಸಿರು ಮಾರ್ಗ) ಹೊಂದಿದೆ. ಈ ಮಾರ್ಗ ನಿರ್ಮಾಣಕ್ಕೆ₹ 14,405 ಕೋಟಿ ಖರ್ಚಾಗಿದೆ.

ಮೆಟ್ರೊ ಕಾಮಗಾರಿಗಳು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ (8.8 ಕಿ.ಮೀ), ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ (15.25 ಕಿ.ಮೀ), ಇನ್ನೊಂದೆಡೆ ನಾಗಸಂದ್ರದಿಂದ ಬಿಐಇಸಿ (3 ಕಿ.ಮೀ), ಯಲಚೇನಹಳ್ಳಿ ಯಿಂದ ಅಂಜನಾಪುರದವರೆಗೆ (6.29 ಕಿ.ಮೀ) ಮಾರ್ಗವನ್ನು ವಿಸ್ತರಿಸಿ ಕಾಮಗಾರಿ ನಡೆಸಲಾಗುತ್ತಿದೆ. ಈ ವಿಸ್ತರಿತ ಮಾರ್ಗ 2020ಕ್ಕೆ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ಮೆಟ್ರೊ ನಿಗಮ ಹೇಳಿದೆ. ಆದರೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಅನುಮಾನಗಳಿವೆ.

ಎರಡನೇ ಹಂತದಲ್ಲಿ ಹಳದಿ ಮಾರ್ಗ ಮತ್ತು ಕೆಂಪು ಮಾರ್ಗ ಅನುಷ್ಠಾನಗೊಳಿಸುವ ಯೋಜನೆ ಬಿಎಂಆರ್‌ಸಿಎಲ್‌ಗಿದೆ. ಆರ್‌.ವಿ ರಸ್ತೆಯಿಂದ– ಬೊಮ್ಮಸಂದ್ರವರೆಗಿನ (ಹಳದಿ ಮಾರ್ಗ) 19.14 ಕಿ.ಮೀ, ಗೊಟ್ಟಿಗೆರೆಯಿಂದ ನಾಗವಾರವರೆಗಿನ (ಕೆಂಪು ಮಾರ್ಗ) 21.45 ಕಿ.ಮೀ ವರೆಗಿನ ಕಾಮಗಾರಿ ₹ 32 ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಅಲ್ಲದೆ ನಾಗವಾರದಿಂದ ಜಕ್ಕೂರು, ಯಲಹಂಕ (ಕೋಗಿಲು ಕ್ರಾಸ್‌), ಚಿಕ್ಕಜಾಲ, ಟ್ರಂಪೆಟ್‌ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (29.62 ಕಿ.ಮೀ ಉದ್ದ) ಸಂಪರ್ಕ ಕಲ್ಪಿಸುವ ಯೋಜನೆಯನ್ನೂ ಮೆಟ್ರೊ ನಿಗಮ ಹೊಂದಿದೆ. ಇದಕ್ಕೆ ಅಂದಾಜು ₹ 26,500 ಕೋಟಿ ವ್ಯಯವಾಗಲಿದೆ. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಅಗತ್ಯ.

ಇದಲ್ಲದೆ ಮೆಟ್ರೊ 3ನೇ ಹಂತದ ಅಧ್ಯಯನಕ್ಕೂ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ಒಟ್ಟು 95 ಕಿ.ಮೀ ಉದ್ದದ ಈ ಯೋಜನೆಯನ್ನು ಜೆ.ಪಿ.ನಗರ – ಕೆ.ಆರ್‌.ಪುರ (42.75 ಕಿ.ಮೀ), ಟೋಲ್‌ಗೇಟ್‌– ಕಡಬಗೆರೆ (12.5 ಕಿ.ಮೀ), ಗೊಟ್ಟಿಗೆರೆ– ಬಸವಪುರ (3.07 ಕಿ.ಮೀ), ಆರ್‌.ಕೆ.ಹೆಗ್ಡೆ ನಗರ – ಏರೋಸ್ಪೇಸ್‌ ಪಾರ್ಕ್‌ (18.95 ಕಿ.ಮೀ), ಕೋಗಿಲು ಕ್ರಾಸ್‌– ರಾಜಾನುಕುಂಟೆ (10.6 ಕಿ.ಮೀ), ಇಬ್ಬಲೂರು– ಕರ್ಮಲ್‌ರಾಮ್‌ (6.67 ಕಿ.ಮೀ) ಯೋಜನೆ ಅನುಷ್ಠಾನಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.